ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೊಂದು ‘ಬಸವ ತತ್ವ’ದ ವೈಚಾರಿಕ ಬಳಗ

Last Updated 29 ಏಪ್ರಿಲ್ 2017, 7:23 IST
ಅಕ್ಷರ ಗಾತ್ರ

ಹಾವೇರಿ: ಸುಮಾರು 12 ವರ್ಷಗಳ ಹಿಂದೆ ಬಸವೇಶ್ವರ ನಗರದ ‘ಸಿ’ ಬ್ಲಾಕ್‌ನ ಹೊಲದಲ್ಲಿನ ಮನೆಯ ಪ್ರವೇಶ ಕಾರ್ಯಕ್ರಮವಿತ್ತು. ‘ಗೃಹ ಪ್ರವೇಶ’ ಎಂದರೆ ಹೋಮ, ಹವನ, ಪೂಜೆ, ಪುನಸ್ಕಾರ, ಆಶೀರ್ವಚನ, ಆಕಳು ಎಂಬಿತ್ಯಾದಿ ನಿರೀಕ್ಷೆಗಳೆಲ್ಲ ಹುಸಿಯಾಗಿತ್ತು. ದಲಿತ ಕುಟುಂಬದ ಐದು ಮಹಿಳೆಯರು ಹಾಗೂ ಐದು ವಿಧವೆಯರು ಅಧಿಕ ಮಾಸದ ಸುನೇದಅಮವಾಸ್ಯೆ ದಿನ ಮನೆಯನ್ನು ಪ್ರವೇಶಿಸಿದರು. ವಿಘ್ನಗಳಿಲ್ಲದೇ ‘ಗೃಹ ಪ್ರವೇಶ’ ನೆರವೇರಿತು. 

ಸುಮಾರು ನಾಲ್ಕು ದಶಕಗಳಿಂದ ಬಸವಣ್ಣನವರ ತತ್ವಗಳನ್ನು ವೈಚಾರಿಕ ನೆಲಗಟ್ಟಿನಲ್ಲಿ ಅನುಸರಿಸಿಕೊಂಡು ಬರುತ್ತಿರುವ ಹಾವೇರಿಯ ‘ಬಸವ ಬಳಗ’ದ ಸದಸ್ಯ ಶಿವಯೋಗಿ ಬೆನ್ನೂರ ಅವರ ಮನೆಯ ಪ್ರವೇಶ ಅದು.‘ನಾವು ಬಸವತತ್ವದ ಪ್ರಕಾರ ಮೌಢ್ಯ, ಮೂಢ ಆಚರಣೆ, ಲಿಂಗ ತಾರತಮ್ಯ, ಜಾತಿಭೇದ, ಅಸಮಾನತೆ ಮತ್ತಿತರ ಸಾಮಾಜಿಕ ಅನಿಷ್ಠಗಳನ್ನು ವಿರೋಧಿಸಿಕೊಂಡೇ ಬದುಕುತ್ತಿದ್ದೇವೆ’ ಎಂದು ಶಿವಯೋಗಿ ಬೆನ್ನೂರ  ಅನುಭವ ಹಂಚಿಕೊಂಡರು.

‘ವೈಚಾರಿಕ ದಾರಿಯಲ್ಲಿ ನಡೆದಾಗ ಟೀಕೆ, ನಿಂದನೆ, ವಾಗ್ದಾಳಿಗಳು ಸಾಮಾನ್ಯ. ನನ್ನ ಮನೆಯೂ ವಾಸ್ತುವಿಗೆ ವಿರುದ್ಧವಾಗಿದೆ. ಆದರೆ, ಯಾವುದೇ ‘ನಷ್ಟ’ ಆಗಲಿಲ್ಲ’ ಎಂದರು.
ಬಸವ ಬಳಗದಿಂದ ಪ್ರತಿ ವರ್ಷ ಬಸವ ಜಯಂತಿ ಕಾರ್ಯಕ್ರಮ ಮಾಡುತ್ತೇವೆ. ವೈಚಾರಿಕ ನೆಲೆಯಲ್ಲಿ ಸಮಾಜ ಸೇವೆ, ಬದುಕುವವರನ್ನು ಗೌರವಿಸುತ್ತೇವೆ. ಮನೆಯಲ್ಲಿ ಮಹಾಮನೆ,  ವಚನಗಳ ಪ್ರಚಾರ, ಬಡವರಿಗೆ ದಾನ, ವೈಚಾರಿಕ ನೆಲೆಗಟ್ಟಿನ ಸ್ವಾಮೀಜಿಗಳಿಂದ ಪ್ರವಚನ ಆಯೋಜಿಸುತ್ತಿದ್ದೇವೆ’ ಎಂದರು.

ಬಸವ ಬಳಗದ ಇಂದೂಧರ ಯರ್ರೇಸಿಮೆ ವಚನ ಸಾಹಿತ್ಯ ಮತ್ತು ಬಸವಣ್ಣನ ಭಾವಚಿತ್ರ ಮನೆಗೆ ಒಯ್ಯುವ ಮೂಲಕ ಸರಳ ಗೃಹ ಪ್ರವೇಶ ನೆರವೇರಿಸಿದರು. ಉಳಿವೆಪ್ಪ ಪಂಪಣ್ಣ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮಾಡುತ್ತಾರೆ. ಮಾಲತೇಶ ಕರಿಮಣ್ಣನವರ ಶಾಲೆ ಕಲಿಯದಿದ್ದರೂ, ಮೌಢ್ಯಗಳಿಗೆ ಮೊರೆ ಹೋಗದೇ ಬದುಕು ಸಾಗಿಸುತ್ತಾರೆ.

ಮಾಗಾವಿ ಶೋಭಾತಾಯಿ ಹಲವು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿಕ್ಷಕ ರಾದ ಚನ್ನಬಸವಣ್ಣ ರೊಡ್ಡನವರ ಮಗಳ ಮದುವೆಯನ್ನು ವರದಕ್ಷಿಣೆ ರಹಿತ, ವಚನ ಪಠಣ, ಪುಷ್ಪ ವೃಷ್ಟಿ ಮೂಲಕ ಮಾಡಿದ್ದಾರೆ. ದೇವಗಿರಿಯ ಪುಟ್ಟಪ್ಪ ಎಂಬುವರ ಮನೆಯಲ್ಲಿನ ‘ಫೋಟೊ’ಗಳು, ತಾಯತ, ಕಲ್ಲುಗಳನ್ನೆಲ್ಲ ಸ್ವಾಮೀಜಿಯ ಜೋಳಿಗೆಗೆ ಹಾಕಿ ಹೊರ ಕಳುಹಿಸಿ ದ್ದಾರೆ.

‘ವರ್ಷದ ಹಿಂದೆ ಇಲ್ಲಿನ ಮೂರು ದಾರಿ ಸೇರುವ ಸ್ಥಳದಲ್ಲಿ ಯಾರೋ ಭಯದಿಂದ ಅನ್ನ, ಉತ್ತತ್ತಿ,ಕಾಯಿ ಇತ್ಯಾದಿ ಸುರಿದು ಹೋಗಿದ್ದರು. ಅದನ್ನೆಲ್ಲ ಒಯ್ದು ಮರುಬಳಕೆ ಮಾಡಿ ದ್ದೇವೆ. ಯಾವ ಭೂತವೂ ನಮ್ಮನ್ನು ಕಾಡಿಲ್ಲ. ದೇಗುಲದಲ್ಲಿ ಚೆಲ್ಲಿದ ಹಣವನ್ನು ತಂದು ದಾನ ಮಾಡಿದ್ದೇವೆ’ ಎಂದರು. ಈ ಬಳಗದಲ್ಲಿ ಸುಮಾರು 50 ಸದಸ್ಯರಿದ್ದು, ಪ್ರತಿ ವರ್ಷ ಬಸವಣ್ಣನವರ ವೈಚಾರಿಕ ನಿಲುವು ಜನರಿಗೆ ಬಿತ್ತುವ ಕೆಲಸ, ಸಾಧಕರಿಗೆ ಸನ್ಮಾನ, ಸಮಾಜ ಸೇವೆ ಮಾಡುವವರಿಗೆ ಗೌರವಾರ್ಪಣೆ ಮಾಡಲಾಗುತ್ತಿದೆ.

‘1980ರ ದಶಕದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೊಸಮಠದಲ್ಲಿ ಇದ್ದರು. ಅವರ ಜೊತೆ ನಮಗೆ ಚರ್ಚೆ–ವಾಗ್ವಾದಗಳು ನಡೆಯುತ್ತಿತ್ತು. ಬಳಿಕ ಅವರೇ ನಮ್ಮ ನೇತೃತ್ವ ವಹಿಸಿದರು’ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡರು.  ‘ದಯೆ ಇಲ್ಲದೇ ಧರ್ಮ ಯಾವುದಯ್ಯ?’ ಎಂದ ಬಸವಣ್ಣನವರ ತತ್ವ ಅನುಸರಿಸಿದ ನಮ್ಮ ಮೇಲೆಯೇ ಹಲ್ಲೆ ಮಾಡಲು ಬಂದವರೂ ಇದ್ದಾರೆ’ ಎಂದು ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT