ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಧರಣಿ

Last Updated 29 ಏಪ್ರಿಲ್ 2017, 6:00 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಪುರಸಭೆಯಿಂದ ತಾಲ್ಲೂಕು ಪಂಚಾಯಿತಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕಾನೂನು ಬಾಹಿರವಾಗಿ ಲೈಸನ್ಸ್ ನೀಡಲಾಗಿದೆ ಎಂದು ಆರೋಪಿಸಿ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಜುಬೇರ್ ಅಹಮ್ಮದ್ ಮತ್ತು ಬಿ.ಎಸ್.ಮಂಜುನಾಥ್ ಅಧ್ಯಕ್ಷರ ಪೀಠದ ಮುಂದೆ ಕುಳಿತು ಧರಣಿ ನಡೆಸಿದರು.
ಪುರಸಭೆ ಅಧ್ಯಕ್ಷೆ ಕೆ.ಎಸ್.ಉಮಾ (ಮುದ್ದಮ್ಮ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜುಬೇರ್ ಅಹಮ್ಮದ್, ತಾಲ್ಲೂಕು ಪಂಚಾಯಿತಿಯವರು  ವಾಣಿಜ್ಯ ಮಳಿಗೆ ನಿರ್ಮಿಸಲು ಸೂಕ್ತ ದಾಖಲಾತಿಗಳನ್ನು ನೀಡಿಲ್ಲವೆಂದು ಈ ಹಿಂದೆ ಲೈಸನ್ಸ್ ನೀಡಲು ನಿರಾಕರಿಸಲಾಗಿತ್ತು. ಆದರೆ ಈಗ ಏಕಾಏಕಿ  ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರಲ್ಲದೆ, ದಾಖಲಾತಿಗಳನ್ನು ನೀಡುವಂತೆ ಪಟ್ಟು ಹಿಡಿದರು. ಇವರಿಗೆ ಮಂಜುನಾಥ್ ಬೆಂಬಲಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಅಗತ್ಯಬಿದ್ದರೆ  ದಾಖಲಾತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ದಾಖಲಾತಿ ಪರಿಶೀಲಿಸಿದಾಗ ಕೆಲ ದಾಖಲಾತಿ ನಾಪತ್ತೆಯಾದ್ದವು. ಈ ವೇಳೆ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸದಸ್ಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಧರಣಿ ನಿರತರನ್ನು ಸಮಾಧಾನಗೊಳಿಸಿದರು.

ಪುರಸಭಾ ವ್ಯಾಪ್ತಿಯಲ್ಲಿನ 23 ವಾರ್ಡ್‌ಗಳಲ್ಲಿ 6, 13 ಹಾಗೂ 18 ನೇ ವಾರ್ಡ್‌ಗಳಿಗೆ ಅತಿ ಹೆಚ್ಚು ಅನುದಾನ ನೀಡಿ, ಉಳಿದ ವಾರ್ಡಗಳನ್ನು ಕಡೆಗಣಿಸಲಾಗಿದೆ ಎಂದು ಸದಸ್ಯರಾದ ರವಿ ಅಣ್ಣೇಗೌಡ, ಅಕ್ರಮ್ ಷರೀಫ್, ಬಿ.ಡಿ. ಚನ್ನಕೇಶವ ಮತ್ತು ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಅಧ್ಯಕ್ಷೆ ಮುದ್ದಮ್ಮ ಸ್ಪಷ್ಟನೆ ನೀಡಿ, ‘ತಾವು ಯಾವುದೇ ಸದಸ್ಯರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಎಲ್ಲಿ ಕೆಲಸದ ಅಗತ್ಯವಿದೆ ಎಂಬುದನ್ನು ಮನಗಂಡು ಅಲ್ಲಿಗೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ’ ಎಂದು ತಿಳಿಸಿದರು.

ಸದಸ್ಯ ಬಿ.ಗಿರೀಶ್, ‘ಪಟ್ಟಣದ ಹೊಳೆಬೀದಿ ಸೇರಿದಂತೆ ಹಲವು ಭಾಗದಲ್ಲಿ ಜಿಯೋ ರಿಲಾಯನ್ಸ್‌ನಿಂದ ಪೈಪ್‌ಲೈನ್ ಮಾಡಲು ಪುರಸಭೆಯಿಂದ ಪರವಾನಗಿ ಪಡೆಯಲು ₹ 20 ಲಕ್ಷ ಹಣ ಪಡೆದಿದ್ದಾರೆ. ಅಲ್ಲದೆ ಪುರಸಭೆ 22 ವಾಣಿಜ್ಯ ಮಳಿಗೆಗಳ ಬಾಡಿಗೆ ಏರಿಸಲಾಗಿದೆ. ಬಾಡಿಗೆ ಪಾವತಿ ಮಾಡದಿದ್ದರೆ ಏನು ಮಾಡುತ್ತೀರಾ? ಅಧಿಕಾರಿಗಳ ನಡುವೆ ಒಳ ಒಪ್ಪಂದವಾಗಿದೆ’ ಎಂದು ಆರೋಪಿಸಿದರು.

ಇದಕ್ಕೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು 22 ಮಳಿಗೆಗಳ ಬಹಿರಂಗ ಹರಾಜಿನಿಂದ ಪುರಸಭೆಗೆ ₹ 8 ಲಕ್ಷ ಆದಾಯ ಬಂದಿದೆ. ಒಳ ಒಪ್ಪಂದ ಮಾಡಿಕೊಳ್ಳುವುದಾಗಿದ್ದರೆ, ಬಹಿರಂಗ ಹರಾಜು ಮಾಡುತ್ತಿರಲಿಲ್ಲ. ಜಿಯೋ ರಿಲಾಯನ್ಸ್ ಕಂಪೆನಿಯಿಂದ ₹ 20 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಪುರಸಭೆಗೆ ₹ 12 ಲಕ್ಷ ಪಾವತಿ ಮಾಡಿದ್ದಾರೆ. ಅನಾವಶ್ಯಕವಾಗಿ ಸುಳ್ಳು ಆರೋಪ ಮಾಡಬೇಡಿ ಎಂದರು.

ಸದಸ್ಯ ಬಿ.ಡಿ.ಚನ್ನಕೇಶವ, ‘ಪುರಸಭೆಯಿಂದ 22 ವಾಣಿಜ್ಯ ಮಳಿಗೆ ಅತಿಯಾದ ಬಾಡಿಗೆಗೆ ಹರಾಜುಗೊಂಡಿದ್ದರಿಂದ ಪುರಸಭೆ 6 ತಿಂಗಳ ಕಾಲ ಅವರ ಬಾಡಿಗೆ ಹಣ ಪಡೆಯಬೇಕು. ಹಾಗೂ ಮಾಸಿಕ ಬಾಡಿಗೆ ಪಾವತಿ ಮಾಡದ ಬಾಡಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲೆ ಮಾಡಬೇಕು, ಅದೇ ರೀತಿ ಪುರಸಭೆ ಮುಂಭಾಗದಲ್ಲಿರುವ ಮೊದಲ ಮಹಡಿಯ ಏಳು ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.ಸದಸ್ಯ ಮಂಜುನಾಥ್ ‘ಪಟ್ಟಣದಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ನಿಯಮವಿದೆ. ಆದರೆ ಇದನ್ನು ಉಲ್ಲಂಘಿಸಿ ಬಲಾಢ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಎಲ್ಲರಿಗೂ ಅವಕಾಶ ನೀಡಿ, ಇಲ್ಲವೇ ಯಾರಿಗೂ ನೀಡಬೇಡಿ’ ಎಂದು ಆಗ್ರಹಿಸಿದರು. ಉಪಾಧ್ಯಕ್ಷ ಅರುಣ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT