ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಹೋರಾಟ ಭಾರತೀಯರ ಹೆಮ್ಮೆ: ಮೋದಿ

23 ಭಾಷೆಗಳಿಗೆ ಅನುವಾದಗೊಂಡ ವಚನ ಸಂಪುಟಗಳ ಲೋಕಾರ್ಪಣೆ
Last Updated 29 ಏಪ್ರಿಲ್ 2017, 19:46 IST
ಅಕ್ಷರ ಗಾತ್ರ

ನವದೆಹಲಿ: ‘ಶೋಷಣೆಗೆ ಒಳಗಾಗಿದ್ದ ಮಹಿಳೆಯರ ಸಮಾನತೆಗೆ, ಸಬಲೀಕರಣಕ್ಕೆ ಶ್ರಮಿಸಿದ ಬಸವಣ್ಣ, 12ನೇ ಶತಮಾನದಲ್ಲಿಯೇ ಬದಲಾವಣೆಗಾಗಿ ಹೋರಾಡಿರುವುದು ಭಾರತೀಯರೆಲ್ಲರೂ ಹೆಮ್ಮೆಪಡುವ ಸಂಗತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ಇಲ್ಲಿನ ವಿಜ್ಞಾನ ಭವನದಲ್ಲಿ ಶನಿವಾರ ಬಸವ ಸಮಿತಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ, 23 ಭಾಷೆಗಳಿಗೆ ಅನುವಾದಗೊಂಡ ವಚನ ಸಂಪುಟವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಭಾರತದ ಇತಿಹಾಸ ಕೇವಲ ಸೋಲು, ಗುಲಾಮಗಿರಿ, ಬಡತನ, ಅನಕ್ಷರತೆ, ಅತ್ಯಾಚಾರ ಮತ್ತು ಯುದ್ಧಗಳನ್ನು ಪ್ರತಿಬಿಂಬಿಸುವುದಿಲ್ಲ. ಬದಲಿಗೆ, ಸಮಸ್ಯೆಗಳಿಂದ ಹೊರಬರುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿರುವ ಮಹಾನ್‌ ವ್ಯಕ್ತಿಗಳ, ಶರಣರ  ಹೋರಾಟವನ್ನು ಸಾರುತ್ತದೆ ಎಂದು ಅವರು ತಿಳಿಸಿದರು.

‘ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವದ ಕುರಿತು ಪಾಶ್ಚಿಮಾತ್ಯರಿಗಿಂತ ನೂರಾರು ವರ್ಷ ಹಿಂದೆಯೇ ಆಲೋಚಿಸಿರುವ ಬಸವಣ್ಣನವರು, 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರತಿಷ್ಠಾಪಿಸಲು ಶ್ರಮಿಸಿದ ಮಹಾನ್‌ ದಾರ್ಶನಿಕ. ದಲಿತರು, ಶೋಷಿತ ಮಹಿಳೆಯರು, ಅಸ್ಪೃಶ್ಯರನ್ನು ಒಳಗೊಂಡ, ಜಗತ್ತಿನ ಮೊತ್ತಮೊದಲ ಸಂಸತ್‌ ವ್ಯವಸ್ಥೆ ಜಾರಿಗೊಳಿಸಿದ್ದ ಅವರು, ಜ್ಞಾನವು ದೇವರಿಗೆ ಸಮಾನವೆಂದು ಸಾರಿ ಅಜ್ಞಾನವನ್ನು ಹೊಡೆದೋಡಿಸಲು ಯತ್ನಿಸಿದರು’ ಎಂದು ಮೋದಿ ಬಣ್ಣಿಸಿದರು.

‘ಅನುಭವ ಮಂಟಪವನ್ನು ಸ್ಥಾಪಿಸಿದ್ದ ಬಸವಣ್ಣ, ಅಲ್ಲಿ ಎಲ್ಲ ವರ್ಗದ ಮಹಿಳೆಯರಿಗೆ ಮಾತನಾಡಲು ಮುಕ್ತ ಅವಕಾಶ ಒದಗಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಿಸಿ ಬಹುದೊಡ್ಡ ಆಂದೋಲನವನ್ನೇ ಹುಟ್ಟುಹಾಕಿದವರು. ದೇಹವೇ ದೇಗುಲ ಎಂದು, ಎಲ್ಲರೂ ನಮ್ಮವರು ಎಂದು ಕರೆದು, ಶ್ರಮದ ಮಹತ್ವವನ್ನೂ ಸಾರಿದ್ದಾರೆ. ಅವರ ತತ್ವಾದರ್ಶವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ಅವರು ಹೇಳಿದರು.

ಶರಣರ ವಚನಗಳ ಸಾರವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಅಗತ್ಯವಿದೆ. ಯುವ ಪೀಳಿಗೆಗೆ ಈ ವಚನಗಳ ಮಹತ್ವ ತಿಳಿಸಬೇಕಿದೆ. ಆನ್‌ಲೈನ್‌ನಲ್ಲಿ ಎಲ್ಲ ವಚನಗಳೂ ಲಭ್ಯವಾಗುವಂತೆ ನೋಡಿಕೊಂಡು, ವಚನಗಳನ್ನಾಧರಿಸಿದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರಚುರಪಡಿಸಬೇಕು ಎಂದು ಅವರು ಸಲಹೆ ನೀಡಿದರು.

ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು. ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ ಹಾಗೂ ಪ್ರಭುದೇವ ಚಿಗಟೇರಿ ಹಾಜರಿದ್ದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಸ್ವಾಗತಿಸಿದರು.

‘ತಂದೆಯ ಕನಸು ನನಸಾಗಿಸಿದ ಪುತ್ರ’
‘ರಾಜಕಾರಣಿಗಳು ಸದಾ ಕುರ್ಚಿಯತ್ತಲೇ ಗಮನ ಹರಿಸುತ್ತೇವೆ. ನಮ್ಮ ಪಕ್ಷಗಳ ಬಗ್ಗೆ ಆಲೋಚಿಸುತ್ತೇವೆ. ಅಗಲಿದ ರಾಜಕಾರಣಿಯೊಬ್ಬರ ಮಕ್ಕಳು ಅವರ ಕನಸನ್ನು ನನಸು ಮಾಡುವುದು ಎಂದರೆ, ಅವರಂತೆಯೇ ಕುರ್ಚಿಯ ಬಗ್ಗೆ ಆಲೋಚಿಸುವುದು ಎಂಬ ಅರ್ಥ ಈಗ ಇದೆ’ ಎಂದು ಪ್ರಧಾನಿ ಚಟಾಕಿ ಹಾರಿಸಿದರು.

ಶರಣರ ವಚನಗಳ ಸಂಪುಟವನ್ನು ಹೊರತರಬೇಕೆಂಬ ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಅವರ ಕನಸನ್ನು ಅವರ ಮಗ ಅರವಿಂದ್‌ ಜತ್ತಿ ಈಗ ಪೂರ್ಣಗೊಳಿಸಿದ್ದಾರೆ ಎಂದು ಕೊಂಡಾಡಿದರು. ಸಂಶೋಧಕ ದಿವಂಗತ ಡಾ.ಎಂ.ಎಂ. ಕಲಬುರ್ಗಿ ಅವರು ಈಗ ಹೊರಬಂದಿರುವ ವಚನಗಳ ಅನುವಾದ ಕಾರ್ಯಕ್ಕಾಗಿಯೇ ತಮ್ಮನ್ನು ಅರ್ಪಿಸಿಕೊಂಡಿದ್ದರು. ಅವರ ಆತ್ಮಕ್ಕೆ ಈಗ ಶಾಂತಿ ದೊರೆತಿರುತ್ತದೆ ಎಂದು ಸ್ಮರಿಸಿದರು.

ಸಭಿಕರ ಸಾಲಿನಲ್ಲಿ ಕುಳಿತಿದ್ದ ಡಾ.ಕಲಬುರ್ಗಿ ಅವರ ಕುಟುಂಬ ಸದಸ್ಯರ ಬಳಿ ಕಾರ್ಯಕ್ರಮ ಮುಗಿದ ನಂತರ ತೆರಳಿ ಮಾತನಾಡಿದ ಪ್ರಧಾನಿ, ಅವರಿಗೆ ಸಾಂತ್ವನ ಹೇಳಿದರು. ಶರಣರ ವಚನಗಳನ್ನು ಅನುವಾದ ಮಾಡಿದ ಎಲ್ಲ ಸಾಹಿತಿಗಳನ್ನು ಕಾರ್ಯಕ್ರಮದ ಆರಂಭಕ್ಕೆ ಮುನ್ನ ಭೇಟಿ ಮಾಡಿ ಅಭಿನಂದಿಸಿದರು.

‘ಅನಾಣ್ಯೀಕರಣ ಮತ್ತು ನೋಟು ರದ್ದತಿಯ ಮಹತ್ವವನ್ನು 12ನೇ ಶತಮಾನದಲ್ಲೇ ಪ್ರಸ್ತಾಪಿಸಿದ್ದ ಬಸವಣ್ಣ ಆ ಕುರಿತು ವಚನವನ್ನೂ ರಚಿಸಿದ್ದಾರೆ. ಆ ವಚನದ ಬಗ್ಗೆ ಮೊದಲೇ ಗೊತ್ತಿದ್ದಿದ್ದರೆ ನ. 8ರ ರಾತ್ರಿ ನೋಟು ರದ್ದತಿ ನಿರ್ಧಾರ ಪ್ರಕಟಿಸುವಾಗ ಆ ಬಗ್ಗೆ ಸಾರಿ ಹೇಳುತ್ತಿದ್ದೆ’ ಎಂದು ಮೋದಿ ಹೇಳಿದರು.

* ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಮಹತ್ವದ ಕುರಿತು ಪಾಶ್ಚಿಮಾತ್ಯರಿಗಿಂತ ನೂರಾರು ವರ್ಷ ಹಿಂದೆಯೇ ಬಸವಣ್ಣನವರು ಆಲೋಚಿಸಿದ್ದರು

-ನರೇಂದ್ರ ಮೋದಿ, ಪ್ರಧಾನಿ

ಪ್ರಧಾನಿ ಸಲಹೆ

* ಆನ್‌ಲೈನ್‌ನಲ್ಲಿ ವಚನಗಳು ಲಭ್ಯವಾಗಬೇಕು
* ವಚನಗಳನ್ನಾಧರಿಸಿದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಬೇಕು
* ಶರಣರ ವಚನಗಳ ಸಾರವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT