ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನೆಯ ಮೂಲ ತಲುಪದ ಮುಲಾಮು

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ತಮಗಿರುವ ಅಧಿಕಾರವನ್ನು ಕೆಂಪು ದೀಪದ ಮೂಲಕ ಪ್ರದರ್ಶಿಸುವ ಅತಿ ಗಣ್ಯರ ಅಟಾಟೋಪಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಚರ್ಚೆಗೆ ಒಳಪಟ್ಟಿದೆ. ಸಾಂಕೇತಿಕವೇ ಆದರೂ, ವಾಹನಗಳಿಂದ ಕೆಂಪು ದೀಪ ತೆಗೆಯುವಂತೆ ಆದೇಶಿಸಿರುವುದು ಮಹತ್ವದ ಕ್ರಮ ಎಂದು ಕೆಲವರು ವಾದಿಸುತ್ತಿದ್ದಾರೆ.  
 
ತಾವು ಅತಿಗಣ್ಯರೆಂಬ ಕಾರಣಕ್ಕೆ ಉಳಿದ ಸಾಮಾನ್ಯರು ಒಂದಿಷ್ಟು ತಾಪತ್ರಯಗಳನ್ನು ಅನುಭವಿಸಿಯೂ, ತಮ್ಮ ಸುಗಮ ಸಂಚಾರ ಮತ್ತು ಸಮಯ ಉಳಿತಾಯಕ್ಕೆ ಅನುವು ಮಾಡಿಕೊಡಬೇಕಿರುವುದು ಅವರ ಕರ್ತವ್ಯವೆಂದೇ ಭಾವಿಸಿರುವ ಜನಪ್ರತಿನಿಧಿಗಳ ದಂಡೇ ನಮ್ಮೆದುರಿಗಿದೆ. ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ಸುತ್ತಲೇ ತಿರುಗುತ್ತಿರುವ ಅತಿಗಣ್ಯ ಮನಸ್ಥಿತಿಯ ಕುರಿತ ಚರ್ಚೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲೂಬಹುದು.
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಯೂ ಪ್ರಭುವೇ ಎಂಬ ವಿಚಾರ ಕೇವಲ ಹೇಳಿಕೆಯಾಗಿ ಉಳಿಯದೆ ಆಚರಣೆಯಲ್ಲೂ ಇದೆಯೇ ಎಂದು ಪರಿಶೀಲಿಸಲು ಮುಂದಾದರೆ, ನಾನಾ ಕಾರಣಗಳಿಗಾಗಿ ಹಲವರು ತಾವು ಸಾಮಾನ್ಯರಿಗಿಂತ ಮೇಲಿರುವ ಗಣ್ಯರೆಂದೇ ತಮ್ಮನ್ನು ತಾವು ಪರಿಗಣಿಸಿರುವುದು ಎದ್ದು ಕಾಣುತ್ತದೆ.
 
ಇವರಲ್ಲಿ ಅನೇಕರು ತಮ್ಮ ಗಣ್ಯ ಮನಸ್ಥಿತಿಯನ್ನು ಕೆಂಪು ದೀಪದ ಮುಖೇನ ಮೊಳಗಿಸದೇ ಹೋದರೂ, ಬೇರೆ ವಿಧಾನಗಳ ಮೂಲಕ ಜನಸಾಮಾನ್ಯರ ಮೇಲೆ ತಮ್ಮ ಅಭಿಪ್ರಾಯ ಹೇರುವ ಉಮೇದು ಪ್ರದರ್ಶಿಸುವುದಂತೂ ನಡೆದೇ ಇದೆ.
 
ತಾವು ಆದಾಯ ತೆರಿಗೆ ಪಾವತಿಸುತ್ತೇವೆ ಎಂಬ ಅಂಶವೇ ಹಲವರ ಪಾಲಿಗೆ ಗಣ್ಯ ಮನಸ್ಥಿತಿ ಹೊಂದಲು ಇರುವ ಅರ್ಹತೆಯಾಗಿ ಗೋಚರವಾಗುತ್ತಿದೆ. ಹಾಗಾಗಿಯೇ,  ಸರ್ಕಾರಗಳು ಜನಕಲ್ಯಾಣ ಅಥವಾ ಜನಪ್ರಿಯ ಯೋಜನೆಗಳನ್ನು ಘೋಷಿಸಿದಾಗ ಕೆಲವರು, ‘ಸರ್ಕಾರ ನಮ್ಮ ತೆರಿಗೆ ಹಣ ಬಳಸಿಕೊಂಡು ಮೈಗಳ್ಳರ ಹೊಟ್ಟೆ ತುಂಬಿಸಲು ಹೊರಟಿದೆ’ ಅಂತೆಲ್ಲ ಬೀಸು ಹೇಳಿಕೆಗಳನ್ನು ನೀಡಲಾರಂಭಿಸುತ್ತಾರೆ.
 
ಸಿರಿವಂತರು ಸರ್ಕಾರದ ನೀತಿಗಳನ್ನು ಪರಾಮರ್ಶಿಸುವಾಗಲೆಲ್ಲ ತಮ್ಮ ತೆರಿಗೆ ಹಣವೆಂಬ ಗುರಾಣಿ ಹಿಡಿಯುವ ಉಮೇದು ಪ್ರದರ್ಶಿಸುವ ಜೊತೆಗೆ, ಆದಾಯ ತೆರಿಗೆ ಪಾವತಿಸದ ಜನರ ಮೇಲೂ ತಮಗೆ ಹಿಡಿತವಿದೆ ಎಂಬಂತೆ ವರ್ತಿಸುವುದೂ ವಿಐಪಿ ಸಂಸ್ಕೃತಿ ಅಥವಾ ಮನಸ್ಥಿತಿಯ ಭಾಗವಲ್ಲವೇ?
 
ಎಲ್ಲರನ್ನೂ ಸಮನಾಗಿ ಪರಿಗಣಿಸದ ಸಮಾಜ, ಯಾರಿಗೆಲ್ಲ ಗಣ್ಯರ ಸ್ಥಾನಮಾನ ಕರುಣಿಸುತ್ತಿದೆ ಮತ್ತು ಯಾರೆಲ್ಲ ತಮಗೆ ತಾವೇ ವಿಐಪಿ ಟ್ಯಾಗು ತೂಗಿಹಾಕಿಕೊಳ್ಳುತ್ತಿದ್ದಾರೆ ಎಂದು ಗಮನಿಸಲು ಹೊರಟರೆ, ಆ ಸಾಲಿನಲ್ಲಿ ಅಧಿಕಾರ ಮತ್ತು ಹಣಬಲವುಳ್ಳವರೇ ಅಗ್ರಪಂಕ್ತಿಯಲ್ಲಿರುತ್ತಾರೆ.
 
ಜನರನ್ನು ಪ್ರತಿನಿಧಿಸುವ ಸಲುವಾಗಿ ಶಾಸಕ, ಸಚಿವ, ಮುಖ್ಯಮಂತ್ರಿ ಹೀಗೆ ಯಾವುದೋ ಸ್ಥಾನಮಾನ ದಕ್ಕಿಸಿಕೊಂಡವರನ್ನು ಗಣ್ಯರಾಗಿ ಸಹಿಸಿಕೊಳ್ಳಲು ಕಡೇಪಕ್ಷ ಒಂದಿಷ್ಟು ನೆಪಗಳಾದರೂ ಇವೆ. ಆದರೆ, ಹಣವುಳ್ಳವರೆಂಬ ಒಂದೇ ಕಾರಣಕ್ಕೆ ಗಣ್ಯರಾಗುವವರನ್ನು ಸಹಿಸಿಕೊಳ್ಳಬೇಕೇ? ಅಸಲಿಗೂ ಗಣ್ಯರೆನಿಸಿಕೊಳ್ಳಲು ಸಿರಿವಂತರು ಅರ್ಹರೇ?
 
ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ನೋಡಿದರೆ, ಸಮಾಜ ಗಣ್ಯರೆಂದು ಗುರುತಿಸಿ ಗೌರವಿಸಬೇಕಿರುವುದು ಯಾರನ್ನು? ನಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಯಾರು ಅತಿ ಕಡಿಮೆ ಬಳಸಿಕೊಳ್ಳುತ್ತಿರುವರೋ ಅವರೇ ನಿಜವಾದ ಗಣ್ಯ ವ್ಯಕ್ತಿಗಳಲ್ಲವೇ? ಅನಾಗರಿಕರೆಂದು ನಮ್ಮ ನಾಗರಿಕ ಸಮಾಜ ಯಾರತ್ತ ಬೊಟ್ಟು ಮಾಡುತ್ತದೆಯೋ ಅವರಲ್ಲಿ ಅನೇಕರು ಅಸಲಿಗೂ ಗಣ್ಯ ವ್ಯಕ್ತಿಗಳಲ್ಲವೇ?

ಐಷಾರಾಮಿ ಕಾರಿನಲ್ಲಿ ಒಂಟಿಯಾಗಿ ಸಾಗುವವನಿಗಿಂತ, ನಡೆದುಕೊಂಡೋ ಸೈಕಲ್‌ನಲ್ಲೋ ತೆರಳುವವನು ಗಣ್ಯನಲ್ಲವೇ? ಬಹುಮಹಡಿ ಕಟ್ಟಡದಲ್ಲಿ ವಾಸಿಸುವವನಿಗಿಂತ ಗುಡಿಸಲಿನ ನಿವಾಸಿ ಗಣ್ಯನಲ್ಲವೇ? ಎಲ್ಲರಿಗೂ ಸಲ್ಲಬೇಕಾದ ಸಂಪನ್ಮೂಲಗಳನ್ನು ತಮ್ಮ ಬಳಿ ಹಣವಿದೆ ಎಂಬ ಒಂದೇ ಕಾರಣಕ್ಕೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಬಳಸುವುದಲ್ಲದೇ, ಸಮಾಜ ತಮ್ಮನ್ನು ಗಣ್ಯರೆಂದು ಸ್ವೀಕರಿಸಲು ಅದುವೇ ಅರ್ಹತೆ ಎಂಬ ಗ್ರಹಿಕೆಗೆ ಜೋತು ಬಿದ್ದವರಿಗೇ ನಾವು ರತ್ನಗಂಬಳಿ ಹಾಸುತ್ತಿರುವುದು ಇಡೀ ಸಮಾಜವನ್ನೇ ಆವರಿಸಿರುವ ವಿಐಪಿ ಮನಸ್ಥಿತಿಗೆ ಹಿಡಿದ ಕನ್ನಡಿ ಅಲ್ಲವೇ?
 
ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಇಂದಿಗೂ ಹಿಡಿತ ಹೊಂದಿರುವ ಶಾಸಕರೊಬ್ಬರು ತಮಗಿರುವ ರಾಹುಕಾಲದ ಮೇಲಿನ ಭೀತಿಯನ್ನು ಮೀರಲು ಮುಂದಾಗದೆ, ತಾವು ಭಾಗಿಯಾಗುವ ಬಹುತೇಕ ಶಂಕುಸ್ಥಾಪನೆ ಅಥವಾ ಉದ್ಘಾಟನೆಗಳೆಲ್ಲವೂ ಶುಭ ಮುಹೂರ್ತದಲ್ಲೇ ನಡೆಯುವಂತೆ ನೋಡಿಕೊಳ್ಳಲು ವಹಿಸುವ ಮುತುವರ್ಜಿ ಮತ್ತು ಅದರಿಂದ ಇತರರಿಗೆ ಆಗುವ ಕಿರಿಕಿರಿಯೂ ವಿಐಪಿ ಸಂಸ್ಕೃತಿಯ ಭಾಗವಾಗುವುದಿಲ್ಲವೇ?
 
ಶಿಷ್ಟಾಚಾರ ಪಾಲನೆ ನೆಪವೊಡ್ಡಿ ಯಾವುದೋ ಮಂತ್ರಿ ಅಥವಾ ಮುಖ್ಯಮಂತ್ರಿಯಿಂದಲೇ ಉದ್ಘಾಟನೆ ನೆರವೇರಿಸಬೇಕೆಂಬ ನಿಯಮಕ್ಕೆ ಜೋತು ಬಿದ್ದು ಜನಸಾಮಾನ್ಯರ ಬಳಕೆಗೆ ಲಭ್ಯವಾಗಬೇಕಾದ ಆಸ್ಪತ್ರೆ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಕಟ್ಟಡಗಳಿಗೆ ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಾನುಗಟ್ಟಲೆ ಬೀಗ ಜಡಿಯುವುದು ಕೂಡ ವಿಐಪಿ ಸಂಸ್ಕೃತಿಯ ಪ್ರಮುಖ ಅಡ್ಡಪರಿಣಾಮವಲ್ಲವೇ?
 
ಕೆಂಪು ದೀಪವೆಂಬ ಸಾಂಕೇತಿಕ ಬಿಂಬದ ಬೆನ್ನೆಲುಬು ಮುರಿಯಲು ಕೇಂದ್ರ ಸರ್ಕಾರ ತೋರುತ್ತಿರುವ ಉತ್ಸಾಹವನ್ನೇ, ಅಸಲಿಗೂ ವಿಐಪಿ ಮನಸ್ಥಿತಿ ತಂದೊಡ್ಡುವ ಅಪಸವ್ಯಗಳ ನಿಯಂತ್ರಣಕ್ಕೂ ತೋರುವುದೆಂಬ ಭರವಸೆ ಇಡಬಹುದೇ?
 
ವಿಶೇಷ ದರ್ಶನದ ಹೆಸರಿನಲ್ಲಿ ಹಣವುಳ್ಳವರಿಗೆ ಪ್ರಥಮ ಆದ್ಯತೆ ನೀಡುವ ದೇವಸ್ಥಾನಗಳು; ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ವಿಐಪಿ, ವಿವಿಐಪಿ ಪಾಸುಗಳಿಗಾಗಿ ಹಪಹಪಿಸುವ ಸಾಮಾನ್ಯರೇ ಆದ ನಾವು; ಕಾರ್ಯಕ್ರಮ ಜರುಗುವ ಸಭಾಂಗಣಕ್ಕೆ ಅತಿಥಿಗಳು ಬಂದಾಗ ಎದ್ದು ನಿಲ್ಲುವ ಮೂಲಕ ಗಣ್ಯರಿಗೆ ಗೌರವ ಸೂಚಿಸುವ ಪರಿ... ಹೀಗೆ ಎಷ್ಟೆಲ್ಲ ನಮೂನೆಯಲ್ಲಿ ಗಣ್ಯರನ್ನು ಆದರಿಸುವ, ಸ್ವತಃ ಗಣ್ಯರೇ ಆಗಲು ಹಂಬಲಿಸುವ ನಮ್ಮೆಲ್ಲರ ಒಡಕು ಬಿಂಬಗಳು ಹರಡಿಕೊಂಡಿವೆ!
 
ನಿಜದ ನೆಲೆಯಲ್ಲಿ ನಗಣ್ಯರಾಗಬೇಕಿದ್ದವರಿಗೆ ಗಣ್ಯರ ಪೋಷಾಕು ತೊಡಿಸಿ ಸಂಭ್ರಮಿಸುವ, ಒಳಗೊಳಗೆ ರೋದಿಸುವ ಇಡೀ ಸಮಾಜವನ್ನೇ ಆವರಿಸಿರುವ ವಿಐಪಿ ಅಂಟುಜಾಡ್ಯಕ್ಕೆ ಕೆಂಪು ದೀಪ ನಿಷೇಧವೆಂಬ ಮುಲಾಮು ನಿಟ್ಟುಸಿರು ದಯಪಾಲಿಸುವುದು ವಿಪರ್ಯಾಸದಂತೆ ತೋರುವುದಿಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT