ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕೆ ಪರಿಸರ ಹಿತ ಬಲಿ

Last Updated 28 ಏಪ್ರಿಲ್ 2017, 20:30 IST
ಅಕ್ಷರ ಗಾತ್ರ

ರಾಜ್ಯದ ಮಲೆನಾಡು ಭಾಗದ​ ಒಟ್ಟು 44,408 ಚದರ ಕಿ.ಮೀ.ನಲ್ಲಿ ​ಕೇವಲ 20,668 ಚದರ ಕಿ.ಮೀ. ಅನ್ನು ‘ಪರಿಸರ ಸೂಕ್ಷ್ಮ ವಲಯ’ವನ್ನಾಗಿ ​ಘೋಷಿಸಬೇಕೆಂಬ ಕೇಂದ್ರ ಸರ್ಕಾರದ ಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸುವ ನಿರ್ಧಾರ ಮಾಡಿದೆ. ಇದಕ್ಕೆ ಪ್ರಮುಖ ಕಾರಣ: ‘ಇದರಿಂದ ಜನರಿಗೆ ತೊಂದರೆ ಆಗಲಿದೆ’. ಇತ್ತೀಚೆಗೆ ನಡೆದ ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ವ್ಯಕ್ತವಾದ ಸರ್ವಸಮ್ಮತ ಅಭಿಪ್ರಾಯ ಇದು.

ಅರಣ್ಯ ರಕ್ಷಣೆಗೆ ಈಗ ಹೊಸ ನಿಯಮಗಳ ಅವಶ್ಯಕತೆ ಇಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಈ ವಾದದಲ್ಲಿ ಹುರುಳು ಇದೆಯೇ? ಅಥವಾ ಇದರ ಹಿಂದೆ ಒಂದು ವ್ಯವಸ್ಥಿತ ಸಂಚು ಇದೆಯೇ?

ಕಸ್ತೂರಿ ರಂಗನ್ ವರದಿಯ ಯಾವ ಪುಟದಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುವ ಅಂಶಗಳನ್ನು ನಮೂದಿಸಲಾಗಿದೆ? ಈ ವರದಿಯಲ್ಲಿ ಎಲ್ಲಿಯೂ ಹಳ್ಳಿಗರು ತಮ್ಮ ಜನಜೀವನ ಶೈಲಿ ಬದಲಿಸಿಕೊಳ್ಳಬೇಕೆಂದೂ, ಅವರು ಪಾಲಿಸಿಕೊಂಡು ಬರುತ್ತಿರುವ ಕೃಷಿ ಚಟುವಟಿಕೆಗಳನ್ನು ಕೈಬಿಡಬೇಕೆಂದೂ ಹೇಳಿಲ್ಲ.

ಜನರನ್ನು ಅವರ ವಾಸಸ್ಥಾನದಿಂದ, ಹಳ್ಳಿಗಳಿಂದ ಒಕ್ಕಲೆಬ್ಬಿಸುವ ಕುರಿತೂ ಹೇಳಿಲ್ಲ. ಆದರೂ ಯಾವ ಖಚಿತ ಆಧಾರ ಇಲ್ಲದೆ ಸಚಿವರು, ಶಾಸಕರು ಇಲ್ಲಸಲ್ಲದ ವದಂತಿ ಹಬ್ಬಿಸಿದ್ದಾರೆ. ಜನಜೀವನಕ್ಕೆ ತೊಂದರೆ ಆಗುತ್ತದೆ ಎಂಬ ಸುಳ್ಳು ಸುದ್ದಿ ಹರಡಿ ಜನರನ್ನು ಬೆದರಿಸಿದ್ದಾರೆ. 

ಮಲೆನಾಡಿನ ಹಸಿರು, ಅಲ್ಲಿನ ನೀರಿನ ಮೂಲಗಳಾದ ಹಳ್ಳ, ನದಿಗಳ ರಕ್ಷಣೆ ಆಗಬೇಕಾದಲ್ಲಿ ಮರಳು ಹಾಗೂ ಕಲ್ಲಿನ ಗಣಿಗಾರಿಕೆಯನ್ನು, ಬೃಹತ್‌ ಪ್ರಮಾಣದ ಉದ್ದಿಮೆಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಿಸಲು ಕಸ್ತೂರಿ ರಂಗನ್ ವರದಿಯಲ್ಲಿ ಸೂಚಿಸಲಾಗಿದೆ. ಅಲ್ಲದೆ ಪರಿಸರಪೂರಕ ಅಭಿವೃದ್ಧಿಗಾಗಿ ಹಳ್ಳಿ ಮತ್ತು ಅರಣ್ಯ ಪ್ರದೇಶದಲ್ಲಿ ಹಾನಿಕಾರಕ, ಮಾಲಿನ್ಯವನ್ನು ಉಂಟು ಮಾಡುವ ಘಟಕ, ಉದ್ದಿಮೆಗಳನ್ನು ಸ್ಥಾಪಿಸಬಾರದು ಎಂದೂ ಹೇಳಲಾಗಿದೆ. ಇದಲ್ಲದೆ ಬೃಹತ್ ಪ್ರಮಾಣದ ರೆಸಾರ್ಟ್, ಕಟ್ಟಡ ಹಾಗೂ ಹೊಸ ಪಟ್ಟಣ ಅಥವಾ ವಸತಿ ಸಮುಚ್ಚಯಗಳ  ನಿರ್ಮಾಣಕ್ಕೆ ತಡೆ ಹಾಕಿದೆ.

ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಜಲ ವಿದ್ಯುತ್ ಉತ್ಪಾದನೆಗೆ ಅಣೆಕಟ್ಟು ಕಟ್ಟಲು ಅನುಮತಿ ಇದೆ. ಆದರೆ ನದಿಯಲ್ಲಿ ಕನಿಷ್ಠ  ಶೇ 30ರಷ್ಟು ನೀರಿನ ಹರಿವು ಇರಬೇಕು. ವರದಿಯ ಒಂದು ಪ್ರಮುಖ ಅಂಶ ಎಂದರೆ ಬುಡಕಟ್ಟು ಜನರು ವಾಸಿಸುವ ಸ್ಥಳದಲ್ಲಿ ಅಲ್ಲಿನ ಗ್ರಾಮಸಭೆಯ ಅನುಮತಿಯನ್ನು ಪಡೆಯದೆ ಯಾವ ರೀತಿಯ ಅಭಿವೃದ್ಧಿ ಕಾರ್ಯವನ್ನೂ ಮಾಡುವಂತಿಲ್ಲ.

ಇವು, ಕೇಂದ್ರದ ಪರಿಸರ ಸಚಿವಾಲಯವು ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ, ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸಲು ರಾಜ್ಯಕ್ಕೆ ನೀಡಿದ ಅಧಿಸೂಚನೆಯ ಪ್ರಮುಖ ಅಂಶಗಳು. ಇವುಗಳಲ್ಲಿ ಯಾವುದು ಜನವಿರೋಧಿ ಅಥವಾ  ಜೀವವಿರೋಧಿ ಎಂಬುದನ್ನು ನಮ್ಮ ಸಚಿವರು ಜನರಿಗೆ ಸ್ಪಷ್ಟಪಡಿಸಿದರೆ ಉತ್ತಮ.

ಯಾವುದೇ ಆಧಾರವಿಲ್ಲದೆ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. ಇದು ಜನರನ್ನು, ಜೀವಸಂಕುಲದ ಹಿತವನ್ನು ಕಡೆಗಣಿಸಿದಂಥ ಕ್ರಮ. ಸಚಿವರು ಪ್ರಮಾಣವಚನ ಸ್ವೀಕರಿಸುವಾಗ  ರಾಜ್ಯದ ಹಿತ ಕಾಯುವ ಪ್ರಮಾಣ ವಚನ ಮಾಡಿರುತ್ತಾರೆ. ಆದರೆ ಈಗ ಅದನ್ನು ಸಂಪೂರ್ಣ ಮರೆತು ಅದರ ವಿರುದ್ದ ಕೆಲಸ ಮಾಡುತ್ತಿದ್ದಾರೆ. ​ಆದರೆ ಇವರ ತಪ್ಪು, ತರ್ಕರಹಿತ ನಡೆಯನ್ನು ಪ್ರಶ್ನಿಸುವವರು ಯಾರು?​

ಇಂದು ಇಡೀ ರಾಜ್ಯ ಬರಗಾಲದ ಬವಣೆ ಅನುಭವಿಸುತ್ತಿದೆ. ನೀರಿಗಾಗಿ ಜನ, ಜಾನುವಾರು, ಪಶು, ಪಕ್ಷಿ, ಕಾಡುಪ್ರಾಣಿಗಳು ಪರಿತಪಿಸುತ್ತಿವೆ. ರಾಜ್ಯ ಭೀಕರ ಜಲಕ್ಷಾಮವನ್ನು ಎದುರಿಸುತ್ತಿದೆ.

‘ಮಲೆನಾಡ ಹಸಿರು, ಬಯಲು ಸೀಮೆಯ ಉಸಿರು’ ಎಂಬ ಅಪ್ಪಿಕೋ ಚಳವಳಿಯ ಘೋಷಣೆ ​ನಮ್ಮ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಅದು ಹೇಗೆ ಇಡೀ ರಾಜ್ಯದ ಬಯಲುಸೀಮೆ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಕರ್ನಾಟಕ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಜಲ ಸುರಕ್ಷತೆಗೆ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಕಾವೇರಿ, ತುಂಗಾ, ಭದ್ರಾ, ಕೃಷ್ಣಾ ನದಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ಈ ನದಿಗಳ ತವರು ಮಲೆನಾಡು. ಜಲಕ್ಷಾಮ ಎದುರಿಸಲು ಇಲ್ಲಿನ ಹಸಿರನ್ನು ಉಳಿಸುವುದು ಅನಿವಾರ್ಯ. ಇದನ್ನು ಉಳಿಸುವ ಮಾರ್ಗೋಪಾಯವನ್ನು ಕಸ್ತೂರಿ ರಂಗನ್ ವರದಿ ಸೂಚಿಸಿದೆ.

ಪರಿಸರ ಸೂಕ್ಷ್ಮ ವಲಯ ಜಾರಿ ಮಾಡಿದರೆ ಅಳಿದುಳಿದ ಹಸಿರನ್ನು ಉಳಿಸಿಕೊಳ್ಳಲು ಸಾಧ್ಯ. ಆದರೆ ನಮ್ಮ ರಾಜಕಾರಣಿಗಳಿಗೆ ಇದು ಅಪಥ್ಯ. ಯಾಕೆ ಅವರು ಈ ಸರಳ ಸತ್ಯವನ್ನು ಒಪ್ಪಲು ಸಿದ್ಧರಿಲ್ಲ? ಅವರು ಯಾಕೆ ಹೀಗೆ ವಿರೋಧಿಸುತ್ತಿದ್ದಾರೆ ಎಂಬುದನ್ನು ಅರಿಯಲು ನಾವು ಸಂಶೋಧನೆ ನಡೆಸಬೇಕಿಲ್ಲ.
ಇಂದು ಪಕ್ಷಭೇದ ಇಲ್ಲದೆ ಯಾವುದೇ ಶಾಸಕ, ಸಚಿವ ಅಥವಾ ಗ್ರಾಮ ಪಂಚಾಯಿತಿ ಸದಸ್ಯರನ್ನು ತೆಗೆದು ಕೊಂಡರೂ ಅವರಲ್ಲಿ ಬಹುಪಾಲು ಮಂದಿ ಮರಳು, ಕಲ್ಲು ಗಣಿಗಾರಿಕೆ ಮಾಫಿಯಾದ ಬೆಂಬಲಕ್ಕೆ ನಿಂತಿರುವುದು ಗೊತ್ತಾಗುತ್ತದೆ.

ಈ ರಾಜಕಾರಣಿಗಳೇ ತಮ್ಮ ಕಪ್ಪು ಹಣದ ಬಲದಿಂದ ಬೃಹತ್‌ ಕಟ್ಟಡ, ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಕಸ್ತೂರಿ ರಂಗನ್ ವರದಿ ಹೇಳಿರುವುದು ನಿಜ. ಆದರೆ ಅವರು ತಮ್ಮ ಸ್ವಂತ ಹಿತವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಆದುದರಿಂದ ತಮ್ಮ ಸ್ವಾರ್ಥ ಸಾಧನೆಗೆ ಪೂರಕವಾಗಿ ಹುಯಿಲು ಎಬ್ಬಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜನರು ಸಾಗುವಳಿ ಮಾಡುವಂತಿಲ್ಲ, ಯಾವುದೇ ಅಭಿವೃದ್ಧಿ  ಕಾರ್ಯ ಸಾಧ್ಯವಿಲ್ಲ ಎಂದೆಲ್ಲ ಸುಳ್ಳು ಹೇಳಿ  ಜನರ ಭಾವನೆ ಕೆರಳಿಸುವಲ್ಲಿ ಸಫಲರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಾಥಾ ನಡೆಯಿತು. ಮರಳು ಹಾಗೂ ಕಲ್ಲು ಗಣಿಗಾರಿಕೆ ಮಾಫಿಯಾದವರು ತಮ್ಮ ಟ್ರ್ಯಾಕ್ಟರ್‌, ಟಿಪ್ಪರ್, ವ್ಯಾನ್‌ಗಳಲ್ಲಿ ಅಲ್ಲಿಗೆ ಜನರನ್ನು ಕರೆತಂದಿದ್ದರು. ಬಾಡಿಗೆಗೆ ಕರೆ ತಂದ ಅಮಾಯಕ ಜನರಿಗೆ ತಾವು ಬಂದದ್ದು ಏತಕ್ಕಾಗಿ ಎಂದೇ ತಿಳಿದಿರಲಿಲ್ಲ!

ಕೇರಳ ರಾಜ್ಯ ಸರ್ಕಾರ ಇದನ್ನು ತಿರಸ್ಕರಿಸಿದೆ. ಆದುದರಿಂದ ನಾವೂ ಈ ವರದಿಯನ್ನು ತಿರಸ್ಕರಿಸಬೇಕು ಎಂದು ಹೇಳುವುದು ಅರ್ಥಹೀನ.  ಕೇರಳದಲ್ಲಿ ಕಾಡು ನಾಶ ಮಾಡಿ, ಅತಿಕ್ರಮಣ ಮಾಡಿದ್ದರಿಂದ ನದಿಗಳು ಬರಡಾಗಿವೆ. ನಮ್ಮ ಮಲೆನಾಡಿನ ಹಾಗಿರುವ ​ವಯನಾಡಿನಲ್ಲಿ ಮಳೆ ಇಲ್ಲದೆ ಮೆಣಸಿನ ತೋಟಗಳು ನೆಲ ಕಚ್ಚಿವೆ. ​ ಅವರು ತಪ್ಪು ದಾರಿ ಹಿಡಿದರೆ ನಾವೂ ಅವರನ್ನು ಅನುಸರಿಸಬೇಕೇ?

ಮಲೆನಾಡಿನ ಇಂದಿನ ಪರಿಸ್ಥಿತಿ ಊಹಿಸಲೂ ಕಷ್ಟ.  ಜಲಮೂಲಗಳು ಬರಿದಾಗಿವೆ. ಕಳಸಾ ಬಂಡೂರಿ ಒಣಗಿ ನಿಂತಿದೆ. ಅಡಿಕೆ, ಕಾಳು  ಮೆಣಸಿನ ತೋಟಗಳು ನಾಶವಾಗುತ್ತಿವೆ. ವನ್ಯ ಪ್ರಾಣಿಗಳು ಕಾಡಿನಲ್ಲಿ ನೀರಿಲ್ಲದೆ ಊರಿಗೆ ಬರುತ್ತಿವೆ. ಅಂತರ್ಜಲ ಮಟ್ಟ ಪಾತಾಳ ಮುಟ್ಟಿದೆ. ಇದನ್ನು ಎದುರಿಸಲು ನಮಗಿರುವ ಏಕೈಕ ಮಾರ್ಗ ಮಲೆನಾಡಿನ ಹಸಿರಿನ ರಕ್ಷಣೆ ಮಾಡುವುದಾಗಿದೆ.

ರಾಜ್ಯ ಸರ್ಕಾರಕ್ಕೆ, ಶಾಸಕರಿಗೆ, ರಾಜಕಾರಣಿಗಳಿಗೆ ಬೇಡವಾದರೂ ಜನರ ಉಳಿವಿಗಾಗಿ, ಇತರ ಜೀವಿಗಳ ಉಳಿವಿಗಾಗಿ ನಾವು ಮಲೆನಾಡಿನ ಹಸಿರನ್ನು ಉಳಿಸಿ, ಬೆಳೆಸಲು ದೃಢ ಸಂಕಲ್ಪ ಮಾಡುವುದು ಅನಿವಾರ್ಯ ಆಗಿದೆ.

ಸಚಿವ ಸಂಪುಟ ಸಭೆಯು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಮಾಡಿರುವುದು ರಾಜ್ಯದ ಜನರಿಗೆ ಮಾಡಿರುವ ದ್ರೋಹ. ಇಂದಿನ ಹಾಗೂ ಮುಂಬರುವ ಪೀಳಿಗೆಯ ಜಲ ಸುರಕ್ಷತೆಯನ್ನೇ ಬಲಿ ಕೊಡುವ ಈ ನಿರ್ಣಯ ರಾಜಕೀಯ ಸ್ವಾರ್ಥ ಹಾಗೂ ಸಂಕುಚಿತ ಮನೋಭಾವದ ದ್ಯೋತಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT