ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತಗೊಂಡ ನಗರಸಭೆ ಆಡಳಿತ ಯಂತ್ರ

Last Updated 29 ಏಪ್ರಿಲ್ 2017, 9:00 IST
ಅಕ್ಷರ ಗಾತ್ರ

ಹೊಸಪೇಟೆ: ಕಾನೂನುಬಾಹಿರವಾಗಿ ಖಾತಾ ಬದಲಾವಣೆ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದ ದಿನದಿಂದ ಇಲ್ಲಿನ ನಗರಸಭೆ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹೊಸ ಕಟ್ಟಡ ಕಟ್ಟಲು ಅನುಮತಿ, ಫಾರಂ ನಂ. 3 ವಿತರಣೆ, ಮ್ಯುಟೇಶನ್‌, ಖಾತಾ ಬದಲಾವಣೆ, ಟ್ಯಾಕ್ಸ್‌ ತುಂಬಿದ ನಕಲು ಪ್ರತಿ ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಹೊಸ ಮನೆ ಕಟ್ಟಬೇಕೆಂಬ ಆಸೆ ಹೊಂದಿದವರು ಅಸಹಾಯಕರಾಗಿ ಸುಮ್ಮನೆ ಕೂರುವಂತಾಗಿದೆ. ಇದಕ್ಕೆ ಕಾರಣ ನಗರಸಭೆಯ ಕಂದಾಯ ವಿಭಾಗ ಸಂಪೂರ್ಣ ನಿಷ್ಕ್ರಿಯವಾಗಿರುವುದು.

ದುರ್ಬಲರ ಆಸ್ತಿಯನ್ನು ಅಕ್ರಮವಾಗಿ ಲಪಟಾಯಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ್‌ ಅವರು ಏ. 3ರಂದು ನಗರಸಭೆಗೆ ಭೇಟಿ ನೀಡಿದ್ದರು. ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರೊಂದಿಗೆ ಸ್ವತಃ ಅವರೇ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾದ ಕಾರಣ ಅದೇ ದಿನ ಪೌರಾಯುಕ್ತ ಎಂ.ಪಿ. ನಾಗಣ್ಣ ಹಾಗೂ ಕಂದಾಯ ವಿಭಾಗದ 14 ಜನ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಎತ್ತಂಗಡಿ ಮಾಡಿದ್ದರು. ನಗರಸಭೆಗೆ ಪೊಲೀಸ್‌ ಭದ್ರತೆ ಕಲ್ಪಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಕಂದಾಯ ವಿಭಾಗದ ಅಧಿಕಾರಿಗಳನ್ನು ಬೇರೆಡೆ ಎತ್ತಂಗಡಿ ಮಾಡಿ ಸುಮಾರು ಒಂದು ತಿಂಗಳು ಆಗುತ್ತ ಬಂದಿದೆ. ಆದರೆ, ಅವರ ಸ್ಥಳದಲ್ಲಿ ಬೇರೊಬ್ಬರನ್ನು ನಿಯೋಜನೆ ಮಾಡದ ಕಾರಣ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದು ನೇರವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರಿದೆ. ಕೆಲವರು ನಿತ್ಯ ನಗರಸಭೆಗೆ ಅಲೆದಾಟ ನಡೆಸುತ್ತಿದ್ದಾರೆ. ಆದರೆ, ಸಿಬ್ಬಂದಿ ಇಲ್ಲದ ಕಾರಣ ಬರಿಗೈಲಿ ವಾಪಸಾಗುತ್ತಿದ್ದಾರೆ.

‘ಹೊಸ ಮನೆ ಕಟ್ಟಬೇಕು ಎನ್ನುವುದು ನನ್ನ ಬಹುವರ್ಷಗಳ ಆಸೆಯಾಗಿತ್ತು. ಇನ್ನೇನು ನಗರಸಭೆಯಿಂದ ಅನುಮತಿ ಪಡೆದು ಕೆಲಸ ಶುರು ಮಾಡಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ಜಿಲ್ಲಾಧಿಕಾರಿ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿರುವ ವಿಚಾರ ತಿಳಿಯಿತು. ಒಂದು ವಾರದ ಬಳಿಕ ಎಲ್ಲವೂ ಸರಿ ಹೋಗಬಹುದು ಅಂದುಕೊಂಡಿದ್ದೆ. ಆದರೆ, ಮೂರು ವಾರಗಳಾದರೂ ಯಾವುದೇ ಬದಲಾವಣೆ ಆಗಿಲ್ಲ. ನಗರಸಭೆಗೆ ಅಲೆದು ಅಲೆದು ಸಾಕಾಗಿದೆ.ಇಲ್ಲಿಯವರೆಗೆ ಮನೆ ಕಟ್ಟಲು ಅನುಮತಿ ಪಡೆಯಲು ಸಾಧ್ಯವಾಗಿಲ್ಲ’ ಎಂದು ಇತ್ತೀಚೆಗೆ ಶಿಕ್ಷಕ ಕೆಲಸದಿಂದ ನಿವೃತ್ತಿ ಹೊಂದಿರುವ ಅಮರಾವತಿಯ ರಾಜು ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂದಾಯ ವಿಭಾಗ ಯಾವಾಗ ಕೆಲಸ ನಿರ್ವಹಿಸುತ್ತದೆ ಎಂದು ಕೆಲ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಶೀಘ್ರದಲ್ಲೇ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಇದನ್ನೇ ಕೇಳಿ ಕೇಳಿ ಸಾಕಾಗಿದೆ. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ಜಿಲ್ಲಾಧಿಕಾರಿಯವರು ಕಂದಾಯ ವಿಭಾಗ ಕೆಲಸ ನಿರ್ವಹಿಸುವಂತೆ ಮಾಡಬೇಕು’ ಎಂದು ಹೇಳಿದರು.

‘ಮಳಿಗೆಗಳನ್ನು ನಿರ್ಮಿಸಲು ಎಂಜಿನಿಯರ್‌ರಿಂದ ಪ್ಲಾನ್‌ ಸಿದ್ಧಪಡಿಸಿ, ಅನುಮತಿಗಾಗಿ ನಗರಸಭೆಗೆ ಎರಡು ತಿಂಗಳ ಹಿಂದೆ ದಾಖಲೆಗಳನ್ನು ಕೊಟ್ಟಿದ್ದೆ. ಆದರೆ, ಇಲ್ಲಿಯವರೆಗೆ ಅನುಮತಿ ಸಿಕ್ಕಿಲ್ಲ. ಈಗಂತೂ ಅಧಿಕಾರಿಗಳು ಇಲ್ಲದ ಕಾರಣ ಯಾರೊಬ್ಬರು ಕೇಳುವವರು ಇಲ್ಲದಂತಾಗಿದೆ. ದಿಕ್ಕೇ ತೋಚದಂತಾಗಿದೆ’ ಎಂದು ನಗರದ ಟಿ.ಬಿ ಡ್ಯಾಂ ರಸ್ತೆ ನಿವಾಸಿ ರಮೇಶ ಲಾಲ್‌ ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT