ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ಕೆರೆ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಊರ ಕೆರೆ
 
ನಮ್ಮ ಊರಿನ
ದೊಡ್ಡ ಕೆರೆಯನು
ಹಿರಿಯರೆಂದೊ ಕಟ್ಟಿಸಿಹರು
ಬತ್ತಿ ಹೋಗದ
ಹಾಗೆ ಕೆರೆಗದು
ಆಳ ಅಗಲವ ಇಟ್ಟಿಹರು!
 
ಸುತ್ತ ಎಲ್ಲೆಡೆ
ಏರಿ ನಿರ್ಮಿಸಿ
ಸಾಲು ಮರಗಳ ಬೆಳೆಸಿಹರು
ಮಳೆಗಾಲದಿ
ಹರಿವ ಕೋಡಿಗೆ
ಮಾರ್ಗಗಳನು ರಚಿಸಿಹರು!
 
ಬಾವಿಗಳಿಗೆ
ನೀರನುಣಿಸುವ
ಕೆರೆಯ ಕಾರ್ಯ ಅರಿತವರು
ಜಲದ ಕೊರತೆಯು
ಕಾಡದಂತೆ 
ಮುಂದಾಲೋಚನೆ ಮಾಡಿಹರು!
 
ಪ್ರಾಣಿ ಪಕ್ಷಿಗೆ
ನೀರನೊದಗಿಸಿ
ಲೋಕಹಿತವನು ಬಯಸಿಹರು
ಊರ ಪರಿಸರ
ಹಿತವಾಗಿಸಿ
ನಮಗೆ ಅರಿವನು ಕೊಟ್ಟಿಹರು!
 
ಊರಿಗೊಂದು
ಕೆರೆಯಿರಲೆಂಬ
ಕಳಕಳಿಯ ಮಿಡಿದಿಹರು
ಜಲದ ನಿಧಿಯ
ಕಾಯ್ದುಕೊಳ್ಳಲು
ಮನದ ಮಾತನು ಹೇಳಿಹರು!
 
–ಸಂಗಮೇಶ ಗುಜಗೊಂಡ, ಮೂಡಲಗಿ
 
*****

ನನ್ನ ತಮ್ಮ

ಗುಮ್ಮ ಬಂದ
ಗುಮ್ಮ ಬಂದ
ಮಲಗು ನನ್ನ ತಮ್ಮ

ಗುಮ್ಮ ಬರಲು
ಹೆದರುವೆನೆ
ಜೊತೆಗೆ ಇರಲು ಅಮ್ಮ

ಕೋತಿ ಬಂತು
ಕರಡಿ ಬಂತು
ಮಲಗು ಜಾಣ ಮರಿ

ಕೋತಿ ಬರಲಿ
ಕರಡಿ ಬರಲಿ
ಅಪ್ಪನನ್ನು ಕರಿ

ಅಲ್ಲಿ ಬಂತು
ಇಲ್ಲಿ ಬಂತು
ದೊಡ್ಡದೊಂದು ಭೂತ

ಭೂತ ಬರಲಿ
ಪ್ರೇತ ಬರಲಿ
ಮನೆಯಲಿರುವ ತಾತ!

ಸಿಂಹ ಬಂತು
ತೋಳ ಬಂತು
ನೋಡು ಅದರ ಭಂಗಿ

ಭಯವು ಯಾಕೆ
ಮನೆಯಲಿರಲು
ಕೆಲಸದಾಳು ನಿಂಗಿ

ಕತ್ತೆ ಬಂತು
ನರಿ ಬಂತು
ನೋಡು ಎದ್ದು ಮತ್ತೆ

ಬಂದರೇನು
ಮಾಡುವವು
ಮನೆಯ ಒಳಗೆ ಅತ್ತೆ

ಮಲಗೋ ತಮ್ಮ
ಮಲಗೋ ತಮ್ಮ
ಪದಗಳೆಲ್ಲ ಖಾಲಿ

ಅವ್ವ ಬರಲಿ
ಮಲಗುವೆನು
ಹಾಡಿದರೆ ಲಾಲಿ!

–ಸುರೇಶ ಕಂಬಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT