ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಡಿದಿದ್ದು ಅಡ್ಡ ಹಾದಿ, ಆಗಿದ್ದು ಅಡ್ಡಾದಿಡ್ಡಿ!

Last Updated 29 ಏಪ್ರಿಲ್ 2017, 20:19 IST
ಅಕ್ಷರ ಗಾತ್ರ

‘ಉದ್ವೇಗದಿಂದ ಹುಟ್ಟುವ ಅಪರಾಧಗಳೂ ಇವೆ, ತಾರ್ಕಿಕ ಅಪರಾಧಗಳೂ ಇವೆ. ಆದರೆ ಇವೆರಡರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸಲಾಗದು’ ಎಂದಿದ್ದಾರೆ ಪ್ರಖ್ಯಾತ ಕಾದಂಬರಿಕಾರ ಆಲ್ಬರ್ಟ್ ಕಾಮು.

ಕೆಲವೊಮ್ಮೆ ಅಪರಾಧಗಳು ಬಡತನ ಅಥವಾ ಒತ್ತಡಗಳಿಂದ ಹುಟ್ಟುತ್ತವೆ ನಿಜ. ಆದರೆ ಅದೇ ಅಪರಾಧ ಇನ್ನೊಂದು ಅಪರಾಧವನ್ನು ಮಾಡಿಸಿಬಿಡುತ್ತದೆ. ಹೀಗೆ ಅಪರಾಧಗಳ ಸರಮಾಲೆಯಲ್ಲಿ ತೊಡಗಿಸಿಕೊಂಡವನು ತಾರ್ಕಿಕವಾಗಿಯೇ ಅಪರಾಧಗಳ ವ್ಯೂಹವನ್ನು ಹೆಣೆಯುತ್ತಾನೆ. ಇದಕ್ಕೊಂದು ಉದಾಹರಣೆ ಈ ಪ್ರಕರಣ.

***
ದಾಸೋಹಮೂರ್ತಿ ವಾಸವಿದ್ದುದು ಬೆಂಗಳೂರಿನ ಮುನಿರೆಡ್ಡಿಪಾಳ್ಯದಲ್ಲಿ. ‘ಪ್ರಭುಪಾದ ಭೋಜನಾಲಯ’ ಎಂಬ ಹೆಸರಿನಲ್ಲಿ  ಹಲವು ಹೋಟೆಲ್‌ ಶಾಖೆಗಳನ್ನು ಹೊಂದಿದ್ದ ಶ್ರೀಮಂತ ಇವರು.  ಜಾಲಹಳ್ಳಿಯ ಗಂಗಮ್ಮಗುಡಿ ಪ್ರದೇಶದಲ್ಲಿದ್ದ ಇವರ ಹೋಟೆಲ್‌ನಲ್ಲಿ ಸುಮಾರು 20 ಹುಡುಗರು ಕೆಲಸ ಮಾಡುತ್ತಿದ್ದರು.

ತೀರ್ಥಗಿರಿ ಮತ್ತು ಶಿವಕೀರ್ತಿ ಅವರ ಪೈಕಿ ಇಬ್ಬರು. ಶಂಕರಮಣಿ ಎನ್ನುವ ಇನ್ನೊಬ್ಬ ಯುವಕ ಅಲ್ಲೇ ಸಮೀಪವಿದ್ದ ‘ಗುಪ್ತಗೌಡ ರಿಯಲ್ ಎಸ್ಟೇಟ್ ಏಜೆನ್ಸಿ’ಯಲ್ಲಿ ಕೆಲಸ ಮಾಡುತ್ತಿದ್ದ. ಈ ಮೂವರು ಆಪ್ತ ಸ್ನೇಹಿತರು. ರಜಾದಿನಗಳಲ್ಲಿ ಒಟ್ಟಾಗಿ ಕಾಲ ಕಳೆಯುತ್ತಿದ್ದರು.

ಶಂಕರಮಣಿ, ಅಪ್ಪ ಅಮ್ಮನಿಗೆ ಒಬ್ಬನೇ ಮಗ, ಮೂವರು ತಂಗಿಯರು. ಈತ ಮನೆಯ ಹಿರಿಯವನಾಗಿದ್ದರಿಂದ ತಂಗಿಯರ ಮದುವೆ ಜವಾಬ್ದಾರಿ  ಇವನ ಮೇಲಿತ್ತು. ಬಹಳ ದಿನಗಳ ಹುಡುಕಾಟದ ನಂತರ ಹಿರಿಯ ತಂಗಿ ಸತ್ಯಮ್ಮನಿಗೆ  ವರ ಸಿಕ್ಕಿದ್ದ.  ಅಪ್ಪ-ಅಮ್ಮನ ಜೊತೆಗೂಡಿ ವರನ ಮನೆಗೆ ಹೋಗಿ ಮದುವೆ ಮಾತುಕತೆ ಮುಗಿಸಿದ.

ಶಂಕರಮಣಿ ವಾಪಸ್‌ ಬೆಂಗಳೂರಿಗೆ ಹಿಂದಿರುಗುವಾಗ ಅವನ ಅಪ್ಪ ಅಮ್ಮ ‘ಅದೇನು ಮಾಡ್ತೀಯೋ ಗೊತ್ತಿಲ್ಲ, ಒಟ್ಟಿನಲ್ಲಿ ಮದುವೆ ಹೊತ್ತಿಗೆ ಐದು ಲಕ್ಷ ರೂಪಾಯಿ ಹೊಂದಿಸಬೇಕು ನೀನು’ ಎಂದು ತಾಕೀತು ಮಾಡಿಬಿಟ್ಟರು. ‘ಕಷ್ಟಪಟ್ಟು ಹುಡುಕಿರುವ ವರ ಕೈತಪ್ಪಿ ಹೋದರೆ ಉಳಿದ ಹೆಣ್ಣುಮಕ್ಕಳ ಮದುವೆಗೂ ತೊಂದರೆ ಆಗುತ್ತದೆ. ಆದ್ದರಿಂದ ಉಳಿದವರ ಮದುವೆ ಸುಸೂತ್ರವಾಗಿ ಆಗಬೇಕಾದರೆ ಸತ್ಯಮ್ಮನ ಮದುವೆಯನ್ನು ಚೆನ್ನಾಗಿ ಮಾಡಬೇಕು. ಇದರ ಜವಾಬ್ದಾರಿ ನಿನ್ನದು. ಐದು ಲಕ್ಷ ರೂಪಾಯಿ ಹೇಗಾದರೂ ಹೊಂದಿಸು’ ಎಂದು ಪದೇ ಪದೇ ಎಚ್ಚರಿಸಿದರು.

ಐದು ಲಕ್ಷ ಎಂದರೆ ಚಿಕ್ಕ ಮೊತ್ತವೇ? ಶಂಕರಮಣಿಯ ತಲೆ ಕೆಟ್ಟುಹೋಯಿತು. ಬಸ್ಸು ಹತ್ತುವವರೆಗೂ, ಇದೇ ತಲೆಯೊಳಕ್ಕೆ ಕೊರೆಯುತ್ತಿತ್ತು. ಹೇಗಾದರೂ ಮಾಡಿ ಆದಷ್ಟು ಬೇಗ ಹಣ ಹೊಂದಿಸಬೇಕು, ಆದರೆ ಹೇಗೆ...? ಎಂದು ಯೋಚಿಸುತ್ತಲೇ ಬೆಂಗಳೂರು ತಲುಪಿದ.

ಇಷ್ಟು ಬೃಹತ್‌ ಮೊತ್ತವನ್ನು ಕಡಿಮೆ ಸಮಯದಲ್ಲಿ ಹೊಂದಿಸುವುದೆಂದರೆ ಹುಡುಗಾಟದ ವಿಷಯವಾಗಿರಲಿಲ್ಲ. ಹಾಗೆಂದು ಕೈಚೆಲ್ಲಿ ಕುಳಿತುಕೊಳ್ಳುವಂತೂ ಇರಲಿಲ್ಲ. ಇನ್ನೂ ಇಬ್ಬರು ತಂಗಿಯಂದಿರ ಭವಿಷ್ಯದ ಪ್ರಶ್ನೆಯೂ ಇಲ್ಲಿತ್ತು. ಶಂಕರಮಣಿ ಮಂಕಾದ. ಮಂಕಾದ ಸ್ನೇಹಿತನನ್ನು ಗಮನಿಸಿದ ತೀರ್ಥಗಿರಿ ಮತ್ತು ಶಿವಕೀರ್ತಿ ಏನಾಯಿತೆಂದು ವಿಚಾರಿಸಿದರು.

ಶಂಕರಮಣಿ ಸ್ನೇಹಿತರೊಂದಿಗೆ ತನ್ನ ನೋವನ್ನು ತೋಡಿಕೊಂಡ. ಅವರನ್ನು ಪೀಡಿಸಿ, ಏನಾದರೂ ಪರಿಹಾರ ಹೇಳಿ ಎಂದು ದುಂಬಾಲು ಬಿದ್ದ. ಆ ಇಬ್ಬರು ತುಂಬಾ ಯೋಚನೆ ಮಾಡಿದ ಮೇಲೆ ಒಂದು ಐಡಿಯಾ ಕೊಟ್ಟರು. ಆದರೆ ಅದು ಅಂಥಿಂಥ  ಐಡಿಯಾ ಅಲ್ಲ, ಬಹಳ ಖತರ್ನಾಕ್ ಆಗಿತ್ತು...!

ದಾಸೋಹಮೂರ್ತಿ ಅವರಿಗೆ ಮಾಗಾವಿ ಎಂಬ ಮೂರು ವರ್ಷದ ಮಗಳಿದ್ದಳು. ಇವಳ ಮೇಲೆ ದಾಸೋಹಮೂರ್ತಿ ಪ್ರಾಣವನ್ನೇ ಇರಿಸಿಕೊಂಡಿದ್ದರು. ಅದನ್ನು ಅಪಹರಿಸುವ ಐಡಿಯಾ ಸ್ನೇಹಿತರು ನೀಡಿದ್ದರು. ಮಗುವಿನ ಬಿಡುಗಡೆಗೆ ಎಷ್ಟೇ ಹಣ ಕೇಳಿದರೂ ದಾಸೋಹಮೂರ್ತಿ ಕೊಟ್ಟೇ ಕೊಡುತ್ತಾರೆ ಎಂದು ಹೇಳಿದರು. ‘ಐಡಿಯಾ ಕೊಡುವಷ್ಟನ್ನು ಬಿಟ್ಟು ಇನ್ಯಾವುದೇ ವಿಚಾರದಲ್ಲಿ ನಾವು  ಭಾಗಿಗಳಾಗುವುದಿಲ್ಲ’ ಎಂದರಲ್ಲದೇ, ಉಪಾಯ ಫಲಿಸಿದರೆ ಅವನ ಹೆಸರನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲವೆಂದು ಹೇಳಿ ಕೈತೊಳೆದುಕೊಂಡರು.

ಒಂದೆಡೆ ಮೂವರು ತಂಗಿಯರ ಜವಾಬ್ದಾರಿ, ಇನ್ನೊಂದೆಡೆ ಹಣ ಹೊಂದಿಸುವಂತೆ ಅಪ್ಪ-ಅಮ್ಮ ಹೇಳಿದ್ದ ಮಾತುಗಳು, ಮಗದೊಂದೆಡೆ ಸ್ನೇಹಿತರ ‘ಉಚಿತ’ ಐಡಿಯಾ... ಎಲ್ಲವೂ ಕಣ್ಣಮುಂದೆ ಬಂತು ಶಂಕರಮಣಿಗೆ. ಈ ಉಪಾಯ ಬಿಟ್ಟರೆ ಅಷ್ಟೊಂದು ಬೃಹತ್‌ ಮೊತ್ತವನ್ನು ಕೂಡಿಸಲು ಬೇರೆ ಉಪಾಯವೇ ಇಲ್ಲ ಎಂದುಕೊಂಡ ಆತ. ಆ ಕ್ಷಣಕ್ಕೆ ಅವನ ನೆನಪಿಗೆ ಬಂದದ್ದು ಪಕ್ಕಾ ಕ್ರಿಮಿನಲ್‌ ಆಗಿದ್ದ ಇನ್ನೊಬ್ಬ ಸ್ನೇಹಿತ ಕಾಕಣ್ಣ. ತಡ ಮಾಡಲಿಲ್ಲ. ಆ ರಾತ್ರಿಯೇ ಕಾಕಣ್ಣನನ್ನು ಕಂಡು ಎಲ್ಲ ವಿಚಾರವನ್ನು ತಿಳಿಸಿದ.

ಕಾಕಣ್ಣ ಅಪರಾಧ ಜಗತ್ತಿನಲ್ಲಿ ಸಕ್ರಿಯವಾಗಿದ್ದು ಸಿಕ್ಕಿಬೀಳದೆ ಹಣ ಮಾಡಿಕೊಂಡಿದ್ದವ. ಶಂಕರಮಣಿಯಿಂದ ವಿಚಾರಗಳನ್ನು ತಿಳಿದುಕೊಳ್ಳುತ್ತಲೇ ಅದೊಂದು ದೊಡ್ಡ ವಿಚಾರವೇ ಅಲ್ಲ ಎಂಬಂತೆ ಪ್ರತಿಕ್ರಿಯಿಸಿದ. ತನ್ನದೇ ಕಾರನ್ನು ಉಪಯೋಗಿಸಿ ದಾಸೋಹಮೂರ್ತಿಯ ಮಗಳನ್ನು ಅಪಹರಿಸಿ, ಅವರಿಂದ ಹಣ ಪಡೆದು, ಶಂಕರಮಣಿ ತಂಗಿಯ ಮದುವೆಯನ್ನು ಮುಗಿಸಿ ಅದರಾಚೆಗೂ ಯೋಚನೆ ಮಾಡಿಬಿಟ್ಟ.

ಕಾಕಣ್ಣ ಕಾರ್ಯಪ್ರವೃತ್ತನಾದ. ದಾಸೋಹಮೂರ್ತಿ ಅವರ ಮನೆ, ಆಜುಬಾಜು ಮತ್ತು ಮನೆಯ ಹೊರಗೆ ಆಟವಾಡಲು ಬರುತ್ತಿದ್ದ ಮಾಗಾವಿಯನ್ನು ಗುರುತಿಸಿಕೊಂಡ. ಅವರ ಮನೆಯವರ, ಅಕ್ಕಪಕ್ಕದವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡ. ಸಾಕಷ್ಟು ಸ್ಥಳ ಅಧ್ಯಯನ ಮಾಡಿಕೊಂಡ ಕಾಕಣ್ಣ, ಶಂಕರಮಣಿಯೊಂದಿಗೆ ಮಾಗಾವಿಯನ್ನು ಅಪಹರಿಸುವ ದಿನ ಮತ್ತು ಸಮಯವನ್ನು ಗೊತ್ತು ಮಾಡಿಕೊಂಡ.

ಗೊತ್ತುಪಡಿಸಿಕೊಂಡ ದಿನ ಅಲ್ಲಿಗೆ ಬಂದಾಗ ಮಾಗಾವಿ ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಳು. ಕಾಕಣ್ಣ ಮತ್ತು ಶಂಕರಮಣಿ ಅಲ್ಲಿಗೆ ಬಂದವರೇ ಮಾಗಾವಿಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿಬಿಟ್ಟರು.

ಮಕ್ಕಳು ಗಾಬರಿಯಿಂದ ‘ಮಾಗಾವಿಯನ್ನು ಕಳ್ಳರು ಎತ್ತಿಕೊಂಡು ಹೋಗುತ್ತಿದ್ದಾರೆ’ ಎಂದು ಕೂಗಾಡಿದಾಗ ಎಲ್ಲರೂ ಸೇರುವಷ್ಟರಲ್ಲಿ ಕಾರು ತುಂಬಾ ದೂರ ಹೋಯಿತು. ಆದ್ದರಿಂದ ಕಾರಿನ ಸಂಖ್ಯೆ ಅಥವಾ ಇನ್ನಾವುದೇ ವಿಷಯ ಜನರಿಗೆ ತಿಳಿದುಕೊಳ್ಳಲು ಆಗಲಿಲ್ಲ. ಇಬ್ಬರು ವ್ಯಕ್ತಿಗಳು ಮಗುವನ್ನು ಅಪಹರಿಸಿದರು ಎಂಬುದು ಮಾತ್ರ ಮಕ್ಕಳಿಂದ ತಿಳಿಯಿತು.

ವಿಷಯ ತಿಳಿದ ದಾಸೋಹಮೂರ್ತಿ ಧಾವಂತದಿಂದ ಮನೆಗೆ ಬಂದರು. ಅಷ್ಟರಲ್ಲಿ ಸ್ಥಳೀಯ ಪೋಲಿಸರು ತಾವು ಪಡೆದುಕೊಂಡ ದೂರವಾಣಿ ಮಾಹಿತಿ ಆಧಾರದ ಮೇಲೆ ಅಲ್ಲಿಗೆ ಬಂದರು. ದಾಸೋಹಮೂರ್ತಿ ಅವರಿಂದ ಅಪಹರಣದ ಕುರಿತು ದೂರು ಪಡೆದು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಯುದ್ಧದೋಪಾದಿ ಆರಂಭಿಸಿದರು.

ಪೊಲೀಸರ ಕಾರ್ಯಾಚರಣೆಯ ರೀತಿ ರಿವಾಜುಗಳನ್ನು ಕರಗತಮಾಡಿಕೊಂಡಿದ್ದ ಕಾಕಣ್ಣ, ಮಗುವನ್ನು ತನಗೆ ಪರಿಚಯವಿದ್ದವರ ಮನೆಯಲ್ಲಿ ಬಿಟ್ಟುಬರಲು ಹೋದ. ಕಾರಿನಿಂದ ಮಗುವನ್ನು ಮನೆಯೊಳಗೆ ಸಾಗಿಸುವಾಗ ಮಗು ಕಿಟಾರನೆ ಚೀರಿಕೊಂಡಿತು. ಈ ಚೀರಾಟದಿಂದ ಯಾರಾದರೂ ಎಚ್ಚರಗೊಂಡಾರು ಎಂದು ಮಗುವಿನ ಬಾಯಿಯನ್ನು ಅದುಮಿಕೊಂಡ. ಮನೆಯ ಒಳಗಡೆ ಹೋಗುವಷ್ಟರಲ್ಲಿ ಮಗು ಉಸಿರು ಕಟ್ಟಿ ಸತ್ತು ಹೋಯಿತು!

ಕಾಕಣ್ಣ ತನ್ನ ಕಾರನ್ನು ಬೇರೊಂದು ಕಡೆ ಬಚ್ಚಿಟ್ಟ. ಶಂಕರಮಣಿಯೊಂದಿಗೆ ಸೇರಿ ಮಗುವಿನ ಶವವನ್ನು ಒಂದು ಖಾಲಿ ಡ್ರಮ್ ಒಳಗೆ ಹಾಕಿದ. ಇಬ್ಬರೂ ಕಾರಿನಲ್ಲಿ ದುರ್ಗಮ ಪ್ರದೇಶವೊಂದರ ಬಳಿ ಹೋಗಿ ಅಲ್ಲಿ ಡ್ರಮ್ ಇಟ್ಟು, ಅದರ ಮೇಲೆ ಭಾರವಾದ ಕಲ್ಲುಗಳನ್ನು ಜೋಡಿಸಿಟ್ಟರು.
ಮಾರನೆಯ ಬೆಳಿಗ್ಗೆ ಕಾಕಣ್ಣ, ದಾಸೋಹಮೂರ್ತಿ ಅವರಿಗೆ ಫೋನಾಯಿಸಿ ಮಾಗಾವಿ ಬೇಕಾದರೆ ತಕ್ಷಣ 10 ಲಕ್ಷ ರೂಪಾಯಿ ಹಾಗೂ ಮಗುವನ್ನು ಹಿಂತಿರುಗಿಸುವಾಗ 20 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟ.

ವಿಷಯ ಪೊಲೀಸರಿಗೆ ತಿಳಿಸಿದರೆ ಮಗು ಜೀವಂತ ಸಿಗುವುದಿಲ್ಲವೆಂದೂ ಎಚ್ಚರಿಸಿದ. ಮಗಳು ಸಿಕ್ಕರೆ ಸಾಕು ಎಂದುಕೊಂಡ ದಾಸೋಹಮೂರ್ತಿ ಅವರು ಹಣವನ್ನು ಮುಟ್ಟಿಸಬೇಕಾದ ಸ್ಥಳವನ್ನು ತಿಳಿದುಕೊಂಡು ಹಣ ಕೊಟ್ಟು ಬಂದರು. ಕಾಕಣ್ಣನಿಗೆ ತಾನು ಬೇಡಿಕೆ ಇಟ್ಟಿದ್ದ ಮೊದಲ ಕಂತಿನ ಹಣ ಇಷ್ಟೊಂದು ನಿರಾಯಾಸವಾಗಿ ಬಂದು ಮುಟ್ಟಿದ್ದರಿಂದ ಖುಷಿಯಾಯಿತು.

ಎರಡನೇ ಕಂತನ್ನು ಎರಡು ದಿನಗಳ ನಂತರ ನೀಡುವಂತೆ ದಾಸೋಹಮೂರ್ತಿ ಅವರಲ್ಲಿ ಒಪ್ಪಂದ ಮಾಡಿಕೊಂಡ. ಶಂಕರಮಣಿಗೆ ಐದು ಲಕ್ಷ ರೂಪಾಯಿ ಕೊಟ್ಟು ಕಳುಹಿಸಿದ. ಅಷ್ಟಕ್ಕೂ ಅವರಿಗೆ ಅಪಹರಿಸಿದ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇರಲಿಲ್ಲವಲ್ಲಾ...!

ಶಂಕರಮಣಿ ಹಣ ಪಡೆದು ತನ್ನೂರಿಗೆ ತಲುಪಿ ತಂದೆತಾಯಿಗೆ ಹಣ ನೀಡಿ ಅಲ್ಲಿಯೇ ಉಳಿದುಕೊಂಡ. ಆ ಹಣ ಹೇಗೆ ಬಂತು ಎಂದು ಕೇಳುವ ಗೋಜಿಗೂ ಅವನ ಪೋಷಕರು ಹೋದಂತಿಲ್ಲ...!

ಇತ್ತ, ಕಾಕಣ್ಣ ಎರಡನೆಯ ಕಂತಿನ ಹಣವನ್ನು ಎಲ್ಲಿ ನೀಡಬೇಕು ಎಂದು ದಾಸೋಹಮೂರ್ತಿ ಅವರಿಗೆ ದೂರವಾಣಿ ಮೂಲಕ ತಿಳಿಸಿದ. ಮಗುವನ್ನು ಹುಡುಕುತ್ತಿದ್ದ ಪೊಲೀಸರಿಗೆ ದಾಸೋಹಮೂರ್ತಿ ಅವರಲ್ಲಿ ಏನೋ ಬದಲಾವಣೆ ಆಗುತ್ತಿರುವುದು ಕಾಣಿಸಿತು. ಎಲ್ಲೋ ಏನೋ ಎಡವಟ್ಟಾಗಿದೆ ಎಂದು ಅರಿತ ಪೊಲೀಸರು ಈ ಬಗ್ಗೆ ದಾಸೋಹಮೂರ್ತಿ ಅವರನ್ನು ಒತ್ತಾಯಿಸಿ ಕೇಳಿದಾಗ ಅವರು ಎಲ್ಲ ವಿಷಯವನ್ನೂ ಹೇಳಿದರು.

ಮಗುವಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಪೊಲೀಸರು ಭರವಸೆ ಕೊಟ್ಟರು. ಎರಡನೇ ಕಂತಿನ ಹಣವನ್ನು ಕೊಡಲು ಆರೋಪಿಗೆ ಕೊಡಲು ಹೇಳಿದ ಪೊಲೀಸರು ಅವನನ್ನು ಬಂಧಿಸಲು ಕಾರ್ಯತಂತ್ರ ರೂಪಿಸಿದರು.

ಹಣ ಪಡೆಯಲು ಬೇರೊಬ್ಬನನ್ನು ನೇಮಿಸಿದರೆ ಕೆಲಸ ಕೆಡುತ್ತದೆ ಎಂದು ತಿಳಿದಿದ್ದ ಕಾಕಣ್ಣ, ಹಣ ಪಡೆಯಲು ಖುದ್ದಾಗಿ ಬಂದ. ದಾಸೋಹಮೂರ್ತಿ ಅವರಿಂದ ಹಣ ಪಡೆದು ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಪೊಲೀಸರು ಅವನ ಮೇಲೆರಗಿ ಬಂಧಿಸಿದರು. ಇನ್‌ಸ್ಪೆಕ್ಟರ್‌ ಯರ್ರಿಸ್ವಾಮಿ ಅವರಿಗೆ ಮುಂದಿನ ತನಿಖೆ ಕಷ್ಟವಾಗಲಿಲ್ಲ. ಕಾಕಣ್ಣ ಎಲ್ಲಾ ಬಾಯಿಬಿಟ್ಟ. ಮಾಗಾವಿಯ ಶವವನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಪೋಲಿಸರನ್ನು ಕರೆದೊಯ್ದು ತೋರಿಸಿದ. ಮಗಳು ಬದುಕಿದ್ದಾಳೆ ಎಂಬ ಆಸೆಯೊಂದಿಗೆ ತನ್ನ ಹಣವನ್ನೆಲ್ಲ ನೀಡಲು ಸಿದ್ಧರಾಗಿದ್ದ ದಾಸೋಹಮೂರ್ತಿ ಅವರಿಗೆ ಆಕಾಶವೇ ಕಳಚಿಬಿದ್ದಂತಾಯಿತು.

ವಿಷಯ ತಿಳಿಯುತ್ತಲೇ ಶಂಕರಮಣಿ ತಲೆತಪ್ಪಿಸಿಕೊಂಡ. ಅವನಿಗಾಗಿ ಹುಡುಕಾಟ ಮುಂದುವರೆಯಿತು. ಈ ಪ್ರಕರಣ ಶ್ರೀಮಂತರೊಬ್ಬರ ಮಗುವಿಗೆ ಸಂಬಂಧಪಟ್ಟದ್ದಾಗಿ ಸಾಕಷ್ಟು ಕೋಲಾಹಲ ಸೃಷ್ಟಿಸಿತು. ಮಗಳ ಸಾವಿನಿಂದ ಆಘಾತಕ್ಕೊಳಗಾಗಿದ್ದ ದಾಸೋಹಮೂರ್ತಿ ಅವರು ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಪಣ ತೊಟ್ಟರು. ಸರ್ಕಾರದ ಪರವಾಗಿ ನಾನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ (ಆರೋಪಿಗಳ ವಿರುದ್ಧ) ವಾದಿಸುವಂತೆ ಕೇಳಿಕೊಂಡರು. ಸರ್ಕಾರದ ಹಂತದಲ್ಲಿ ವ್ಯವಹರಿಸಿ ಅವರೇ ಆದೇಶ ತರುವಲ್ಲೂ ಯಶಸ್ವಿಯಾದರು.

ಈ ನಡುವೆ ಶಂಕರಮಣಿ ಪೋಲಿಸರ ಕೈಗೆ ಸಿಕ್ಕಿಬಿದ್ದ. ಐದು ಲಕ್ಷ ರೂಪಾಯಿಯಲ್ಲಿ ಮದುವೆಗಾಗಿ ಖರೀದಿಸಿದ್ದ ಜವಳಿ, ಆಭರಣ, ಸೀರೆ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡರು. ತನ್ನಿಂದಲೇ ಅಣ್ಣ  ಇಂಥ ಕೃತ್ಯ ಎಸಗಿದ ಎಂದು ನೊಂದ ಸತ್ಯಮ್ಮ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಳು. ಪೊಲೀಸರು ತನಿಖೆ ಮುಗಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಪ್ರಕರಣದ ವಿಚಾರಣೆ ಪ್ರಾರಂಭವಾಗಲು ನಾಲ್ಕು ತಿಂಗಳು ಹಿಡಿಯಿತು.

ನಾನೂ ಕೇಸಿಗೆ ಸಂಬಂಧಿಸಿದಂತೆ ತಯಾರಿ ನಡೆಸುತ್ತಿದ್ದೆ. ಆದರೆ ಅಲ್ಲೊಂದು ವಿಚಿತ್ರ ನಡೆದೇ ಹೋಯಿತು. ಅದೇನೆಂದರೆ ನನ್ನನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದ್ದ ಆದೇಶವನ್ನು ಸರ್ಕಾರ ಇದ್ದಕ್ಕಿದ್ದಂತೆ ವಾಪಸ್ ಪಡೆಯಿತು. ಇದರ ಬಗ್ಗೆ ನನಗೆ ಯಾವ ಮುನ್ಸೂಚನೆಯನ್ನೂ ಕೊಡಲಿಲ್ಲ, ಆದೇಶ ಹಿಂಪಡೆಯಲು ಕಾರಣವನ್ನೂ ತಿಳಿಸಲಿಲ್ಲ!

ಸರ್ಕಾರದ ನಡಾವಳಿಯ ಹಿಂದೆ ಏನಾಗಿರಬಹುದೆಂದು ಕಂಡುಕೊಳ್ಳುವ ಜಿಜ್ಞಾಸೆ ನನ್ನನ್ನು ಕಾಡಿತು. ಆಮೇಲೆ ನನಗೆ ಗೊತ್ತಾಗಿದ್ದು ಏನೆಂದರೆ, ಶಂಕರಮಣಿ ಕೆಲಸ ಮಾಡುತ್ತಿದ್ದ ‘ಗುಪ್ತಗೌಡ ರಿಯಲ್ ಎಸ್ಟೇಟ್ ಏಜೆನ್ಸಿ’ಯ ಮಾಲೀಕ ಗುಪ್ತಗೌಡರು ನನ್ನನ್ನು ಎಸ್‌ಪಿಪಿ ಮಾಡಬಾರದು ಎಂದು ಸರ್ಕಾರದ ಮಟ್ಟದಲ್ಲಿ ತಮ್ಮ ಪ್ರಭಾವ ಬೀರಿದ್ದರು,  ಕೊನೆಗೂ ಅವರು ಗೆದ್ದಿದ್ದರು!

ಇಷ್ಟೆಲ್ಲಾ ಆದಮೇಲೆ ಪ್ರಕರಣದ ವಿಚಾರಣೆಯಲ್ಲಿ ನಾನು ಮಾಡಬೇಕಾದದ್ದು ಏನೂ ಉಳಿದಿರಲಿಲ್ಲ. ನಾನು ಏನು ಅಂದುಕೊಂಡಿದ್ದೆನೋ ಅದೇ ನಡೆದು ಹೋಯಿತು. ಆರೋಪಿಗಳು ಕೊಲೆ ಆರೋಪದಿಂದ ಬಿಡುಗಡೆಯಾಗಿದ್ದರು! ಆಲ್ಬರ್ಟ್ ಕಾಮು ಅವರ ಮಾತನ್ನು ದಯಮಾಡಿ ಮತ್ತೊಮ್ಮೆ ಓದಿಕೊಳ್ಳಿ... (ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ)


ಲೇಖಕರು ಹೈಕೋರ್ಟ್‌ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT