ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕನಸು ಹೊತ್ತು...

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾರತದ ಮಹಿಳಾ ಕ್ರಿಕೆಟ್‌ ಲೋಕ ಕಂಡ ಅಪ್ರತಿಮ ಸಾಧಕಿ ಮಿಥಾಲಿ ರಾಜ್‌.

17ನೇ ವಯಸ್ಸಿನಲ್ಲಿ ಕ್ರಿಕೆಟ್‌ ರಂಗಕ್ಕೆ ಅಡಿ ಇಟ್ಟ ಮಿಥಾಲಿ, ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ.

1999ರಲ್ಲಿ ಐರ್ಲೆಂಡ್‌ ವಿರುದ್ಧ ಆಡುವ ಮೂಲಕ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದ ಅವರು ಚೊಚ್ಚಲ ಪಂದ್ಯದಲ್ಲೇ ಶತಕದ (ಔಟಾಗದೆ 114) ಸಾಧನೆ ಮಾಡಿ ಕ್ರಿಕೆಟ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದರು. 2012ರಲ್ಲಿ ಲಖನೌದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿ (214), ಕರೆನ್‌ ರಾಲ್ಟನ್ಸ್‌ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದರು.

ಕೇವಲ ಆಟಗಾರ್ತಿಯಾಗಿ ಮಾತ್ರವಲ್ಲದೇ ನಾಯಕಿಯಾಗಿಯೂ ಭಾರತ ತಂಡವನ್ನು ಹಲವು ಟೂರ್ನಿಗಳಲ್ಲಿ ಪ್ರಶಸ್ತಿಯೆಡೆಗೆ ಮುನ್ನಡೆಸಿರುವ ಹೆಗ್ಗಳಿಕೆ ಹೊಂದಿರುವ ಇವರಿಗೆ ಅರ್ಜುನ ಮತ್ತು ಪದ್ಮಶ್ರೀ ಗೌರವಗಳೂ ದೊರೆತಿವೆ. ಈ ವರ್ಷದ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿರುವ ಅವರು ಹಲವು ವಿಷಯಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಈ ಬಾರಿಯೂ ತಂಡ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಇದರ ಬಗ್ಗೆ ಹೇಳಿ?

ಶ್ರೀಲಂಕಾದಲ್ಲಿ ನಡೆದಿದ್ದ  ಅರ್ಹತಾ ಟೂರ್ನಿಗೂ ಮುನ್ನ ಪ್ರಮುಖ ಆಟಗಾರ್ತಿಯರು ಗಾಯಗೊಂಡಿದ್ದರು. ಅವರ ಅನುಪಸ್ಥಿತಿಯಲ್ಲಿ  ಉಳಿದವರು ತುಂಬಾ ಚೆನ್ನಾಗಿ ಆಡಿದ್ದರು. ಹೀಗಾಗಿ   ಆಡಿದ ಎಂಟೂ ಪಂದ್ಯಗಳಲ್ಲೂ ಎದುರಾಳಿಗಳ ಸವಾಲು ಮೀರಿ ನಿಂತಿದ್ದೆವು. ಇದು  ಆಟ ಗಾರ್ತಿಯರ ಮನೋಬಲ ಹೆಚ್ಚುವಂತೆ ಮಾಡಿದೆ. ಈ ಬಾರಿ ಮತ್ತೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ.  ಮಹತ್ವದ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ.

* ನಾಯಕಿಯಾಗಿ ನಿಮ್ಮ ಮುಂದಿರುವ ಸವಾಲುಗಳೇನು?

ಇಂಗ್ಲೆಂಡ್‌ ನೆಲದಲ್ಲಿ ಆಡುವುದೇ ಬಹುದೊಡ್ಡ ಸವಾಲು. ವಿಶ್ವಕಪ್‌ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುವಾಗ ಸಹಜವಾಗಿಯೇ ಒತ್ತಡ ಇರುತ್ತದೆ. ವಿಶ್ವಕಪ್‌ಗೂ ಮುನ್ನ ನಾವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಅಲ್ಲಿ ಪ್ರಶಸ್ತಿ ಗೆದ್ದರೆ ವಿಶ್ವಾಸ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಎಲ್ಲರೂ ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಪ್ರಯತ್ನಿಸುತ್ತೇವೆ.

* ವಿಶ್ವಕಪ್‌ಗೆ ಸಿದ್ಧತೆ ಹೇಗೆ ನಡೆಯುತ್ತಿದೆ?

ಏಪ್ರಿಲ್‌ ತಿಂಗಳ ಆರಂಭದಲ್ಲಿ ಫಿಟ್ನೆಸ್‌ ತರಬೇತಿ ಮುಗಿಸಿದ್ದೇವೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೌಶಲ ಅಭಿವೃದ್ಧಿ ಶಿಬಿರ ನಡೆಯಲಿದೆ. ನೂತನ ಕೌಶಲಗಳನ್ನು ಕಲಿಯಲು  ಶಿಬಿರ  ನೆರವಾಗಲಿದೆ.

* ಆಸ್ಟ್ರೇಲಿಯಾದಲ್ಲಿ ಮಹಿಳೆಯರಿಗೆ ಬಿಗ್‌ಬ್ಯಾಷ್‌ ಲೀಗ್‌ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಭಾರತದಲ್ಲೂ ಮಹಿಳಾ ಲೀಗ್‌ ಆರಂಭಿಸಲು ಬಿಸಿಸಿಐ ಮುಂದಾಗಿದೆ. ಇದರಿಂದ ಏನಾದರೂ ಪ್ರಯೋಜನವಾಗಲಿದೆಯೇ?

ಬಿಗ್‌ಬ್ಯಾಷ್‌ ಲೀಗ್‌ ಆರಂಭಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್‌ (ಸಿಎ) ಮಹಿಳೆಯರಿಗೂ ಪುರುಷರಷ್ಟೇ ಪ್ರಾಧಾನ್ಯತೆ ನೀಡುವ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 

ಇದೇ ರೀತಿ ಭಾರತದಲ್ಲೂ ವನಿತೆಯರ ಕ್ರಿಕೆಟ್‌ನ  ಜನಪ್ರಿಯತೆ ಹೆಚ್ಚಿಸುವ ಕೆಲಸ ಆಗಬೇಕು. ಈ ದೃಷ್ಟಿಯಿಂದ ಐಪಿಎಲ್‌ ಮಾದರಿಯಲ್ಲಿ ಮಹಿಳಾ ಲೀಗ್‌  ಆರಂಭಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಬಹಳ ಅಗತ್ಯ. ಹಿಂದಿನ ಎರಡು ವರ್ಷಗಳಲ್ಲಿ ನಡೆದಿದ್ದ ಹಲವು ಟೂರ್ನಿಗಳಲ್ಲಿ  ನಾವು ಉತ್ತಮ ಸಾಮರ್ಥ್ಯ ತೋರಿದ್ದೇವೆ. ಆದರೆ ಐಸಿಸಿಯ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಗುಣಮಟ್ಟದ ಆಟ ಆಡಲು ಆಗುತ್ತಿಲ್ಲ.  

ಮುಖ್ಯವಾಗಿ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗಗನ ಕುಸುಮವಾಗಿದೆ. ಮಹಿಳಾ ಲೀಗ್‌  ಶುರುವಾದರೆ ಹೊಸ ಪ್ರತಿಭೆಗಳು ಪ್ರವರ್ಧ ಮಾನಕ್ಕೆ ಬರುತ್ತಾರೆ. ಆಗ ಆಟದ  ಗುಣಮಟ್ಟವೂ ಹೆಚ್ಚುತ್ತದೆ.

* 2005ರ ಬಳಿಕ ವಿಶ್ವಕಪ್‌ನಲ್ಲಿ ತಂಡ ಫೈನಲ್‌ ಪ್ರವೇಶಿಸಿಲ್ಲ. ಈ ಬಾರಿ ಯಾದರೂ ಪ್ರಶಸ್ತಿಯ ಕನಸು ಈಡೇರಬಹುದೇ?

ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಹೋದ ಬಾರಿ   ಸೂಪರ್‌ ಸಿಕ್ಸ್‌ ಹಂತಕ್ಕೆ ಅರ್ಹತೆ ಗಳಿಸಲು ಆಗಿರಲಿಲ್ಲ. ಹೀಗಾಗಿ ತುಂಬಾ ಬೇಸರವಾಗಿತ್ತು. ಈ ಬಾರಿ ಟೂರ್ನಿಯ ನಿಯಮಗಳಲ್ಲಿ ಹಲವು ಬದಲಾವಣೆಗಳಾಗಿವೆ. ಲೀಗ್‌ನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಸೆಮಿಫೈನಲ್‌ಗೆ ಅರ್ಹತೆ ಸಿಗಲಿದೆ.

ಹೀಗಾಗಿ ಗುಂಪು ಹಂತದಲ್ಲಿ  ಶ್ರೇಷ್ಠ ಆಟ ಆಡಬೇಕು. ನಾಲ್ಕರ ಘಟ್ಟ ಪ್ರವೇಶಿಸಿದರೆ, ಮುಂದಿನ ವಿಶ್ವಕಪ್‌ಗೆ ನೇರ ಅರ್ಹತೆಯೂ ಸಿಗುತ್ತದೆ. ಇಲ್ಲವಾದರೆ ಅರ್ಹತಾ ಟೂರ್ನಿಯಲ್ಲಿ ಆಡಬೇಕು.  ಆದ್ಧರಿಂದ ಪ್ರಶಸ್ತಿ ಗೆಲ್ಲಲಾಗದಿದ್ದರೂ ಕನಿಷ್ಠ ಸೆಮಿಫೈನಲ್‌ವರೆಗಾದರೂ ಹೋಗಬೇಕು ಅಂದುಕೊಂಡಿದ್ದೇವೆ.

* ಈ ಬಾರಿ ಯಾವ ತಂಡ ಪ್ರಶಸ್ತಿ ಗೆಲ್ಲಬಹುದು?

ಕ್ರಿಕೆಟ್‌ನಲ್ಲಿ ಪಂದ್ಯದ ದಿನ ಏನು ಬೇಕಾದರೂ ಆಗಬಹುದು. ಹೀಗಾಗಿ ನಿರ್ದಿಷ್ಟವಾಗಿ ಇಂತಹುದೇ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಈಗಲೇ  ಹೇಳಲು ಆಗುವುದಿಲ್ಲ.  ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಆಟ ಆಡುವ ತಂಡಕ್ಕೆ  ಪ್ರಶಸ್ತಿ ಒಲಿಯಲಿದೆ.

* ಭಾರತ ತಂಡದ ಬಗ್ಗೆ ಹೇಳಿ?

ತಂಡ ಸಮತೋಲನದಿಂದ ಕೂಡಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಟೂರ್ನಿ ನಡೆಯುತ್ತಿದೆ. ಈ ಅವಧಿಯಲ್ಲಿ ಇಂಗ್ಲೆಂಡ್‌ ಪಿಚ್‌ಗಳು  ಬ್ಯಾಟಿಂಗ್‌ಗೆ ಹೆಚ್ಚು ನೆರವಾಗಲಿದ್ದು,  ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಸಮರ್ಥರು ತಂಡದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಜೂಲನ್‌ ಗೋಸ್ವಾಮಿ ಸೇರಿದಂತೆ ಇತರರ ಬಲ ಇದೆ. 

* ಕರ್ನಾಟಕದ ಆಟಗಾರ್ತಿಯರ ಕುರಿತು ಹೇಳಿ?

ರಾಜೇಶ್ವರಿ ಗಾಯಕ್ವಾಡ್‌ ಬೌಲಿಂಗ್‌ನಲ್ಲಿ ಭಾರತ ತಂಡದ ಶಕ್ತಿಯಾಗಿದ್ದಾರೆ. ಐಸಿಸಿ ಚಾಂಪಿಯನ್‌ಷಿಪ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಅವರೂ ಒಬ್ಬರು. ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್‌ ವಿಭಾಗ ದಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಎದುರಾಳಿ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿ ಲೀಲಾಜಾಲವಾಗಿ ರನ್‌ ಗಳಿಸುವ ತಾಕತ್ತು ಅವರಿಗಿದೆ.  ಟಿ–20 ಮಾದರಿಯಲ್ಲಿ ವಿ. ಆರ್‌. ವನಿತಾ ಅವರಿಗೆ ಯಾರೂ ಸಾಟಿಯಾಗಲಾರರು. ಇವರಂತಹ ಅನೇಕ ಪ್ರತಿಭೆಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಭಾರತಕ್ಕೆ ಕೊಡುಗೆಯಾಗಿ ನೀಡಿದೆ.

* ಮಹಿಳಾ ಕ್ರಿಕೆಟ್‌ಗೆ ಪುರುಷರ ಕ್ರಿಕೆಟ್‌ಗೆ ಇರುವಷ್ಟು ಪ್ರಾಮುಖ್ಯತೆ ಸಿಗುತ್ತಿಲ್ಲವಲ್ಲ?

ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆರಂಭದಿಂದಲೂ ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿಲ್ಲ. ಶುರುವಿನಲ್ಲಿ  ನಾವಾಡುವ ಪಂದ್ಯಗಳನ್ನು ವಾಹಿನಿಯವರು ನೇರ ಪ್ರಸಾರ ಮಾಡುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವನಿತೆಯರು ಆಡುವ ಪಂದ್ಯಗಳು ನೇರ ಪ್ರಸಾರವಾಗುತ್ತಿವೆ. ಬೆಂಗಳೂರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್‌ ವಿರುದ್ಧದ ಸರಣಿ ಮತ್ತು ವಿಜಯವಾಡದಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಸರಣಿಗಳು ಇದಕ್ಕೊಂದು ಉದಾಹರಣೆ. ಈ ಪ್ರಕ್ರಿಯೆ ಮುಂದುವರಿಯಬೇಕು. ಹಾಗಾದಾಗ ಮಾತ್ರ ಮಹಿಳಾ ಕ್ರಿಕೆಟ್‌ನ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಸಬಹುದು.

* ಇತ್ತೀಚೆಗೆ ಬಿಸಿಸಿಐ, ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿ ಸ್ಥಾನ ಹೊಂದಿರುವ ಆಟಗಾರರ ಸಂಭಾವನೆ ಹೆಚ್ಚಿಸಿದೆ. ಆದರೆ ಮಹಿಳೆಯರಿಗೆ ಇನ್ನೂ ಗುತ್ತಿಗೆ ಪದ್ಧತಿ ಜಾರಿಗೆ ತಂದಿಲ್ಲವಲ್ಲ?

ಈ ವರ್ಷದಿಂದ ಮಹಿಳೆಯರಿಗೂ ಕೇಂದ್ರೀಯ ಗುತ್ತಿಗೆ ಪದ್ಧತಿ ಜಾರಿಗೆ ತರಲು ಬಿಸಿಸಿಐ ತೀರ್ಮಾನಿಸಿದೆ. ಇದು  ಸಂತಸದ ವಿಷಯ. ಹಿಂದಿನ ಕೆಲ ವರ್ಷಗಳಿಂದ ನಾವು ಉತ್ತಮ ಸಾಮರ್ಥ್ಯ ತೋರುತ್ತಿದ್ದೇವೆ.  ಇತ್ತೀಚೆಗೆ ಬಿಸಿಸಿಐ ಹಿರಿಯ ಆಟಗಾರ್ತಿಯರ  ಸಾಧನೆಯನ್ನು ಗುರುತಿಸಿ ‘ಒನ್‌ ಟೈಮ್‌ ಬೆನಿಫಿಟ್‌’ ನಿಯಮದಡಿ ಗೌರವ ಧನ ನೀಡಿತ್ತು. ಇದು ಕೂಡ ಸ್ವಾಗತಾರ್ಹ.

* ಪುರುಷರಂತೆ ಮಹಿಳಾ ಕ್ರಿಕೆಟಿಗರಿಗೆ ಉದ್ಯೋಗ ಭದ್ರತೆ ಇದೆಯೇ?

ಮಹಿಳಾ ಕ್ರಿಕೆಟಿಗರಿಗೂ  ರೈಲ್ವೇಸ್‌, ಏರ್‌ ಇಂಡಿಯಾದಂತಹ ಅನೇಕ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತಿದೆ. ಈಗೀಗ ಬ್ಯಾಂಕಿಂಗ್‌ ವಲಯದಲ್ಲೂ  ಉದ್ಯೋಗ ನೀಡಲಾಗುತ್ತಿದೆ.

* ಲೋಧಾ ಸಮಿತಿಯ ಶಿಫಾರಸಿನ ಅನ್ವಯ ರೈಲ್ವೇಸ್‌ ಸೇರಿದಂತೆ ಕೆಲ ಸಂಸ್ಥೆಗಳು ಖಾಯಂ ಸದಸ್ಯತ್ವ ಕಳೆದುಕೊಂಡಿವೆ. ಇದರಿಂದ ಏನಾದರೂ ಹಿನ್ನಡೆ ಆಗಿದೆಯಾ?

ಹಾಗೇನಿಲ್ಲ. ಈಗಲೂ ರೈಲ್ವೇಸ್‌ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗುತ್ತಿದೆ.  ನಾನು ಮೊದಲಿನಿಂದಲೂ ಈ ತಂಡದಲ್ಲಿ ಆಡುತ್ತಿದ್ದೇನೆ.

**

ಮಿಥಾಲಿ ಪರಿಚಯ
ಹೆಸರು:
ಮಿಥಾಲಿ ದೊರೈ ರಾಜ್‌
ಜನನ: 3 ಡಿಸೆಂಬರ್‌ 1982
ಸ್ಥಳ: ಜೋಧಪುರ, ರಾಜಸ್ತಾನ
ಬ್ಯಾಟಿಂಗ್‌ ಶೈಲಿ: ಬಲಗೈ
ಬೌಲಿಂಗ್‌ ಶೈಲಿ: ಬಲಗೈ ಲೆಗ್‌ ಬ್ರೇಕ್‌
ಸಂದ ಗೌರವಗಳು
* ಅರ್ಜುನ ಪ್ರಶಸ್ತಿ (2003)
* ಪದ್ಮಶ್ರೀ (2015)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT