ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಫಲಾಪೇಕ್ಷೆಯಿಲ್ಲದ ಸಮಾಜ ಸೇವಕ

Last Updated 29 ಏಪ್ರಿಲ್ 2017, 20:18 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಭಾಗ ತಾಲ್ಲೂಕಿನ ಕಡಲ ಕಿನಾರೆಯಲ್ಲಿನ ರೇವದಂಡ ಎಂಬ ಕುಗ್ರಾಮವು ದೇಶ–ವಿದೇಶಗಳಲ್ಲಿ ಖ್ಯಾತಿ ಪಡೆದಿರುವುದಕ್ಕೆ ಕಾರಣ, ಇಲ್ಲಿ ಮೂರ್ನಾಲ್ಕು ಶತಮಾನಗಳಿಂದ ವಾಸಿಸುತ್ತಿರುವ ‘ಧರ್ಮಾಧಿಕಾರಿ’ ಕುಟುಂಬ.

ಈ ಕುಟುಂಬದ ಕೊಂಡಿ ಅಪ್ಪಾಸಾಹೇಬ್‌ ಧರ್ಮಾಧಿಕಾರಿ. ‘ದಾಸ ಬೋಧನೆ’ ಮೂಲಕ ನೊಂದ ಜೀವಗಳಿಗೆ ಭರವಸೆಯ ಹೊಂಬೆಳಕು ತೋರುತ್ತಿದ್ದಾರೆ ಇವರು. ‘ದಾಸ ಪಡೆ’ಯನ್ನು ಹುಟ್ಟುಹಾಕಿ ಈ ಮೂಲಕ ಮನೆಮನೆಗಳಲ್ಲಿ ಮಾತಾಗಿರುವ ಡಾ.ನಾನಾಸಾಹೇಬ್‌ ಧರ್ಮಾಧಿಕಾರಿ ಅವರ ಮಗನಾಗಿರುವ ಅಪ್ಪಾಸಾಹೇಬ್‌ ತಮ್ಮ ತಂದೆ ತೋರಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ.

1922ರ ಮಾರ್ಚ್‌ 1ರಂದು ಹುಟ್ಟಿದ ನಾರಾಯಣ ವಿಷ್ಣು ಧರ್ಮಾಧಿಕಾರಿ ಅಲಿಯಾಸ್‌ ನಾನಾ ಸಾಹೇಬ್‌ ಧರ್ಮಾಧಿಕಾರಿ, ಸದ್ಗುರು ಸಮರ್ಥ ರಾಮದಾಸರಿಂದ ಪ್ರಭಾವಿತಗೊಂಡವರು. ಆಗಿನ ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪಿಡುಗುಗಳಿಗೆ ಇತಿಶ್ರೀ ಹಾಕಲು ಚಿಕ್ಕ ವಯಸ್ಸಿನಲ್ಲಿಯೇ ಪಣ ತೊಟ್ಟವರು ಇವರು. ತಮ್ಮ ಆಶಯ ಈಡೇರಿಕೆಗಾಗಿ ಸತ್ಸಂಗ ಆರಂಭಿಸಿದರು.

ಆಚಾರವಂತರು, ಸಂಪ್ರದಾಯಸ್ಥರು, ಆಸ್ತಿಕರಿಂದ ಎದುರಾದ ತೀವ್ರ ವಿರೋಧವನ್ನು ಲೆಕ್ಕಿಸದೆ, ಪ್ರವಾಹದ ವಿರುದ್ಧ ಈಜಿದಂತೆ ಛಲದಿಂದ ‘ದಾಸ ಬೋಧೆ’ ನಡೆಸಿದರು. ಎಲ್ಲೆಡೆ ಸುತ್ತಾಡಿ ‘ಸಂತ ಸಾರದ ಪ್ರಸರಣ’ದ ಮೂಲಕ ಅನುಯಾಯಿ ಪಡೆ ಸಂಪಾದಿಸಿದರು.

1943ರಿಂದ 2008ರವರೆಗೆ ಈ ಆರೂವರೆ ದಶಕ ಅಂಧಶ್ರದ್ಧೆ, ಅಜ್ಞಾನಮುಕ್ತ ಸಮಾಜ ನಿರ್ಮಾಣ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದ ನಾನಾ ಸಾಹೇಬ ಅವರಿಗೆ ಮಹಾರಾಷ್ಟ್ರ ಸರ್ಕಾರ ಅತ್ಯುನ್ನತ ಪ್ರಶಸ್ತಿ ‘ಮಹಾರಾಷ್ಟ್ರ ಭೂಷಣ’ ಘೋಷಿಸಿತು.

2008ರ ಜುಲೈ 8ರಲ್ಲಿ ಅವರು ಕಾಲವಾದ ಹಿನ್ನೆಲೆಯಲ್ಲಿ ಮುಂಬಯಿಯ ಖಾರಘರನಲ್ಲಿ ನಡೆದ ಸಮಾರಂಭದಲ್ಲಿ ಅವರ ಪರವಾಗಿ ಅಪ್ಪಾಸಾಹೇಬ್‌ ಅವರು 40 ಲಕ್ಷ ಸಂಖ್ಯೆಯಷ್ಟಿದ್ದ ‘ದಾಸ ಪಡೆ’ ಸಮ್ಮುಖ ಪ್ರಶಸ್ತಿ ಸ್ವೀಕರಿಸಿದರು. ಈ ಸಮಾರಂಭ 2010ರಲ್ಲಿಯ ಲಿಮ್ಕಾ ಬುಕ್‌ ಆಫ್‌ ರಿಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಸೇವೆಗಾಗಿ ಪ್ರತಿಷ್ಠಾನ: ತಂದೆಯ ಕಾಲಘಟ್ಟದಲ್ಲೇ ಅಧ್ಯಾತ್ಮದ ಜತೆ ಜತೆಯಲ್ಲೇ ನಿಸ್ವಾರ್ಥ ಸಮಾಜ ಸೇವೆಯನ್ನು ನಡೆಸಲು ‘ಡಾ.ನಾನಾಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನ’ ಆರಂಭಿಸಿದವರು ಅಪ್ಪಾಸಾಹೇಬ್. ಅನುಯಾಯಿಗಳಿಂದ ‘ಸದ್ಗುರು’ ಎಂದೇ ಕರೆಸಿಕೊಳ್ಳುತ್ತಿರುವ ಅಪ್ಪಾಸಾಹೇಬ್‌ ಅವರು ಸಮಾಜ ಪರಿವರ್ತನಾ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ದೂರ ದೂರುಗಳಿಂದ ಸಂಕಷ್ಟ ಹೊತ್ತು ಬರುವವರ ಪಾಲಿನ ಆಶಾಕಿರಣ.

ದಶಕದಿಂದಲೂ ಪ್ರತಿಷ್ಠಾನದ ವತಿಯಿಂದ ಹಲವು ಸಾಮಾಜಿಕ ಚಟುವಟಿಕೆ ನಡೆಸಿದ್ದಾರೆ. ಈ ಕಾರ್ಯಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಸ್ವೀಕರಿಸಿಲ್ಲ. ಪ್ರತಿಷ್ಠಾನದಿಂದಲೂ ವೆಚ್ಚ ಮಾಡಿಲ್ಲ ಎನ್ನುವುದೇ ಇವರ ವೈಶಿಷ್ಟ್ಯ.

ಅಪ್ಪಾಸಾಹೇಬ್‌ ಇವರು, ಎಷ್ಟೇ ದೂರದ ಪಯಣವಿರಲಿ, ಸ್ವಂತ ಖರ್ಚಿನಲ್ಲೇ ತೆರಳುತ್ತಾರೆ. ಅಗತ್ಯ ಪರಿಕರಗಳನ್ನು ತಾವೇ ಕೊಂಡೊಯ್ಯುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ಒಂದು ಲೋಟ ಕುಡಿಯುವ ನೀರನ್ನೂ ಅಪೇಕ್ಷಿಸುವುದಿಲ್ಲ. ಎಲ್ಲವನ್ನೂ ತಾವೇ ಹೊಂದಿಸಿಕೊಳ್ಳುವುದು ಇವರ ಸಮಾಜ ಸೇವೆಯ ಪದ್ಧತಿ.

‘ಎಲ್ಲಿಯೇ ಸಮಾಜಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ. ಸ್ಥಳೀಯರಿಂದ ಒಂದು ಲೋಟ ನೀರನ್ನೂ ಪಡೆಯಬೇಡಿ. ಆಗ ಮಾತ್ರ ನೀವು ಸಲ್ಲಿಸಿದ ಸೇವೆ ನಿಸ್ವಾರ್ಥದ್ದಾಗಿರುತ್ತದೆ. ಮನಸ್ಸಿಗೆ ತೃಪ್ತಿ ನೀಡುತ್ತದೆ’ ಎಂಬ ಸದ್ಗುರುವಿನ ವಾಣಿಯನ್ನು ದಾಸ ಪಡೆ ಅಕ್ಷರಶಃ ಪಾಲಿಸುತ್ತದೆ.

ಪ್ರತಿಷ್ಠಾನದಿಂದ ಮಹಾರಾಷ್ಟ್ರ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸಾಮಾಜಿಕ ಚಟುವಟಿಕೆ ನಡೆಸಲಾಗಿದೆ. ಮಳೆ ನೀರು ಸಂಗ್ರಹ ಪದ್ಧತಿಯನ್ನು 3,600ಕ್ಕಿಂತಲೂ ಹೆಚ್ಚಿನ ಕಡೆ ನಡೆಸಲಾಗಿದೆ. ರಾಯಘಡ ಜಿಲ್ಲೆಯಲ್ಲೇ 500ಕ್ಕೂ ಹೆಚ್ಚು ತೆರೆದ ಬಾವಿಗಳ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ವಿನಂತಿ ಮೇರೆಗೆ ಎರಡು ತಾಸಿನಲ್ಲಿ ಐದು ಲಕ್ಷ ದಾಸರ ಪಡೆ ಎರಡು ಕೋಟಿ ಗಿಡ ನೆಟ್ಟ ದಾಖಲೆ ಪ್ರತಿಷ್ಠಾನದ್ದು. ಇದರ ಜತೆಗೆ ನಿರ್ವಹಣೆಯ ಹೊಣೆ ದಾಸರದ್ದೇ. ಆಗಾಗ್ಗೆ ಸದ್ಗುರು ಆಶಯದಂತೆ ದಾಸರು ಗಿಡಗಳನ್ನು ನೆಟ್ಟು–ಪೋಷಿಸುವ ಹೊಣೆಯನ್ನು ವ್ಯವಸ್ಥಿತವಾಗಿ ನಡೆಸಿದ್ದಾರೆ.

ಮುಂಬಯಿಯಲ್ಲಿ 2016ರಲ್ಲಿ 1.22 ಲಕ್ಷ ದಾಸರಿಂದ ಎರಡು ಗಂಟೆಯಲ್ಲಿ 14 ಪ್ರದೇಶಗಳಲ್ಲಿ 23,35,738 ಸಸಿ ನೆಟ್ಟಿದ್ದು, ಇದರ ಪೋಷಣೆ ಇಂದಿಗೂ ಮುಂದುವರೆದಿದೆ. ಬಡ ವಿದ್ಯಾರ್ಥಿಗಳಿಗೆ ದಾಸರ ಸ್ವಪ್ರೇರಣೆಯಿಂದ ಶೈಕ್ಷಣಿಕ ಸಹಾಯ ಕೊಡಿಸಲಾಗುತ್ತಿದೆ.

ರಕ್ತದಾನ ಶಿಬಿರ ನಡೆದಿವೆ. ಆರೋಗ್ಯ ತಪಾಸಣಾ ಉಚಿತ ಶಿಬಿರದ ಮೂಲಕ ಮೂರು ಲಕ್ಷಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕಿವಿ ಕೇಳದವರಿಗೆ ಶ್ರವಣ ಯಂತ್ರ ವಿತರಿಸಲಾಗಿದೆ.

1,500ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಕಾಲುವೆ–ಕೆರೆ, ಸರೋವರಗಳ ಸ್ವಚ್ಛತೆ ನಡೆದಿದೆ. ಸ್ವಚ್ಛತಾ ಅಭಿಯಾನಕ್ಕೆ ಈಚೆಗಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪ್ರತಿ ಶನಿವಾರ ರೇವದಂಡ ಗ್ರಾಮದಲ್ಲಿ ಸತ್ಸಂಗ ನಡೆಯುತ್ತದೆ. ಎಲ್ಲ ಭಾಗದ ಸತ್ಸಂಗ ಕೇಂದ್ರಗಳ ಪ್ರವಚನಕಾರರು, ದಾಸ ಪ್ರಮುಖರು ಹಾಜರಾಗುತ್ತಾರೆ. ಈ ಸಂದರ್ಭದಲ್ಲಿ ಧರ್ಮಾಧಿಕಾರಿ, ಪ್ರತಿಷ್ಠಾನದ ವತಿಯಿಂದ ಮುಂದೆ ನಡೆಯುವ ಕಾರ್ಯ ಚಟುವಟಿಕೆಯನ್ನು ವಿವರಿಸುತ್ತಾರೆ. ಇದನ್ನು ಆಲಿಸುವ ಜನರು ಆ ಚಟುವಟಿಕೆಗಳಲ್ಲಿ ಭಾಗವಹಿಸಲು  ಸ್ವಂತ ವೆಚ್ಚದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಾರೆ.

ಈ ರೀತಿಯಾಗಿ ವಿವಿಧ ಸಮಾಜ ಸೇವೆಗಳು ಎಲ್ಲೆಡೆ ನಡೆಯುತ್ತಿವೆ. 2014ರಲ್ಲಿ ಮಹಾರಾಷ್ಟ್ರದ 53 ನಗರಗಳಲ್ಲಿ 1.35 ಲಕ್ಷ ದಾಸರಿಂದ 32 ಸಾವಿರ ಟನ್‌ ಕಸ, 2015ರಲ್ಲಿ  21.86 ಕಿ.ಮೀ. ಚದರಡಿ ಪ್ರದೇಶದಲ್ಲಿ 1974 ಟನ್‌ ಒಣ ಕಸ ಹಾಗೂ 1542 ಟನ್‌ ಹಸಿ ಕಸ ಸಂಗ್ರಹಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ ದಾಖಲೆ ಪ್ರತಿಷ್ಠಾನದ್ದು. ಇದೇ ವರ್ಷ, 77,932 ಸ್ವಯಂ ಸೇವಕರಿಂದ 4,378 ಕಿ.ಮೀ ರಸ್ತೆ ಶುಚಿ ಕಾರ್ಯವೂ ನಡೆದಿದೆ.

ರಾಜ್ಯದ ಹುಬ್ಬಳ್ಳಿ, ಗದಗ, ಗಾಣಗಾಪುರ, ವಿಜಯಪುರ ನಗರಗಳಲ್ಲಿ ಅಭಿಯಾನ ನಡೆದಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 30ಸಾವಿರ ಕಾರ್ಯಕರ್ತರು ಇದೇ 26ರಂದು ಸ್ವಯಂ ಪ್ರೇರಿತರಾಗಿ ಬಂದು ವಿಜಯಪುರವನ್ನು ಸ್ವಚ್ಛಗೊಳಿಸಿಹೋದುದು ಕೂಡ ಇಲ್ಲಿ ಉಲ್ಲೇಖಾರ್ಹ. ಅಪ್ಪಾಸಾಹೇಬ್‌ ಅವರ ಸಮಾಜ ಸೇವೆಗೆ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT