ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಉತ್ಸವ: ತಜ್ಞವೈದ್ಯರ ದಂಡು ಸಜ್ಜು

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಆರೋಗ್ಯ ಉತ್ಸವ’ದಲ್ಲಿ ಭಾಗವಹಿಸಲು ದೇಶದ ಹೆಸರಾಂತ ವೈದ್ಯಕೀಯ ತಜ್ಞರ ದಂಡು ಸಜ್ಜಾಗಿದೆ. 

‘ನಗರದ ಅರಮನೆ ಮೈದಾನದಲ್ಲಿ ಮೇ 4 ರಿಂದ 7ರವರೆಗೆ ನಡೆಯಲಿರುವ ವೈದ್ಯಕೀಯ ಕ್ಷೇತ್ರದ ಅಪೂರ್ವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲು ವೈದ್ಯಕೀಯ ರಂಗದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ತಜ್ಞರು ಉತ್ಸಾಹ ತೋರಿಸಿದ್ದಾರೆ. ಅನೇಕರು ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ’ ಎಂದು  ಉತ್ಸವದ ನಿರ್ದೇಶಕ ದೀಪಕ್‌ ತಿಮ್ಮಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಬೈನ ಹೆಸರಾಂತ ಸುರೂಪ ತಜ್ಞ ಡಾ.ದಾಮಿ ಅವರು ಸುರೂಪ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ’ ಎಂದು ಅವರು ತಿಳಿಸಿದರು.

ಅಂತ್ಯ ಕಾಲದ ಆರೈಕೆ:‘ಅಂತ್ಯ ಕಾಲದ ಆರೈಕೆಯ ಮಹತ್ವದ ಬಗ್ಗೆ  ಡಾ.ರೂಪ್‌ ಗುರ್‌ಸಹಾನಿ ಚರ್ಚಿಸಲಿದ್ದಾರೆ. ಬದುಕಿನ ಕೊನೆಯ ದಿನಗಳನ್ನು ಎಣಿಸುತ್ತಿರುವವರ ಆರೋಗ್ಯ  ಕಾಳಜಿಗೆ ಸಂಬಂಧಿಸಿದ ಸೌಕರ್ಯಗಳು, ಇಂತಹ ರೋಗಿಗಳ ಆರೈಕೆ ಕುರಿತು ವೈದ್ಯರು ಏನೆಲ್ಲ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂಬ ಬಗ್ಗೆ ಅವರು ಸಲಹೆ ನೀಡಲಿದ್ದಾರೆ’ ಎಂದರು.

ವೈದ್ಯಕೀಯ ಯೋಗ: ‘ಇತ್ತೀಚಿನ ದಿನಗಳಲ್ಲಿ ಯೋಗ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅನೇಕ ರೋಗಗಳನ್ನೂ ಯೋಗಾಭ್ಯಾಸದ ಮೂಲಕವೂ ಗುಣಪಡಿಸಬಹುದು. ಅನೇಕ ಗಣ್ಯರಿಗೆ ಯೋಗ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಡಾ.ಯೋಗಿ ಅನೂಪ್‌ ಅವರು ವೈದ್ಯಕೀಯ ಯೋಗದ ಮಾತನಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.  

‘ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಡಾ.ಸುದರ್ಶನ ಬಲ್ಲಾಳ್‌ ಅವರು ಜೀವನ ಶೈಲಿಯಿಂದ ಬರುವ ಕಾಯಿಲೆಗಳ ಬಗ್ಗೆ ಹಾಗೂ ನಮ್ಮ ದೇಶದ ಭವಿಷ್ಯದ ಆರೋಗ್ಯ ಸೇವೆ ಕುರಿತು ಉಪನ್ಯಾಸ ನೀಡಲಿದ್ದಾರೆ.

ಡಾ.ಪ್ರಶಾಂತ ಕೇಸರಿ ಅವರು ಆರೋಗ್ಯ ಕ್ಷೇತ್ರದಲ್ಲಿನ ವೃತ್ತಿ ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪಘಾತ ಚಿಕಿತ್ಸೆ ಬಗ್ಗೆ ಡಾ.ಸುಧೀರ್ ಪೈ, ವೈದ್ಯರು ಒತ್ತಡವನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಡಾ.ಪಂಕಜಾ ಸಲಹೆ ನೀಡಲಿದ್ದಾರೆ’  ಎಂದರು.

‘ವೈದ್ಯಕೀಯ ಶಿಕ್ಷಣದ ಬಗ್ಗೆಯೂ ಸಂವಾದ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸಚ್ಚಿದಾನಂದ ಅವರು ವಿಚಾರ ಮಂಡಿಸಲಿದ್ದಾರೆ. ಡಾ.ಶ್ರೀನಿವಾಸ ಗೌಡ, ಡಾ.ಕೆ.ಎಸ್‌.ನಾಗೇಶ್‌ ಹಾಗೂ ಡಾ.ಡಿ.ಕೆ. ಶ್ರೀನಿವಾಸ್‌ ಭಾಗವಹಿಸಲಿದ್ದಾರೆ. ವೈದ್ಯ ಸೇವೆಯ ಹಾಸ್ಯಪ್ರಜ್ಞೆ ಎಂಬ ವಿಶೇಷ ಗೋಷ್ಠಿಯನ್ನೂ ಏರ್ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವೈದ್ಯ– ರೋಗಿ ಸಂಬಂಧ: ‘ವೈದ್ಯರು ಹಾಗೂ ರೊಗಿಗಳ ನಡುವಿನ ಸಂಬಂಧದ ಬಗ್ಗೆ ವಿಶೇಷ ಗೋಷ್ಠಿ ನಡೆಯಲಿದೆ. ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ಡಾ.ಸುದರ್ಶನ ಬಲ್ಲಾಳ್‌, ಫೋರ್ಟಿಸ್‌ ಆಸ್ಪತ್ರೆಯ ಡಾ.ವಿವೇಕ ಜವಳಿ ಹಾಗೂ ಡಾ.ರಮೇಶ್‌ ಭಾಗವಹಿಸಲಿದ್ದಾರೆ’ ಎಂದರು. 

ವೈದ್ಯಕೀಯ ಜಾಥಾ: ಉತ್ಸವದ ಅಂಗವಾಗಿ ಮೇ 4ರಂದು ಅರಮನೆ ಮೈದಾನದವರೆಗೆ ಜಾಥಾ ನಡೆಯಲಿದೆ. ವೈಷ್ಣವಿ ನಾಟ್ಯಶಾಲೆಯವರು ವಿಶೇಷ ನಾಟ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.  

ಸ್ಪರ್ಧೆಗಳು: ಮಕ್ಕಳಿಗೆ ಪೇಂಟಿಂಗ್‌, ಕ್ವಿಜ್‌ ಹಾಗೂ ಪ್ರಬಂಧ ಸ್ಪರ್ಧೆಗಳು ನಡೆಯಲಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ  ಕ್ವಿಜ್‌ ಏರ್ಪಡಿಸಲಾಗಿದೆ. 

ಟಿ.ವಿ.ಹೌಸ್ ನೆಟ್ ವರ್ಕ್ ಸಂಸ್ಥೆಯು ರಾಜ್ಯ ಆರೋಗ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಈ ಉತ್ಸವವನ್ನುಆಯೋಜಿಸುತ್ತಿದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’  ಪತ್ರಿಕೆಗಳು ಈ ಉತ್ಸವಕ್ಕೆ ಮಾಧ್ಯಮ ಸಹಯೋಗ ಒದಗಿಸಲಿವೆ.

ವೈದ್ಯ ಪದ್ಧತಿ ಸಂವಾದ
‘ಉತ್ಸವದಲ್ಲಿ ಆಧುನಿಕ ವೈದ್ಯಪದ್ಧತಿ ಹಾಗೂ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಕುರಿತ ಸಂವಾದ ಏರ್ಪಡಿಸಲಾಗಿದೆ. ಹೋಮಿಯೋಪಥಿ ಕುರಿತು ಡಾ.ಬಿ.ಟಿ.ರುದ್ರೇಶ್‌, ಆಯುರ್ವೇದ ಕ್ಷೇತ್ರದ ಬಗ್ಗೆ ಡಾ.ರವೀಂದ್ರ, ಯುನಾನಿ ಚಿಕಿತ್ಸೆ ಬಗ್ಗೆ  ಯುನೆಸ್ಕೊ ಜೊತೆ ಕೆಲಸ ಮಾಡಿರುವ ಡಾ.ಅಮೀನಾ ಅಥೆರ್‌ ಮಾತನಾಡಲಿದ್ದಾರೆ’ ಎಂದು ದೀಪಕ್‌ ತಿಳಿಸಿದರು.

‘ಜ್ವರ ಗೆಳೆಯನೋ? ವೈರಿಯೋ?’
ನಾನಾ ನಮೂನೆಯ ಜ್ವರಗಳ ಬಗ್ಗೆ ಮೈಕ್ರೊಲ್ಯಾಬ್ಸ್‌ ಕಂಪೆನಿ ಸಹಯೋಗದಲ್ಲಿ ವಿಶೇಷ ಗೋಷ್ಠಿ ಏರ್ಪಡಿಸಲಾಗಿದೆ. ‘ಜ್ವರ ಗೆಳೆಯನೋ? ವೈರಿಯೋ?’ ಎಂಬ ಬಗ್ಗೆ ಡಾ.ಎಸ್‌.ನಾಗಭೂಷಣ್ , ಡಾ.ಎನ್‌.ಜ್ಞಾನಮೂರ್ತಿ, ಡಾ.ಎಂ.ರವಿಶಂಕರ ಹಾಗೂ ಡಾ.ರಘುರಾಮಯ್ಯ   ಜಿಜ್ಞಾಸೆ ನಡೆಸಲಿದ್ದಾರೆ.

ಮಾಹಿತಿಗೆ ಆ್ಯಪ್‌
‘ಉತ್ಸವದ ವಸ್ತುಪ್ರದರ್ಶನ ಮಳಿಗೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ವಿಶೇಷ ಆ್ಯಪ್‌ ಸಿದ್ಧಪಡಿಸಲಾಗಿದೆ. ಮಳಿಗೆಗಳ ಕುರಿತ ಸಂಪೂರ್ಣ ವಿವರಗಳು ಈ ಆ್ಯಪ್‌ನಲ್ಲಿ ಲಭ್ಯ. ಉತ್ಸವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ತಪಾಸಣೆಗೆ ಸಮಯ ಗೊತ್ತುಪಡಿಸಿಕೊಳ್ಳುವುದಕ್ಕೂ ಆ್ಯಪ್‌ ನೆರವಾಗಲಿದೆ’ ಎಂದು ದೀಪಕ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT