ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್‌– ನೈಟ್‌ರೈಡರ್ಸ್‌ ಹಣಾಹಣಿ ಇಂದು

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಎರಡು ದಿನಗಳ ಹಿಂದೆಯಷ್ಟೇ ಡೆಲ್ಲಿ ಡೇರ್‌ ಡೆವಿಲ್ಸ್‌ ವಿರುದ್ಧ ಗೆಲುವಿನ ಸಿಹಿ ಸವಿದು ಆತ್ಮವಿಶ್ವಾಸದಿಂದ ಪುಟಿಯುತ್ತಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಈಗ ಮತ್ತೊಂದು ಸವಾಲಿಗೆ ಎದೆಯೊಡ್ಡಲು ಅಣಿಯಾಗಿದೆ.

ಭಾನುವಾರ ನಡೆಯುವ ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ನೈಟ್‌ರೈಡರ್ಸ್‌ ತಂಡ ಹೋದ ವರ್ಷ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ.

ಈ ಬಾರಿ ಒಂಬತ್ತು ಪಂದ್ಯಗಳನ್ನು ಆಡಿರುವ ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದ ತಂಡ ಏಳರಲ್ಲಿ ಗೆದ್ದಿದ್ದರೆ, ಸೋತಿರುವುದು ಎರಡರಲ್ಲಿ ಮಾತ್ರ. ಅನುಭವಿ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಸಾರಥ್ಯದ ಕೋಲ್ಕತ್ತ ತಂಡ ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ಸವಾಲು ಮೀರಿನಿಂತಿತ್ತು.

ನಾಯಕ ಗಂಭೀರ್‌, ಕರ್ನಾಟಕದ ರಾಬಿನ್‌ ಉತ್ತಪ್ಪ ಮತ್ತು ಮನೀಷ್‌ ಪಾಂಡೆ ಅವರನ್ನು ಹೊಂದಿರುವ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ.
ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡಿ ರುವ ಇವರು ಈ ಬಾರಿಯ ಟೂರ್ನಿ ಯಲ್ಲಿ ರನ್‌ ಮಳೆ ಸುರಿಸಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಗಂಭೀರ್‌ 9 ಪಂದ್ಯಗಳಿಂದ 62.66ರ ಸರಾಸರಿಯಲ್ಲಿ 376ರನ್‌ ಗಳಿಸಿದ್ದು ಹೆಚ್ಚು ರನ್‌ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಹಿಂದಿನ ಎರಡು ಪಂದ್ಯಗಳಲ್ಲಿ ಗರ್ಜಿಸಿದ್ದ ರಾಬಿನ್‌ ಖಾತೆಯಲ್ಲಿ 331ರನ್‌ಗಳು ಇವೆ. ಅವರು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿ ಕೊಂಡಿದ್ದಾರೆ. ಮನೀಷ್‌ ಕೂಡ 265ರನ್‌ ಗಳಿಸಿ ಗಮನ ಸೆಳೆದಿದ್ದಾರೆ. 

ವಾರ್ನರ್‌ ಪಡೆಯೂ ಬಲಿಷ್ಠ: ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಸಾರಥ್ಯದ ಸನ್‌ರೈಸರ್ಸ್‌ ಕೂಡ ಬಲಿಷ್ಠವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಏಳು ಬೀಳಿನ ಹಾದಿ ಸವೆಸಿರುವ ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ಈ ಬಾರಿಯ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವಾರ್ನರ್‌ ಪಡೆ, ನೈಟ್‌ರೈಡರ್ಸ್‌ಗೆ ಶರಣಾಗಿತ್ತು. ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಲಿ ಚಾಂಪಿಯನ್ನರಿಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಸನ್‌ರೈಸರ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ತವರಿನಲ್ಲಿ ಆಡಿದ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಇದು ಆಟಗಾರರ ಮನೋಬಲ  ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT