ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಲಕ್ಷ ಕಂಪೆನಿಗಳು ರಿಟರ್ನ್ಸ್‌ ಸಲ್ಲಿಸುತ್ತಿಲ್ಲ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದಲ್ಲಿ ಒಟ್ಟು 15 ಲಕ್ಷ ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಅವುಗಳಲ್ಲಿ 9 ಲಕ್ಷ ಕಂಪೆನಿಗಳು ವಾರ್ಷಿಕ ಲೆಕ್ಕಪತ್ರ (ಐ.ಟಿ. ರಿಟರ್ನ್ಸ್‌) ವರದಿಯನ್ನೇ ಸಲ್ಲಿಸುತ್ತಿಲ್ಲ’ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ತಿಳಿಸಿದ್ದಾರೆ.

ವಾರ್ಷಿಕ ಲೆಕ್ಕಪತ್ರ ಸಲ್ಲಿಸದೇ ಅಕ್ರಮ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಿದೆ ಎಂದೂ ಅವರು ಹೇಳಿದ್ದಾರೆ. ಈ ಸಂಬಂಧ, ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಈಗಾಗಲೇ 3 ಲಕ್ಷ ಕಂಪೆನಿಗಳಿಗೆ ನೊಟೀಸ್‌ ಜಾರಿ ಮಾಡಿದ್ದು, ಸ್ವತಃ ನೋಂದಣಿ ರದ್ದುಪಡಿಸುವಂತೆ ಸೂಚನೆ ನೀಡಿದೆ. ಅಂತೆಯೇ ಇನ್ನುಳಿದ ಕಂಪೆನಿಗಳಿಗೂ ನೊಟೀಸ್‌ ಕಳುಹಿಸುವ ಪ್ರಕ್ರಿಯೆ ನಡೆದಿದೆ ಎಂದು ಸಚಿವಾಲಯ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿ ಮಾಡಿಕೊಂಡ ಬಳಿಕ, ಐ.ಟಿ. ರಿಟರ್ನ್ಸ್‌ ಸಲ್ಲಿಸದೇ ಇದ್ದರೆ ಅಂತಹ ಕಂಪೆನಿಗಳಿಗೆ ಭಾರತದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಅವಕಾಶ ನೀಡುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐ.ಟಿ. ರಿಟರ್ನ್ಸ್‌ ಸಲ್ಲಿಸದೇ ಇರುವ ಕಂಪೆನಿಗಳು ಷೆಲ್‌ ಕಂಪೆನಿಗಳು ಎಂದು ಅನ್ನಿಸುತ್ತಿಲ್ಲ. ಅವುಗಳು ಯಾವುದೇ ವಹಿವಾಟು ನಡೆಸದೇ ಇರುವಂತಹ ಕಂಪೆನಿಗಳಾಗಿರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ವ್ಯವಹಾರ, ವಹಿವಾಟು ನಡೆಸದೆ ಕೇವಲ ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಗೆ ಬಳಕೆ ಆಗುತ್ತಿರುವ ‘ಷೆಲ್ ಕಂಪೆನಿ’ಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂತಹ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.

‘ಆರ್ಥಿಕ ವಂಚನೆ: ಕಠಿಣ ಕ್ರಮ  ಅಗತ್ಯ’
ಅಕ್ರಮ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಯಂತಹ ಆರ್ಥಿಕ ಅಪರಾಧಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಜಾರಿ ನಿರ್ದೇಶನಾಲಯಕ್ಕೆ ಸಲಹೆ ನೀಡಿದ್ದಾರೆ.

ತೆರಿಗೆ ಸಂಗ್ರಹಿಸುವಾಗ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ‘ತೆರಿಗೆ ವಂಚನೆಯಿಂದ ಸಾರ್ವಜನಿಕರು ಮತ್ತು ರಾಷ್ಟ್ರದ ಹಿತಾಸಕ್ತಿಗೆ ದಕ್ಕೆಯಾಗುತ್ತದೆ. ಇದನ್ನು ತಪ್ಪಿಸುವಲ್ಲಿ ರೆವಿನ್ಯೂ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಪಾತ್ರ ಬಹಳ ಮುಖ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT