ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಕಲ್ಯಾಣದ ಸ್ಮಾರಕ, ಗುಹೆ ಅಭಿವೃದ್ಧಿಗೆ ₹15 ಕೋಟಿ

Last Updated 29 ಏಪ್ರಿಲ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಬೀದರ್‌ ಜಿಲ್ಲೆಯ ಬಸವ ಕಲ್ಯಾಣದ ಸ್ಮಾರಕ ಹಾಗೂ ಗುಹೆಗಳ ಅಭಿವೃದ್ಧಿಗೆ ₹15 ಕೋಟಿ ಠೇವಣಿ ಇಡಲಾಗಿದೆ. ಅದರ ಬಡ್ಡಿಯಿಂದ ಅಭಿವೃದ್ಧಿ ಕಾರ್ಯ ನಡೆಸುತ್ತೇವೆ’ ಎಂದು ಸಾರ್ವಜನಿಕ ಉದ್ಯಮ ಮತ್ತು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಸವ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೂಡಲ ಸಂಗಮದಂತೆ ಬಸವ ಕಲ್ಯಾಣವನ್ನೂ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು. ಅದನ್ನು ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸ್ತಾವವನ್ನು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿತ್ತು. ಹೀಗಾಗಿ ಅದರ ಸಮಗ್ರ ಅಭಿವೃದ್ಧಿಗಾಗಿ ಸಾಹಿತಿ ಗೊ.ರು. ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ 2–3 ಸಭೆಗಳನ್ನು ನಡೆಸಿದ್ದು, ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಬಳಿಗೆ ನಿಯೋಗವನ್ನು ಕರೆದುಕೊಂಡು ಹೋಗುತ್ತೇನೆ’ ಎಂದರು.

ಎರಡು ತಿಂಗಳಲ್ಲಿ ವರದಿ ಸಲ್ಲಿಕೆ: ಗೊ.ರು.ಚನ್ನಬಸಪ್ಪ ಮಾತನಾಡಿ, ‘ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸುತ್ತೇವೆ. ಅದನ್ನು ತ್ವರಿತಗತಿಯಲ್ಲಿ ಕಾರ್ಯಗತಗೊಳಿಸಬೇಕು’ ಎಂದರು.

‘ಶಾಲಾ ಪಠ್ಯಗಳಲ್ಲಿ ವಚನಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಬಸವಣ್ಣ ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿ ಎಂಬ ಕಳಂಕವನ್ನು ಕೆಲವರು ಅಂಟಿಸಿಬಿಟ್ಟಿದ್ದಾರೆ. ಅದನ್ನು ತೊಡೆದು ಹಾಕಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ‘ಬಸವ ಜಯಂತಿ ಕಾರ್ಯ ಕ್ರಮದಲ್ಲೇ ಮಹಾರಾಷ್ಟ್ರದ ಸಿಂಧೂ ತಾಯಿ ಸಪ್ಕಾಳ್‌ ಅವರಿಗೆ ಬಸವ ಪ್ರಶಸ್ತಿಯನ್ನು ನೀಡಬೇಕಿತ್ತು. ಆದರೆ, ಮುಖ್ಯಮಂತ್ರಿ ವಿದೇಶ ಪ್ರವಾಸದಲ್ಲಿ ಇರುವುದರಿಂದ ಮೇ 3ರಂದು ನಡೆಯುವ ಕಾರ್ಯಕ್ರಮದಲ್ಲಿ  ಪ್ರದಾನ ಮಾಡುತ್ತೇವೆ’ ಎಂದರು. ಬಸವಣ್ಣ ಅವರ ವಚನಗಳ ಕುರಿತು ಲೇಖಕ ಬಸವರಾಜ ಸಬರದ ಉಪನ್ಯಾಸ ನೀಡಿದರು.

ಗಮನ ಸೆಳೆದ ಮೆರವಣಿಗೆ: ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬಸವಣ್ಣ ಅವರ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಂದಿ ಕೋಲು, ಗಾರುಡಿ ಗೊಂಬೆ, ಕರಡಿ ವಾದ್ಯ ಸೇರಿದಂತೆ ವಿವಿಧ ಜನಪದ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು.

ನಗರದ ವಿವಿಧೆಡೆ ಬಸವ ಜಯಂತಿ
ಬೆಂಗಳೂರು:
ನಗರದ ವಿವಿಧ ಸಂಸ್ಥೆಗಳು ಬಸವ ಜಯಂತಿಯನ್ನು ಶನಿವಾರ ಆಚರಿಸಿದವು. ವಚನ ಜ್ಯೋತಿ ಬಳಗದ ವತಿಯಿಂದ ಹೊಸಹಳ್ಳಿಯಲ್ಲಿರುವ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಬಸವ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರ ಉತ್ಸವ

ಮೂರ್ತಿ ಹಾಗೂ ವಚನ ಸಂಪುಟಗಳನ್ನು ಒಳಗೊಂಡ ಮುತ್ತಿನ ಪಲ್ಲಕ್ಕಿಯ ಮೆರವಣಿಗೆಗೆ ಸಂಶೋಧಕ ಡಾ.ಚಿದಾನಂದ ಮೂರ್ತಿ ಚಾಲನೆ ನೀಡಿದರು. ಮುತ್ತಿನಪಲ್ಲಕ್ಕಿಯು ವಿಜಯನಗರದಿಂದ ಹೊರಟು, ಮೈಸೂರು ರಸ್ತೆ ಮೂಲಕ ಪುರಭವನದವರೆಗೂ ಸಾಗಿತು.

ವೀರಗಾಸೆ, ಡೊಳ್ಳುಕುಣಿತ, ನಂದಿಧ್ವಜ, ಕಂಸಾಳೆ ಕಲಾವಿದರ ಪ್ರದರ್ಶನ ಕಣ್ಮನ ಸೆಳೆಯಿತು. ಅಂಬೇಡ್ಕರ್‌ ಕಾಲೇಜ್‌ ಆಫ್‌ ಎಜುಕೇಷನ್‌: ಜೆ.ಸಿ.ನಗರದಲ್ಲಿರುವ ಕಾಲೇಜಿನಲ್ಲಿ ಬಸವ ಜಯಂತಿ ಹಾಗೂ ಅಂಬೇಡ್ಕರ್‌ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ಬಸವ ಸಹಸ್ರ ನಾಮಾವಳಿ: ಆರ್‌.ಟಿ. ನಗರದಲ್ಲಿರುವ ಸುಮಂಗಲಿ ಸೇವಾ ಆಶ್ರಮದಲ್ಲಿ ಶಿವಲೀಲಾ ಅವರಿಂದ ಬಸವ ಸಹಸ್ರ ನಾಮಾವಳಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT