ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಾಸ್ಕೆಟ್‌ ಜತೆ ಸಾವಯವ ರೈತರ ಒಪ್ಪಂದ

ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾವಯವ ಕೃಷಿ ಪದ್ಧತಿ ಅನುಸರಿಸಿ ಉತ್ಪಾದಿಸುವ ಆಹಾರ ಪದಾರ್ಥಗಳನ್ನು ರೈತರಿಂದ ನೇರವಾಗಿ ಖರೀದಿಸಲು ಬಿಗ್‌ ಬಾಸ್ಕೆಟ್‌ ಸಂಸ್ಥೆ ಸಾವಯವ ರೈತರ ಒಕ್ಕೂಟಗಳ ಜೊತೆ  ಒಡಂಬಡಿಕೆ ಮಾಡಿಕೊಂಡಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಶನಿವಾರ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾದೇಶಿಕ ಸಹಕಾರಿ ಸಾವಯವ ರೈತರ ಒಕ್ಕೂಟ, ಉತ್ತರಕನ್ನಡ ಜಿಲ್ಲಾ ಪ್ರಾದೇಶಿಕ ಸಹಕಾರಿ ಸಾವಯವ ರೈತರ ಒಕ್ಕೂಟದ ಅಧ್ಯಕ್ಷರು ಮತ್ತು ಬಿಗ್‌ ಬಾಸ್ಕೆಟ್‌ ಸಂಸ್ಥೆಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಸಾವಯವ ಆಹಾರ ಪದಾರ್ಥಗಳನ್ನು ಖರೀದಿಸಲು ಬಿಗ್‌ ಬಾಸ್ಕೆಟ್‌ ಸಂಸ್ಥೆ ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ ಎಂದರು.

ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಎಸ್‌.ಕೆ. ಪಟ್ಟನಾಯಕ್ ಮಾತನಾಡಿ, ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಎರಡನೇ ಹಸಿರು ಕ್ರಾಂತಿ ಎಂದು ಕರೆಯಬಹುದು ಎಂದು ಅಭಿಪ್ರಾಯಪಟ್ಟರು.

ಮುಂದಿನ ಐದು ವರ್ಷಗಳಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸುವ ರೈತರ ಸಂಖ್ಯೆ ಎರಡು ಪಟ್ಟು ಹೆಚ್ಚುವುದರಲ್ಲಿ ಅನುಮಾನ ಇಲ್ಲ.  ದೆಹಲಿಯಲ್ಲೂ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.

ಬ್ರ್ಯಾಂಡ್‌ ಬಿಡುಗಡೆ: ಸಾವಯವ ಮತ್ತು ಸಿರಿಧಾನ್ಯಕ್ಕೆ ಬ್ರ್ಯಾಂಡ್‌ ರೂಪ ನೀಡಲಾಗಿದೆ. ಸಿರಿಧಾನ್ಯಗಳಿಗೆ ‘ಸಿರಿ ಕರ್ನಾಟಕ’ ಮತ್ತು ಸಾವಯವ ಪದಾರ್ಥಗಳಿಗೆ ‘ಶ್ರೇಷ್ಠ ಕರ್ನಾಟಕ’ ಎಂಬ ಬ್ರ್ಯಾಂಡ್‌ ಬಿಡುಗಡೆ ಮಾಡಲಾಯಿತು.

ಇದೇ ವೇಳೆ ಸಿರಿಧಾನ್ಯದ ಖಾದ್ಯಗಳ ವಿವರ ಮತ್ತು ತಯಾರಿಕೆ ವಿಧಾನಗಳ ಒಳಗೊಂಡಿರುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

ಹರಿದುಬಂದ ಜನಸಾಗರ:  ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಎರಡನೇ ದಿನ ಜನಸಾಗರವೇ ಹರಿದುಬಂದಿತ್ತು. ಬೆಳಿಗ್ಗೆಯಿಂದ ರಾತ್ರಿ ತನಕವೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಿರಿಧಾನ್ಯಗಳನ್ನು ಮುಗಿಬಿದ್ದು ಖರೀದಿಸಿದರು.

ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ಸವಿದ ಜನ, ತಯಾರಿಸುವ ಮಾಹಿತಿಯ ಕರಪತ್ರಗಳನ್ನು ಪಡೆದುಕೊಂಡರು. ಭಾನುವಾರ ಸಂಜೆ ಮೇಳ ಕೊನೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT