ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸವಾಲಿಗೆ ನಾನು ಸಿದ್ಧ...

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

-ಪಿ.ವಿ. ಶಶಿಕಾಂತ್‌

*

ರಾಜ್ಯ ತಂಡದಲ್ಲಿ ಆಡುತ್ತಿದ್ದ ದಿನಗಳಲ್ಲಿ ತಿಂಗಳಿಗೊಮ್ಮೆ ತವರೂರು ಮಂಗಳೂರಿಗೆ ಹೋಗುತ್ತಿದ್ದೆ.

ಅಣ್ಣ ಪಿ.ವಿ. ಮೋಹನ್‌ ಅಲ್ಲಿ ಬೇಸಿಗೆ ಕ್ರಿಕೆಟ್‌ ಶಿಬಿರಗಳನ್ನು ಆಯೋಜಿಸುತ್ತಿ ದ್ದರು. ಊರಿಗೆ ಹೋದಾಗಲೆಲ್ಲಾ ಶಿಬಿರದಲ್ಲಿ ಭಾಗವಹಿಸುತ್ತಿದ್ದ ಮಕ್ಕಳಿಗೆ ಕ್ರಿಕೆಟ್‌ ಪಾಠಗಳನ್ನು ಹೇಳಿಕೊಡುತ್ತಿದ್ದೆ. ಕೇರಳದ ಕೊಚ್ಚಿಯಲ್ಲೂ ಅಣ್ಣ  ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು. ಅಲ್ಲಿಗೂ ಆಗಾಗ ಭೇಟಿ ನೀಡುತ್ತಿದ್ದೆ. ಆಗ ಶ್ರೀಶಾಂತ್‌ 13 ವರ್ಷದ ಹುಡುಗ. ಆ ಶಿಬಿರದಲ್ಲಿ ಆತನೂ ಭಾಗವಹಿಸಿದ್ದ. ಆತನನ್ನು ನೋಡಿದೊಡನೆ ಏನೋ ವಿಶೇಷತೆ ಇದೆ ಅಂತ ಅನಿಸಿತು.ಅವನ ಪ್ರತಿಭೆಗೆ ಸಾಣೆ ಹಿಡಿದರೆ ಮುಂದೊಂದು ದಿನ ಕ್ರಿಕೆಟ್‌ ಲೋಕದಲ್ಲಿ ಮಿನುಗಬಲ್ಲ ಎಂದು ಅನಿಸಿತ್ತು. 

ವಿಜಯ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪದೇ ಪದೇ ಮಂಗಳೂರು ಮತ್ತು ಕೊಚ್ಚಿಗೆ ಹೋಗುವುದು ಕಷ್ಟವಾಗುತ್ತಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಶಿಬಿರಗಳನ್ನು ಆಯೋಜಿಸಲು ಶುರು ಮಾಡಿದೆವು. ಶ್ರೀಶಾಂತ್‌ ಕೂಡ ನನ್ನ ಬಳಿ ತರಬೇತಿ ಪಡೆದು ನಂತರ ಭಾರತ ತಂಡದಲ್ಲೂ ಸ್ಥಾನ ಗಿಟ್ಟಿಸಿ ಮಿಂಚಿದ. ಆತನ   ಸಾಧನೆ ವೈಯಕ್ತಿಕವಾಗಿ ತುಂಬಾ ಖುಷಿ ಕೊಟ್ಟಿತು. ಆ ನಂತರ ನನಗೆ ಬಿಸಿಸಿಐನಿಂದ ಎರಡನೇ ಹಂತದ ಕೋಚಿಂಗ್‌ ಪ್ರಮಾಣ ಪತ್ರವೂ ಸಿಕ್ಕಿತು.
2002ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅಕಾಡೆಮಿ ಶುರು ಮಾಡಿತ್ತು. ಆಗ ಜಿ. ಆರ್‌. ವಿಶ್ವನಾಥ್‌  ನಿರ್ದೇಶಕರಾಗಿ ದ್ದರು. ಮೊದಲ ಬಾರಿ ಅಕಾಡೆಮಿಯಲ್ಲಿ ಕೋಚ್‌ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಆ ಪಯಣ ಎರಡೇ ವರ್ಷಕ್ಕೆ ಮುಗಿಯಿತು.

ಆ ನಂತರ ರಣಜಿ ಟ್ರೋಫಿ ಆಯ್ಕೆ ಸಮಿತಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ನಾಲ್ಕು ವರ್ಷ ಈ ಜವಾಬ್ದಾರಿ ನಿಭಾಯಿಸಿದೆ.  ಆ ಕೆಲಸ ತೃಪ್ತಿ ನೀಡಲಿಲ್ಲ. ಹೀಗಾಗಿ ಅದರಲ್ಲಿ ಮುಂದುವರಿಯದಿರಲು ತೀರ್ಮಾನಿಸಿದೆ.

ಅದೇ ಹೊತ್ತಿಗೆ (2007)  ಕೆಎಸ್‌ಸಿಎ, 19 ವರ್ಷ ದೊಳಗಿನವರ ತಂಡದ ತರಬೇತುದಾರನನ್ನಾಗಿ ಆಯ್ಕೆ ಮಾಡಿತು.

ಹೊಸ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲೇ ಕೂಚ್‌ ಬೆಹಾರ್‌ ಟ್ರೋಫಿಯಲ್ಲಿ ತಂಡದಿಂದ ಅಮೋಘ ಸಾಮರ್ಥ್ಯ ಮೂಡಿಬಂತು.

ಟೂರ್ನಿಯ ಪಂದ್ಯದಲ್ಲಿ ನಮ್ಮ ತಂಡ ಬಲಿಷ್ಠ ಮುಂಬೈ ತಂಡವನ್ನು 60ರನ್‌ ಗಳಿಗೆ ಆಲೌಟ್‌ ಮಾಡಿತ್ತು. ಈಗ ಸೀನಿ ಯರ್‌ ತಂಡದಲ್ಲಿ ಆಡುತ್ತಿರುವ ಅಭಿಮನ್ಯು ಮಿಥುನ್‌, ಮನೀಷ್‌ ಪಾಂಡೆ, ಕರುಣ್‌ ನಾಯರ್‌ ಅವರೆಲ್ಲಾ ಆ ತಂಡದಲ್ಲಿದ್ದರು. ಆದರೆ ಕ್ವಾರ್ಟರ್‌ ಫೈನಲ್‌ನಲ್ಲಿ ನಾವು 8 ರನ್‌ಗಳಿಂದ ಪಂಜಾಬ್‌ ವಿರುದ್ಧ ಸೋತೆವು. ಅದೇ ವರ್ಷ ದಕ್ಷಿಣ ವಲಯ ಏಕದಿನ ಟೂರ್ನಿಯಲ್ಲಿ  ತಂಡ ಪ್ರಶಸ್ತಿ ಎತ್ತಿಹಿಡಿದಿತ್ತು. ಆ ಕ್ಷಣ ಸದಾ ಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಕೋಚ್‌ ಹುದ್ದೆ ವಹಿಸಿಕೊಂಡ ಬಳಿಕ ತಂಡ ಗೆದ್ದ ಮೊದಲ ಪ್ರಶಸ್ತಿ ಅದಾಗಿತ್ತು. 2010 ರಲ್ಲಿ 22 ವರ್ಷದೊಳಗಿನವರ ತಂಡಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಲಭಿಸಿತು.

ಆ ವರ್ಷ ಸಿ.ಕೆ.ನಾಯ್ಡು ಟ್ರೋಫಿಯಲ್ಲಿ ನಾವು  ಕ್ವಾರ್ಟರ್ ಫೈನಲ್‌ ಪ್ರವೇಶಿ ಸಿದ್ದೆವು. ಲೀಗ್‌ ಹಂತದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಅಭಿಮನ್ಯು ಮಿಥುನ್‌ 8 ವಿಕೆಟ್‌ ಪಡೆದಿದ್ದರು. ಮನೀಷ್‌ ಪಾಂಡೆ  ದ್ವಿಶತಕ ಸಿಡಿಸಿ ಮಿಂಚಿ ದ್ದರು. ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿರುವ ಕರುಣ್‌ ನಾಯರ್‌, ಕೆ.ಎಲ್‌. ರಾಹುಲ್‌ ಅವರೂ ತಂಡದಲ್ಲಿದ್ದರು.  ಆ ನಂತರ ಕರ್ನಾಟಕ ‘ಬಿ’ ತಂಡ  ಬಲಿಷ್ಠ ಮುಂಬೈ, ಬರೋಡ,  ಬಂಗಾಳ ತಂಡಗಳ ಸವಾಲು ಮೀರಿ ಅಖಿಲ ಭಾರತ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಆಗ ನನ್ನ ಜೊತೆ ಜಿ.ಕೆ. ಅನಿಲ್‌ ಕುಮಾರ್‌ ಕೂಡ ಕೋಚ್‌ ಆಗಿ ಕೆಲಸ ಮಾಡಿದ್ದರು.

2010ರಲ್ಲಿ ರಾಯಲ್‌ ಚಾಲೆಂಜರ್ಸ್‌–ಕೆಎಸ್‌ಸಿಎ ಅಕಾಡೆಮಿ ಶುರುವಾಯಿತು. ಆ ಅಕಾಡೆಮಿಯಲ್ಲಿ ಸಹಾಯಕ ಕೋಚ್‌ ಆಗಿ ಎರಡು ವರ್ಷ ಕೆಲಸ ಮಾಡಿದೆ.
2013ರಲ್ಲಿ ಮತ್ತೆ 19 ವರ್ಷದೊಳಗಿನವರ ತಂಡಕ್ಕೆ ಕೋಚ್‌ ಆದೆ.

ಇದಕ್ಕೂ ಮುನ್ನ 25 ವರ್ಷದೊಳಗಿನವರಿಗಾಗಿ ನಡೆದ ಪಿ.ರಾಮಚಂದ್ರರಾವ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡ ಸತತ ಮೂರು ವರ್ಷ ಚಾಂಪಿಯನ್‌ ಆಗಿದ್ದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಹೀಗೆ ಹೊಸ ಹೊಸ ಸವಾಲುಗಳಿಗೆ ತೆರೆದುಕೊಳ್ಳುತ್ತಾ ಬಂದಿದ್ದೇನೆ.   ಈಗ ಕೆಎಸ್‌ಸಿಎ,  ಸೀನಿಯರ್‌ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಮಾಡುವ ಅವಕಾಶ ನೀಡಿದೆ. ಇದು ನಿಜಕ್ಕೂ ಬಹುದೊಡ್ಡ ಗೌರವ. ಈ ಹಿಂದೆ ರಾಜ್ಯ ತಂಡದ ನಾಯಕನಾಗಿದ್ದ ನನಗೆ ಈಗ  ಅದೇ ತಂಡಕ್ಕೆ ಮಾರ್ಗದರ್ಶನ ನೀಡುವ ಅವಕಾಶ ಸಿಕ್ಕಿರುವುದು  ಅತೀವ ಸಂತಸ ನೀಡಿದೆ.

ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕು ಎಂಬುದು ನಮ್ಮ ಹೆಬ್ಬಯಕೆ. ಆ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಿ ಕೆಲಸ ಮಾಡುತ್ತೇವೆ. ವಿನಯ್‌ ಕುಮಾರ್ ಸಾರಥ್ಯದಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದು ಸಾಮ್ರಾಟನಂತೆ ಮೆರೆದಿದ್ದ ತಂಡ ಆ ಬಳಿಕ ಏಳು ಬೀಳಿನ ಹಾದಿ ಸವೆಸಿತ್ತು. ಈ ಮೊದಲು ಇದ್ದವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ.

ಈಗ ನಮ್ಮ ಪಯಣ ಶುರುವಾಗಿದೆ. ತಂಡಕ್ಕೆ ಗುಣಮಟ್ಟದ ತರಬೇತಿ ನೀಡಿ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಡುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಇದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ನಂಬಿಕೆಯೂ ಇದೆ.

(ಲೇಖಕರು ಹಿಂದೆ ಕರ್ನಾಟಕ ರಣಜಿ ತಂಡದ ನಾಯಕರಾಗಿದ್ದರು. ಇದೀಗ ರಾಜ್ಯ ಸೀನಿಯರ್‌ ತಂಡಕ್ಕೆ ಇವರು ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT