ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಒಳಗೆ ಮೊಗೆದಷ್ಟೂ ನೀರು!

Last Updated 29 ಏಪ್ರಿಲ್ 2017, 7:18 IST
ಅಕ್ಷರ ಗಾತ್ರ

ಶಿವಮೊಗ್ಗ: ಬರದ ದವಡೆಗೆ ಸಿಲುಕಿರುವ ಮಲೆನಾಡಿನಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದೆ. ಸಾವಿರಾರು ಕೊಳವೆಬಾವಿಗಳು ಬತ್ತಿಹೋಗಿವೆ. ಇಂತಹ ಸ್ಥಿತಿಯಲ್ಲೂ ಶಿವಮೊಗ್ಗ ನಗರದ ಈ ಮನೆಯ ಒಳಗೆ ನಿತ್ಯವೂ ಜಲಧಾರೆ ಉಕ್ಕುತ್ತಿದೆ. ಮೊಗೆದಷ್ಟೂ ನೀರು ತುಂಬಿ ಹರಿಯುತ್ತಿದೆ.ಅದು ಸ್ವಾತಂತ್ರ್ಯ ಹೋರಾಟಗಾರ, ಪಾವಗಡದ ವೆಂಕಟರಮಣ ಶೆಟ್ಟರ ಪುತ್ರ ಚಂದ್ರಶೇಖರ ಶೆಟ್ಟರ ಮನೆ. ನಗರದ ಮುಖ್ಯ ಬಸ್‌ನಿಲ್ದಾಣದ ಸಮೀಪ ಇರುವ ಪಂಚವಟಿ ಕಾಲೊನಿಯಲ್ಲೇ ಈ ಕುಟುಂಬ ಮೂರು ದಶಕಗಳಿಂದ ನೆಲೆಸಿದೆ. ಅವರದು ಗೃಹೋಪಯೋಗಿ ವಸ್ತುಗಳ ಮಾರಾಟ ವೃತ್ತಿ.

ಶೆಟ್ಟರು 1983ರಲ್ಲಿ ಪಂಚವಟಿ ಕಾಲೊನಿಯಲ್ಲಿ 35X50 ಚದರ ಅಡಿ ಅಳತೆಯ ನಿವೇಶನ ಖರೀದಿಸಿದ್ದರು. ಮನೆ ಕಟ್ಟಲು ಬುನಾದಿ ತೆಗೆದಾಗ ನೀರು ಚಿಮ್ಮಲು ಆರಂಭಿಸಿತ್ತು. ಮೋಟಾರ್‌ ಇಟ್ಟು ಹೊರಹಾಕಿದರೂ ನೀರಿನ ಹರಿವು ಕಡಿಮೆಯಾಗಲಿಲ್ಲ. ನೆಲಮಟ್ಟದಿಂದ ಮೂರ್ನಾಲ್ಕು ಅಡಿ ಮೇಲಿನವರೆಗೆ ಪಿಲ್ಲರ್‌ ಹಾಕಿ ಮನೆ ಕಟ್ಟಿಕೊಂಡಿದ್ದರು. ಈಗಲೂ ನೆಲಮಾಳಿಗೆ ಸದಾ ನೀರಿನಿಂದ ತುಂಬಿ ತುಳುಕುತ್ತದೆ.

ಸಾರ್ವಜನಿಕರಿಗೆ ಜಲ ಸೇವೆ: ಮನೆಯ ಒಳಗೆ ಜಲರಾಶಿ ಹರಿದುಬಂದ ಕಾರಣ ಶೆಟ್ಟರು ಮನೆಯ ಸುತ್ತಲೂ 5 ನಲ್ಲಿ ಅಳವಡಿಸಿ ಸಾರ್ವಜನಿಕರಿಗೆ ನಿತ್ಯವೂ ನೀರು ಹಿಡಿದುಕೊಳ್ಳಲು ವ್ಯವಸ್ಥೆ ಮಾಡಿದರು. ಪಂಚವಟಿ ಕಾಲೊನಿ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳ ಜನರಿಗೆ ಇದೇ ನೀರು ಆಧಾರವಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ದಿನ ಕಳೆದಂತೆ ಕೆಲವರು ಮನೆ ಬಳಿಯೇ ಬಂದು ಬಟ್ಟೆ, ಪಾತ್ರೆ ತೊಳೆಯಲು ಆರಂಭಿಸಿದರು. ಅದಕ್ಕೆ ನೆರೆಹೊರೆಯವರಿಂದ ಆಕ್ಷೇಪ ವ್ಯಕ್ತವಾದ ಕಾರಣ ಶೆಟ್ಟರು ಕೆಲವು ವರ್ಷಗಳಿಂದ ‘ಜಲ ಸೇವೆ’ ಸ್ಥಗಿತಗೊಳಿಸಿದ್ದಾರೆ.

‘9 ಚದರ ಅಡಿ ವಿಸ್ತೀರ್ಣದಲ್ಲಿ ನೆಲ ಮಾಳಿಗೆ ಇದೆ. ಸಂಪೂರ್ಣ ತುಂಬಿ ತುಳುಕುವ ಜಲರಾಶಿಗೆ ದಿನಕ್ಕೆ ಕನಿಷ್ಠ 10,000 ಲೀಟರ್‌ನಷ್ಟು ನೀರು ಹೊಸದಾಗಿ ಸಂಗ್ರಹವಾಗುತ್ತದೆ. ಹೆಚ್ಚುವರಿ ನೀರು ತಗ್ಗು ಪ್ರದೇಶಗಳತ್ತ ಹರಿಯುವ ಕಾರಣ ನೆರೆಯವರಿಗೆ ತೊಂದರೆಯಾಗುತ್ತದೆ. ಹಾಗಾಗಿ ಮೋಟಾರ್‌ ಮೂಲಕ ನಿತ್ಯವೂ ನೀರು ಹೊರಹಾಕುತ್ತೇವೆ. ಅದಕ್ಕಾಗಿ ತಿಂಗಳಿಗೆ ಸಾಕಷ್ಟು ವಿದ್ಯುತ್ ಖರ್ಚಾಗುತ್ತದೆ’ ಎಂದು ಅಳಲು ತೋಡಿಕೊಂಡರು ಚಂದ್ರಶೇಖರ ಶೆಟ್ಟರು.

ನೆಲ ಮಾಳಿಗೆ ಮುಚ್ಚಿಸುವ ಕುರಿತು ಯೋಚಿಸಿದ್ದೆವು. ಬಂಧುಗಳು, ಹಿತೈಷಿಗಳು ತಡೆದರು. ಮನೆ ಅಡಿ ಜಲರಾಶಿ ಇರುವ ಪರಿಣಾಮ ಮನೆ ಸದಾ ತಂಪಾಗಿದೆ. ಚಳಿಗಾಲದಲ್ಲಿ ಪಾದರಕ್ಷೆ ಇಲ್ಲದೇ ನಡೆಯಲು ಸಾಧ್ಯವಿಲ್ಲ ಎಂದು ವಿವರ ಹಂಚಿಕೊಂಡರು.‘ಶೆಟ್ಟರ ಮನೆ ಇರುವ ಪ್ರದೇಶ ಹಿಂದೆ ಕೆರೆ ಅಂಗಳವಾಗಿದ್ದಿರಬಹುದು. ಭೂಮಿಯ ಒಳಗೆ ಸಡಿಲ ಶಿಲಾ ಪದರ, ಮೃದುವಾದ    ಸೀಳು ಬಂಡೆಗಳು ಇದ್ದರೆ ನೀರು ಹೇರಳವಾಗಿ ಸಂಗ್ರಹವಾಗಿರುತ್ತದೆ. ಹಾಗಾಗಿ, ಸಮೃದ್ಧ ನೀರು ಹರಿಯುತ್ತಿರಬಹುದು’ ಎನ್ನುತ್ತಾರೆ ಜಲತಜ್ಞ ಎಸ್‌.ಬಿ.ಅಶೋಕ್ ಕುಮಾರ್.ಇದೇ ಬಡಾವಣೆಯ ಧನರಾಜ್‌ ಸೇರಿದಂತೆ ಕೆಲವರ ಮನೆಗಳಲ್ಲಿನ ಬಾವಿಗಳು ಎಂದಿಗೂ ಬತ್ತದೆ ತುಂಬಿರುವುದು ಈ ಪ್ರದೇಶದಲ್ಲಿ ಅಂತರ್ಜಲ ಹೇರಳವಾಗಿ ಇರುವುದಕ್ಕೆ ಸಾಕ್ಷಿ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT