ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿಯು ‘ಕಾಯಕ ದಿನ’ವಾಗಲಿ: ಅರವಿಂದ ಜತ್ತಿ

Last Updated 29 ಏಪ್ರಿಲ್ 2017, 19:36 IST
ಅಕ್ಷರ ಗಾತ್ರ

ನವದೆಹಲಿ:  ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳಂತಹ ಅನಿಷ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿ, 900 ವರ್ಷಗಳ ಹಿಂದೆಯೇ ಸಮಾನತೆಯನ್ನು ಪ್ರತಿಪಾದಿಸಿದ ಬಸವೇಶ್ವರರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವಂತಾಗಬೇಕು.

ಹೀಗೆ ಹೇಳಿದವರು ರಾಷ್ಟ್ರದ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅರವಿಂದ ಜತ್ತಿ.

ಭಾರತದ ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ದಿವಂಗತ ಬಿ.ಡಿ. ಜತ್ತಿ ಅವರ ಪುತ್ರ ಅರವಿಂದ, 1964ರಲ್ಲಿ ತಂದೆ ಸ್ಥಾಪಿಸಿದ್ದ ಬಸವ ಸಮಿತಿಯನ್ನು ಮುನ್ನಡೆಸಿಕೊಂಡು ಬಂದಿದ್ದು, ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣನ ಜಯಂತಿಯನ್ನು ‘ಕಾಯಕ ದಿನ’ವನ್ನಾಗಿ ಘೋಷಿಸಿ, ಅಂದು ಪ್ರತಿಯೊಬ್ಬ ನಾಗರಿಕ ನಿಗದಿಗಿಂತ ಒಂದು ಗಂಟೆ ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸಬೇಕು’ ಎಂಬ ಬೇಡಿಕೆಯನ್ನು ಇರಿಸಿದ್ದಾರೆ.

ತಂದೆಯವರ ಕಾಲಾನಂತರ ಪ್ರತಿ ವರ್ಷವೂ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸುತ್ತ, ಬಸವಣ್ಣನ ತತ್ವಾದರ್ಶಗಳನ್ನು ದಶದಿಕ್ಕುಗಳಿಗೆ ಪಸರಿಸುವ ಕೆಲಸವನ್ನು ಮಾಡುತ್ತಿರುವ ಇವರು, ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರ ವಚನಗಳ ಸಂಪುಟವು 23 ಭಾಷೆಗಳಿಗೆ ಅನುವಾದಗೊಳ್ಳುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಸಂಪುಟವನ್ನು ಹೊರತರಲು ಪಟ್ಟ ಶ್ರಮ, ಎದುರಾದ ಅಡೆತಡೆ, ಸಾರ್ಥಕ ಭಾವದ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

* ವಚನಗಳ ಅನುವಾದ ಕಾರ್ಯಕ್ಕೆ ಪ್ರೇರಣೆಯಾಗಿದ್ದು ಯಾರು?
‘ವಚನ ಸಾಹಿತ್ಯ ಪಿತಾಮಹ’ ಎಂದೇ ಹೆಸರಾಗಿದ್ದ ಫ.ಗು. ಹಳಕಟ್ಟಿ ಅವರು ನಿಧನರಾದ ಒಂದು ವಾರದೊಳಗೇ ಬಿ.ಡಿ. ಜತ್ತಿ ಅವರು ಆರಂಭಿಸಿದ ಬಸವ ಸಮಿತಿಯು ಆ ದಿನಗಳಲ್ಲಿ ಬಸವಣ್ಣನವರ ವಚನಗಳ ಸುಧೆಯನ್ನು ನಾಡಿನಾದ್ಯಂತ ಪ್ರಚುರಪಡಿಸಿದ ಸಂಸ್ಥೆಯಾಗಿತ್ತು. ಎಲ್ಲ  ಭಾಷೆಗಳಿಗೂ ವಚನಗಳನ್ನು ಅನುವಾದಿಸಿ ಅವುಗಳ ಮಹತ್ವವನ್ನು ತಿಳಿಸಬೇಕು ಎಂದು ತಂದೆಯವರು ಅಂದುಕೊಂಡಿದ್ದರು. 10 ವರ್ಷಗಳ ಹಿಂದೆ ಧಾರವಾಡದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರ ಮನೆಗೆ ಹೋದಾಗ ಅವರೇ ಅನುವಾದದ ಆಲೋಚನೆ ಇರುವುದನ್ನು ನನ್ನಲ್ಲಿ ಹೇಳಿದರು. ಅವರೇ ಈ ಕಾರ್ಯಕ್ಕೆ ಪ್ರೇರಣೆ. 173 ವಚನಕಾರರ ಒಟ್ಟು 2,500 ವಚನಗಳ ಅನುವಾದದ ಶ್ರೇಯಸ್ಸು ಡಾ.ಕಲಬುರ್ಗಿ ಅವರಿಗೇ ಸಲ್ಲಬೇಕು.

* ಈ ಕಾರ್ಯದಲ್ಲಿ ಡಾ.ಕಲಬುರ್ಗಿ ಅವರ ಪಾತ್ರವೇನು?
ಶರಣರ ಈ ವಚನಗಳನ್ನು ಅನುವಾದಿಸುವ ಕಾರ್ಯವನ್ನು ಅವರ ಹೆಗಲಿಗೇ ಹಾಕಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಖಾತೆ ಹೊಂದಿದ್ದ ಉಪ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಕಾರ್ಯಕ್ಕೆ ಸರ್ಕಾರದಿಂದ ₹ 1 ಕೋಟಿ ಮಂಜೂರು ಮಾಡಿದರು. ಸಂಸ್ಥೆಯೂ ₹ 1.50 ಕೋಟಿ ವಿನಿಯೋಗಿಸಿದ್ದು, ಒಟ್ಟು ₹ 2.50 ಕೋಟಿ ವೆಚ್ಚದೊಂದಿಗೆ 23 ಭಾಷೆಗಳಲ್ಲಿ ಬೃಹತ್‌ಗ್ರಂಥ ಸ್ವರೂಪದ ಸಂಪುಟ ಹೊರಬಂದಿದೆ.

* ಅನುವಾದ ಪ್ರಕ್ರಿಯೆಯಲ್ಲಿ ಅಡಚಣೆ ಆಯಿತೇ?
ಸಾಮಾನ್ಯ ಗ್ರಂಥಗಳ ಅನುವಾದಕ್ಕೂ ಶರಣರ ವಚನಗಳ ಅನುವಾದಕ್ಕೂ ವ್ಯತ್ಯಾಸವಿದೆ. ಗೂಢಾರ್ಥದ ಮೂಲಕ ಜೀವನಮೌಲ್ಯ, ಭಕ್ತಿ, ಮುಕ್ತಿ, ಕಾಯಕ, ಯೋಗ, ಕಾಲ, ದೇಶ, ಏಕತೆ, ಸಾಮರಸ್ಯ, ಸಮಾನತೆ, ಸಂಬಂಧಗಳ ಮಹತ್ವವನ್ನು ಸಾರುವ ವಚನಗಳನ್ನು ಆಯಾ ಭಾಷೆಯ ಜಾಯಮಾನಕ್ಕೆ ಒಗ್ಗಿಸುವ ಕಾರ್ಯಕ್ಕೆ ಪರಿಪಕ್ವ ಅನುವಾದಕರೇ ಬೇಕು. ಅವರ ಆಯ್ಕೆಯ ಕಾರ್ಯವನ್ನೂ ಕಲಬುರ್ಗಿ ಅವರೇ ಮಾಡಿದರು. ಅನುವಾದದ ಕಾರ್ಯ ಪೂರ್ಣಗೊಳಿಸಿದ ಒಂದು ವಾರದ ನಂತರ ಅವರು ಹತ್ಯೆಗೀಡಾದರು. ಸಾಯುವ ಮುನ್ನ ತಮ್ಮ ಕೆಲಸ ಮುಗಿಸಿದ ಅವರು, ‘ನನ್ನ ಜೀವಿತಾವಧಿಯ ಶ್ರೇಷ್ಠ ಕಾರ್ಯ ಮುಗಿಯಿತು’ ಎಂದೇ ನನ್ನೊಂದಿಗೆ ಕೊನೆಯದಾಗಿ ಮಾತನಾಡಿದಾಗ ಹೇಳಿದ್ದರು.

* ವಚನಗಳ ಬಗ್ಗೆ ಅನುವಾದಕರ ಅನಿಸಿಕೆ?
ಮೊದಲು ಕನ್ನಡವನ್ನೂ ಬಲ್ಲ ಅನ್ಯ ಭಾಷೆಗಳ ಸಾಹಿತಿಗಳ ನೆರವಿನೊಂದಿಗೆ ಭಾರತದ 10 ಭಾಷೆಗಳಿಗೆ ಅನುವಾದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆವು. ನಂತರ ಆಯಾ ಸಂಪುಟಗಳೇ ಸಂಪರ್ಕ ಭಾಷೆಗಳಾಗಿ ಬಳಕೆಯಾಗಿ ಇತರ 23 ಭಾಷೆಗಳಿಗೆ ಹೋದವು. ಶರಣರ ವಚನಗಳಲ್ಲಿನ ಸಾರವನ್ನು ಮೊದಲು ಅರಿತ ಅನುವಾದಕರು, ಅದೊಂದು ಅಮೂಲ್ಯವಾದ ಸಾಹಿತ್ಯಸಿರಿ ಎಂದೇ ಭಾವಿಸಿದರು. ಅನುವಾದ ಕಾರ್ಯವನ್ನು ಶ್ರೇಷ್ಠ ಎಂದೇ ಅಂದುಕೊಂಡರು. ಈ ವಚನಗಳು ಆಯಾ ರಾಜ್ಯಗಳಲ್ಲಿ ಮನೆಮಾತಾದಲ್ಲಿ ಅಲ್ಲಿನ ಸಂಸ್ಕೃತಿ, ಆಲೋಚನಾ ಲಹರಿಯೇ ಬದಲಾಗಲಿದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT