ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರಿಂದ ಓದುಗರಿಗಾಗಿ ‘ಹೊನಲು’

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಯುವ ಬರಹಗಾರರಿಗೆ ವೇದಿಕೆ ಒದಗಿಸಬೇಕೆಂಬ ಉದ್ದೇಶದಿಂದ ನಾಲ್ಕು ವರ್ಷದ ಹಿಂದೆ ಪ್ರಾರಂಭವಾದ ‘ಹೊನಲು’ ಆನ್‌ಲೈನ್‌ ಮ್ಯಾಗಜಿನ್ ಈಗ ಆ್ಯಪ್ ರೂಪುತಳೆದಿದೆ.

‘ಹೊನಲು’ ಆನ್‌ಲೈನ್‌ ಮ್ಯಾಗಜಿನ್‌ ಜನಪ್ರಿಯತೆಯೇ ಅದರ ಆ್ಯಪ್ ಅನ್ನು ಬಿಡುಗಡೆ ಮಾಡಲು ಹೊನಲು ತಂಡದ ಸಂಪಾದನಾ ಮಂಡಳಿಯ ಅನ್ನದಾನೇಶ್ ಸಂಕದಾಳ, ರತೀಶ್ ರತ್ನಾಕರ, ವಿಜಯ್ ಮಹಂತೇಶ್ ಅವರಿಗೆ ಸ್ಪೂರ್ತಿ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಆ್ಯಪ್‌ನಲ್ಲಿ ಈಗಾಗಲೇ 1800ಕ್ಕೂ ಹೆಚ್ಚು ಬರಹಗಳಿವೆ. ಸಾಹಿತ್ಯ, ಆಫ್‌ಬೀಟ್ ವರದಿಗಳು, ಕತೆ, ಕವನ, ಆರೋಗ್ಯ ಮಾಹಿತಿ, ಇತಿಹಾಸ ಕುರಿತಾದ ಲೇಖನಗಳು, ಸೋಜಿಗದ ಸಂಗತಿಗಳು, ಗಜೆಟ್ ವಿಮರ್ಶೆ, ವಾಹನ ವಿಮರ್ಶೆ, ಪ್ರಚಲಿತ ವಿದ್ಯಮಾನಗಳ ಬಗೆಗಿನ ಲೇಖನಗಳು, ನಗೆಬರಹಗಳು, ಲಹರಿ, ಅಡುಗೆ ರೆಸೆಪಿಗಳು ಹೀಗೆ ಹಲವು ವಿದದ ಬರಹಗಳು ಆ್ಯಪ್‌ನಲ್ಲಿ ಲಭ್ಯ.

ಆ್ಯಪ್‌ನ ಎಲ್ಲ ಬರಹಗಳು ಓದುಗರಿಂದಲೇ ಮೂಡಿಬಂದಿರುವುದು ವಿಶೇಷ. ಓದುಗರೇ ಇಲ್ಲಿ ಬರಹಗಾರರು.

ನಾಲ್ಕು ವರ್ಷದಿಂದ ಅಸ್ತಿತ್ವದಲ್ಲಿರುವ ‘ಹೊನಲು’ವಿನ ಓದುಗ ಮತ್ತು ಬರಹಗಾರರ ಬಳಗದ ವಿಸ್ತಾರ ದೊಡ್ಡದಿದೆ. 120 ದೇಶಗಳಲ್ಲಿ ಹೊನಲುವಿನ ಓದುಗರಿದ್ದಾರೆ ಎಂಬುದು ಸಂಪಾದಕ ತಂಡದ ಅನ್ನದಾನೇಶ್ ಅವರ ಮಾತು.

ಭಿನ್ನ ಭಿನ್ನ ಕ್ಷೇತ್ರದ ಪರಿಣಿತ ಬರಹಗಾರರು ಪರಿಣಿತ ವಿಷಯಗಳ ಬಗ್ಗೆ ನಿಯಮಿತವಾಗಿ ಬರೆಯುತ್ತಿರುತ್ತಾರೆ. ಹಾಗಾಗಿ ಹೊನಲುವಿನಲ್ಲಿ ಹಲವು ಕ್ಷೇತ್ರಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಹೊಸ ವಾಹನಗಳ ವಿಮರ್ಶೆ ಬರೆಯುತ್ತಾರೆ. ಸಾಫ್ಟ್‌ವೇರ್ ಉದ್ಯೋಗಿಗಳು ತಂತ್ರಾಶದ ಬಗ್ಗೆ ಮಾಹಿತಿ ನೀಡುತ್ತಾರೆ. ಅಮೆರಿಕದ ವೈದ್ಯರೊಬ್ಬರು ‘ಎಬೊಲಾ’ ಬಗ್ಗೆ ಬರೆದುದನ್ನು ನೂರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಯುವ ಕೃಷಿಕರು, ಯುವ ಸಾಹಿತಿಗಳು, ಶಿಕ್ಷಕರು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಲೇಖನಗಳನ್ನು ಬರೆಯುತ್ತಿರುವುದರಿಂದ ಹೊನಲು ಆ್ಯಪ್‌ ಮಾಹಿತಿಯ ಕಣಜವಾಗಿದೆ.

ಆ್ಯಪ್‌ನ ಸಂಪಾದಕ ತಂಡ ಯಾವುದೇ ಪ್ರಖ್ಯಾತ ಲೇಖಕರಿಂದ ಬರಹಗಳನ್ನು, ಅಂಕಣಗಳನ್ನು ಬರೆಸುವ ಪ್ರಯತ್ನ ಮಾಡಿಲ್ಲ ಬದಲಾಗಿ ಓದುಗರೇ ಗುಣಮಟ್ಟದ ಲೇಖನ ಬರೆಯುವಂತೆ ಪ್ರೇರೇಪಿಸಿದ್ದಾರೆ. ಇದರಿಂದಾಗಿ ಇಂದು ಸಾಕಷ್ಟು ಉತ್ತಮ ಬರಹಗಾರರು ರೂಪುಗೊಂಡಿದ್ದಾರೆ ಎಂದು ಅನ್ನದಾನೇಶ್ ಹೇಳುತ್ತಾರೆ.
ಇದಕ್ಕೆ ಇವರು ಉದಾಹರಣೆಯಾಗಿ ಕೊಡುವುದು ಬಸವರಾಜ ಕಂಟಿ ಎಂಬ ಲೇಖಕರನ್ನು. ‘ಬಸವರಾಜು ಅವರ ಪತ್ತೆದಾರಿ ಕತೆಗಳಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇವರು ನಮ್ಮ ಹೊನಲು ಆನ್‌ಲೈನ್‌ ಮ್ಯಾಗಜೀನ್‌ನದ್ದೇ ಶೋಧ’ ಎನ್ನುತ್ತಾರೆ ಅವರು.

ಮುದ್ರಣಕ್ಕಾಗಿ ಬಂದ ಪ್ರತಿಯೊಂದು ಲೇಖನವನ್ನೂ ಕೂಲಂಕಷವಾಗಿ ಓದಿ, ಬರಹಗಾರರೊಂದಿಗೆ ಮಾತನಾಡಿ, ತಪ್ಪಿದ್ದರೆ ಬದಲಾವಣೆಗೆ ಸೂಚಿಸಿ ಲೇಖನವನ್ನು ಪ್ರಕಟಿಸುತ್ತದೆ ಸಂಪಾದಕ ತಂಡ. ಆ್ಯಪ್‌ನಲ್ಲಿ ಪ್ರಕಟವಾಗುವ ಲೇಖನಗಳ ಗುಣಮಟ್ಟ ಕಾಯ್ದುಕೊಳ್ಳಲು ಈ ಶಿಸ್ತು ಅವಶ್ಯಕ ಎನ್ನುತ್ತಾರೆ ಅವರು.

‘ಹೊರರಾಜ್ಯಗಳ ಲೇಖಕರು ಮಾತ್ರವಲ್ಲದೆ ಅಮೆರಿಕ, ಬಹ್ರೇನ್ ನಲ್ಲಿನ ಕನ್ನಡಿಗರು ನಮ್ಮ ಆ್ಯಪ್‌ಗೆ ಲೇಖನ ಕಳಿಸಿಕೊಡುತ್ತಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅನ್ನದಾನೇಶ್.

ಆನ್‌ಲೈನ್‌ ಮ್ಯಾಗಜಿನ್‌ಗಳು, ಅಜ್ಞಾತ ಬರಹಗಾರರ ಲೇಖನಗಳ ವಿಶ್ವಾಸರ್ಹತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನ್ನದಾನೇಶ್, ‘ನಾವು ಸಾಕಷ್ಟು ಕೂಲಂಕಷವಾಗಿ ಲೇಖನಗಳನ್ನು ಪರಿಶೀಲನೆ ಮಾಡಿಯೇ ಪ್ರಕಟಿಸುತ್ತೇವೆ. ಆದರೆ ಕೆಲವೊಮ್ಮೆ ಅತಿಶಯೋಕ್ತಿಯಿಂದ ಕೂಡಿದ ಮಾಹಿತಿಗಳು ಅಥವಾ ತಪ್ಪು ಮಾಹಿತಿಗಳು ರವಾನೆಯಾಗಿ ಬಿಡುವುದುಂಟು. ಆವಾಗೆಲ್ಲಾ ನಮ್ಮ ಓದುಗರೆ ಅದರ ಬಗ್ಗೆ ಚರ್ಚೆ ಮಾಡಿ ಸರಿಯಾದ ಮಾಹಿತಿ ನೀಡುತ್ತಾರೆ’ ಎನ್ನುತ್ತಾರೆ ಅವರು.‘ಹೊನಲು’ ಆ್ಯಪ್ ಬಳಸಲು ಸುಲಭವಾಗಿದೆ. ಆ್ಯಪ್‌ನಲ್ಲಿ ಅಕ್ಷರಗಳು ದೊಡ್ಡಗಾತ್ರದಲ್ಲಿರುವುದು ಓದಲು ಸಹಕಾರಿ. ನಮ್ಮ ಇಷ್ಟದ ವಿಷಯವನ್ನು ಹುಡುಕಲು ಸರ್ಚ್ ಬಾರ್ ಆಯ್ಕೆ ಇದೆ. ಆ್ಯಪ್‌ನಲ್ಲಿ ಯಾವುದೇ ಜಾಹಿರಾತು ಇಲ್ಲದಿರುವುದು ಪ್ರಮುಖ ಅಂಶ.

ಒಂದು ವಾರದ ಹಿಂದಷ್ಟೆ ಬಿಡುಗಡೆಯಾಗಿರುವ ಈ ಆ್ಯಪ್‌ ಈಗಾಗಲೇ 1000 ಕ್ಕೂ ಹೆಚ್ಚು ಡೌನ್‌ಲೋಡ್‌ ಕಂಡಿದೆ.

**

‘ಆಡು ಕನ್ನಡ’
ಬರವಣಿಗೆ ‘ಆಡು ಕನ್ನಡ’ದಲ್ಲಿರಬೇಕು ಎಂಬುದು ಹೊನಲು ಸಂಪಾದಕ ತಂಡದ ನಿರ್ಣಯ. ಹಾಗಾಗಿ ಆ್ಯಪ್‌ನಲ್ಲಿ ಮಹಾಪ್ರಾಣ ಅಕ್ಷರಗಳು ಕಾಣಸಿಗುವದಿಲ್ಲ. ಕರ್ನಾಟಕವನ್ನು ಕರ್‌್ನಾಟಕ ಎಂತಲೂ, ಸುಖ ಪದವನ್ನು ಸುಕ ಎಂತಲೂ, ಕೃಷಿಯನ್ನು ಕ್ರುಶಿ ಎಂದು ಪ್ರಯೋಗಿಸಿರುವುದು ಕಾಣಸಿಗುತ್ತದೆ.

ಸಾಮಾನ್ಯ ಕನ್ನಡಿಗರು ಮಾತನಾಡುವ ಭಾಷೆಯಲ್ಲಿಯೇ ಬರವಣಿಗೆಯೂ ಇರಬೇಕು ಎಂಬ ದಷ್ಟಿಯಿಂದ ಈ ರೀತಿಯ ಭಾಷೆ ಬಳಸಲಾಗಿದೆ ಎಂದು ಸಂಪಾದಕ ತಂಡ ಹೇಳುತ್ತದೆ.

**

ಇಲ್ಲಿವರೆಗೆ 180ಕ್ಕೂ ಹೆಚ್ಚು ಬರಹಗಾರ ಲೇಖನಗಳನ್ನು ಹೊನಲು ಪ್ರಕಟಿಸಿದೆ ಅದರಲ್ಲಿ 22% ಹೆಚ್ಚು ಲೇಖನಗಳು ಮಹಿಳಾ ಬರಹಾಗಾರರದು.
–ಅನ್ನದಾನೇಶ್ ಸಂಕದಾಳ,
ಹೊನಲು ಆ್ಯಪ್‌ ನ ಸಂಪಾದಕ ತಂಡದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT