ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಉಚ್ಚಾಟನೆಗೆ ಸಹಿ ಸಂಗ್ರಹ ?

ತಾರಕಕ್ಕೇರಿದ ಬಿಜೆಪಿ ಕಚ್ಚಾಟ: ವರಿಷ್ಠರ ಮೇಲೆ ಒತ್ತಡ ಹೇರಲು ಯತ್ನ
Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ ವಿರುದ್ಧ ಸಮರ ಸಾರಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ವರಿಷ್ಠರ ಮೇಲೆ ಒತ್ತಡ ಹೇರಲು ಪಕ್ಷದ ಒಂದು ಬಣ ಸಹಿ ಸಂಗ್ರಹಕ್ಕೆ ತೀರ್ಮಾನಿಸಿದೆ.

ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳುವ ಮೊದಲು ತಮ್ಮ ಆಪ್ತರ ಜೊತೆ ಸಹಿ ಸಂಗ್ರಹ ಕುರಿತು ಚರ್ಚಿಸಿದರು. ಶನಿವಾರ ದೆಹಲಿಯಲ್ಲಿ  ಬಿಜೆಪಿ ವರಿಷ್ಠರ ಜತೆ ಅವರು ಮಾತುಕತೆ ನಡೆಸಲಿದ್ದು, ಬಳಿಕ ಈ ಸಂಬಂಧ ನಿರ್ಧಾರ ಆಗಲಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವರಿಷ್ಠರೊಂದಿಗೆ ಮಾತುಕತೆ ಆಗುವ ತನಕ ತಾಳ್ಮೆಯಿಂದ ಕಾಯುವಂತೆ ಯಡಿಯೂರಪ್ಪ ತಮ್ಮ ನಿಷ್ಠರಿಗೆ ಸೂಚಿಸಿದ್ದಾರೆ. ಈ ಮಧ್ಯೆ ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ವಿರೋಧ ಪಕ್ಷದ ನಾಯಕ ಸ್ಥಾನದಿಂದ ಈಶ್ವರಪ್ಪ ಅವರನ್ನು ತೆಗೆದುಹಾಕಿ ಆ ಸ್ಥಾನಕ್ಕೆ ಕೆ.ಬಿ.ಶಾಣಪ್ಪ ಅವರನ್ನು ನೇಮಿಸಬೇಕು. ಈ ಸಂಬಂಧ  ವಿಧಾನಪರಿಷತ್‌ ಸದಸ್ಯರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಕಚೇರಿ ಟೈಪಿಸ್ಟ್‌ ವಜಾ: ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟೈಪಿಸ್ಟ್‌ ಮಲ್ಲಿಕಾರ್ಜುನ ಎಂಬುವವರನ್ನು ಸಂತೋಷ್‌ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ವಜಾ ಮಾಡಲಾಗಿದೆ.

‘ಗುರುವಾರ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಭೆಗೆ ಪೊಲೀಸರಿಂದ ಅನುಮತಿ ಪಡೆಯುವ ಪತ್ರವನ್ನು ಕಚೇರಿಯಿಂದಲೇ ಸಿದ್ಧಪಡಿಸಿ ಕೊಟ್ಟಿದ್ದರು. ಅಲ್ಲದೆ, ಪಕ್ಷದ ಚಟುವಟಿಕೆಯ ಪತ್ರಗಳ ಪ್ರತಿಗಳನ್ನು ಸಂತೋಷ್‌ ಅವರಿಗೆ ಕಳುಹಿಸುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿದೆ’ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ.

‘ಈತ ಪಕ್ಷದ ಕಚೇರಿಯಲ್ಲಿದ್ದುಕೊಂಡು ತಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ. ಆದ್ದರಿಂದ ಕೆಲಸದಿಂದ ತೆಗೆದು ಹಾಕಿದ್ದೇವೆ’ ಎಂದು ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪುಟ್ಟಸ್ವಾಮಿಗೆ ಘೇರಾವ್: (ಮೈಸೂರು ವರದಿ): ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರಿಗೆ ಸ್ಥಳೀಯ ಕೆಲ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಘೇರಾವ್‌ ಹಾಕಿದರು.

ಮಹಾನಗರ ಪಾಲಿಕೆಯ ಜೆಡಿಎಸ್‌ ಸದಸ್ಯ ನಟರಾಜ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ ನಂತರ ಸುದ್ದಿಗಾರರೊಂದಿಗೆ ಪುಟ್ಟಸ್ವಾಮಿ ಮಾತನಾಡಿದರು.

‘ಕೆ.ಎಸ್. ಈಶ್ವರಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ’ ಎಂದರು. ಕೂಡಲೇ ಮುತ್ತಿಗೆ ಹಾಕಿದ ಕಾರ್ಯಕರ್ತರು, ‘ವೈಯಕ್ತಿಕವಾಗಿ ಈಶ್ವರಪ್ಪ ಬಗ್ಗೆ ಮಾತನಾಡಬೇಡಿ. ಬಿಜೆಪಿ, ಇಲ್ಲವೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿ’ ಎಂದು ಒತ್ತಾಯಿಸಿದರು.

ಒಂದು ಗುಂಪು ಈಶ್ವರಪ್ಪ ಪರವಾಗಿ ಜೈಕಾರ ಹಾಕಿತು. ಇನ್ನೊಂದು ಕಡೆ ಬಿ.ಎಸ್‌.ಯಡಿಯೂರಪ್ಪ ಪರವಾಗಿ ಜೈಕಾರ ಕೂಗಿದರು. ಕೊನೆಗೆ ಪೊಲೀಸರು ಗುಂಪು ಚದುರಿಸಿದರು.

ನಂತರ ಪುಟ್ಟಸ್ವಾಮಿ ಮಾತನಾಡಿ, ‘ಬಿಜೆಪಿಯ ಎಲ್ಲ ಬೆಳವಣಿಗೆಗಳನ್ನು ವರಿಷ್ಠರು ಗಮನಿಸುತ್ತಿದ್ದು, ಕ್ರಮ ಕೈಗೊಳ್ಳುತ್ತಾರೆ. ಕಾರ್ಯಕರ್ತರು ಸಮಾಧಾನದಿಂದ ವರ್ತಿಸಬೇಕು’ ಎಂದರು.

ಯಾರು ಈ  ಬಿ.ಎಲ್‌. ಸಂತೋಷ್‌ ?
‘ಗುರುವಾರ ಬಿಜೆಪಿ ಮುಖಂಡ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾದ ಬಿ.ಎಲ್‌. ಸಂತೋಷ್‌ ಯಾರು?’ ಬಿಜೆಪಿ ವಲಯದಲ್ಲಿ ಸಂತೋಷ್‌ಜೀ ಎಂದೇ ಪರಿಚಿತರಾದ ಸಂತೋಷ್‌ ಪಕ್ಷದ ಸಹ ಸಂಘಟನಾ ಕಾರ್ಯದರ್ಶಿ. ಇತ್ತೀಚೆಗೆ ನಡೆದ ಗೋವಾ ವಿಧಾನಸಭಾ ಚುನಾವಣೆ ಉಸ್ತುವಾರಿ ಅವರ ಹೆಗಲಿಗೆ ಬಿದ್ದಿತ್ತು.

50 ವರ್ಷದ ಸಂತೋಷ್‌ ಮೂರು ದಶಕಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲೆಯವರಾದ ಅವರು ಎಂಜಿನಿಯರಿಂಗ್ ಪದವೀಧರ.

ಬೆಂಗಳೂರಿನಲ್ಲಿ ಪ್ರಚಾರಕ ಆಗಿದ್ದ ಅವರನ್ನು ಆರ್‌ಎಸ್‌ಎಸ್‌ ಬಿಜೆಪಿಗೆ ಕಳುಹಿಸಿತು. ರಾಜಕೀಯ ಸೂಕ್ಷ್ಮತೆ ಚೆನ್ನಾಗಿ ಅರಿತಿರುವ ಸಂತೋಷ್‌ ಕ್ರಮೇಣ ಪಕ್ಷದಲ್ಲಿ ಹಿಡಿತ ಸಾಧಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಹಿಂದೆ ಅನಂತಕುಮಾರ್‌, ಈಶ್ವರಪ್ಪ ಅವರೂ ಸಂತೋಷ್‌ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ವರಿಷ್ಠರಿಗೆ ದೂರು ನೀಡಿದ್ದರು. ಅವರು ವ್ಯಕ್ತಿಗಿಂತ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಹಿರಿಯ ನಾಯಕರಿಗೆ ಇದು ಆಗುವುದಿಲ್ಲ ಎನ್ನುತ್ತಾರೆ ಅವರ ನಿಕಟವರ್ತಿಗಳು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಸಂತೋಷ್‌ ರಾಜ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮತ್ತು ನಿಗಮ– ಮಂಡಳಿಗಳ ಅಧ್ಯಕ್ಷರ ನೇಮಕದಲ್ಲೂ ಅವರು ಮಹತ್ವದ ಪಾತ್ರ ವಹಿಸುತ್ತಿದ್ದರು.

ಅನೇಕ ಸಂದರ್ಭಗಳಲ್ಲಿ ಯಡಿಯೂರಪ್ಪನವರ ಜೊತೆ ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಇಬ್ಬರ ನಡುವಿನ ಸಂಬಂಧ ಅಷ್ಟಕಷ್ಟೇ ಎಂದು ಪಕ್ಷದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿ ತೊರೆದು ಯಡಿಯೂರಪ್ಪ ಕೆಜೆಪಿ ಮಾಡಿದಾಗ ಅನೇಕ ನಾಯಕರು ಅವರನ್ನು ಹಿಂಬಾಲಿಸದಂತೆ ಸಂತೋಷ್‌ ತಡೆದಿದ್ದರು. ಪಕ್ಷ ಬಿಟ್ಟವರು ಮತ್ತೆ ಮಾತೃ ಪಕ್ಷಕ್ಕೆ ಮರಳಲು ಕಾರಣವಾಗಿದ್ದರು.

ಅವಿವಾಹಿತರಾಗಿರುವ ಸಂತೋಷ್‌ ಪಕ್ಷದ ಪೂರ್ಣಾವಧಿ ಕಾರ್ಯಕರ್ತ. ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ನೇಮಿಸಿರುವ ನಾಲ್ವರ ಸಮಿತಿಯಲ್ಲಿ ಸಂತೋಷ್‌ ಕೂಡಾ ಸದಸ್ಯರು. ಇದುವರೆಗೆ ಈ ಸಮಿತಿ ಒಂದು ಸಲವೂ ಸಭೆ ಸೇರಿಲ್ಲ.

ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಿಲುಕಿ ಯಡಿಯೂರಪ್ಪ ಮುಖ್ಯಮಂತ್ರಿ ಪದವಿ ತ್ಯಜಿಸಿದಾಗ ಸಂತೋಷ್‌ ಅವರ ಹೆಸರನ್ನು ಆ ಸ್ಥಾನಕ್ಕೆ ತೇಲಿಬಿಡಲಾಗಿತ್ತು. ಆದರೆ, ಅದೃಷ್ಟ ಡಿ.ವಿ. ಸದಾನಂದಗೌಡರಿಗೆ ಒಲಿದಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತರೆ ಸಂತೋಷ್‌ ಹೆಸರು ಮತ್ತೆ ಚಲಾವಣೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ.

ನೇರ ಕ್ರಮ ಕೈಗೊಳ್ಳಲಿ: ಭಾನುಪ್ರಕಾಶ್‌
ಬೆಂಗಳೂರು: 
‘ಈಶ್ವರಪ್ಪ ಉಚ್ಚಾಟನೆಗೆ ಸಹಿ ಸಂಗ್ರಹ ಮಾಡುವುದಕ್ಕೆ ಬದಲು ನೇರವಾಗಿ ಕ್ರಮ ಕೈಗೊಳ್ಳಲಿ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಭಾನುಪ್ರಕಾಶ್‌ ಸವಾಲು ಹಾಕಿದರು.

‘ಸಹಿ ಸಂಗ್ರಹ ಮಾಡುತ್ತೇವೆ ಎಂದು ಹೇಳಿ ಮೊದಲು ನಮ್ಮನ್ನು ಹೆದರಿಸುವುದನ್ನು ಬಿಡಲಿ, ಪಕ್ಷದ ಹಿತ ದೃಷ್ಟಿಯಿಂದ  ಮಾತುಕತೆ ನಡೆಸಲಿ’ ಎಂದು ಕಿವಿಮಾತು ಹೇಳಿದರು.

ಪಕ್ಷದಲ್ಲಿರುವ ಬಿಕ್ಕಟ್ಟು ಶಮನ ಮಾಡುವುದಕ್ಕೆ ಬದಲು ಅದನ್ನು  ಇನ್ನಷ್ಟು ಉಲ್ಬಣಗೊಳಿಸುತ್ತಿದ್ದಾರೆ ಎಂದರು. ಪಕ್ಷದ ಆಂತರಿಕ ಬೆಳವಣಿಗೆ ಮತ್ತು ಗುರುವಾರ ನಡೆದ ‘ಸಂಘಟನೆ ಉಳಿಸಿ’ ಸಭೆ ಬಗ್ಗೆಯೂ ವರಿಷ್ಠರಿಗೆ ಮಾಹಿತಿ ಕಳುಹಿಸಿರುವುದಾಗಿ ಅವರು ಹೇಳಿದರು.

‘ಸಮಾವೇಶಕ್ಕೂ  ಬ್ರಿಗೇಡ್‌ಗೂ ಸಂಬಂಧವಿಲ್ಲ’
ರಾಯಚೂರು:
‘ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸಂಘಟನೆ ಉಳಿಸಿ’ ಸಮಾವೇಶಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ರಾಯಣ್ಣ ಬ್ರಿಗೇಡ್‌ನ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಟನೆ ಉಳಿಸಿ ಸಮಾವೇಶವು ಬಿಜೆಪಿಗೆ ಸಂಬಂಧಿಸಿದ್ದು. ಅದರಲ್ಲಿ ಬ್ರಿಗೇಡ್ ನಾಯಕರೂ ಭಾಗವಹಿಸಿರಬಹುದು. ಆದರೆ, ಅದು ರಾಯಣ್ಣ ಬ್ರಿಗೇಡ್‌ ಸಮಾವೇಶ ಅಲ್ಲ. ಬಿ.ಎಸ್‌. ಯಡಿಯೂರಪ್ಪ ಬೆಂಬಲಿಗರ ದೂರು ಆಧರಿಸಿ ಪಕ್ಷದ ಹೈಕಮಾಂಡ್‌ ಯಾರನ್ನು ಉಚ್ಚಾಟಿಸಿದರೂ ಬ್ರಿಗೇಡ್‌ ಚಟುವಟಿಕೆ ಮಾತ್ರ ನಿಲ್ಲುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT