ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮಾಯಣ’ 60ರ ಸಂಭ್ರಮ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮಲ್ಲಿಕಾರ್ಜುನ ಹೆಗ್ಗಳಗಿ
‘ಗ್ರಾಮಾಯಣ’ ಕನ್ನಡದ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದು ರಾವಬಹದ್ದೂರ (ರಾಮಚಂದ್ರ ಭೀಮರಾವ್ ಕುಲಕರ್ಣಿ 1911-1984) ಅವರ ಮೊದಲ ಕೃತಿ. 1957ರಲ್ಲಿ ಪ್ರಕಟವಾದ ಈ ಕಾದಂಬರಿಗೆ ಈಗ 60ರ ಸಂಭ್ರಮ. 
 
ರಾವಬಹದ್ದೂರರ ನೈತಿಕ ಧೈರ್ಯ, ಆಳವಾದ ಮಾನವೀಯ ಅನುಕಂಪ, ಕಲಾತ್ಮಕವಾದ ನಿರುಪಣಾ ಕೌಶಲ್ಯ, ಕ್ಷಣಕ್ಷಣಕ್ಕೂ ಮಿಂಚಿ ಚಕಿತಗೊಳಿಸುವ ರೂಪಕ ಪ್ರಧಾನವಾದ ಕಲ್ಪನಾ ವಿಲಾಸದಿಂದ ‘ಗ್ರಾಮಾಯಣ’ ಓದುಗರನ್ನು ಸಹಜವಾಗಿ ಗೆಲ್ಲುತ್ತದೆ. ಈ ಕಾದಂಬರಿಗೆ ಕೀರ್ತಿನಾಥ ಕುರ್ತಕೋಟಿ ಮುನ್ನುಡಿ ಬರೆದಿದ್ದಾರೆ. ಧಾರವಾಡದ ‘ಸಮಾಜ ಪುಸ್ತಕಾಲಯ’ ಪ್ರಕಾಶನ ಸಂಸ್ಥೆ ಪ್ರಥಮವಾಗಿ ಈ ಕೃತಿಯನ್ನು ಪ್ರಕಟಿಸಿದೆ.  
 
ರಾವಬಹದ್ದೂರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಖಾದಿ ಗ್ರಾಮೋದ್ಯೋಗ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಗಾಂಧಿ ಅವರ ಆಶ್ರಮದಲ್ಲಿ ವರ್ಷಕ್ಕೂ ಹೆಚ್ಚು ಕಾಲ ‘ಖಾದಿ ಗ್ರಾಮೋದ್ಯೋಗ ವ್ಯವಹಾರ’ದ ಉಸ್ತುವಾರಿ ಕೆಲಸ ವಹಿಸಿಕೊಂಡಿದ್ದರು.  
 
ಈ ಸಂದರ್ಭದಲ್ಲಿ ಅವರಿಗೆ ಕೆಲವು ಬಾರಿ ಗಾಂಧೀಜಿ ಅವರಂದಿಗೆ ಮಾತನಾಡುವ ಅಪರೂಪದ ಭಾಗ್ಯ ಲಭಿಸಿತ್ತು. ಗ್ರಾಮೀಣ ಪ್ರದೇಶದಿಂದ ಬಂದ ಅವರ ಜೀವನನುಭವ ದೊಡ್ಡದು. ಅದನ್ನೆಲ್ಲ ಎರಕ ಹೊಯ್ದು ‘ಗ್ರಾಮಾಯಣ’ ರಚಿಸಿದ್ದಾರೆ. 
 
ಪಾದಳ್ಳಿ ‘ಗ್ರಾಮಾಯಣ’ದ ಕಥೆ ನಡೆದ ಊರು. ಜಮಖಂಡಿ ತಾಲ್ಲೂಕಿನ ಪಡಸಲಗಿ ರಾವಬಹದ್ದೂರರ ಹುಟ್ಟೂರು. ಅದನ್ನೇ ಸ್ವಲ್ಪ ಬದಲಿಸಿ ಪಾದಳ್ಳಿ ಮಾಡಿದ್ದಾರೆ. ಪಾದಳ್ಳಿ ಕೃಷ್ಣಾನದಿಯ ದಂಡೆ ಮೇಲೆ ಇರುವ ಊರು. 
 
‘ಗ್ರಾಮಾಯಣ’ ಒಂದು ಗ್ರಾಮದ ರಾಮಾಯಣವೇ ಸರಿ. ಇಡೀ ಒಂದು ಊರಿನ ಬದುಕೇ ಕಾದಂಬರಿಯ ಕೇಂದ್ರವಾಗಿ, ಕಥೆ ಎರಡು ಹಂತಗಳಲ್ಲಿ ಬೆಳೆಯುತ್ತದೆ. ಒಂದು ಪಾದಳ್ಳಿಯ ಕಥೆ, ಇನ್ನೊಂದು ಪಾದಳ್ಳಿ ಜನರ ಕಥೆ. ಪಾದಳ್ಳಿಯ ಜಹಾಗೀರದಾರವಾಡೆಯ ನೌಕರನ ಮಗಳು ಚಿಮಾಣಳ ಶೀಲಹರಣದ ಪ್ರಸಂಗ ಇಡೀ ಗ್ರಾಮದ ಜನರ ಚಿತ್ರವಿಚಿತ್ರ ಮನಸ್ಥಿತಿಗಳನ್ನು ವಿಶ್ಲೇಷಿಸುತ್ತದೆ.

ಬರಗಾಲ, ಕಾಲರಾ, ಪ್ಲೇಗ್ ಹಾವಳಿಗಳು ಜನರನ್ನು ಕಾಡುವ ಪರಿ, ಜನರ ನಡುವಿನ ದ್ವೇಷ, ಲಿಂಗತಾರತಮ್ಯ, ಜಾತೀಯತೆ, ದೇವದಾಸಿ ಪದ್ಧತಿ, ಬಡ್ಡಿ ವ್ಯವಹಾರ, ಬಡವರ ಜಮೀನು ಕಬಳಿಕೆ, ಅಕ್ರಮ ಸಂಬಂಧಗಳು – ಇವೆಲ್ಲವುಗಳ ಬಗ್ಗೆ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. 
 
ಈ ಕಾದಂಬರಿಗೆ ನಾಯಕನಿಲ್ಲ, ನಾಯಕಿಯೂ ಇಲ್ಲ. ಪಾದಳ್ಳಿಯ ಜನಸಮೂಹವೇ ಈ ಕಾದಂಬರಿಯ ಕೇಂದ್ರಪಾತ್ರ. ಕಾದಂಬರಿಗೆ ಆಯ್ಕೆ ಮಾಡಿಕೊಂಡ ಕಥಾವಸ್ತು ಬಹಳ ತೊಡಕಿನದು. ಹಲವಾರು ಜಾತಿಗಳು, ಅನೇಕ ಸ್ವಭಾವಗಳ, ಭಿನ್ನ ಭಿನ್ನ ಸಂಸ್ಕಾರಗಳ, ನೂರಾರು ಭಾವ–ಲಹರಿಗಳು – ಇವೆಲ್ಲವುಗಳನ್ನು ತನ್ನೊಳಗೆ ತುಂಬಿಕೊಂಡು ಕಥೆ ಕುತುಹಲ ಕೆರಳಿಸುತ್ತ ಬೆಳೆಯುತ್ತದೆ. ಇದರ ಜೊತೆಗೆ ಪಾದಳ್ಳಿಯ ಜೀವನದ ದೈವರೇಖೆಯಂಬಂತೆ ಆಂತರಿಕ ಜೀವನತುಮುಲಗಳ ಪ್ರವಾಹದ ಗತಿಯನ್ನು ಲೇಖಕರು ತೋರಿಸಿರುವುದು ಈ ಕೃತಿಯ ಹಿರಿಮೆ ಹೆಚ್ಚಿಸಿದೆ. 
 
ಈ ಕಾದಂಬರಿ ರಚನೆಯ ಹಿನ್ನೆಲೆ ಕೂಡ ರಂಜನೀಯವಾಗಿದೆ. ರಾವಬಹದ್ದೂರರು ಕೃತಿಯ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾರೆ:  ‘ಭಲೆಲೇ ಜಟ್ಟಿ ಎಂದರೆ ಕೆಮ್ಮಣ್ಣು ಮುಕ್ಕಿದ ಎಂಬ ಗಾದೆಯ ಮಾತು ಅಕ್ಷರಶಃ ನನಗೆ ಅನ್ವಯಿಸುತ್ತದೆಂಬುದು ಈ ಕಾದಂಬರಿ ಬರೆಯಲು ಒಪ್ಪಿಕೊಂಡ ಮೇಲೆ ನನಗೆ ಅನುಭವಕ್ಕೆ ಬಂತು. ಗೆಳೆಯ ಮತ್ತು ಪ್ರಸಿದ್ಧ ನಾಟಕಗಾರ ಹಾಗೂ ಪ್ರಕಾಶಕರಾಗಿದ್ದ ಜಿ.ಬಿ. ಜೋಶಿ ಅವರೊಂದಿಗೆ ಒಮ್ಮೆ ಕಾದಂಬರಿಗಳ ಕಥಾವಸ್ತುಗಳ ಬಗ್ಗೆ ಚರ್ಚಿಸಿದೆ.

ಹೆಚ್ಚಾಗಿ ಗಂಡು ಹೆಣ್ಣು ಒಲವಿನ ಪ್ರಣಯದ ಕಾದಂಬರಿಗಳೇ ಪ್ರಕಾಶನಗೊಳ್ಳುತ್ತಿವೆ. ಪ್ರಣಯ, ಲೈಂಗಿಕತೆಯ ಆಚೆಗೂ ಬೇರೆ ವಿಷಯಗಳನ್ನು ಬರೆದರೆ ಕಾದಂಬರಿ ಲೋಕಪ್ರಿಯವಾಗಬಲ್ಲದು. ಪ್ರೀತಿ ಹೊರತಾಗಿಯೂ ಮನುಷ್ಯನನ್ನು ಕಾಡುವ ಸಮಸ್ಯೆಗಳು ಬೇರೆ ಬೇರೆ ಇವೆ. ಮಾನವ ಸಹಾನುಭೂತಿಯಿಂದ ತುಂಬಿದ ಕೃತಿಗಳು ರಚಿಸಬೇಕು ಎಂದು ಸಲಹೆ ಮಾಡಿದೆ.
 
ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ ಜೋಶಿ ಅವರು ನನಗೇ ಅಂಥ ಕಾದಂಬರಿ ಬರೆಯಲು ಪಂಥಾಹ್ವಾನ ನೀಡಿದರು. ಮೊದಲ ಅಧ್ಯಾಯ ಬರೆದು ತೋರಿಸಿದಾಗ ನನ್ನ ಬೆನ್ನು ಚಪ್ಪರಿಸಿ ಚೆನ್ನಾಗಿದೆ ಎಂದರು. ಎರಡು ತಿಂಗಳಲ್ಲಿ ಪೂರ್ಣ ಬರೆದುಕೊಡಲು ಸೂಚಿಸಿದರು. ಹೀಗೆ ಈ ಕಾದಂಬರಿ ಹುಟ್ಟಿತು’ ಎಂದು ರಾವಬಹದ್ದೂರ ವಿವರಿಸುತ್ತಾರೆ. ‘ಹದಿನೆಂಟು ಜಾತಿಗಳಿಂದ ಒಡಕು ಕನ್ನಡಿಯಾದ ನಮ್ಮ ಸಮಾಜದ ಚಿತ್ರ ಕಾದಂಬರಿಯಲ್ಲಿದೆ’ ಎಂದವರು ತಮ್ಮ ಕೃತಿಯ ಬಗ್ಗೆ ಹೇಳಿಕೊಂಡಿದ್ದಾರೆ.
 
ಈ ಕಾದಂಬರಿಗೆ ‘ಗ್ರಾಮಾಯಣ’ ಎಂಬ ಹೆಸರಿಟ್ಟವರು ಲೇಖಕರಲ್ಲ ಎಂಬುದು ಇನ್ನೊಂದು ವಿಶೇಷ. ಕಾದಂಬರಿಗೆ ಸೂಕ್ತ ಹೆಸರು ಸೂಚಿಸಲು ರಾವಬಹದ್ದೂರ ಅವರು ಜಿ.ಬಿ. ಜೋಶಿ, ಕೀರ್ತಿನಾಥ ಕುರ್ತಕೋಟಿ, ವಿ.ಕೃ. ಗೋಕಾಕ ಮುಂತಾದ ಗಣ್ಯರೊಂದಿಗೆ ಸಮಾಲೋಚನೆ ಮಾಡುತ್ತಿದ್ದಾಗ, ಹುಬ್ಬಳ್ಳಿಯಲ್ಲಿ ಅಧ್ಯಾಪಕರಾಗಿದ್ದ ಎ.ವಿ. ಶಾಸ್ತ್ರಿ ಎಂಬವರು ಇದಕ್ಕೆ ‘ಗ್ರಾಮಾಯಣ’ ಎಂಬ ಹೆಸರು ಸೂಚಿಸಿದರು.
 
 
‘ಗ್ರಾಮಾಯಣ ಎಂಬ ಪದವೇ ಒಂದು ಪುಟ್ಟ ಭಾವಗೀತೆ (Miniature Lyric) ಆಗಿದೆ. ರಾಮಾಯಣದ ಆದರ್ಶಕ್ಕೂ ನಮ್ಮ ವಾಸ್ತವತೆಗೂ ಇರುವ ಅಂತರವನ್ನು ವ್ಯಂಗ್ಯವಾಗಿ ಇದು ಸೂಚಿಸುತ್ತದೆ. ನಾನು ಹಡೆದ ಮಗುವಿಗೆ ಶಾಸ್ತ್ರಿಯವರು ನಾಮಕರಣ ಮಾಡಿದರು’ ಎಂದು ರಾವಬಹದ್ದೂರ ಅಭಿಮಾನದಿಂದ ದಾಖಲಿಸಿದ್ದಾರೆ.
 
ರಾವಬಹದ್ದೂರ ಅವರು ಒಳ್ಳೆಯ ನಾಟಕಕಾರರೂ ಆಗಿದ್ದರು. ಅವರು ನಾಟಕಗಳಲ್ಲಿ ಕಲಾವಿದರಾಗಿ ಅಭಿನಯಿಸುತ್ತಿದ್ದರು. ಒಟ್ಟು ಮೂರು ನಾಟಕಗಳನ್ನು ಅವರು ರಚಿಸಿದ್ದಾರೆ.  
 
ರಾವಬಹದ್ದೂರ ಅವರ ಒಡನಾಟದ ದೊಡ್ಡ ಸಂತೋಷ ನನಗೆ ಲಭಿಸಿದೆ. ಎರಡು ಅವಿಸ್ಮರಣೀಯ ಘಟನೆಗಳನ್ನು ಇಲ್ಲಿ ವಿವರಿಸುತ್ತೇನೆ. ನಾನು ಜಮಖಂಡಿಗೆ ಹೋದಾಗಲೆಲ್ಲ ಅವರೊಂದಿಗೆ ದಿನವಿಡೀ ಸುತ್ತುತ್ತಿದ್ದೆ. ಅವರು 1984ರಲ್ಲಿ ಕ್ಯಾನ್ಸರ್‌ನಿಂದ ಬಳಲತೊಡಗಿದರು. ದಿನ ಬಿಟ್ಟು ದಿನ ಅವರ ಮನೆಗೆ ಹೋಗಿ ಅವರೊಂದಿಗೆ 2–3 ತಾಸು ಕಳೆಯುವುದು ನನ್ನ ಡ್ಯೂಟಿಯಾಯಿತು.
 
ತೀವ್ರ ಅನಾರೊಗ್ಯದಿಂದ ಬಳಲುತ್ತಿರುವ ಅವರಿಗೆ ಕನ್ನಡಿಗರು ಆರ್ಥಿಕ ನೆರವು ನಿಡಬೇಕು ಎಂದು ಆಗ ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ ಅವರು ತಮ್ಮ ಪತ್ರಿಕೆಯಲ್ಲಿ ಮನವಿ ಪ್ರಕಟಿಸಿದರು. ಇದನ್ನು ಓದಿ ರಾವಬಹದ್ದೂರ ಅಕ್ಷರಶಃ ಕುದ್ದುಹೋದರು. ‘ನನ್ನ ಮಕ್ಕಳು ಉದ್ಯೋಗಮಾಡಿ ಗಳಿಕೆ ಮಾಡುತ್ತಿದ್ದಾರೆ. ನನ್ನನ್ನು ಜೋಪಾನ ಮಾಡುವ ಶಕ್ತಿ ಅವರಿಗಿದೆ. ಇನ್ನೊಬ್ಬರ ನೆರವು ಪಡೆಯುವ ಅವಶ್ಯಕತೆ ನನಗೆ ಇಲ್ಲ.
 
ಇಂಥ ಸೂಕ್ಷ್ಮ ವಿಷಯ ಪ್ರಕಟಿಸುವ ಮೊದಲು ಸಂಪಾದಕರು ನನ್ನ ಅಭಿಪ್ರಾಯ ಕೇಳಬೇಕಾಗಿತ್ತು’ ಎಂದು ಕೆಂಡಾಮಂಡಲವಾದರು. ಚೆಕ್, ಡಿಡಿ, ಮನಿಯಾರ್ಡರ್ ಮೂಲಕ ಹಣ ಬರತೊಡಗಿತು. ಅದನ್ನೆಲ್ಲ ರಾವಬಹಾದ್ದೂರ್ ವಾಪಸ್ ಕಳಿಸಿಬಿಟ್ಟರು. ‘ಯಾರೂ ಹಣ ಕಳಿಸಬಾರದು’ ಎಂಬ ಮತ್ತೊಂದು ಮನವಿಯನ್ನು ಪತ್ರಿಕೆಯಲ್ಲಿ ಅವರು ಪ್ರಕಟಿಸಿದರು.
 
ರಾಜ್ಯ ಸರ್ಕಾರ ರಾವಬಹಾದ್ದೂರರ ಚಿಕಿತ್ಸೆಗೆ 10 ಸಾವಿರ ರೂಪಾಯಿ ಮಂಜೂರು ಮಾಡಿತು. ಆಗ ಅರಣ್ಯ ಸಚಿವರಾಗಿದ್ದ ಜಮಖಂಡಿಯ ಜಿ.ಎಸ್. ಬಾಗಲಕೋಟ ಅವರು ಸ್ವತಃ ರಾವಬಹದ್ದೂರ ನಿವಾಸಕ್ಕೆ ಬಂದು ಚೆಕ್ ನೀಡಿದರು. 
 
ನಾನು ಜಮಖಂಡಿ ಸಮೀಪದ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಉದ್ಯೋಗಿಯಾಗಿದ್ದೆ ಮತ್ತು ಅಲ್ಲಿಯ ಕಾರ್ಮಿಕ ಸಂಘದ ಅಧ್ಯಕ್ಷನಾಗಿದ್ದೆ. 1979ರಲ್ಲಿ ರಾವಬಹಾದ್ದೂರ ಅವರು ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದ ನಾನು ಸಭೆಯಲ್ಲಿ ಮಾತನಾಡುವ ಅಪೇಕ್ಷೆ ವ್ಯಕ್ತಪಡಿಸಿದೆ. ಕಾರ್ಖಾನೆ ಆಡಳಿತ ಮಂಡಳಿಯ ಪ್ರಮುಖರು ಅವಕಾಶ ನಿರಾಕರಿಸಿದರು.
 
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾವಬಹದ್ದೂರ ನನ್ನನ್ನು ಕರೆದು ಮಾತನಾಡಲು ಅವಕಾಶ ಮಾಡಿಕೊಟ್ಟರು. ಸಭೆಯಲ್ಲಿ ಆಡಳಿತ ಮಂಡಳಿಗೆ ಛೀಮಾರಿ ಹಾಕಿದರು. ಈ ಘಟನೆ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಮುಂಬೈ ಕೇಂದ್ರ ಕಚೇರಿ ಆಡಳಿತಮಂಡಳಿಯ ಗಮನಕ್ಕೆ ಬಂದಿತು. ಕೇಂದ್ರ ಕಚೇರಿ ರಾವಬಹದ್ದೂರರ ನಿಲುವು ಸರಿ ಎಂದು ಒಪ್ಪಿಕೊಂಡು ಅವರಿಗೆ ಕೃತಜ್ಞತೆ ತಿಳಿಸಿತು.
 
ರಾವಬಹದ್ದೂರ ಅವರು ‘ತಮ್ಮದು ಗಾಂಧಿ ಮುಟ್ಟಿದ ದೇಹ’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಅವರು ಅಪ್ಪಟ ದೇಶಪ್ರೇಮಿ. ಕರ್ನಾಟಕದ ಏಕೀಕರಣದ ರೂವಾರಿಗಳಲ್ಲೊಬ್ಬರು. ‘ಗ್ರಾಮಾಯಣ’ ಮರಾಠಿಗೆ ಅನುವಾದಗೊಂಡಿದೆ. ಈ ಮಹತ್ವದ ಕೃತಿ ಜಗತ್ತಿನ ಪ್ರಮುಖ ಭಾಷೆಗಳಿಗೆ ಭಾಷಾಂತರಗೊಳ್ಳುವುದು ಬಹಳ ಅವಶ್ಯವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT