ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಕಲಾಕೃತಿ: ಬಳ್ಳಾರಿಯ ಕೊಡುಗೆ

ಕಲಾವಿದನ ಹೆಸರಿಸದ ಸರ್ಕಾರ ಮತ್ತು ಬಸವಸಮಿತಿ ಕ್ರಮಕ್ಕೆ ವಿ.ಟಿ. ಕಾಳೆ ಅಸಮಾಧಾನ
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿ, ರಾಜ್ಯ ಸರ್ಕಾರ ಅಧಿಕೃತಗೊಳಿಸಿರುವ ಬಸವಣ್ಣನ ಕಲಾಕೃತಿಯು ಬಳ್ಳಾರಿ ಜಿಲ್ಲೆಯ ಕೊಡುಗೆಯಾಗಿದೆ. ‘ವಚನ ರಚನೆಯಲ್ಲಿ ನಿರತನಾದ ಬಸವಣ್ಣ’ನ ಕಲಾಕೃತಿಯನ್ನು ಜಿಲ್ಲೆಯ ಸಂಡೂರಿನ ಕಲಾವಿದ ವಿ.ಟಿ.ಕಾಳೆ ರಚಿಸಿದ್ದು, ಅವರ ಹೆಸರು ಉಲ್ಲೇಖಿಸುವುದನ್ನೇ ಸರ್ಕಾರ ಮರೆತಿದೆ.

ಬಸವೇಶ್ವರರ ಚಿತ್ರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪಡೆಯುವಂತೆ ಎಲ್ಲ ಇಲಾಖೆಗಳಿಗೆ ಸರ್ಕಾರ ಸೂಚಿಸಿದೆ. ಆನ್‌ಲೈನ್‌ನಲ್ಲೂ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಶನಿವಾರದಿಂದಲೇ ಇಲಾಖೆಯು ವಿತರಣೆಯನ್ನೂ ಆರಂಭಿಸಿದೆ. ಆದರೆ ಕಲಾಕೃತಿಯ ಮೇಲಾಗಲೀ, ಪ್ರತ್ಯೇಕವಾಗಿ ಆಗಲೀ ಕಲಾವಿದರ ಪ್ರಸ್ತಾಪವೇ ಇಲ್ಲ. ಆ ಬಗ್ಗೆ ಕಲಾವಿದ ಕಾಳೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ: ‘ಚಿತ್ರದುರ್ಗದ ಮುರುಘಾಶರಣರ ಸಲಹೆ ಮೇರೆಗೆ 2005ರಲ್ಲಿ ರಚಿಸಿದ ಕಲಾಕೃತಿ ಅದು. ಅದಕ್ಕಾಗಿ 15 ದಿನ ಶ್ರಮ ವಹಿಸಿದ್ದೆ. ಈಗ ಅದೇ ಕಲಾಕೃತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಸೂಚಿಸಿರುವುದು ತೃಪ್ತಿ ತಂದಿದೆ. ಆದರೆ ನನ್ನ ಪರಿಶ್ರಮವನ್ನು ಕಡೆಗಣಿಸಿದ್ದಕ್ಕೆ ಬೇಸರವಾಗಿದೆ’ ಎಂದು ಕಾಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿಯೂ ಇಲ್ಲ: ‘ಕಲಾಕೃತಿಯನ್ನು ಪ್ರದರ್ಶನಕ್ಕೆ ಪರಿಗಣಿಸಿರುವ ಬಗ್ಗೆ ಇದುವರೆಗೆ ಸರ್ಕಾರದಿಂದ ನನಗೆ ಯಾವುದೇ ಮಾಹಿತಿಯೂ ಇಲ್ಲ. ಶುಕ್ರವಾರ ರಾತ್ರಿ 11ರ ವೇಳೆಗೆ ಫೇಸ್‌ಬುಕ್‌ನಲ್ಲಿ ನನ್ನ ಮಗ ಕೆ.ವಿ.ಕಾಳೆ ಅವರಿಗೆ ಗೊತ್ತಾದ ಬಳಿಕವಷ್ಟೇ ನನಗೂ ತಿಳಿಯಿತು’ ಎಂದರು.

ಹೆಸರೂ ಇಲ್ಲ: ‘ಕಲಾಕೃತಿಗಳ ಮೇಲೆ ಕಲಾವಿದರು ಸಾಮಾನ್ಯವಾಗಿ ತಮ್ಮ ಹೆಸರನ್ನು ಚಿಕ್ಕದಾಗಿ ಉಲ್ಲೇಖಿಸಿರುತ್ತಾರೆ. ಹಾಗೆಯೇ ನಾನೂ ಈ ಕಲಾಕೃತಿಯ ಮೇಲೆ ನನ್ನ ಹೆಸರು ಬರೆದಿದ್ದೆ. ಆದರೆ ಡಿಜಿಟಲ್‌ ತಂತ್ರಜ್ಞಾನ ಬಳಸಿ ಹೆಸರನ್ನು ತೆಗೆದು ಹಾಕುವ ಮೂಲಕ ಖಾಸಗಿ ಪ್ರಕಾಶಕರಿಗೂ ಕಡಿಮೆ ಇಲ್ಲದಂತೆ ಸರ್ಕಾರ ವರ್ತಿಸಿದೆ. ಕಲಾಕೃತಿಯ ಲಕ್ಷಾಂತರ ಪ್ರತಿಗಳು ಮುದ್ರಣವಾಗಿದ್ದರೂ, ಕಲಾವಿದನ ಹೆಸರೇ ಇಲ್ಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಧಾರಕ್ಕೂ ಮುನ್ನ, ಈ ಕಲಾಕೃತಿಯನ್ನು ಲೇಖಕ ರಂಜಾನ್‌ ದರ್ಗಾ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕಳುಹಿಸಿದ್ದರು. ಆ ಸಂದರ್ಭದಲ್ಲಿ ಅವರು ಕಲಾವಿದರ ಹೆಸರನ್ನೂ ಉಲ್ಲೇಖಿಸಿದ್ದರು. ಆದರೆ ನಿರ್ಧಾರವನ್ನು ಪ್ರಕಟಿಸುವ ವೇಳೆಯಲ್ಲಿ ಸರ್ಕಾರ ಹೆಸರನ್ನು ಕೈಬಿಟ್ಟಿದೆ.

* ಕಲಾಕೃತಿಯಿಂದ ನಾನು ಹಣವನ್ನು ಬಯಸಲಾರೆ. ಕಲಾವಿದನ ಹೆಸರನ್ನು ಉಲ್ಲೇಖಿಸುವ ಬಗ್ಗೆ ಯೋಚಿಸದೇ ಇದ್ದುದು ಬೇಸರ ಮೂಡಿಸಿದೆ

–ವಿ.ಟಿ.ಕಾಳೆ, ಕಲಾವಿದ

* ವಾರ್ತಾ ಇಲಾಖೆಗೆ ಕಲಾಕೃತಿ ಕಳಿಸಿದ ಸಂದರ್ಭದಲ್ಲೇ, ಅದನ್ನು ರಚಿಸಿದವರ ಹೆಸರು ಉಲ್ಲೇಖಿಸಿದ್ದೆ. ಯಾವ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಗಿದೆಯೋ ತಿಳಿದಿಲ್ಲ

–ರಂಜಾನ್‌ ದರ್ಗಾ, ಲೇಖಕ

* ರಂಜಾನ್ ದರ್ಗಾ ಅವರು ಬಸವಣ್ಣನ ಕಲಾಕೃತಿ ಕಳಿಸಿಕೊಟ್ಟಿದ್ದರು. ಕಲಾವಿದರ ಹೆಸರು ಪ್ರಕಟವಾಗದೇ ಇರುವ ಕುರಿತು ಪರಿಶೀಲಿಸಲಾಗುವುದು.

–ಎನ್‌.ಆರ್‌. ವಿಶುಕುಮಾರ್‌, ನಿರ್ದೇಶಕರು, ವಾರ್ತಾ ಇಲಾಖೆ

ಮುಖ್ಯಾಂಶಗಳು 
* ವಿ.ಟಿ.ಕಾಳೆ ಅವರ ರಚನೆ

* 2005ರಲ್ಲಿ ಮುರುಘಾಶ್ರೀ ಸಲಹೆ ಮೇರೆಗೆ ರಚನೆ

* ಕಲಾಕೃತಿಯಿಂದಲೂ ಹೆಸರು ತೆಗೆದ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT