ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದಕ್ಕ ನಿಂತುಕೊಳ್ರಿ...

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಮನೆ ಮಾಡಿರುವ ಜೆಡಿಎಸ್‌ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕ್ರಿಯಾಶೀಲರಾಗಿದ್ದರು. ಹಲವು ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡರು.

ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲ ಅವರಿಗೆ ಎದುರಾಗುವ ಪ್ರಶ್ನೆ, ‘ಯಾವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೀರಿ’ ಎಂಬುದು. ಈ ಬಾರಿಯೂ ಸುದ್ದಿಗಾರರು ಈ ಪ್ರಶ್ನೆಯನ್ನು ಅವರ ಮುಂದಿಟ್ಟರು.

‘ಜನರು ನಾನು ಈ ಭಾಗದಲ್ಲಿಯೇ ಚುನಾವಣೆಗೆ ನಿಲ್ಲಬೇಕು ಎಂದು ಬಯಸುತ್ತಿದ್ದಾರೆ. ಕಿತ್ತೂರು, ದೇವರ ಹಿಪ್ಪರಗಿಗೆ ಭೇಟಿ ನೀಡಿದಾಗ, ನಮ್ಮ ಊರಿನಿಂದಲೇ ಚುನಾವಣೆಗೆ ನಿಲ್ಲಿ, ನಾವೇ ಚಂದಾ ಎತ್ತಿ ಚುನಾವಣೆ ಖರ್ಚು ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ನಾನು ಮಾನಸಿಕವಾಗಿ ಸಿದ್ಧವಾಗಿದ್ದೇನೆ’ ಎಂದು ಕುಮಾರಸ್ವಾಮಿ ಉತ್ತರಿಸಿದರು.

ಅವರ ಎಡಭಾಗದಲ್ಲಿ ಕುಳಿತಿದ್ದ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ‘ಬ್ಯಾರೆ ಕ್ಷೇತ್ರ ಯಾಕ್‌ ಹುಡುಕ್ತೀರಿ? ನವಲಗುಂದದಾಗ ನಿಂತಬಿಡ್ರೀ’ ಎಂದರು. ಕುಮಾರಸ್ವಾಮಿ ಅವರ ಬಲಭಾಗದಲ್ಲಿ ಕುಳಿತಿದ್ದು, ಸದ್ಯ ನವಲಗುಂದ ಶಾಸಕರಾಗಿರುವ ಎನ್‌.ಎಚ್. ಕೋನರಡ್ಡಿ !

ಹೊರಟ್ಟಿ ಅವರ ಮಾತಿನಿಂದ, ಕೋನರಡ್ಡಿಯವರ ಗಂಟಿಲಿನ ಪಸೆ ಆರಿದಂತಾದರೂ, ಸಾವರಿಸಿಕೊಂಡ ಅವರು, ಒಮ್ಮೆ ದೇಶಾವರಿ ನಗೆ ಬೀರಿದರು. ನಂತರ, ‘ಮುಖ್ಯಮಂತ್ರಿ ಅಭ್ಯರ್ಥಿ ನಮ್ಮ ಕ್ಷೇತ್ರದಾಗ ನಿಲ್ತಾರ ಅಂದ್ರ ಅದಕ್ಕಿಂತ ದೊಡ್ಡದ ಏನೈತಿ.. ನಾ ಕ್ಷೇತ್ರ ಬಿಟ್ಟುಕೊಡಾಕ ರೆಡಿ ಅದೀನಿ’ ಅಂದ್ರು. ಆದರೆ, ಆ ಮಾತು ಅವರ ಮನದಾಳದಿಂದ ಬಂದಂತೆ ತೋರಲಿಲ್ಲ ! 
-ಗುರು ಪಿ.ಎಸ್

*
ದೇವರಿಂದ ಮಾತ್ರ ಸುಧಾರಣೆ ಸಾಧ್ಯ..!
ವಿಜಯಪುರ:
‘ವಿಜಯಪುರ ಜಿಲ್ಲೆಯಲ್ಲಿನ ಕರ್ನಾಟಕ ಗೃಹ ಮಂಡಳಿ ಕಚೇರಿಗಳ ಸುಧಾರಣೆ ನಮ್ಮಿಂದ ಸಾಧ್ಯವೇ ಇಲ್ಲ. ಅದು ಆ ಭಗವಂತನೊಬ್ಬನಿಗೆ ಮಾತ್ರ ಸಾಧ್ಯವಾದ ಕೆಲಸ..!’ ಇದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಯುವರಾಜ ಚೋಳಕೆ ಎಂಬುವವರು ಸಲ್ಲಿಸಿದ್ದ ದೂರಿನ ಅರ್ಜಿ ಪರಿಶೀಲಿಸುವ ವೇಳೆ ಎಂ.ಬಿ.ಪಾಟೀಲ, ‘ಈ ಸಂಬಂಧ ಹಲ ದೂರು ನನಗೆ ಬಂದವು. ಇವುಗಳ ಬೆನ್ನತ್ತಿ ಆಳಕ್ಕಿಳಿದಾಗ ಅಕ್ರಮಗಳ ಸರಣಿಯೇ ಗೋಚರಿಸಿತು. ಸುಧಾರಿಸಲು ಯತ್ನಿಸಿದರೆ ಸಾಧ್ಯವೇ ಆಗಲಿಲ್ಲ.

ಇದುವರೆಗೂ ನಾನು ನಕಲಿ ದಾಖಲೆ ಸೃಷ್ಟಿಸಿ ನಂತರ ವ್ಯವಹಾರ ನಡೆಸಿದ್ದನ್ನು ಗಮನಿಸಿರುವೆ. ಆದರೆ ಇಲ್ಲಿ ಮೊದಲು ಅಕ್ರಮ ವ್ಯವಹಾರ. ನಂತರ ಅದಕ್ಕೆ ಪೂರಕ ದಾಖಲೆ ಸೃಷ್ಟಿಸುವ ಕೆಲಸ ಕೆ.ಎಚ್‌.ಬಿ ಅಧಿಕಾರಿಗಳಿಗೆ ಸಿದ್ದಿಸಿದೆ. ಇದನ್ನು ಕೇಳಿ ಆಶ್ವರ್ಯಚಕಿತನಾಗಿರುವೆ’ ಎಂದು ಪರಮಾಶ್ಚರ್ಯ ವ್ಯಕ್ತಪಡಿಸಿದರು.

‘ಗೃಹ ಮಂಡಳಿ ಅಧಿಕಾರಿಗಳು ಯಾವ ಗ್ರಹದಲ್ಲಿದ್ದಾರೇ..? ಎಂಬುದೇ ಗೊತ್ತಿಲ್ಲ, ಈ ಸಂಬಂಧ ನನ್ನದು ಒಂದು ದೂರು ದಾಖಲಿಸಿಕೊಳ್ಳಿ’ ಎಂದು ಎಡಿಸಿಗೆ ಸೂಚನೆ ನೀಡುತ್ತಿದ್ದಂತೆ ದೂರುದಾರ ಕಕ್ಕಾಬಿಕ್ಕಿಯಾದ. ಮುಂದಿನ ಅರ್ಜಿ ಪರಿಶೀಲನೆಗೆ ಸಚಿವರು ಅಣಿಯಾಗುತ್ತಿದ್ದಂತೆ ಆ ದೂರು ಚೋಳಕೆ ನೀಡಿದ್ದಾಗಿತ್ತು.

ಇದರಿಂದ ಅಸಮಾಧಾನಿತರಾದ ಎಂ.ಬಿ.ಪಾಟೀಲ ‘ಎಲ್ಲರಿಗೂ ಅವಕಾಶ ಸಿಗಲಿ. ಒಬ್ಬ ವ್ಯಕ್ತಿ, ಒಂದೇ ಅರ್ಜಿ, ಒಂದೇ ದೂರು... ಇದನ್ನು ಕಡ್ಡಾಯಗೊಳಿಸಿ. ಪ್ರೊಫೆಷನಲಿಸ್ಟ್‌ಗಳಿಗೆ ಗುತ್ತಿಗೆ ನೀಡಬೇಡಿ’ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡುತ್ತಿದ್ದಂತೆ ಗಂಭೀರವಾಗಿದ್ದ ಸಭಾಂಗಣದಲ್ಲಿ ನಗೆಯ ಬುಗ್ಗೆ ಚಿಮ್ಮಿತು. 
-ಡಿ.ಬಿ.ನಾಗರಾಜ

*
ಕುಡಿತ ಆನಂದಿಸುವೆ: ನ್ಯಾಯಮೂರ್ತಿ
ಬೆಂಗಳೂರು:
‘ನಾನು 2005ಕ್ಕಿಂತಲೂ ಮೊದಲೇ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಬೇಕಿತ್ತು. ಆದರೆ, ಯಾರೋ ಕೆಲವರು, ನಾನು ಕುಡುಕ ಎಂದು ಆಯ್ಕೆ ಸಮಿತಿಗೆ ಕಿವಿಯೂದಿ ತಲೆ ಕೆಡಿಸಿದ್ದರು. ಹೀಗಾಗಿಯೇ ನನ್ನ ನೇಮಕಾತಿ ಒಂದು ವರ್ಷ ತಡ ಆಯಿತು. ಅಷ್ಟಕ್ಕೂ ನಾನು ನನ್ನ ಕುಡಿತವನ್ನು ಆನಂದಿಸುತ್ತೇನೆ...’

ಹೀಗೆಂದು ಲಘು ಧಾಟಿಯಲ್ಲಿ ಹೇಳಿದವರು, ಶುಕ್ರವಾರವಷ್ಟೇ (ಏ.28) ನಿವೃತ್ತಿ ಹೊಂದಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ. ಕೋರ್ಟ್‌ ಹಾಲ್‌ ಸಂಖ್ಯೆ 1ರಲ್ಲಿ ವಕೀಲರ ಪರಿಷತ್‌ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಈ ರೀತಿ ಹೇಳುತ್ತಿದ್ದಂತೆಯೇ ನೆರೆದಿದ್ದ ಕೆಲ ವಕೀಲರು, ‘ಕೊನೆ ದಿನವೂ ಅವರು ನಿರ್ಭೀತಿಯ ಸ್ವಭಾವವನ್ನು ಪ್ರದರ್ಶಿಸಿದರು ನೋಡಿ’ ಎನ್ನುತ್ತಿದ್ದರು.
-ಬಿ.ಎಸ್.ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT