ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

95 ದಿನಗಳ ಪ್ರವಾಸಕ್ಕೆ ಚಾಲನೆ

2019ರ ಚುನಾವಣೆ ಮೇಲೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಕಣ್ಣು
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ಜಮ್ಮು:  ದೇಶದಾದ್ಯಂತ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು  ವಿವಿಧ ರಾಜ್ಯಗಳಲ್ಲಿ ನಡೆಸಲಿರುವ 95 ದಿನಗಳ ಪ್ರವಾಸಕ್ಕೆ ಶನಿವಾರ ಜಮ್ಮುವಿನಲ್ಲಿ ಚಾಲನೆ ದೊರೆತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರವಾಸದ ಸಂದರ್ಭದಲ್ಲಿ ಅಮಿತ್‌ ಷಾ ಕಾರ್ಯತಂತ್ರ ಹೆಣೆಯಲಿದ್ದಾರೆ. ಅಲ್ಲದೇ, 2014ರ ಚುನಾವಣೆಯಲ್ಲಿ ಪಕ್ಷ ಸೋತಿರುವ 120 ಕ್ಷೇತ್ರಗಳಲ್ಲಿ ಜಯಗಳಿಸಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆಯೂ ಗಮನ ನೀಡಲಿದ್ದಾರೆ. ಪ್ರವಾಸ ಕೈಗೊಳ್ಳಲಿರುವ ರಾಜ್ಯಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ರಾಜಕೀಯವಾಗಿ ಮಹತ್ವ ಪಡೆದಿರುವ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡುವುದಾಗಿ ಅಮಿತ್‌ ಷಾ ಹೇಳಿದ್ದಾರೆ.

‘ಕಳೆದ ಚುನಾವಣೆಯಲ್ಲಿ ಸೋತಿರುವ 120 ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಹೆಚ್ಚು ಗಮನ ನೀಡಲು ನಿರ್ಧರಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಪಕ್ಷದ ಬಲವನ್ನು ವೃದ್ಧಿಸುವುದು, ಪಕ್ಷದ ಸಿದ್ಧಾಂತವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಮತ್ತು ದೇಶದಾದ್ಯಂತ  ಮತದಾರರ ಮನಸ್ಸನ್ನು ಗೆಲ್ಲುವುದರ ಬಗ್ಗೆ   ಪ್ರವಾಸದಲ್ಲಿ ಒತ್ತು ನೀಡಲಿದ್ದೇನೆ’ ಎಂದು ಷಾ ಹೇಳಿದ್ದಾರೆ.

ಅಮಿತ್‌ ಷಾ, ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ ಹೆಚ್ಚು ಪ್ರಾಮುಖ್ಯ ನೀಡಿದ್ದಾರೆ. ಈ ರಾಜ್ಯಗಳಲ್ಲಿ ಒಟ್ಟು 102 ಲೋಕಸಭಾ ಕ್ಷೇತ್ರಗಳಿದ್ದು, ಬಿಜೆಪಿಯು 2014ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು.
ದೀನ ದಯಾಳ್‌ ಉಪಾಧ್ಯಾಯ ಅವರ 101ನೇ ಜನ್ಮ ದಿನವಾದ ಸೆಪ್ಟೆಂಬರ್‌ 25ರಂದು ಪ್ರವಾಸ ಕೊನೆಗೊಳ್ಳಲಿದೆ.

ಭಾರಿ ಸಿದ್ಧತೆ: ಬಿಜೆಪಿಯು ಸುಮಾರು 3.25 ಲಕ್ಷ ಕಾರ್ಯಕರ್ತರನ್ನು ಸಜ್ಜುಗೊಳಿಸಿದ್ದು, ಇವರು 15 ದಿನಗಳಿಂದ ಒಂದು ವರ್ಷದ ಅವಧಿವರೆಗೆ ಪೂರ್ಣಕಾಲಿಕವಾಗಿ ಪಕ್ಷದ ಕೆಲಸ ಮಾಡಲು ಸಿದ್ಧರಾಗಿದ್ದಾರೆ.

ಇವರಲ್ಲದೇ, 600 ಮಂದಿ ಪೂರ್ಣಕಾಲಿಕ ಕಾರ್ಯಕರ್ತರೂ ಪಕ್ಷಕ್ಕೆ ಸೇರಿದ್ದಾರೆ. ಇವರಲ್ಲಿ ಪ್ರತಿಯೊಬ್ಬರನ್ನೂ ಒಂದೊಂದು ಲೋಕಸಭಾ ಕ್ಷೇತ್ರಕ್ಕೆ ನಿಯೋಜಿಸಲಾಗುವುದು ಎಂದು ಷಾ ಹೇಳಿದ್ದಾರೆ. ಪಕ್ಷವು ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಮತಗಳಿಕೆ ಹೆಚ್ಚಿಸಲೂ ಅವರು ಯೋಜನೆ ರೂಪಿಸಿದ್ದಾರೆ.

ಈ ಉದ್ದೇಶಕ್ಕಾಗಿ ಕಾರ್ಯಕರ್ತರ ತಂಡಗಳನ್ನು ರಚಿಸಿ ಅವುಗಳಿಗೆ ತಲಾ ಐದೈದು ಕ್ಷೇತ್ರಗಳ ಜವಾಬ್ದಾರಿ ನೀಡಲಿದ್ದಾರೆ. 2015–16ರ ಅವಧಿಯಲ್ಲಿ ಪಕ್ಷದ ಸದಸ್ವತ್ವ ಪಡೆದಿರುವ 11 ಕೋಟಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮತಗಟ್ಟೆ ಮಟ್ಟದ ಚಟುವಟಿಕೆಗಳಲ್ಲಿ ತೊಡಗುವಂತೆ ಅವರಿಗೆ ಪಕ್ಷವು ಮನವಿ ಮಾಡಲಿದೆ ಎಂದು ಷಾ ವಿವರಿಸಿದ್ದಾರೆ.

ಪಕ್ಷದ ಪುನರ್‌ರಚನೆ
ಪಕ್ಷದ ಹಲವು ಪದಾಧಿಕಾರಿಗಳು ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿವುದರಿಂದ, ಪಕ್ಷವನ್ನು ಪುನರ್‌ರಚಿಸುವ ಸುಳಿವನ್ನೂ ಷಾ  ನೀಡಿದ್ದಾರೆ.

ತನ್ನ ನೆಲೆಯನ್ನು ಮತ್ತಷ್ಟು ವಿಸ್ತರಿಸುವ ಬಿಜೆಪಿಯ ಯೋಚನೆ ಬಗ್ಗೆ ಮೈತ್ರಿ ಪಕ್ಷಗಳು ಭಯಗೊಂಡಿವೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ.

ದೇಶದಾದ್ಯಂತ ಪಕ್ಷವನ್ನು ಬೆಳೆಸುವುದು ಅಧ್ಯಕ್ಷರಾಗಿ ತಮ್ಮ ಕರ್ತವ್ಯ. ಮುಂದಿನ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ 120 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಲ್ಲ ಎಂದು ಷಾ ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

* ಬಂಗಾಳ, ಒಡಿಶಾ, ತೆಲಂಗಾಣ ಕೇರಳಕ್ಕೆ ಆದ್ಯತೆ
* ಪಕ್ಷ ಅಸ್ತಿತ್ವ ಇಲ್ಲದ ರಾಜ್ಯಗಳ ಮೇಲೆ ಕಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT