ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ವಿವಾಹದ ರಂಗು ಹಸಿರು

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
l ಶ್ರೀ ಪಡ್ರೆ
ಮದುವೆಯಲ್ಲಿ ಏನೇನು ವಿಶೇಷ ಇರುತ್ತದೆ? ಹೊಟ್ಟೆ ಬಿರಿಯುವಂಥ ಊಟ ಸಾಮಾನ್ಯ. ಸಂಗೀತ ಮೇಳ, ಸುರೆ, ಮನರಂಜನೆಗಾಗಿ ಬಗೆಬಗೆಯ 
ಕಾರ್ಯಕ್ರಮ - ಇನ್ನೇನೇನೋ ಇರಬಹುದು.
 
ಆದರೆ ಇಲ್ಲಿದೆ ವಿಶೇಷ. ಹಿಮಾಲಯದ ತಪ್ಪಲಿನ ಉತ್ತರಾಖಂಡ ರಾಜ್ಯಕ್ಕೆ ಬನ್ನಿ. ಇಲ್ಲಿ ವಿವಾಹದ ಅಂಗವಾಗಿ, ಮದುವೆ ದಿರಸಿನಲ್ಲೇ ಮದುಮಕ್ಕಳು ಗಿಡ ನೆಡುತ್ತಾರೆ. ಈ ವಿನೂತನ ಆಚರಣೆಗೆ ‘ಮೈತಿ’ ಎಂದು ಹೆಸರು. ಗಿಡದ ಪಾಲನೆಗಾಗಿ ಮದುಮಗ ಒಂದಷ್ಟು ದೇಣಿಗೆಯನ್ನೂ ಕೊಡುತ್ತಾನೆ.
 
ಚಮೋಲಿ ಮತ್ತು ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಈ ಆಚರಣೆ ಎಷ್ಟು ಒಲವು ಪಡೆದಿದೆ ಗೊತ್ತೇ?  ಜಾತಿಮತ ಭೇದವಿಲ್ಲದೆ ಮದುವೆಯ ದಿನ ಜನ ಈ ಆಚರಣೆ ಮಾಡುತ್ತಾರೆ. ಆಮಂತ್ರಣದಲ್ಲಿ ಮೈತಿಯ ಮುಹೂರ್ತವನ್ನೂ ತಿಳಿಸುತ್ತಾರೆ. ಈ ದೂರದೃಷ್ಟಿಯ ಪದ್ಧತಿಯಿಂದಾಗಿ 1995ರಿಂದೀಚೆಗಿನ 22 ವರ್ಷಗಳಲ್ಲಿ ಮೂರೂವರೆ ಲಕ್ಷ ಗಿಡಗಳು ಮೇಲೆದ್ದಿವೆ.
 
ಬೋಳಾಗುತ್ತಿರುವ ಹಿಮಾಲಯಕ್ಕೆ ಮತ್ತೆ ಹಸಿರು ಹೊದಿಸುವ ಈ ಆಚರಣೆ ಹುಟ್ಟುಹಾಕಿದವರೊಬ್ಬರು ಮೇಷ್ಟು.  ಗ್ವಾಲ್ಡಂ ಪ್ರೌಢಶಾಲೆಯಲ್ಲಿ ಜೀವವಿಜ್ಞಾನ ಕಲಿಸುತ್ತಿದ್ದು ಮೂರು ವರ್ಷ ಹಿಂದೆ ನಿವೃತ್ತಿಗೊಂಡ ಕಲ್ಯಾಣ್ ಸಿಂಗ್ ರಾವತ್. ಇವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ.
 
‘ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಸಾಕಷ್ಟು ಹಣ ವೆಚ್ಚ ಮಾಡಿ ಗಿಡವನ್ನೇನೋ ನೆಡುತ್ತಿದ್ದರು. ಆದರೆ ಬದುಕಿ ಉಳಿಯುತ್ತಿದ್ದದ್ದು ಕಮ್ಮಿ. ಈ ಸಮಸ್ಯೆಗೆ ಏನಾದರೂ ಮಾಡಲೇಬೇಕು ಎನಿಸಿತು. ಗಿಡದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದೇ ಇದಕ್ಕೆ ದಾರಿ ಎಂದುಕೊಂಡೆ’ ಎಂದು ನೆನೆಯುತ್ತಾರೆ ಕಲ್ಯಾಣ್ ಸಿಂಗ್. 
 
ಈ ಬಗ್ಗೆ ತಲೆ ಹುಣ್ಣಾಗಿಸಿದಾಗ ಮೇಷ್ಟ್ರಿಗೆ ಹೊಳೆದ ದಾರಿ ಮದುವೆಯ ಜತೆ ಗಿಡ ನಾಟಿಯನ್ನು ತಳಕು ಹಾಕುವುದು. ಮದುವೆ ಅಂದರೆ ಕನ್ಯೆಯ ಟ್ರಾನ್ಸ್ ಪ್ಲಾಂಟೇಶನ್ ತಾನೇ? ತವರಿನಲ್ಲಿ ಮಗಳ ನೆನಪಿನಲ್ಲಿ ಒಂದು ಹೊಸ ಗಿಡ ಹಚ್ಚಿದರೆ ಹೇಗೆ? “ಬೇಟೀ ಕೀ ಪೇಡ್ ಕೋ ಮಾ ಕಭೀ  ಸೂಖ್ನೆ ನಹೀಂ ದೇಗಿ. ಉಸ್ಕೋ ಪಾನಿ ಡಾಲೇಂಗಿ’’ ತವರುಮನೆಯ ಅಪ್ಪ, ಸೋದರ ಸೋದರಿಯರೂ ‘ಕೊಟ್ಟ ಹುಡುಗಿ’ ನೆಟ್ಟ ಗಿಡದಲ್ಲಿ ಅವಳನ್ನೇ ಕಾಣತೊಡಗುತ್ತಾರೆ’.
 
ವೃತ್ತಿಯಲ್ಲಿರುವಾಗಲೇ ಈ ಆಚರಣೆ­ಯನ್ನು ಪ್ರಸಿದ್ಧಿಗೆ ತರಲು ರಾವತ್ ಊರೂರು ಸುತ್ತಿದರು. ನೆಟ್ಟ ಗಿಡದ ಪಾಲನೆ ಮಾಡಲು ಯುವತಿಯರ ಮೈತಿ ಗ್ರೂಪ್ ಕಟ್ಟಿದರು. ಮದುವೆಯ ದಿನ, ತಪ್ಪಿದರೆ ಹಿಂದುಮುಂದಿನ ದಿನ ಮದುಮಕ್ಕಳು ಹಣ್ಣಿನ ಗಿಡ ನೆಡಬೇಕು. ಮದುಮಗ ಇದರ ಪಾಲನೆಗೆಂದು ಸ್ಥಳೀಯ ಮೈತಿ ಗ್ರೂಪಿಗೆ ದೇಣಿಗೆ ಕೊಡಬೇಕು. ನೂರು ರೂಪಾಯಿಯೋ, ಸಾವಿರವೋ, ಅವರವರ ಇಷ್ಟ.
 
ಈ ಆಚರಣೆ ಉತ್ತರಾಖಂಡದ ಹದಿಮೂರು ಜಿಲ್ಲೆಗಳಿಗೂ ಹಬ್ಬಿದೆ. ಚಮೋಲಿ ಮತ್ತು ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಗರಿಷ್ಠ. ಚಮೋಲಿಯಲ್ಲೇ ವರ್ಷಕ್ಕೆ ಕನಿಷ್ಠ ಸಾವಿರ ಮದುವೆ ನಡೆಯುತ್ತದೆ. ‘ಜಿಲ್ಲೆಯ 50ರಿಂದ 60 ಶೇಕಡಾ ಮದುವೆಗಳಲ್ಲೂ ಮೈತಿ ಕಾರ್ಯಕ್ರಮ ಇದ್ದೇ ಇರುತ್ತದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕಲ್ಯಾಣ್ ಭಾಯ್.
 
ಮೈತ್ ಎಂದರೆ ತವರು. ತವರುಮನೆಯಲ್ಲಿ ಗಿಡ ನೆಡುವ ಈ ಆಚರಣೆಗೆ ‘ಮೈತಿ’ ಎಂದು ಹೆಸರು. ಆಂದೋಲನದ ಭಾಗವಾಗಿ ನಂದಾ ಸೈನ್ ಎಂಬಲ್ಲಿ ಎಂಟು ಹೆಕ್ಟೇರಿನ ಮೈತಿ ಅರಣ್ಯ ಬೆಳೆಯುತ್ತಿದೆ. ರಾಜ್ಯದ ಬೇರೆಬೇರೆ ಕಡೆಯ ಮಹಿಳೆಯರು ಬಂದು ಇಲ್ಲಿ  ಓಕ್ ಗಿಡ ನೆಟ್ಟಿದ್ದಾರೆ, ನೆಡುತ್ತಲೇ ಇದ್ದಾರೆ. ಜಿಲ್ಲೆಯ 10–12 ಕಡೆ ಚಿಕ್ಕ ‘ಮೈತಿ ವನ’ಗಳೂ ಎದ್ದೇಳುತ್ತಿವೆ.
 
ಗಢ್ವಾಲಿ ಭಾಷೆಯಲ್ಲಿ ‘ಬಾಂಜ್’ ಎಂದು ಕರೆಯುವ ಈ ಓಕ್, ಸಿಲ್ವರ್ ಓಕ್ ಅಲ್ಲ. ಅದರ ಸಸ್ಯಶಾಸ್ತ್ರೀಯ ಹೆಸರು Quercus incana . ‘ಹಿಮಾಲಯದ ಈ ಭಾಗಕ್ಕೆ ಇದು ಬಹು ಉಪಯೋಗಿ. ದನಗಳಿಗೆ ಮೇವು ಕೊಡುತ್ತದೆ, ಕಟ್ಟಿಗೆ ಕೊಡುತ್ತದೆ, ನೀರಿಂಗಿಸಿ ಕೊಡುತ್ತದೆ.
 
ಇದರಿಂದ ಕೃಷಿಗೆ ಬೇಕಾದ ನೇಗಿಲು ಮತ್ತು ಇನ್ನೂ ಹಲವು ಕೃಷಿ ಉಪಕರಣಗಳನ್ನು ಮಾಡುತ್ತಾರೆ. ಈ ಮರಸಮೂಹ ಇದ್ದಲ್ಲಿ ಅಂತರ್ಜಲ ಚೆನ್ನಾಗಿರುತ್ತದೆ. ಅದಕ್ಕೇ ಇದನ್ನು ನಾವು ‘ಹಿಮಾಲಯನ್ ಗ್ರೀನ್ ಗೋಲ್ಡ್’ ಎಂದೇ ಕರೆಯುತ್ತೇವೆ’ ಎನ್ನುತ್ತಾರೆ ರಾವತ್.
 
ಇಲ್ಲಿ ವರನ ಕಡೆಯವರು ಮದುವೆಗೆ ಬರುವಾಗ ಹಣ್ಣುಗಳನ್ನು ಕೊಡುಗೆಯಾಗಿ ಕೊಡುವ ಸಂಪ್ರದಾಯ ಇದೆಯಂತೆ. ‘ನಾನದಕ್ಕೆ ಒಂದು ಹಣ್ಣಿನ ಗಿಡವನ್ನೂ ಸೇರಿಸಿದೆ” ಎನ್ನುತ್ತಾ ಕಲ್ಯಾಣ್ ಭಾಯ್ ನಗುತ್ತಾರೆ.

ಮದುಮಕ್ಕಳು ಆಯಾಯಾ ವಾತಾವರಣಕ್ಕೆ ಹೊಂದುವ ಹಣ್ಣಿನ ಗಿಡ ನೆಡುತ್ತಾರೆ. ಎತ್ತರ ಪ್ರದೇಶಗಳಲ್ಲಿ ಪಪಾಯ, ಪೇರಳೆ, ದ್ರಾಕ್ಷಿ ನೆಟ್ಟರೆ ತಗ್ಗಿನ ಭಾಗಗಳಲ್ಲಿ ಲಿಚ್ಚಿ ಅಥವಾ ಮಾವು. 
 
‘ಮದುಮಗಳು ನೆಡುವ ಪ್ರತಿಯೊಂದು ಗಿಡವೂ ನಾಳೆ ಆಕೆಗೆ ಹುಟ್ಟುವ ಮಗುವಿಗೆ ಹಣ್ಣು ಕೊಡುತ್ತದೆ, ಆಮ್ಲಜನಕ ಕೊಡುತ್ತದೆ ಮತ್ತು ಕುಡಿನೀರು ಉಳಿಸಿ ಕೊಡುತ್ತದೆ’ - ಇದು ಕಲ್ಯಾಣ್ ಸಿಂಗ್ ಅರಣ್ಯೀಕರಣದ ಮಹತ್ವವನ್ನು ಹೆಣ್ಮಕ್ಕಳಿಗೆ ಬಣ್ಣಿಸುವ ಪರಿ.
 
ಕಾಡು ಬೋಳಾಗಿ ಚಮೋಲಿ ಜಿಲ್ಲೆಯಲ್ಲೇ ಹುಟ್ಟುವ ಗಂಗಾ ಮತ್ತು ಯಮುನಾ ನದಿಗಳು ಸೊರಗಹತ್ತಿವೆ. ಇದನ್ನು ಕಂಡು ಕಲ್ಯಾಣ್ ಸಿಂಗರಿಗೆ ಸಂಕಟವಾಗುತ್ತಿದೆ.

ಒಳ್ಳೆ ರಸ್ತೆ, ಶಾಲೆಗಳಿಲ್ಲದ ಕಾರಣ ಇಲ್ಲಿನ ಕುಟುಂಬ­ಗಳು ನಗರಕ್ಕೆ ಪ್ರವಾಹದೋಪಾದಿಯಲ್ಲಿ ಬೇರೆ ನಗರಗಳಿಗೆ ಹೋಗುತ್ತಿವೆ. ಈ ನಗರ ವಲಸೆ ಕುಗ್ಗಿಸಲು ಈಗ ಇವರು ‘ಗ್ರಾಮಗಂಗಾ ಅಭಿಯಾನ್’ ಸುರು ಮಾಡಿದ್ದಾರೆ. 
 
ಪರವೂರಲ್ಲಿರುವ ಈ ಜಿಲ್ಲೆಯ ಕುಟುಂಬಗಳು ತಮ್ಮೂರಿನ, ಇಲ್ಲಿನ ನದಿಗಳ ಅಭಿವೃದ್ಧಿಗಾಗಿ ‘ಗುಲ್ಲಕ್’ ನಲ್ಲಿ (ಹಣದ ಡಬ್ಬಿ) ದಿನಕ್ಕೊಂದು ರೂಪಾಯಿ ಕೂಡಿಡಬೇಕು. ಅದನ್ನು ವರ್ಷಕ್ಕೊಮ್ಮೆ ಸಂಸ್ಥೆಯ ಬ್ಯಾಂಕ್ ಖಾತೆಗೆ ಕಳಿಸಬೇಕು.
 
ವಿಶ್ವ ಪರಿಸರ ದಿನವಾದ ಜೂನ್ ಐದು  ಮೊತ್ತ ಕಳಿಸಲು ನಿಗದಿತ ದಿನ. ಈ ಕುಟುಂಬಗಳ ಹೆಸರಿನಲ್ಲಿವರು ಗಿಡ ನೆಟ್ಟು ಬೆಳೆಸುತ್ತಾರೆ. ವಾಟ್ಸ್ಆ್ಯಪ್ ಮೂಲಕ ದಾನಿಗಳಿಗೆ ಗಿಡದ ಫೋಟೊ ಕಳಿಸುತ್ತಾರೆ. ಮೊತ್ತದ ಒಂದಂಶ ಊರ ಪ್ರಾಥಮಿಕ ಅಭಿವೃದ್ಧಿಗೆ ಬಳಕೆಯಾಗಲಿದೆ. 
ಕಲ್ಯಾಣ್ ಸಿಂಗ್ ರಾವತ್ - 09412437242
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT