ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಯಿಂಟ್ಸ್‌ ಹಂಚಿಕೊಂಡ ಭಾರತ

ಅಜ್ಲನ್‌ ಷಾ ಕಪ್ ಹಾಕಿ ಟೂರ್ನಿ: ಗಮನ ಸೆಳೆದ ಶ್ರೀಜೇಶ್‌
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಪೊ, ಮಲೇಷ್ಯಾ: ಸುಲ್ತಾನ್‌ ಅಜ್ಲನ್‌ ಷಾ ಕಪ್‌ ಹಾಕಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡದವರು ಗ್ರೇಟ್‌ ಬ್ರಿಟನ್‌ ವಿರುದ್ಧ ಟೂರ್ನಿಯ ಮೊದಲ ಗೋಲು ದಾಖಲಿಸಿದರಾದರೂ, ಕೊನೆಗೆ ಪಾಯಿಂಟ್ಸ್‌ ಹಂಚಿಕೊಳ್ಳಲಷ್ಟೇ ತೃಪ್ತಿ ಪಡುವಂತಾಯಿತು.

ಶನಿವಾರ ನಡೆದ ಪಂದ್ಯದ 19ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್‌ ಗೋಲಿನ ಖಾತೆ ತೆರೆದಾಗ ಭಾರತದ ಪಾಳಯದಲ್ಲಿ ಸಂಭ್ರಮದ ಹೊನಲು ಹರಿದಿತ್ತು. ಆದರೆ ಅದು ಹೆಚ್ಚು ಹೊತ್ತು ಉಳಿಯಲಿಲ್ಲ. 25ನೇ ನಿಮಿಷದಲ್ಲಿ ಟಾಮ್‌ ಕಾರ್ಸನ್‌ ಅಂತರವನ್ನು ಸಮಗೊಳಿಸಿದರು.

ಮನದೀಪ್‌ ಸಿಂಗ್‌ 48ನೇ ನಿಮಿಷದಲ್ಲಿ ಗೋಲು ಗಳಿಸಿ ಮತ್ತೆ ಮುನ್ನಡೆ ತಂದುಕೊಟ್ಟರು. ಆದರೆ ಕೇವಲ ನಾಲ್ಕೇ ನಿಮಿಷದಲ್ಲಿ ಅಲನ್‌ ಫೋರ್ಸಿತ್‌ ಗೋಲು ಗಳಿಸಿ ಅಂತರವನ್ನು 2–2ರಿಂದ ಸಮಗೊಳಿಸಿದರು.

ಹೋದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ 2–1 ಗೋಲು ಗಳಿಂದ ಬ್ರಿಟನ್‌ ತಂಡವನ್ನು ಮಣಿಸಿತ್ತು. ಇಲ್ಲಿ ಅದರ ಸೇಡು ತೀರಿಸಿಕೊಳ್ಳಲು ಬ್ರಿಟನ್‌ ಆಟಗಾರರು ತೀವ್ರ ಹೋರಾಟ ನಡೆಸಿದರಾದರೂ, ಯಶಸ್ಸು ಪಡೆಯಲಿಲ್ಲ. 

ಈ ಊರಿನಲ್ಲಿಂದು ಧಾರಾಕಾರ ಮಳೆ. ಗುಡುಗು ಮಿಂಚುಗಳ ಆರ್ಭಟ ಮೈನಡುಗಿಸುವಂತಿತ್ತು. ಹೀಗಾಗಿ ಎರಡು ಗಂಟೆಗಳಷ್ಟು ಹೊತ್ತು ಆಟಕ್ಕೆ ಅಡಚಣೆ ಉಂಟಾಯಿತು. ಕೃತಕ ಹಾಸಿನಲ್ಲಿ ಪಂದ್ಯ ನಡೆಯುವುದರಿಂದ ಆಟಗಾರರಿಗೆ  ಆಡಲು ತೀರಾ ಪ್ರತಿಕೂಲ ಪರಿಸ್ಥಿತಿ ಏನಿರಲಿಲ್ಲ. ಆದರೆ ಮಿಂಚು ಮತ್ತು ಸಿಡಿಲಬ್ಬರದ ಕಾರಣ ಆಟಗಾರರನ್ನು ಅಂಗಣದಿಂದ ಹಲವು ನಿಮಿಷಗಳ ಕಾಲ ಹೊರ ಕರೆಸಲಾಯಿತು.

ಆರಂಭದಿಂದಲೂ ಉಭಯ ತಂಡಗಳೂ ಆಕ್ರಮಣಕಾರಿ ತಂತ್ರಕ್ಕೇ ಹೆಚ್ಚು ಒತ್ತು ನೀಡಿದ್ದವು. ಆದರೆ ಬ್ರಿಟನ್‌ 9ನೇ ನಿಮಿಷದಲ್ಲಿ ಪರಿಣಾಮಕಾರಿ ದಾಳಿ ನಡೆಸಿತು.

ಗೋಲು ಆವರಣದ ಹೊರ ಅಂಚಿನಲ್ಲಿ ನಿಂತಿದ್ದ ಹೆನ್ರಿ ವೇರ್‌ ಅವರತ್ತ ಬಂದ ಚೆಂಡನ್ನು ಅವರು ಕರಾರುವಾಕ್ಕಾಗಿ ಗುರಿ ಇಟ್ಟು ಬಿರುಸಾಗಿ ಹೊಡೆ ದರು.  ಆದರೆ ಚೆಂಡು ನೇರವಾಗಿ ಗೋಲ್‌ ಕೀಪರ್‌ ಪಿ.ಆರ್.ಶ್ರೀಜೇಶ್‌ ಅವರ ಪ್ಯಾಡಿಗೆ ಬಡಿಯಿತು. ಶ್ರೀಜೇಶ್‌ ಅದನ್ನು ದೂರ ಒದ್ದರು.

ಇದಾಗಿ ಮೂರು ನಿಮಿಷಗಳಾ ಗಿತ್ತಷ್ಟೆ. ಆಗ ಆಕಾಶ್‌ದೀಪ್‌ ಅವರು ರಕ್ಷಣಾ ಆಟಗಾರರೊಬ್ಬರ ಕಣ್ಣು ತಪ್ಪಿಸಿ ಚೆಂಡನ್ನು ಗೋಲು ಆವರಣದೊಳಗೇ ಇದ್ದ ಎಸ್‌.ವಿ.ಸುನಿಲ್ ಅವರತ್ತ ಕಳಿಸಿದರು. ಆದರೆ ಸುನಿಲ್‌ ಆ ಚೆಂಡನ್ನು ತಡೆದು ನಿಲ್ಲಿಸಲು ವಿಫಲರಾದರು.

ಆದರೆ ಈ ಗಲಿಬಿಲಿಯಲ್ಲಿ ತಮ್ಮತ್ತ ಬಂದ ಚೆಂಡನ್ನು ಪ್ರದೀಪ್‌ ಮೊರ್‌ ಗುರಿ ಇಟ್ಟು ಕಳಿಸಲತ್ನಿಸು ತ್ತಿದ್ದಂತೆಯೇ ಅದು ಬ್ರಿಟನ್‌ ರಕ್ಷಣಾ ಆಟಗಾರರೊಬ್ಬರ ಕಾಲಿಗೆ ತಾಗಿತು. ಆಗ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಈ ಅವಕಾಶದಲ್ಲಿ ಚೆಂಡನ್ನು ತಡೆದು ನಿಲ್ಲಿಸುವಲ್ಲಿಯೇ ಭಾರತ ವೈಫಲ್ಯ ಕಂಡಿತು.

ಆದರೆ ಮಧ್ಯಗೆರೆಯ ಬಳಿ ಹೋಗುತ್ತಿದ್ದ ಚೆಂಡನ್ನು ತಡೆದ ಮನ್‌ಪ್ರೀತ್‌ಸಿಂಗ್‌ ಗೋಲು ಪೆಟ್ಟಿಗೆ ಯತ್ತ ಬಿರುಸಾಗಿ ಹೊಡೆದು ಕಳಿಸಿದರು. ಚೆಂಡು ಗೋಲ್‌ಕೀಪರ್‌ ಪ್ಯಾಡ್‌ಗೆ ಬಡಿದು ಮತ್ತೆ ಹಿಂದಕ್ಕೆ ಪುಟಿದು, ಆಕಾಶ್‌ದೀಪ್‌ ಅವರ ಬಳಿ ಬಂದು ಬಿತ್ತು.

ಆಕಾಶ್‌ದೀಪ್‌ ಮಿಂಚಿನ ವೇಗದಲ್ಲಿ ಆ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. 26ನೇ ವಾರ್ಷಿಕ ಅಜ್ಲನ್‌ ಷಾ ಟೂರ್ನಿಯ ಗೋಲಿನ ಖಾತೆ ತೆರೆದ ಹೆಗ್ಗಳಿಕೆಯೂ ಅವರ ದಾಯಿತು.

ಮರು ನಿಮಿಷದಿಂದಲೇ ಬ್ರಿಟನ್‌ ಆಟಗಾರರು ಸತತ ದಾಳಿಗಿಳಿದರು. 25ನೇ ನಿಮಿಷದಲ್ಲಿ ಒಲಿ ವಿಲ್ಲರ್ಸ್‌ ಭಾರತದ ರಕ್ಷಣಾ ವ್ಯೂಹವನ್ನು ವಂಚಿಸಿ ಒಳನುಗ್ಗಿದರಲ್ಲದೆ, ಗೋಲು ಪೆಟ್ಟಿಗೆಯ ಬಲಅಂಚಿನಲ್ಲಿ ಚೆಂಡನ್ನು ಚಾಣಾಕ್ಷ್ಯತನ ದಿಂದ ಡ್ರಿಬಲ್‌ ಮಾಡುತ್ತಾ ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ಕಾರ್ಲ್‌ಸನ್‌ ಅವರತ್ತ ತಳ್ಳಿದರು.

ಕಾರ್ಲ್‌ಸನ್‌ ಒಂದು ಕ್ಷಣ ವನ್ನೂ ವ್ಯರ್ಥಗೊಳಿಸಲಿಲ್ಲ. ಶ್ರೀಜೇಶ್‌ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಚೆಂಡು ಗೋಲು ಪೆಟ್ಟಿಗೆಯೊಳಗೆ ಸೇರಿತ್ತು. ಅಂತರ 1–1ರಿಂದ ಸಮ ಗೊಂಡಿತು. ಭಾರತ ಇನ್ನೊಮ್ಮೆ ಮುನ್ನಡೆ ಗಳಿಸುವ ಸಂದರ್ಭದಲ್ಲಿ ಕರ್ನಾಟಕದ ಆಟಗಾರ ಎಸ್‌.ವಿ.ಸುನಿಲ್‌ ಮುಖ್ಯ ಪಾತ್ರ ವಹಿಸಿದರು.

ಎಡಅಂಚಿನಿಂದ ಮನ್‌ಪ್ರೀತ್‌ ಸಿಂಗ್‌ ತಮ್ಮತ್ತ ಕಳುಹಿಸಿದ ಚೆಂಡನ್ನು ಸುನಿಲ್‌ ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ಮನ್‌ದೀಪ್‌ ಸಿಂಗ್‌ ಅವರತ್ತ ತಳ್ಳಿದರು. ಆ ಚೆಂಡಿಗೆ ಮನ್‌ದೀಪ್‌ ಸ್ಟಿಕ್‌ ತಾಗಿಸಿ ಸರಿದಿಕ್ಕಿನತ್ತ ಕಳಿಸಿದರು. ಚೆಂಡು ಗೋಲು ಪೆಟ್ಟಿಗೆಯೊಳಗೆ ಸದ್ದು ಮಾಡಿತು. ಗೋಲ್‌ಕೀಪರ್‌ ಗಿಬ್ಸನ್‌ ನಿರಾಸೆಯಿಂದ ನಿಂತಿದ್ದರು.

ಆದರೆ ಈ ಮುನ್ನಡೆಯ ಸಂತಸವೂ ಹೆಚ್ಚು ಹೊತ್ತು ಉಳಿಯಲಿಲ್ಲ. 52ನೇ ನಿಮಿಷದಲ್ಲಿ ಭಾರತದ ಗೋಲು ಆವರಣದೊಳಗೆ ಬ್ರಿಟನ್‌ ಆಟಗಾರರು ಏಕಾಏಕಿ ದಾಳಿ ನಡೆಸಿದರು.

ಚೆಂಡನ್ನು ಕಸಿದು ಹೊರಕಳಿಸುವ ಭಾರತದ ರಕ್ಷಣಾ ಆಟಗಾರರ ಯತ್ನಕ್ಕೆ ಫಲ ಸಿಗಲಿಲ್ಲ. ಆ ಗಲಿಬಿಲಿಯಲ್ಲೇ ಅಲನ್‌ ಫೋರ್ಸಿತ್‌ ಚೆಂಡನ್ನು ಗುರಿ ಮುಟ್ಟಿಸಿದರು. ಗೋಲುಗಳ ಅಂತರ ಮತ್ತೆ ಸಮ ಗೊಂಡಿತು. ಆ ನಂತರ ಪಂದ್ಯದ ಕೊನೆಯ ಕ್ಷಣದವರೆಗೂ ಗೋಲು ಗಳಿ ಸಲು ಉಭಯ ತಂಡಗಳ ಆಟಗಾರರು ನಡೆಸಿದ ಯತ್ನಕ್ಕೆ ಫಲ ಸಿಗಲಿಲ್ಲ.

*
ಗೋಲು ಗಳಿಸುವ ಹೆಚ್ಚು ಅವಕಾಶಗಳನ್ನು ರೂಪಿಸಿ ಕೊಳ್ಳುವ ನಿಟ್ಟಿನಲ್ಲಿ ನಮ್ಮ ಆಟಗಾರರ ಪ್ರಯತ್ನ ನಿರಾಶಾದಾಯಕವಾಗಿತ್ತು.
–ರೋಲೆಂಟ್‌ ಓಲ್ಟಮಸ್‌,
ಭಾರತ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT