ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಕ ಇಲ್ಲಿನ್ನೂ ಉಸಿರಾಡುತ್ತಿದೆ!

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅದೊಂದು ಧ್ಯಾನ, ತಪಸ್ಸಿನಂತೆ.
ಒಡವೆ ಪೆಟ್ಟಿಗೆಯಂತಿರುವ ಡಬ್ಬಿಯಿಂದ ಬೊಗಸೆ ಹತ್ತಿಯನ್ನು ಹುಷಾರಾಗಿ ತೆಗೆದು, ಹಲಗೆ ಮೇಲಿಟ್ಟು, ಕಟ್ಟಿಗೆಯ ತುಂಡಿನಿಂದ ಚಪಾತಿಯಂತೆ ಒತ್ತಬೇಕು. ಕಸ–ಕಡ್ಡಿ, ಬೀಜವನ್ನು ಹಿಂದೆ ಬಿಟ್ಟು ಮುಂದೆ ಸಾಗುವ ಹತ್ತಿಯನ್ನು ಇನ್ನೊಂದು ಸಾಧನದಲ್ಲಿ ಹಾಕಿ, ತಿರುಗಣಿ ತಿರುಗಿಸಬೇಕು. ಹತ್ತಿ ಮೋಡದಂತೆ ಕೆಳಗೆ ಸುರಿಯುತ್ತದೆ. ಅದನ್ನು ಮೀನಿನ ದವಡೆ, ಬಿಲ್ಲಿನಿಂದ ಹದಗೊಳಿಸಿ ಅಚ್ಚುಕಟ್ಟಾಗಿ ಮಡಿಕೆ ಮಾಡಿ, ಎಡಗೈಯಲ್ಲಿ ಹಿಡಿದು ತಾದಾತ್ಮ್ಯದಿಂದ ಚರಕ ತಿರುಗಿಸಬೇಕು.

ಅದರ ಮೆಲುಸದ್ದು ಬಿಟ್ಟರೆ ಬೇರೇನೂ ಇಲ್ಲದಂಥ ನಿಶ್ಶಬ್ದ ವಾತಾವರಣ. ಕಿರುಗಾಲಿಗೆ ಸುತ್ತಿಕೊಳ್ಳುವ ನೂಲಿನ ಮೇಲೆ ಗಮನವಿಟ್ಟು, ತಕ್ಕಷ್ಟು ಹತ್ತಿಯನ್ನು ಮಾತ್ರ ಎಡಗೈ ಕಿರುಬೆರಳಿನಿಂದ ಕಳಿಸುವ ನೋಟಕ್ಕೆ ಮನಸೋಲದವರಾರು?
ಒಂದು ನೂಲೆಳೆಯ ಹಿಂದಿರುವ ಈ ಕುಶಲತೆಗೆ ಶರಣು ಎನ್ನದೇ ಇರಲಾದೀತೇ?
 
‘ನೂಲನ್ನು ಹೀಗೆ ತಾನೂ ತಯಾರಿಸಬಹುದಲ್ಲ’ ಎಂದು ಜಾರ್ಖಂಡಿನ ಸ್ನೇಹಿತ ಸೌಮಿಕ್ ಬ್ಯಾನರ್ಜಿ ಚರಕದ ಎದುರು ಕುಳಿತು ಯತ್ನಿಸಿದ. ಬಲ–ಎಡಗೈ, ಕಣ್ಣು ಹಾಗೂ ಮನಸ್ಸನ್ನು ಏಕಕಾಲಕ್ಕೆ ಒಂದೇ ಕೆಲಸದಲ್ಲಿ ತೊಡಗಿಸುವ ಏಕಾಗ್ರತೆ ಆತನಿಗೆ ಸಾಧ್ಯವಾಗಲೇ ಇಲ್ಲ. ‘ಬಲಗೈಯಿಂದ ಚರಕ ತಿರುಗಿಸುತ್ತ ಕ್ಯಾಮೆರಾಕ್ಕೆ ಬರೀ ಪೋಸ್ ಕೊಡಬಹುದಷ್ಟೇ’ ಎಂಬ ಹಾಸ್ಯಚಟಾಕಿ ನೂಲು ನೇಯುತ್ತಿದ್ದ ಸೂರ್ಯಕುಮಾರಿಯಳದ್ದು!
* * * 
ವಿಶಾಖಪಟ್ಟಣದ ಸೆಕೆಗೆ ಸಿಕ್ಕು ಹೈರಾಣಾಗಿದ್ದ ನಾವೊಂದಷ್ಟು ಜನ ‘ದೇಸಿ ಹತ್ತಿ ಪ್ರೇಮಿಗಳ ಸಂಘ’ದ ಸದಸ್ಯರು, ನೂರು ಕಿ.ಮೀ ದೂರದ ಪೊಂದೂರು ತಲುಪಿದಾಗ ಅದು ಅಗ್ನಿಗೊಂಡದಂತಿದ್ದು ಇನ್ನಷ್ಟು ದಿಗಿಲು ಮೂಡಿಸಿತು. ನೇಕಾರ ಸಮುದಾಯದ ಜತೆ ಕೆಲಸ ಮಾಡುತ್ತಿರುವ ‘ಚಿತ್ರಿಕಾ ಸಂಸ್ಥೆ’ಯ ಕಾರ್ಯಕರ್ತ ಅಪ್ಪುಲು ನಾಯ್ಡು ನಮ್ಮನ್ನೆಲ್ಲ ಉರಿಬಿಸಿಲಿನಲ್ಲಿ ಒಂದಷ್ಟು ದೂರ ನಡೆಸಿ ಮನೆಯೊಳಗೆ ಕರೆದೊಯ್ದ.
 
ವೃದ್ಧೆಯೊಬ್ಬಳು ತನ್ಮಯಳಾಗಿ ಚರಕದಲ್ಲಿ ನೂಲು ತೆಗೆಯುತ್ತಿದ್ದ ನೋಟವು ಬಿಸಿಲಿನ ತಾಪವನ್ನೆಲ್ಲ ಕರಗಿಸಿ, ತಂಗಾಳಿ ಸೋಕಿದಂತೆ ಭಾಸವಾಯಿತು. ಆಕೆ ಮಾಡುತ್ತಿದ್ದ ಒಂದೊಂದು ಕೆಲಸವೂ ತಾಳ್ಮೆ, ಅಪಾರ ಕೌಶಲವನ್ನು ಬಯಸುವಂಥದು. ಬೃಹತ್ ಯಂತ್ರಗಳೇ ಎಲ್ಲ ಕೆಲಸ ಮಾಡುತ್ತಿರುವಾಗ, ಪೊಂದೂರು ಇನ್ನೂ ಚರಕವನ್ನೇ ಉಸಿರಾಡುತ್ತಿರುವುದು ಅಚ್ಚರಿಯ ವಿಷಯ.
 
 
ಊರಿನ ಸಂದಿಗೊಂದಿಯಲ್ಲಿ ನಡೆದಾಡುವಾಗ ಒಬ್ಬರಲ್ಲ ಒಬ್ಬ ಮಹಿಳೆ ಹತ್ತಿ ಹಿಂಜುವುದೋ ನೂಲು ಮಾಡುವುದೋ ಕಾಣುತ್ತಲೇ ಇರುತ್ತದೆ. ದೇಶವನ್ನೆಲ್ಲ ಬಿ.ಟಿ ಹತ್ತಿ ಹಾಗೂ ಅತ್ಯಾಧುನಿಕ ಯಂತ್ರಗಳು ಆವರಿಸಿಕೊಂಡಿರುವಾಗ, ದೇಸಿ ಹತ್ತಿ ಮತ್ತು ಅದಕ್ಕೆ ಸಂಬಂಧಿಸಿದ ಸಮಗ್ರ ಸಾಂಪ್ರದಾಯಿಕ ವ್ಯವಸ್ಥೆಯೊಂದು ಪೊಂದೂರು ಪಟ್ಟಣವನ್ನು ಇನ್ನೂ ಜೀವಂತವಾಗಿರಿಸಿದೆ.
 
‘ಚರಕ’ ಎಂದ ಕೂಡಲೇ ಗಾಂಧೀಜಿ ನೆನಪಾಗುತ್ತಾರೆ. ಬ್ರಿಟಿಷರ ವಿರುದ್ಧ ಸಮರ ಸಾರಲು ಅವರಿಗೆ ಅಹಿಂಸಾ ‘ಅಸ್ತ್ರ’ವಾಗಿ ಸಿಕ್ಕಿದ್ದು ಚರಕ ಹಾಗೂ ಅದಕ್ಕೆ ಬೇಕಾಗಿದ್ದ ದೇಸಿ ಹತ್ತಿ. ಪೊಂದೂರು ಆ ಆಂದೋಲನದ ಕೊನೆಯ ಕೊಂಡಿಯಂತೆ ಭಾಸವಾಗುತ್ತದೆ.
 
ಪೊಂದೂರು ವೈಭವ
ಶ್ರೀಕಾಕುಳಂ ಜಿಲ್ಲೆಯ ಪೊಂದೂರು ತಾಲ್ಲೂಕು ಕೇಂದ್ರ. ಈ ಭಾಗದಲ್ಲಿ ಮರದಂತೆ ಬೆಳೆಯುವ ದೇಸಿ ಹತ್ತಿ ತಳಿ ‘ಕೊಂಡಪತ್ತಿ’. ಮಳೆಯಾಶ್ರಯದಲ್ಲಿಯೇ ಬೆಳೆಯುವ ಇದನ್ನು ಪೊಂದೂರಿನ ಖಾದಿ ಕೇಂದ್ರಕ್ಕೆ ತಂದು ಮಾರಾಟ ಮಾಡಲಾಗುತ್ತದೆ. ಬೇರೆ ಕಡೆ ಈ ಹತ್ತಿ ಬೆಳೆಯಲಾರದೇನೋ ಅಥವಾ ಆ ಕೆಲಸಕ್ಕೆ ಯಾರೂ ಮುಂದಾಗದೇ ಬರೀ ಪೊಂದೂರಿನಲ್ಲಿಯೇ ಇದು ಉಳಿದುಕೊಂಡಿತೇನೋ? ಒಟ್ಟಿನಲ್ಲಿ ಇದು ‘ಪೊಂದೂರು ಹತ್ತಿ’ (ಪುಂಡೂರು ಹತ್ತಿ) ಎಂದೇ ನಾಮಕರಣ ಮಾಡಿಸಿಕೊಂಡಿದೆ. ಈ ಹತ್ತಿಯ ಸುತ್ತಲೂ ಖಾದಿ ಸಂಸ್ಕೃತಿಯ ಸಮಗ್ರ ಚಕ್ರವೊಂದು ಸುತ್ತುತ್ತಲೇ ಇರುವುದು ಪೊಂದೂರು ಹೆಗ್ಗಳಿಕೆ.
 
ಸಣ್ಣ ಹಾಗೂ ಅತಿ ಸಣ್ಣ ರೈತರ ಪಾಲಿಗೆ ಪೊಂದೂರು ಹತ್ತಿ ಆದಾಯದ ಪ್ರಮುಖ ಮೂಲ. ಹೆಚ್ಚು ನೀರನ್ನೂ ರಸವಿಷಗಳನ್ನೂ ಬಯಸದ ಬೆಳೆ ಇದು. ‘ಯೂರಿಯಾ ಸುರಿದರೆ ಗಿಡದ ಬೆಳವಣಿಗೆಯೇನೋ ಚೆನ್ನಾಗಿರುತ್ತದೆ; ಆದರೆ ಕಾಯಿಗಳೇ ಬರುವುದಿಲ್ಲ’ ಎನ್ನುತ್ತಾರೆ ಅಲ್ಲಿಪುರಂ ಗ್ರಾಮದ ರೈತ ಪಿ. ಚಿನ್ನ.
 
ಮರದ ಸ್ವರೂಪದಲ್ಲಿ ಬೆಳೆಯುವ ಗಿಡ ಇದಾಗಿದ್ದು, ಜೂನ್ ತಿಂಗಳಲ್ಲಿ ಬೀಜ ನಾಟಿ ಮಾಡಿದರೆ ನವೆಂಬರ್ ಹೊತ್ತಿಗೆ ಕಾಯಿ ಶುರುವಾಗುತ್ತದೆ ಹಾಗೂ ಅದು ಮೇ ತಿಂಗಳವರೆಗೂ ಇಳುವರಿ ಕೊಡುತ್ತಲೇ ಇರುತ್ತದೆ. ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಇಳುವರಿ ಸಿಗುತ್ತಿದ್ದು, ದರ ಪ್ರತಿ ಕ್ವಿಂಟಲ್‌ಗೆ 20–25 ಸಾವಿರ ರೂಪಾಯಿ (ರಸವಿಷದಿಂದ ತೋಯ್ದ ಬಿ.ಟಿ ಹತ್ತಿ ದರ ಕ್ವಿಂಟಲ್‌ಗೆ ರೂ. 5,000).
 
ಹತ್ತಿಯನ್ನು ರೈತರು ಪೊಂದೂರಿನ ‘ಆಂಧ್ರ ಫೈನ್ ಖಾದಿ ಕಾರ್ಮಿಕಾಭಿವೃದ್ಧಿ ಸಂಘ’ಕ್ಕೆ (ಎಎಫ್‌ಕೆಕೆಎಸ್) ಮಾರಾಟ ಮಾಡುತ್ತಾರೆ. ಇಲ್ಲಿಂದ ಮಹಿಳೆಯರು ಪ್ರತಿ ಕಿಲೋಗೆ 250 ರೂಪಾಯಿ ದರದಲ್ಲಿ ಖರೀದಿಸಿ ಮನೆಗೆ ಒಯ್ಯುತ್ತಾರೆ. ಭದ್ರವಾಗಿ ಡಬ್ಬಿಯಲ್ಲಿರುವ ಈ ಹತ್ತಿಯಿಂದ ವರ್ಷವಿಡೀ ನೂಲು ತಯಾರಿಸಿ ಕೊಡುವ ಕೆಲಸ ಅವರದು.
* * * 
ಮಧ್ಯಾಹ್ನ ಊಟ ಮಾಡಿ ಮನೆಯ ಉಳಿದವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ಜಯಲಕ್ಷ್ಮೀ ಮಾತ್ರ ಚರಕದಲ್ಲಿ ನೂಲು ತೆಗೆಯುತ್ತಿದ್ದರು. 65ರ ವಯಸ್ಸಿನಲ್ಲೂ ದಿನಕ್ಕೆ ಆರೆಂಟು ತಾಸು ಚರಕದೊಂದಿಗೆ ಒಡನಾಡುವ ಅವರೊಡನೆ ಮಾತಿಗೆ ಕುಳಿತಾಗ, ಐದು ದಶಕಗಳಿಂದಲೂ ಪೊಂದೂರಿನಲ್ಲಿ ತಿರುಗುತ್ತಿರುವ ಚರಕ ಹಾಗೂ ದೇಸಿ ಹತ್ತಿ ಇತಿಹಾಸ ಆಸಕ್ತಿ ಮೂಡಿಸುವಂತಿತ್ತು.
 
ಜಯಲಕ್ಷ್ಮೀ ಅವರ ತಾಯಿ ಚರಕದಲ್ಲಿ ನೂಲು ನೇಯುತ್ತಿದ್ದರಂತೆ. ಅವರಿಂದಲೇ ತಾವು ಇದನ್ನು ಕಲಿತಿದ್ದಾಗಿ ಹೇಳಿಕೊಳ್ಳುತ್ತಾರೆ. ‘ನಮ್ಮ ತಾಯಿ ನೇಯುತ್ತಿದ್ದ ನೂಲನ್ನು ಬೇರೆ ಯಾರೋ ಖರೀದಿಸಿ ಒಯ್ಯುತ್ತಿದ್ದರು. ಆದರೆ ನಾನು ಖಾದಿ ಕೇಂದ್ರಕ್ಕೆ ಕೊಡುತ್ತಿದ್ದೇನೆ’ ಎನ್ನುತ್ತಾರೆ ಜಯಲಕ್ಷ್ಮೀ. ವರ್ಷಕ್ಕೆ ಒಂದು ಸಲ 20 ಕಿಲೋ ಹತ್ತಿಯನ್ನು ಖಾದಿ ಕೇಂದ್ರದಿಂದ ಕಿಲೋಗೆ 300 ರೂಪಾಯಿ ದರದಲ್ಲಿ ಖರೀದಿಸುವ ಅವರು, ಸಮಯ ಸಿಕ್ಕಾಗಲೆಲ್ಲ ನೂಲುತ್ತಾರೆ.
 
 
ಒಂದು ಕಿಲೋ ಹತ್ತಿಯಿಂದ ಸಾವಿರ ಮೀಟರ್ ಉದ್ದದ ಒಟ್ಟು 14 ರೀಲುಗಳು ತಯಾರಾಗುತ್ತವೆ. ಒಂದು ರೀಲಿಗೆ 80ರಿಂದ 100 ರೂಪಾಯಿ ಸಿಗುತ್ತದೆ. ‘ವರ್ಷವಿಡೀ ನಾವು ಕೆಲಸ ಮಾಡಿದರೆ ತಿಂಗಳಿಗೆ ಸರಾಸರಿ 2,500 ರೂಪಾಯಿ ಕೂಲಿ ಸಿಕ್ಕೀತಷ್ಟೇ’ ಎಂದು ಲೆಕ್ಕಾಚಾರ ಕೊಡುತ್ತಾರೆ ವೆಂಕಟಲಕ್ಷ್ಮಮ್ಮ.
 
ರಮಣಮ್ಮ ಅವರದು 25 ವರ್ಷಗಳಿಂದಲೂ ಚರಕದ ಜೊತೆ ಒಡನಾಟ. ಬೆಳಿಗ್ಗೆ ಮನೆಯ ಎಲ್ಲ ಕೆಲಸ ಮುಗಿಸಿ ಮೂರು ತಾಸು ಹಾಗೂ ಮಧ್ಯಾಹ್ನ ಊಟದ ಬಳಿಕ ಕೂತರೆ ಸಂಜೆಯವರೆಗೆ ಎರಡು ತಾಸು ನೂಲು ತೆಗೆಯುವುದನ್ನು ಅವರು ಯಾವತ್ತೂ ಬಿಟ್ಟಿಲ್ಲ. ಪತಿ ಜವಳಿ ಅಂಗಡಿಯಲ್ಲಿದ್ದರೆ, ರಮಣಮ್ಮ ಮನೆಯಲ್ಲಿದ್ದುಕೊಂಡೇ ಚಿಕ್ಕಪುಟ್ಟ ಖರ್ಚಿಗೆ ಹಣ ಸರಿದೂಗಿಸಿಕೊಳ್ಳುವುದು ನೂಲಿನಿಂದ.
 
ಚರಕ ತಿರುಗಿಸುತ್ತ ಮಾತಾಡುತ್ತಿದ್ದ ಅವರು ಪೊಂದೂರಿನ ಹತ್ತಿ, ಖಾದಿವೈಭವ ಹೇಳುತ್ತಲೇ ಹೋದರು. ನಡುವೆ ಮನೆಯೊಳಗೆ ಹೋಗಿ, ಗರಿಗರಿಯಾದ ಸೀರೆಯೊಂದನ್ನು ತಂದು ತೋರಿಸಿ – ‘ಇದು ಪೊಂದೂರು ಹತ್ತಿಯಿಂದ ಮಾಡಿದ್ದು. ನನ್ನ ಮದುವೆಯಾದಾಗ ತಾಯಿ ಇದನ್ನು ಕೊಟ್ಟಿದ್ದಳು’ ಎಂದಾಗ ನಂಬಲು ಆಗಲೇ ಇಲ್ಲ. ಹದಿನೆಂಟು ವರ್ಷಗಳಾದರೂ ಆ ಸೀರೆಯ ಹೊಳಪು ನೂಲಿನಷ್ಟೂ ಕಡಿಮೆಯಾಗಿರಲಿಲ್ಲ!
 
ಹತ್ತಿಯನ್ನು ನೂಲಿನ ಹಂತದವರೆಗೆ ಮಾಡುವ ಪ್ರಕ್ರಿಯೆ ಅಸಾಧಾರಣ ತಾಳ್ಮೆಯನ್ನೂ ಕೌಶಲವನ್ನೂ ಬಯಸುತ್ತದೆ. ಹತ್ತಿಯನ್ನು ಬೀಜದಿಂದ ಬೇರ್ಪಡಿಸಲು ಕಟ್ಟಿಗೆ ಹಲಗೆ ಬೇಕು. ಕಸಕಡ್ಡಿಯನ್ನು ತೆಗೆದು ಹೊಳಪು ಕೊಡಲು ಮೀನಿನ ದವಡೆ ಬೇಕು! ಬಳಿಕ ಅದನ್ನು ಹಂಜಿಯನ್ನಾಗಿ ಮಾಡಲು ಇನ್ನೊಂದು ಸಲಕರಣೆ; ಶುದ್ಧ ಹತ್ತಿಯನ್ನು ಹಿಡಿಯಲು ಬಾಳೆಹಾಳೆಯೇ ಸೈ! ಹತ್ತಿಯು ನೂಲು ಆಗಿ ಪರಿವರ್ತನೆಯಾಗಲು ಚರಕ ನೆರವು.
 
ವಿಶೇಷವೆಂದರೆ, ಇಲ್ಲಿ ಯಾವ ಪ್ಲಾಸ್ಟಿಕ್ ಅಥವಾ ಲೋಹದ ಸಾಧನ ಬಳಕೆಯಾಗುವುದೇ ಇಲ್ಲ! ‘ಎಂಟು ವರ್ಷಗಳ ಹಿಂದೆ ಅಲ್ಯೂಮಿನಿಯಂ ಉಪಕರಣಗಳು ಮಾರುಕಟ್ಟೆಗೆ ಬಂದವು. ಆದರೆ ಅದು ಯಾಕೋ ಸರಿ ಅನಿಸಲಿಲ್ಲ. ಮತ್ತೆ ಮೀನಿನ ದವಡೆ, ಕಟ್ಟಿಗೆ ಉಪಕರಣಕ್ಕೆ ಮೊರೆ ಹೋದೆವು’ ಎಂದು ನಗುತ್ತಾರೆ ಅಪ್ಪಮ್ಮ. ಬೇರೆ ತಳಿಗಳ ಹತ್ತಿಯನ್ನು ತಂದು ನೂಲು ಮಾಡಲು ಹಲವರು ಯತ್ನಿಸಿದರೂ, ಅದರಿಂದ ಗುಣಮಟ್ಟದ ನೂಲು ಬರಲಿಲ್ಲ. ಹೀಗಾಗಿ ಆ ತಳಿಗಳ ಹತ್ತಿ ಇಲ್ಲಿ ಕಾಣಿಸಿಕೊಂಡೇ ಇಲ್ಲ. ಈಗ ಪೊಂದೂರು ಹತ್ತಿಯದೇ ದರ್ಬಾರು!
 
ಅಸಲಿ ಖಾದಿ!
ಪೊಂದೂರು ಪಟ್ಟಣದಲ್ಲಿ 1949ರಲ್ಲಿ ನೇಕಾರರೇ ಸ್ಥಾಪಿಸಿದ ‘ಆಂಧ್ರ ಫೈನ್ ಖಾದಿ ಕಾರ್ಮಿಕಾಭಿವೃದ್ಧಿ ಸಂಘ’ವು ಈಗ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ದ ಅಡಿ ಕಾರ್ಯನಿರ್ವಹಿಸುತ್ತಿದೆ. ರೈತರು, ನೂಲುವವರು ಹಾಗೂ ನೇಕಾರರ ಜೊತೆ ಕೆಲಸ ಮಾಡುವ ಈ ಕೇಂದ್ರ, ವಾರ್ಷಿಕ ಮೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿದೆ. ಊರಿನಲ್ಲಿ ಸುಮಾರು ಇನ್ನೂರು ಮನೆಗಳಲ್ಲಿ ಚರಕ ತಿರುಗುತ್ತಿದ್ದರೆ, ಐವತ್ತು ನೇಕಾರರು ಬಟ್ಟೆ ನೇಯುತ್ತಾರೆ.
 
ಮಹಿಳೆಯರು ಮನೆಯಲ್ಲಿ ನೇಯ್ದ ನೂಲನ್ನು ಕೇಂದ್ರಕ್ಕೆ ತರುತ್ತಾರೆ. ಅಲ್ಲಿ ತೂಕದ ಆಧಾರದ ಮೇಲೆ ಅದರ ದರ ನಿಗದಿ ಮಾಡಲಾಗುತ್ತದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕೇಂದ್ರದಲ್ಲಿ ಜನಜಂಗುಳಿ. ಕಾಗದದಲ್ಲಿ ಸುತ್ತಿ ತಂದ ನೂಲನ್ನು ಹುಷಾರಾಗಿ ಬಿಡಿಸಿಕೊಟ್ಟರೆ, ಅಲ್ಲಿರುವ ಸಿಬ್ಬಂದಿ ಅದನ್ನು ಅಷ್ಟೇ ನಾಜೂಕಾಗಿ ತೂಕ ಮಾಡುತ್ತಾರೆ.
 
ಹತ್ತು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (ಆ ಪೈಕಿ ಹೆಚ್ಚು ನೇಕಾರರು, ನೂಲುವವರು ಇರುವುದು ಪೊಂದೂರಿನಲ್ಲೇ) ಕೇಂದ್ರವು 2 ಕೋಟಿ ರೂಪಾಯಿಗಳನ್ನು ರೈತರಿಂದ ಹತ್ತಿ ಖರೀದಿಗಾಗಿಯೇ ವೆಚ್ಚ ಮಾಡುತ್ತದೆ. ನೇಕಾರರು ನೇಯುವ ಬಟ್ಟೆಯು 75 ಹಾಗೂ 100 ಕೌಂಟ್ ಎಂಬೆರಡು ವಿಧಗಳಲ್ಲಿ ದೊರಕುತ್ತವೆ. 
 
ಈ ಬಟ್ಟೆಯಿಂದ ಅಂಗಿ ಸೇರಿದಂತೆ ಬೇರೆಲ್ಲ ಉಡುಪುಗಳನ್ನು ಹೊಲಿಸಿಕೊಳ್ಳಬಹುದು. ಉಳಿದಂತೆ ಇಲ್ಲಿಯೇ ಪಂಚೆ ಹಾಗೂ ಸೀರೆಗಳನ್ನೂ ನೇಯಲಾಗುತ್ತದೆ. ಇಲ್ಲಿ ತಯಾರಾದ ಬಟ್ಟೆಗೆ ಹೈದರಾಬಾದ್, ವಿಜಯವಾಡಾ, ವಿಶಾಖಪಟ್ಟಣ ಸೇರಿದಂತೆ ವಿವಿಧೆಡೆ ಭಾರೀ ಬೇಡಿಕೆಯಿದೆ.
 
 
‘ಬಟ್ಟೆ ಬೇಕೆಂದರೆ ಮುಂಗಡವಾಗಿಯೇ ಬುಕ್ ಮಾಡಬೇಕು. ಒಂದೂವರೆಯಿಂದ ಎರಡು ತಿಂಗಳ ಬಳಿಕವಷ್ಟೇ ಸಿಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ವ್ಯವಸ್ಥಾಪಕ ಅಪ್ಪಾರಾವ್. ಬೇಸಿಗೆಯಲ್ಲಿ ತಂಪು ಹಾಗೂ ಚಳಿಯಲ್ಲಿ ಶರೀರವನ್ನು ಬೆಚ್ಚಗೆ ಇಡುವುದು ಪುಂದೂರು ಬಟ್ಟೆ ವೈಶಿಷ್ಟ್ಯ. ಒಮ್ಮೆ ಧರಿಸಿದವರು ಮತ್ತೆ ಮತ್ತೆ ಇದನ್ನು ಇಷ್ಟಪಡುತ್ತಾರೆ. ದೊಡ್ಡ ದೊಡ್ಡ ಜಮೀನುದಾರರು ‘ಪೊಂದೂರು ಧೋತಿ’ ಧರಿಸುವುದೇ ತಮ್ಮ ಪ್ರತಿಷ್ಠೆ ತೋರಿಸಿಕೊಳ್ಳಲಿಕ್ಕಂತೆ!

ಮೇಲ್ನೋಟಕ್ಕೆ ಬಟ್ಟೆಯ ಬೆಲೆ ತೀರಾ ದುಬಾರಿ ಅನಿಸುತ್ತದೆ; ಆದರೆ ಇಲ್ಲಿ ಬಳಕೆಯಾಗುವ ಸಂಪನ್ಮೂಲ, ಮಾನವ ಶ್ರಮ, ಪರಿಸರಸ್ನೇಹಿ ವಿಧಾನವನ್ನು ಪರಿಗಣಿಸಿದರೆ ಅದು ಬೇರೆಯೇ ಲೆಕ್ಕಾಚಾರ ಕೊಟ್ಟೀತು! ಅಮೆರಿಕನ್ ಹತ್ತಿ ತಳಿಯನ್ನು ವಿದೇಶಿ ಕಂಪೆನಿಗಳ ಗೊಬ್ಬರ–ಕ್ರಿಮಿನಾಶಕ ಬಳಸಿ ಬೆಳೆದು, ಯಂತ್ರಗಳಲ್ಲಿ ಸಂಸ್ಕರಿಸಿ, ಬಟ್ಟೆ ತಯಾರಿಸಿ, ಕೃತಕ ಬಣ್ಣ ಹಾಕಿ ಖಾದಿ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗುತ್ತದೆ.
 
ಇದಕ್ಕೆ ಹೋಲಿಸಿದರೆ ಸಹಜ ವಿಧಾನದಲ್ಲಿ ರೂಪುಗೊಂಡ ಪೊಂದೂರು ಹತ್ತಿ ಬಟ್ಟೆಯೇ ಅಸಲಿ ಖಾದಿ! ಹಾಗೆಂದು ಪೊಂದೂರು ಖಾದಿ ಕೇಂದ್ರವು ಚರಕ ಸಂಸ್ಕೃತಿ ಉಳಿಸಲು ಗಂಭೀರ ಯತ್ನವನ್ನೇನೂ ನಡೆಸುತ್ತಿಲ್ಲ. ಅಧಿಕಾರಶಾಹಿಯ ಒಂದು ತುಣುಕು ಅಲ್ಲಿಯೂ ಕಾಣುತ್ತಿದೆ. ದೇಶದಲ್ಲಿ ಇನ್ನೂ ಉಳಿದುಕೊಂಡಿರುವ ಚರಕ–ನೂಲು–ಕೈಮಗ್ಗ ಸಂಸ್ಕೃತಿಯನ್ನು ಉತ್ತೇಜಿಸಿದರೆ ಅದು ಇನ್ನಷ್ಟು ನೂಲುವವರ, ನೇಕಾರರ ಬದುಕಿಗೆ ಬೆಳಕಾದೀತು.
 
ಆದರೆ ಪೊಂದೂರು ಹತ್ತಿಗೆ ಚೈತನ್ಯ ಹಾಗೂ ಕೈಮಗ್ಗಕ್ಕೆ ಮನ್ನಣೆ ಕೊಡುವ ಬದಲಿಗೆ, ಚಿತ್ರದುರ್ಗ ಮತ್ತು ಕೇರಳದಿಂದ ಬೇರೆ ಬೇರೆ ಹತ್ತಿ ತರಿಸಿಕೊಂಡು ಯಾಂತ್ರಿಕ ಮಗ್ಗಗಳ ಮೂಲಕ ಬಟ್ಟೆ ತಯಾರಿಸಿ ರವಾನಿಸುತ್ತದೆ.

ಪೊಂದೂರಿನಿಂದ 12 ಕಿ.ಮೀ ದೂರದಲ್ಲಿರುವ ನಿಮ್ಮಲವಾಲ್ಸ ಗ್ರಾಮದ ಮೂವತ್ತಕ್ಕೂ ಹೆಚ್ಚು ಮಹಿಳೆಯರು ವರ್ಷವಿಡೀ ನೂಲುವುದರ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಹಾಗೆಂದು ಇದನ್ನೇ ಮುಂದುವರಿಸಲು ಅವರು ಖಂಡಿತ ಒಪ್ಪುತ್ತಿಲ್ಲ.
 
‘ಮನೆಯ ಎಲ್ಲ ಕೆಲಸ ಮುಗಿಸಿದ ಮೇಲೆ ಅಥವಾ ಸಮಯ ಸಿಕ್ಕಾಗ ಚರಕದ ಮುಂದೆ ಕೂರುತ್ತೇವೆ. ಇದರಿಂದ ಸಿಗುವ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲ. ಏನೋ, ನಡೆಯುತ್ತ ಬಂದಿದೆ; ಹೀಗಾಗಿ ಮುಂದುವರಿಸಿದ್ದೇವೆ’ ಎನ್ನುತ್ತಾರೆ ಸುಶೀಲಾ. ‘ನರೇಗಾ ಯೋಜನೆಯ ಅಡಿ ಹಳ್ಳಿಯ ಪಕ್ಕದಲ್ಲೇ ನಡೆಯುತ್ತಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಸರ್ಕಾರ ನಿಗದಿ ಮಾಡಿರುವ ದಿನಗೂಲಿ ಇದಕ್ಕಿಂತಲೂ ಹೆಚ್ಚಿದೆ’ ಎಂಬ ಮಾತು ಅಲ್ಲಿಪುರಂ ಗ್ರಾಮದ ವೆಂಕಟಸಿಮ್ಮಮ್ಮ ಅವರದು.

ನೂಲು ತೆಗೆಯುವ ಯಾರೊಬ್ಬರೂ ತಮ್ಮ ಮಕ್ಕಳಿಗೆ ಈ ಕೆಲಸ ಮುಂದುವರಿಸಲು ಹೇಳುತ್ತಿಲ್ಲ. ‘ನಮ್ಮ ಕೈಯಲ್ಲಿ ಶಕ್ತಿ ಇರುವವರೆಗೆ ಮಾಡುತ್ತೇವೆ. ಮಕ್ಕಳು ಬೇರೆ ಕೆಲಸ ನೋಡಿಕೊಂಡು ಬದುಕಲಿ ಎಂಬುದು ಅವರ ಆಶಯ. ಪ್ರಸ್ತುತ, ಪೊಂದೂರಿನಲ್ಲಿ ಕಾಣುವ ನೇಯ್ಗೆ ಕೌಶಲ ಮುಂದಿನ ಪೀಳಿಗೆಗೆ ಸಾಗುವ ಸಾಧ್ಯತೆ ತೀರಾ ಕ್ಷೀಣವಾಗಿದೆ.
1955ರಲ್ಲಿ ವಿನೋಭಾ ಭಾವೆ ಶಂಕುಸ್ಥಾಪನೆ ಮಾಡಿರುವ ಖಾದಿ ಕೇಂದ್ರದ ಕಟ್ಟಡದಲ್ಲಿ ಆರು ದಶಕದಿಂದಲೂ ನಿಲ್ಲದಂತೆ ಚಟುವಟಿಕೆ ನಡೆಯುತ್ತಿವೆ.
 
ಖಾದಿ ವಸ್ತ್ರದ ಹಲವು ಹೆಗ್ಗಳಿಕೆಗಳನ್ನು ಕಾಪಿಟ್ಟುಕೊಂಡಿರುವ ಕೇಂದ್ರದ ದಾಖಲೆ ಕೊಠಡಿಯಲ್ಲಿ ಹಳೆಯ ನೂರಾರು ದಫ್ತರುಗಳು ದೂಳು ಹೊದ್ದು ಮಲಗಿದ್ದವು. ಒಂದೆರಡು ರೆಜಿಸ್ಟರುಗಳನ್ನು ತೆಗೆದು ನೋಡಿದಾಗ, 1956ರಲ್ಲಿ 60 ಪೈಸೆಗೆ ಎರಡು ಧೋತಿ ಖರೀದಿಸಿದ ವೆಂಕಟರಾಮಯ್ಯನವರ ವಿವರವೂ, 1966ರಲ್ಲಿ ಮೂರು ಗಜ ಬಟ್ಟೆಗೆ 1.25 ರೂಪಾಯಿ ಕೊಟ್ಟ ಮಾಹಿತಿಯೂ ಬೆಚ್ಚನೇ ಕುಳಿತಿತ್ತು.

ಅಲ್ಲಿಂದ ಹೊರಬಂದು ದಾಸ್ತಾನು ಕೊಠಡಿಗೆ ಹೋದಾಗ, ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ಧೋತಿ ಹಾಗೂ ಸೀರೆಗಳು ಕಣ್ಮನ ಸೆಳೆಯುವಂತಿದ್ದವು. ಜತೆಗಿದ್ದ ಲಖನೌದ ಸ್ನೇಹಿತ ಮಾನಸ್, ಮುಟ್ಟಿದರೆ ಬೆಣ್ಣೆಯಂತಿದ್ದ ಧೋತಿಯೊಂದನ್ನು ಖರೀದಿಸಲು ನಿರ್ಧರಿಸಿದ. ಅದಾಗಲೇ ಅಷ್ಟೂ ಬಟ್ಟೆಗಳು ಮುಂಗಡ ಬುಕಿಂಗ್ ಆಗಿದ್ದರೂ ನಮ್ಮ ಆಸೆ ಗಮನಿಸಿದ ಮ್ಯಾನೇಜರ್ – ಒಂದೇ ಒಂದು ಧೋತಿ ಕೊಡಲು ಮುಂದಾದರು.

‘ದರ ಎಷ್ಟು’ ಎಂಬ ಮಾನಸ್ ಪ್ರಶ್ನೆಗೆ, ‘15 ಸಾವಿರ ರೂಪಾಯಿ’ ಎಂಬ ಉತ್ತರ ಬಂತು. ಸೀರೆ ಖರೀದಿಸುವ ಆಸೆಯಿದ್ದವರು ಅದಕ್ಕೆ ಅಂಟಿಸಿದ್ದ ಟ್ಯಾಗ್ ನೋಡಿದೆವು. ‘ಬೆಲೆ 8 ಸಾವಿರ’ ಎಂದು ನಮೂದಿಸಲಾಗಿತ್ತು. ಧೋತಿ ಹಾಗೂ ಸೀರೆ ಸುಮ್ಮನೇ ತಮ್ಮ ಸ್ಥಾನಕ್ಕೆ ಹೋಗಿ ಕುಳಿತವು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT