ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ಕರೆದು 15 ತಿಂಗಳಾದರೂ ನಡೆಯದ ಕೆಎಸ್‌ಆರ್‌ಟಿಸಿ ಪರೀಕ್ಷೆ

30 ಸಾವಿರ ಅಭ್ಯರ್ಥಿಗಳು ಮೇಲ್ವಿಚಾರಕೇತರ ಹುದ್ದೆಗಳಿಗೆ ಶುಲ್ಕ ಪಾವತಿ
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೇಲ್ವಿಚಾರಕೇತರ ದರ್ಜೆ–3 ಹುದ್ದೆಗಳಿಗೆ ಸುಮಾರು 30 ಸಾವಿರ ಅಭ್ಯರ್ಥಿಗಳು ಶುಲ್ಕ ಪಾವತಿಸಿ 15 ತಿಂಗಳು ಕಳೆದಿದ್ದರೂ ಇನ್ನೂ ಪರೀಕ್ಷೆ ನಡೆದಿಲ್ಲ.

ಸಹಾಯಕ ಲೆಕ್ಕಿಗ (71 ಹುದ್ದೆ), ಅಂಕಿ ಅಂಶ ಸಹಾಯಕ (41) ಮತ್ತು ಸಹಾಯಕ ಉಗ್ರಾಣ ಪಾಲಕ (34) ಹುದ್ದೆಗಳಿಗೆ 2016ರ ಜ. 6ರಂದು ಅರ್ಜಿ ಆಹ್ವಾನಿಸಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 2016ರ ಫೆ. 4 ಕೊನೆಯ ದಿನವಾಗಿತ್ತು. ಅದೇ ಸಂದರ್ಭದಲ್ಲಿ ಅರ್ಜಿ ಆಹ್ವಾನಿಸಿದ್ದ 200 ಕುಶಲಕರ್ಮಿ ಹುದ್ದೆಗಳಿಗೂ ಪರೀಕ್ಷೆ ನಡೆಸಿಲ್ಲ.

ಪ್ರತಿ ಹುದ್ದೆಗೆ (ಸಾಮಾನ್ಯ ವರ್ಗ) ₹ 400 ಶುಲ್ಕ ನಿಗದಿಪಡಿಸಲಾಗಿತ್ತು. ಕೆಲ ಅಭ್ಯರ್ಥಿಗಳು ಎರಡೆರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಆನ್‌ಲೈನ್‌ ಪರೀಕ್ಷೆ ನಡೆಸಲಾಗುವುದು ಎಂಬ ಮಾಹಿತಿ ನಿಗಮದ www.ksrtcjobs.com ವೆಬ್‌ಸೈಟ್‌ನ ಮುಖಪುಟದಲ್ಲಿ ಹಲವು ತಿಂಗಳಿಂದ ಇದೆ.

‘ಎರಡು ಹುದ್ದೆಗಳಿಗೆ ₹ 800 ಶುಲ್ಕ ಪಾವತಿಸಿ 15 ತಿಂಗಳಿಂದ ಕಾಯುತ್ತಿದ್ದೇನೆ. ಪರೀಕ್ಷೆ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಕೆಎಸ್‌ಆರ್‌ಟಿಸಿ ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುವುದಿಲ್ಲ. ಪರೀಕ್ಷೆ ನಡೆಸದಿದ್ದರೆ ಶುಲ್ಕ ವಾಪಸ್‌ ನೀಡಲಿ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯಕ ಲೆಕ್ಕಿಗ ಹುದ್ದೆಗಳಿಗೆ 20,872 ಅರ್ಜಿಗಳು, ಅಂಕಿ ಅಂಶ ಸಹಾಯಕ ಹುದ್ದೆಗಳಿಗೆ 5,010 ಅರ್ಜಿಗಳು ಮತ್ತು ಸಹಾಯಕ ಉಗ್ರಾಣ ಪಾಲಕ ಹುದ್ದೆಗಳಿಗೆ 3,928 ಅರ್ಜಿಗಳು ಸಲ್ಲಿಕೆಯಾಗಿವೆ.

‘ಪರೀಕ್ಷೆ ನಡೆಸಿಕೊಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಪ್ರಸ್ತಾವ ಸಲ್ಲಿಸಿದ್ದೆವು. ಅಲ್ಲದೆ, ₹ 1 ಕೋಟಿ ಪಾವತಿಸಿದ್ದೆವು. ಆದರೆ, ನೀಟ್‌ ಸೇರಿದಂತೆ ಪ್ರಮುಖ ಪರೀಕ್ಷೆ ಕೈಗೆತ್ತಿಕೊಂಡಿರುವುದರಿಂದ ಈ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹಣ ವಾಪಸ್‌ ನೀಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೂಡ ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ, ವಿಳಂಬವಾಗುತ್ತಿದೆ’ ಎಂದು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ (ನೇಮಕ) ಆರ್‌.ಕೆ.ಸೀತಾರಾಂ ತಿಳಿಸಿದರು.

‘ಟೆಂಡರ್‌ ಕರೆದು ಪರೀಕ್ಷೆ ನಡೆಸುವ ಉದ್ದೇಶ ಹೊಂದಿದ್ದು, ಸದ್ಯದಲ್ಲೇ ಪ್ರಕ್ರಿಯೆ ಆರಂಭಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ಮತ್ತೊಮ್ಮೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಮಾಡುತ್ತೇವೆ’ ಎಂದರು.

* ಪರೀಕ್ಷೆ ಆಯೋಜನೆ ಸಂಬಂಧ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ, ಇಷ್ಟೊಂದು ವಿಳಂಬವಾಗಿದೆ. ಮೇ, ಜೂನ್‌ನಲ್ಲಿ ಪರೀಕ್ಷೆ ನಡೆಸುತ್ತೇವೆ

–ಆರ್‌.ಕೆ.ಸೀತಾರಾಂ,
ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ (ನೇಮಕ), ಕೆಎಸ್‌ಆರ್‌ಟಿಸಿ

ಮುಖ್ಯಾಂಶಗಳು

* 2016ರ ಜನವರಿಯಲ್ಲಿ ಅರ್ಜಿ ಆಹ್ವಾನ
* ಪ್ರತಿ ಹುದ್ದೆಗೆ ₹ 400 ಶುಲ್ಕ
* ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT