ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದಣಬೆಯ ಚೆಲುವಿನ ಚಿತ್ತಾರ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಭಾವನೆಗಳ ಮೂಲ ಮನಸ್ಸಾದರೂ, ಮನಸ್ಸಿನಲ್ಲಿ ಅವು ಹೇಗೆ ಹುಟ್ಟುತ್ತವೆ ಎಂಬುದಂತೂ ನಿಗೂಢವೇ. ಜಗತ್ತಿನ ಸಾವಯವ ವಸ್ತುಗಳು ಈ ಗುಣವನ್ನು ಹೊತ್ತಿರುತ್ತವೆ. ನೋಡುವ ಕಣ್ಣಿನೊಂದಿಗೆ ಮನಸ್ಸಿನ ಕಣ್ಣೂ ತೆರೆದುಕೊಂಡುಬಿಟ್ಟರೆ ಭಾವಗಳ ಗುಬ್ಬಿಗಳು ರೆಪ್ಪೆ ಬಡಿಯುತ್ತವೆ, ರೆಕ್ಕೆ ಬಿಚ್ಚುತ್ತವೆ.
 
ಆಗ ಜೊತೆಯಲ್ಲಿ ಕ್ಯಾಮೆರಾ ಇದ್ದರೆ, ಅದರ ಕಣ್ಣಿಗೆ ಚಿತ್ರಕಾರತನ ಬಂದುಬಿಡುತ್ತದೆ. ಕ್ಷಣವೋ ನಿಮಿಷಗಳೋ ಚೆಲುವಿನ ಜೀವವುಳ್ಳವು ‘ಆಲ್ಬಂ’ ಆಗಿ ಉಳಿದುಬಿಡುತ್ತವೆ. ಇಲ್ಲಿನವು ಅನಿರೀಕ್ಷಿತ ಅದೃಷ್ಟದ ಚಿತ್ರಕಾವ್ಯ ರೂಪಕಗಳು.
 
ಊರಮುಂದಿನ (ಕೋಲಾರ ಜಿಲ್ಲೆಯ ಕಶೇಟ್ಟಿಪಲ್ಲಿ) ಅರಳಿಕಟ್ಟೆಯಲ್ಲಿ ತನ್ನನ್ನು ನೆಡುವುದರೊಂದಗೆ 1948ರಲ್ಲಿ ನಿರ್ಮಿಸಿದ ನಾಗರಕಲ್ಲು ಮಂಟಪಕ್ಕೆ ನೆರಳಾಗಿ, ವಿಧುರನಾದ ವೃಕ್ಷರಾಜನ ಕೊರಡು ಮುಂಡದಲ್ಲಿ ಅರಳಿದ ಅಣಬೆಗಳಿವು. ಇದನ್ನು ‘ವಿಧುರ’ ಅಂದುದೇಕೆಂದರೆ, ತನ್ನೊಡನೆ ಮದುವೆಯಾಗಿದ್ದ ಬೇವುರಾಣಿ ಐವತ್ತೆಂಟು ವರ್ಷಗಳ ಕಾಲ ಜೊತೆಯಾಗಿ ಬಾಳಿ, ಮಳೆಗಾಳಿಯೆಂಬುವ ವೈರಿ ದಾಳಿಗೆ ನೆಲಕುರುಳಿ ಹತಳಾದಳು.
 
ಅವಳ ಅಗಲಿಕೆಯಿಂದ ಒಂಟಿಯಾದ ಈ ವೃಕ್ಷರಾಜ ವೈರಾಗ್ಯ ತಳೆದು ನಿಂತ. ರಾಜ್ಯ(ಕಟ್ಟೆ) ಶಿಥಿಲಗೊಂಡಿತು. ಈ ಜೀವನ ಇನ್ನೆಷ್ಟು ದಿನ ಅಂದುಕೊಂಡನೇನೊ! ನಿಧಾನವಾಗಿ ಉಸಿರು ಕಡಿಮೆಮಾಡಿಕೊಳ್ಳುತ್ತ ಬಂದ. ರಸ ಬತ್ತಿದ ಕೈಕಾಲುಗಳೊಂದಿಗೆ ಶಾಪಪಡೆದ ಪುಣ್ಯಪುರುಷನಂತೆ ನಿಂತ. 
 
 
ಶಿಥಿಲ ಕಟ್ಟೆಯ ಮೇಲೆ ಊರಿನ ಮಕ್ಕಳು ಆಟವಾಡುತ್ತಿದ್ದರು. ಪಕ್ಕದಲ್ಲೇ ದನಕರುಗಳನ್ನು ಕಟ್ಟುತ್ತಿದ್ದರು. ಅವಕ್ಕೆ ಅಪಾಯವಾಗಬಾರದೆಂದು, ಒಣಗಿದ ಮರವಾದ್ದರಿಂದ ಕಡಿದರೆ ಕೇಡಾಗದೆಂದು, ಹಾಗೊಂದು ವೇಳೆ ಆಗುವುದಾದರೆ ತಪ್ಪಿಸಲು ಪೂಜೆ ಮಾಡಿ ಗರಗಸ ಹಿಡಿದರು. ಸುಮಾರು ಎಂಟು–ಹತ್ತು ಅಡಿಗಳ ಸುತ್ತಳತೆಯ ಕಾಂಡ.
 
ಮುಕ್ಕಾಲು ಪಾಲು ಹರಿಯುತ್ತಿದ್ದಂತೆ ರಣರಂಗದಲ್ಲಿ ವೈರಿಗಳ ಇರಿತ ಹೊಡೆತಗಳಿಂದ ಕುಸಿದು ಬಿದ್ದ ಮಹಾಕಾಯ ಚಕ್ರವರ್ತಿಯಂತೆ ಮುರಿದುರುಳಿತು. ಉರುಳಿದ ರಭಸಕ್ಕೆ ಒಣಗಿ ಬೆಂಡಾಗಿದ್ದ ಕೊಂಬೆಗಳು ಚೂರುಚೂರಾದವು. ಅವನ್ನು ಪಕ್ಕಕ್ಕೆ ಸಾಗಿಸಿದರಾದರೂ ಉಳಿಸಿದ್ದ ಸುಮಾರು ಆರು ಅಡಿಗಳ ಎತ್ತರದ ಬೊಡ್ಡೆಗೆ ಏಕೋ ಗರಗಸದವರು ಮತ್ತೆ ಗರಗಸ ಹಾಕಲಿಲ್ಲ. ಹಾಗಾಗಿ ಮಹಾವೃಕ್ಷದ ಗತ ಅಸ್ತಿತ್ವದ ಕುರುಹಾಗಿ ಅದು ಉಳಿದುಕೊಂಡಿತ್ತು. ನಿಧಾನ ಜೀರ್ಣವಾಗುತ್ತಿತ್ತು. 
 
ಅದು ದಿನವೂ ನನ್ನ ಮನಸ್ಸನ್ನು ಸೆಳೆಯುತ್ತಿತ್ತು. ಅದರ ಆಕಾರ, ನಿರ್ಜೀವವಾದರೂ ಉಳಿದುಕೊಂಡಿದ್ದ ಆಕರ್ಷಣೆ ಫೋಟೊ ತೆಗೆಯಲು ಪ್ರೇರೇಪಿಸಿತು. ಬೊಡ್ಡೆಯ ವಿಸ್ತಾರಕ್ಕಾಗಿ ಅದರ ಎತ್ತರಕ್ಕೆ ಕ್ಯಾಮೆರಾ ಎತ್ತಿ, ಕ್ಲಿಕ್ ಮಾಡಿ ನೋಡಿದಾಗ ಊಹಿಸಿರದ ಅಸ್ಪಷ್ಟ ಆಕಾರಗಳು ಮೂಡಿದ್ದವು. ಕುತೂಹಲ ಹುಟ್ಟಿತು.
 
ಕುರ್ಚಿ ಹಾಕಿ ಹತ್ತಿನಿಂತು ನೋಡಿದಾಗ ಅಣಬೆಗಳ ಸಾಮ್ರಾಜ್ಯ ಅಲ್ಲಿತ್ತು! ಬುಡದ ಇನ್ನೊಂದು ಬದಿಯಲ್ಲಿ ನೆಲದಡಿಯ ಬೇರುಗಳಿಂದ ಹುಟ್ಟಿಬಂದ ಅಣಬೆಗಳು ಆ ಸಾಮ್ರಾಜ್ಯದ ಕೋಟೆಗೋಡೆಯಿಂದ ಸಿಡಿದು ಬಿದ್ದ ಕಲ್ಲುಗಳಂತೆ ಕಂಡವು. ಕಣ್ಣ ನೋಟವನ್ನು ಅವುಗಳಿಂದ ಮೇಲೇರಿಸಿದಂತೆ ತಳ್ಳುಗಾಡಿಯ ಹೋಟೆಲಿನಾತ ತಟ್ಟೆಯಲ್ಲಿ ಇಡ್ಲಿಗಳನ್ನು ಒಂದರ ಮೇಲೊಂದು ಪೇರಿಸಿಟ್ಟಂತೆ ಅದೇ ಆಕಾರದ ಅಣಬೆಗಳು! ನನಗಾಗ ಆ ಅರಳಿಬೊಡ್ಡೆ ಹೀಗೊಂದು ರೂಪದಲ್ಲಿ ಜೀವಮೂರ್ತಿಯಾಗಿ ನಿಂತಿದೆ ಅನ್ನಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT