ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ ಸಾಲುಗಳ ನಡುವೆ ಪರದ ಪರಿಮಳದ ಬೆಳಕು

ಕಸುಗತೈಷ
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬಾಲಕೃಷ್ಣ ಹೊಸಂಗಡಿ
ಎತ್ತರದ ಪೀಠದಲ್ಲಿನ ಕಲ್ಲಿನ ಜಿಂಕೆಯೊಂದು ತನ್ನ ಬಾಯಲ್ಲಿ ಕಚ್ಚಿಕೊಂಡ ಬಿದಿರ ಕೊಳವೆಯಿಂದ ನೀರು ಹರಿಸುತ್ತಿದೆ. ಅದು ಮಿಸಾಕ ಪರ್ವತದ ಯಾವುದೋ ತೊರೆಯ ನೀರು. ಮೇಲಿಂದ ಧುಮ್ಮಿಕ್ಕುವ ನೀರನ್ನು ಬಿದಿರ ಸೌಟಿನಲ್ಲಿ ಹಿಡಿದು ಮೊದಲು ಎರಡೂ ಕೈಗಳನ್ನು ತೊಳೆದು, ಮುಖತೊಳೆದು, ಪಾದ ತೊಳೆದು, ನಂತರ ಸೌಟನ್ನೂ ತೊಳೆದು ಯಥಾಸ್ಥಾನದಲ್ಲಿರಿಸಬೇಕು ಎಂದು ಮಾರ್ಗದರ್ಶಕ ಕೆನ್ ಸೂಚಿಸಿದ. ಬಹಳಷ್ಟು ಮಂದಿ ಎಡಗೈ ಮೊದಲೋ ಬಲಗೈ ಮೊದಲೋ ಎಂದು ಗೊಂದಲಕ್ಕೆ ಬಿದ್ದು ಶುದ್ಧೀಕರಣಕ್ಕೆ ಇಳಿದಿದ್ದರು. ‘ಯೂ ಜಸ್ಟ್ ಕ್ಲೀನ್ ಯುವರ್ ಹ್ಯಾಂಡ್ಸ್’ ಎಂದು ಕೆನ್ ಜಿಂಕೆಗಳ ಗುಂಪಿನ ಕಡೆಗೆ ನಡೆದ.
 
‘ಕಸುಗತೈಷ’ ಎಂದರೆ ಮಹಾಆಲಯ ಎಂದೇ ಅರ್ಥವಂತೆ. ಶಿಂಟೋಧರ್ಮಕ್ಕೆ ಸೇರಿದ ಈ ಆಲಯದಲ್ಲಿ ಟೊರಿ ಗೇಟ್‌ಗಳು ಆಕರ್ಷಕವಾಗಿರುತ್ತವೆ. ಟೋರಿಗೇಟ್‌ಗಳೆಂದರೆ ಹಕ್ಕಿಗೂಡು ಎಂದು ಜಪಾನಿ ಅರ್ಥ: ಇವು ಬೃಹತ್ ಮಹಾದ್ವಾರಗಳಾಗಿರುತ್ತವೆ. ಭಾರತದ ತೋರಣ ದ್ವಾರಗಳಂತೆ ಎತ್ತರಕ್ಕಿರುವ ದ್ವಾರಗಳಾಗಿವೆ. ಶಿಂಟೋ ಧರ್ಮದ ಎಲ್ಲ ಆಲಯಗಳಲ್ಲೂ ಇಂತಹ ಟೋರಿಗೇಟ್‌ಗಳು ಕಾಣಿಸುತ್ತವೆ.
 
ಹಾಗೆ ನೋಡಿದರೆ ಶಿಂಟೋ ಒಂದು ಧರ್ಮ ಅಲ್ಲ. ಇಲ್ಲಿ ಧರ್ಮಪ್ರವಾದಿಯಾಗಲೀ, ಧರ್ಮಗ್ರಂಥವಾಗಲೀ, ಏಕಪ್ರಕಾರದ ಧರ್ಮನಿಯಮಗಳಾಗಲೀ ಇಲ್ಲ. ಇದೊಂದು ಜೀವನವಿಧಾನ ಅಷ್ಟೇ. ಪ್ರಕೃತಿ ಮತ್ತು ಪೂರ್ವಿಕರ ಆರಾಧನೆ ಇಲ್ಲಿ ಮುಖ್ಯವಾಗಿರುತ್ತವೆ. ಪೂರ್ವಿಕರ ಆತ್ಮಗಳನ್ನೇ ದೈವಿಕ ಎಂದು ಬಗೆಯುತ್ತಾರೆ. ಒಳಿತು–ಕೆಡುಕಿನ ಬಗೆಗೆ ವಿಶೇಷ ನಂಬಿಕೆಗಳಿಲ್ಲ. ಹಾಗಾಗಿ ಕಪ್ಪು–ಬಿಳುಪಿಗಿಂತಲೂ ಬೂದು ಬಣ್ಣದ ಕಡೆಗೆ ಶಿಂಟೋಧರ್ಮದ ಒಲವು ಹೆಚ್ಚಾಗಿರುವಂತೆ ಕಾಣಿಸುತ್ತದೆ.
 
ಕಸುಗತೈಷದ ಟೋರಿಗೇಟ್‌ಗಿಂತ ಮೊದಲು ಬಲಭಾಗದಲ್ಲಿ ಕುದುರೆ ಸಾರೋಟಿನ ಲಾಯವೊಂದು ಕಾಣಿಸುತ್ತದೆ. ಕೆನ್ ಹೇಳಿದ ಪ್ರಕಾರ ಕಸುಗತೈಷದ ಜಾತ್ರೆಗೆ ಸಾರೋಟಿನ ರಥವನ್ನು ಬಳಸುತ್ತಾರಂತೆ. ಕಸುಗತೈಷದ ಜಾತ್ರೆ ಎನ್ನುವುದು ಒಂದು ಬಗೆಯ ಬೆಳಕಿನ ಹಬ್ಬ.

ಹೇಳಿಕೇಳಿ ಸಾವಿರದ ಮುನ್ನೂರು ವರ್ಷಗಳ ಇತಿಹಾಸ ಇರುವ ಆಲಯ ಇದು. ದೇಶದ ಶಾಂತಿ ಮತ್ತು ಜನತೆಯ ಸಮೃದ್ಧಿಗಾಗಿ ಕ್ರಿ.ಶ. 768ರಲ್ಲಿ ನಿರ್ಮಿಸಿದ ಆಲಯ. ಕಸುಗತೈಷ ಫ್ಯುಜಿವಾರ ವಂಶದ ಪೂರ್ವಿಕರಾದ ನಾಲ್ಕು ದೇವತೆಗಳಿಗೆ ಸಮರ್ಪಣೆಗೊಂಡಿದೆ. ಬಳಿಕ ಮೂರು ದೇವತೆಗಳನ್ನು ಹೆಚ್ಚುವರಿಯಾಗಿ ತಂದು ಸೇರಿಸಿದ್ದಾರಂತೆ.
 
 
ಕಸುಗತೈಷ ಅನೇಕ ಆಲಯಗಳ ಬೃಹತ್ ಸಂಕೀರ್ಣ. ವಕಾಮಿಯ, ಇಚಿದೋಷ ಅಥವಾ ಮಿವಾ ಜಿಂಜ, ಹ್ಯೊಜು ಜಿಂಜ, ನಂಗು ಜಿಂಜ, ಹಿರೋಸೆ ಜಿಂಜ, ಕತ್ಸುರಗಿ ಜಿಂಜ, ಸಂಜುಹಸ್ಸೊ ಜಿಂಜ, ಸಾರಕೆ ಜಿಂಜ, ಮ್ಯೊಸ್ಯೊನಿನ್ ಜಿಂಜ, ಕಸುಗ ಮ್ಯೊಜಿನ್ ಯೊಹೈಜೂ, ಮುನಕತ ಜಿಂಜ, ಕೀ ಜಿಂಜ, ಇಸೆಜಿಂಗು ಯೋಹೈಜೋ, ಕಿನ್‌ರ್ಯೂ ಜಿಂಜ, ಮಿಯೋಟೋ ದೈ ರೊಕುಷಾ – ಮುಂತಾದ 61 ಸಣ್ಣಪುಟ್ಟ ಆಲಯಗಳು ಇಲ್ಲಿವೆ. ‘ಜಿಂಜ’ ಎಂದರೆ ಆಲಯ ಎಂದೇ ಅರ್ಥ.
 
ನರ ನಗರಕ್ಕೆ ಜಪಾನ್ ದೇಶದ ರಾಜಧಾನಿಯನ್ನು ಸ್ಥಳಾಂತರಿಸಿದ ನಂತರ, ಜಪಾನಿನ ಅತ್ಯಂತ ಪ್ರಬಲ ದೇವತೆ ಎನ್ನಿಸಿಕೊಂಡ ತಕೆಮಿಕಝುಚಿಯನ್ನು ಮಿಕಾಸ ಪರ್ವತಕ್ಕೆ ಆಹ್ವಾನಿಸಲಾಯಿತಂತೆ. ಇಲ್ಲಿನ ನಂಬಿಕೆಯ ಪ್ರಕಾರ ತಕೆಮಿಕಝುಚಿ ದೇವತೆ ಇಬಾರಕಿ ಎಂಬ ಪ್ರದೇಶದ ಕಶಿಮಾ ದೇವಾಲಯದಿಂದ ನರ ಪ್ರಾಂತ್ಯದ ಮಿಕಾಸ ಪರ್ವತಕ್ಕೆ ಬಂದು ನೆಲೆಸಿ ಜನರಿಗೆ ಆಶೀರ್ವದಿಸತೊಡಗಿದರಂತೆ. ಈಗ ಇರುವ ದೇವಾಲಯದ ಹಿಂಭಾಗಕ್ಕೆ ಮಿಕಾಸ ಪರ್ವತಶ್ರೇಣಿಗಳಿವೆ.
 
ತಕೆಮಿಕ ಜುಚು–ನೊ–ಮಿಕೊಟೊ, ಫುತ್ಸುನುಶಿ–ನೊ-ಮಿಕೊಟೊ, ಅಮೆನೊ ಕೊಯನೆ–ನೊ–ಮಿಕೊಟೊ ಮತ್ತು ಆ ದೇವತೆಯ ಮಡದಿ ಹಿಮೆಗಮಿ – ಹೀಗೆ ನಾಲ್ಕು ದೇವತೆಗಳ ಬಲಿಪೀಠಗಳು ಇಲ್ಲಿವೆ. ಹಿಮೆಗಮಿಯನ್ನು ಸೂರ್ಯದೇವತೆಯೆಂದೇ ಜನ ನಂಬುತ್ತಾರೆ. ಇಲ್ಲಿನ ಜನರಿಗೆ ಆಲಯದ ಬಗೆಗೆ ಇನ್ನಿಲ್ಲದ ಗೌರವ, ಭಯ–ಭಕ್ತಿ. ನರದಿಂದ ಕ್ಯೋಟೋಕ್ಕೆ ರಾಜಧಾನಿ ಬದಲಾದರೂ ಕಸುಗತೈಷದ ಮೇಲಿನ ಭಕ್ತಿ–ಆದರಗಳಿಗೆ ಚ್ಯುತಿ ಬಂದಿಲ್ಲ.
 
ಹೇಯನ್ ಕಾಲದಿಂದಲೂ ಜನ ಇಲ್ಲಿಗೆ ಗೂಡುದೀಪಗಳನ್ನು ದಾನ ನೀಡುತ್ತಲೇ ಬಂದಿದ್ದಾರೆ. ಈಗ ಇಂತಹ ಗೂಡುದೀಪಗಳ ಸಂಖ್ಯೆ ಮೂರು ಸಾವಿರ ದಾಟಿದೆ. ಇವುಗಳಲ್ಲಿ ಕಲ್ಲಿನ ದೀಪಗಳೂ, ಲೋಹದ ದೀಪಗಳೂ ಸೇರುತ್ತವೆ. ನೇತಾಡುವ ದೀಪಗಳೂ, ನೆಲದಲ್ಲೇ ನಿಂತು ಪೀಠಸ್ಥವಾಗಿರುವ ದೀಪಗಳೂ, ಕಲ್ಲಿನ ಮೇಲಿನ ದೀಪಗಳೂ ಇವೆ.
 
ಈವತ್ತಿಗೂ ಕಾಣಿಸುವ ಇಲ್ಲಿನ ನಾಲ್ಕು ಬಲಿಪೀಠಗಳ ನಿರ್ಮಾಣ ಆದದ್ದು 768ರಲ್ಲಿ. ಇದೇ ಹೊತ್ತಿಗೆ ದೇವಾಲಯಗಳ ಭಿತ್ತಿಗಳ ನಿರ್ಮಾಣ, ಜತೆಗೆ ಇನೊಕಿ ಸೈಪ್ರೆಸ್ ಮರದ ತೊಗಟೆಯಿಂದ ಮೇಲ್ಛಾವಣಿಗಳ ನಿರ್ಮಾಣ.
 
ಆಲಯ ಸ್ಥಾಪನೆಯ ಕಾಲದ ಸೌಂದರ್ಯ ಇಲ್ಲಿ ಚಿರಸ್ಥಾಯಿ: ಇದಕ್ಕೆ ಸಾಂಪ್ರದಾಯಿಕ ರೀತಿಯ ಪುನರ್‌ರಚನೆ ಮತ್ತು ಪುನರುತ್ಥಾನವೇ ಕಾರಣ. ಪ್ರತೀ 20 ವರ್ಷಗಳಿಗೊಮ್ಮೆ ನಡೆಯುವ ‘ಶಿಕಿನೆ ಝೊತೈ’ ಎಂಬ ಆಚರಣೆಯಲ್ಲಿ ಆಲಯದ ಕಟ್ಟಡಗಳ ರಿಪೇರಿ ನಡೆಯುತ್ತದೆ. ಇಲ್ಲಿನ ಪರಿಕರಗಳನ್ನೆಲ್ಲ ಸಾಂಪ್ರದಾಯಿಕವಾಗಿಯೇ ನವೀಕರಿಸಲಾಗುತ್ತದೆ. 
 
ನವೀಕರಣದ ಸಂದರ್ಭದಲ್ಲಿ ಮುಖ್ಯದೇವತೆಗಳನ್ನು ತೆಗೆದಿರಿಸುವ ‘ಉತ್ಸುಶಿದೊನೊ’ ಅಥವಾ ‘ನೈಶಿದೆನ್’ ಇಲ್ಲಿದೆ. ‘ತಚಿಕರೋ’ ಮತ್ತು ‘ಹಿರೈತೆನ್ ಜಿಂಜ’ ಇಲ್ಲಿದೆ. ಮಿಕಸಯಾಮ–ಉಕುಗೊಮೊನೊಮಿನೆ ಯೋಹೈಜೊ ಎಂಬ ಸ್ಥಳದಲ್ಲಿ ಮಿಕಾಸ ಪರ್ವತಕ್ಕೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ. 
 
ಉಶಿರೊದೊನೊ ಕಕುಶ – ಸಂಪೈಜೋದಲ್ಲಿ ದ್ವಾರ ಇದೆ. ಈ ದ್ವಾರವನ್ನು ಕಳೆದ 140 ವರ್ಷಗಳಲ್ಲೇ ಮೊತ್ತಮೊದಲ ಬಾರಿಗೆ ತೆರೆಯಲಾಗಿದೆ. ದೇವತೆಗಳ ಉಪಬಲಿಪೀಠಗಳನ್ನು ಇಲ್ಲಿ ಕಾಣುವುದು ಸಾಧ್ಯ. ಜನ ಪ್ರಾರ್ಥನೆ ನಡೆಸುವ ‘ಹೈಡೆನ್’ ಎಂಬ ಸಭಾಂಗಣ ಇಲ್ಲಿದೆ. ‘ನವೊರೈಡೆನ್’ ಎಂಬ ಸ್ಥಳವನ್ನು ಭೋಜನ ಮತ್ತು ಪೂಜಾಸೇವೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.
 
ಸ್ಥಳೀಯ ಜನರ ಪ್ರಕಾರ ಇಲ್ಲಿನ ಜಿಂಕೆಗಳು ಪರಮ ಪವಿತ್ರ. ಯಾಕೆಂದರೆ ತಕಮಿಕಝುಚಿ ದೇವತೆ ಬಿಳಿಯ ಜಿಂಕೆಯ ಬೆನ್ನೇರಿ ಬಂದರಂತೆ. ಹಾಗಾಗಿ ಜಿಂಕೆ ದೈವಿಕ ಮತ್ತು ಪವಿತ್ರ. ಇಲ್ಲೇ ಇರುವ ದೇಗುಲವೊಂದು ದೈಕೊಕು ದಂಪತಿಯ ಹೆಸರಿನಲ್ಲಿದೆ. ಇವರಿಬ್ಬರನ್ನೂ ವಾಣಿಜ್ಯ ಮತ್ತು ಸಂತುಷ್ಟ ಮದುವೆಯ ದೇವತೆಗಳೆಂದೇ ಜಪಾನಿನಲ್ಲಿ ಪರಿಗಣಿಸಲಾಗಿದೆ. ಜನ ಮರದ ತುಂಡಿನ ಮೇಲೆ ತಮ್ಮ ಅಭೀಷ್ಟಾರ್ಥಗಳನ್ನು ಬರೆದು ಈ ದೈವೀ ದಂಪತಿಗೆ ಸಮರ್ಪಿಸುವ ಕ್ರಮ ಇಂದಿಗೂ ಇದೆ.
 
‘ವಕಾಮಿಯ ಜಿಂಜ’ ಎಂಬ ಆಲಯ ವಕಾಮಿಯ ದೇವತೆ ಅಥವಾ ಅಮೆನೂಶಿಕುಮೊನೆ–ನೊ–ಮಿಕೊಟೊ ಹೆಸರಿಗೆ ಅರ್ಪಿತ. ಪ್ರತಿವರ್ಷ ಡಿಸೆಂಬರ್ 15ರಿಂದ 18ರವರೆಗೆ ಕಸುಗ–ವಕಾಮಿಯ–ಒನ್ಮತ್ಸುರಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ‘ಒನ್ಮತ್ಸುರಿ’ ಎನ್ನುವುದು ವಕಾಮಿಯ ದೇವಾಲಯದ ದೇವತೆಗೆ ಸಮರ್ಪಣೆಗೊಳ್ಳುವ ಅತಿದೊಡ್ಡ ಜಾತ್ರೆ. ಈ ದೇಗುಲ ಕಸುಗ ತೈಷೆಯ ಒಂದು ಉಪಮಂದಿರ ಅಷ್ಟೇ.

ಈ ಉತ್ಸವ 1136ರಿಂದ ನಿರಂತರವಾಗಿ ನಡೆಯುತ್ತಿದೆ. ‘ಫ್ಯುಜಿ ನಮಿ ನ ಯ’ ಎಂಬ ಸ್ಥಳದಲ್ಲಿ ಉಪ ವಾರ್ಷಿಕ ದೀಪೋತ್ಸವದ ವಾತಾವರಣ ಅನುಭವವೇದ್ಯ. ಫೆಬ್ರುವರಿ ಮತ್ತು ಆಗಸ್ಟ್ ತಿಂಗಳಲ್ಲಿ ಈ ಉತ್ಸವ ರಾತ್ರಿಯ ವೇಳೆ ಹಲವು ಬಾರಿ ನಡೆಯುತ್ತದೆ.
 
ರಿಂಗೊ–ನೊ–ನಿವ ಎಂಬ ಸ್ಥಳದಲ್ಲಿ ಸಾಂಪ್ರದಾಯಿಕ ನೃತ್ಯ–ಸಂಗೀತ ನಡೆಯುತ್ತದೆ. ಇಲ್ಲಿ ಜಪಾನಿನ ಸಾಂಪ್ರದಾಯಿಕ ಸೇಬಿನ ಮರ ಇದೆ. ಪಕ್ಕದಲ್ಲೇ ಕಸುಗ ದೇವಾಲಯಕ್ಕೆ ಸೇರಿದ ಸಸ್ಯೋದ್ಯಾನ ಇದೆ. ಇದನ್ನು ಮನ್ಯೋ, ಕ್ಯಾಮೆಲ್ಲ ಮತ್ತು ವಿಸ್ಟೋರಿಯಾ ಉದ್ಯಾನ ಎಂದು ವಿಂಗಡಿಸಲಾಗಿದೆ. 1933ರಿಂದಲೂ ಮನ್ಯೋ ಮರಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇಲ್ಲಿನ ಉದ್ಯಾನಗಳಲ್ಲಿ ಏಪ್ರಿಲ್ ಕೊನೆಗೆ ಹೂ ಅರಳತೊಡಗುತ್ತವೆ. ಮೇ ಮೊದಲ ವಾರ ಇಲ್ಲಿ ಪುಷ್ಪಸಂಭ್ರಮ. 20 ಬಗೆಯ 200ರಷ್ಟು ವಿಸ್ಟೋರಿಯಾ ಮರಗಳು ಇಲ್ಲಿ ಇವೆ. 
 
‘ಸುನಝುರಿ ನೊ–ಫ್ಯುಝಿ’ ಒಂದು ಸಾಂಕೇತಿಕ ವಿಸ್ಟೇರಿಯಾ ಮರ. ಇದು ಫ್ಯುಜಿವಾರ ವಂಶದ ಸಾಂಕೇತಿಕ ಮರ. ಇದೇ ವಂಶ ಮೊದಲ ಬಾರಿಗೆ ಈ ದೇವಾಲಯ ನಿರ್ಮಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ‘ಕಸುಗ ದೈಮ್ಯೊಜಿನ್’ ಎಂಬ ಬರಹ ಇರುವ ಮೂರು ಕಲ್ಲಿನ ಗೂಡುದೀಪಗಳನ್ನು ಪತ್ತೆ ಮಾಡಿದರೆ ಅದೃಷ್ಟ ಮತ್ತು ಭಾಗ್ಯ ಒಲಿಯುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. 
 
ಇದೆಲ್ಲ ನೋಡುತ್ತಿದ್ದಂತೆ ಝೆನ್ ಗುರುವೊಬ್ಬನ ಕತೆ ನೆನಪಾಗುತ್ತಿದೆ. 
ಶಿಷ್ಯ ಗುರುವಿನಲ್ಲಿ ಕೇಳುತ್ತಾನೆ: ‘ಗುರುಗಳೇ ಗುರುಗಳೇ ಈ ಬೆಳಕು ಬಂದದ್ದಾದರೂ ಎಲ್ಲಿಂದ?’
ಗುರು ತಕ್ಷಣ ದೀಪವನ್ನು ಊದಿ ಆರಿಸಿ ಹೇಳುತ್ತಾನೆ: ‘ಈಗ ಹೇಳು- ಈ ದೀಪದ ಬೆಳಕು ಹೋಯಿತಾದರೂ ಎಲ್ಲಿಗೆ?’
ಕಸುಗತೈಷದ ಕತ್ತಲೆಯ ಗೂಡುದೀಪದ ಸಾಲು ಸಾಲು. ಅದರ ಉರಿವ ಬೆಳಕು ಅಕ್ಕಪಕ್ಕದ ಬೃಹತ್ ಕನ್ನಡಿಗಳಲ್ಲಿ ಸಾವಿರವಾಗಿ, ಸಾವಿರ ಲಕ್ಷವಾಗಿ ಈ ನಿರಂತರ ಬಿಂಬ ಪ್ರತಿಬಿಂಬ ವಿನ್ಯಾಸ ಝೆನ್ ಕತೆಯಂತೆ ಅಸದೃಶ ಲೋಕವೊಂದನ್ನು ನಿರ್ಮಿಸಿಕೊಡುತ್ತದೆ. ಇದು ಇರುವ ಲೋಕಕ್ಕಿಂತ ಭಿನ್ನವಾದ, ನಿರಂತರ ಆಗುವ ಲೋಕ.
 
ಮುಖ್ಯದ್ವಾರದಿಂದ ಶುರುವಾಗುವ ಕಲ್ಲಿನ ಗೂಡುದೀಪ ಸಾಲು, ಪ್ರಾಂಗಣದಲ್ಲಿ ಕಾಣಿಸುವ ಲೋಹದ ಗೂಡುದೀಪ ಮೇಳ, ಒಳಗೊಂದು ಕತ್ತಲ ಕೋಣೆಯಲ್ಲಿ ಮಿನಮಿನ ಬೆಳಕುಚೆಲ್ಲುವ ಎಂದಿಗೂ ನಂದದ ಗೂಡುದೀಪಾವಳಿ. ನಮ್ಮ ಗೈಡ್ ಕೆನ್ ಬಹಳ ವೇಗವಾಗಿ ಓಡಾಡಿಕೊಂಡು ಕಮೆಂಟರಿ ನೀಡುತ್ತಿದ್ದ. ನಿರೂಪಣೆಗಿಂತ ಅವನ ನಡಿಗೆಯ ವೇಗವೇ ಹೆಚ್ಚು.
 
ಜಪಾನಿನ ಕೇಂದ್ರ ಸರಕಾರ ಇಲ್ಲಿನ ಸಾಂಪ್ರದಾಯಿಕ ಆಚರಣೆಗಳನ್ನು ಅತ್ಯಂತ ಮುಖ್ಯ ಜನಪದೀಯ ಸಾಂಸ್ಕೃತಿಕ ಸಂಪತ್ತು ಎಂದೇ ಪರಿಗಣಿಸಿ ಕಾಪಿಟ್ಟುಕೊಂಡು ಬರುತ್ತಿದೆ. ಇದರಲ್ಲಿ ಸಾಂಕ್ರಾಮಿಕ ರೋಗ, ಬರ ದೂರ ಮಾಡುವ ಪ್ರಾರ್ಥನೆಗಳು ಸೇರಿಕೊಂಡಿವೆ. ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿಕೊಂಡು ನಡೆಸುವ ಬೃಹತ್ ಮೆರವಣಿಗೆಗಳು ಇಲ್ಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT