ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಗಳ ರಕ್ಷಣೆಗೆ ನೆಟ್‌ ಚಪ್ಪರ

Last Updated 1 ಮೇ 2017, 19:30 IST
ಅಕ್ಷರ ಗಾತ್ರ

ಆ ಹೊಲದ ತುಂಬಾ ಬಿದಿರಿನ ಪುಟ್ಟ ಹಂದರ ಕಟ್ಟಿ ತೊಳೆದ ನೂಲು ಒಣ ಹಾಕಿದಂತೆ ಉದ್ದಕ್ಕೂ ನೆಟ್‌ ಕಟ್ಟಿದ್ದರು. ಗಾಳಿ ಬಿಟ್ಟಾಗ ಅದರ ಅಡಿಯಿಂದ ಹಳದಿ ಬಣ್ಣದ ಹಾಳೆಗಳು ಹೊರಬಂದು ತಮ್ಮ ಅಸ್ತಿತ್ವ ತೋರಿ ಒಳಹೋಗುತ್ತಿದ್ದವು. ಏನೋ ವಿಚಿತ್ರವಾಗಿದೆಯಲ್ಲ, ಏನಿದರ ಮಜಕೂರು ಎಂಬ ಕುತೂಹಲ ತಾಳಿ ಹೋದಾಗ ರೈತ ಯರ್ರಪ್ಪ ಅವರ ಪಾಲಿಗೆ ಈ ತೋಟವೇ ಒಂದು ಪ್ರಯೋಗಶಾಲೆ ಆಗಿರುವುದು ಗೊತ್ತಾಯಿತು.

ಕಳೆದ ಸಲಕ್ಕಿಂತ ಈ ಬಾರಿ ಬಿಸಿಲು ಜೋರಾಗಿದೆ. 40 ಡಿಗ್ರಿ ಸೆಲ್ಸಿಯಸ್‌ನ ಆಜೂಬಾಜು ಇರುವ ಇಂತಹ ಬಿಸಿಲಲ್ಲಿ ತರಕಾರಿ ಸಸಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ರಾಜ್ಯದ ಇತರ ರೈತರಂತೆಯೇ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಕೃಷಿಕ ಯರ್ರಪ್ಪ ಅವರನ್ನೂ ಕಾಡುತ್ತಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ಅವರು ತಲೆ ಕೆರೆದುಕೊಳ್ಳುತ್ತಿದ್ದಾಗ ಹೊಸ ಯೋಚನೆಯೊಂದು ಹೊಳೆಯಿತು. ಹಿಂದೆ ತರಕಾರಿ ಬೆಳೆಹಾಕಿ ಕೈಸುಟ್ಟುಕೊಂಡಿದ್ದ ಯರ್ರಪ್ಪ, ಈ ಸಲ ತಮ್ಮ ತೋಟವನ್ನು ಪ್ರಯೋಗಕ್ಕೆ ಒಡ್ಡಿದರು. ಟೊಮೆಟೊ ಸಸಿಗಳನ್ನು ನಾಟಿ ಮಾಡಿದ ಅವರು, ಬಿಸಿಲಿನಿಂದ ಸಸಿಗಳು ಬಾಡದಂತೆ ಅವುಗಳ ಮೇಲೆ ನೆಟ್‌ ಕಟ್ಟಿದರು.

‘ಹಿಂದೆಯೂ ಟೊಮೆಟೊ ಬೆಳೆದಿದ್ದೆ. ಬಿಸಿಲಿಗೆ ಗಿಡಗಳು ಬಾಡಿದ್ದರಿಂದ ಹಾಕಿದ ದುಡ್ಡು ವಾಪಸ್‌ ಬಂದಿರಲಿಲ್ಲ. ಕೊಳವೆಬಾವಿಯಿಂದ ಸಿಗುತ್ತಿದ್ದ ಅಲ್ಪ ಪ್ರಮಾಣದ ನೀರಿನಲ್ಲಿ ಇಡೀ ತೋಟವನ್ನು ಒದ್ದೆ ಮಾಡುವುದು ಕಷ್ಟವಾಗಿತ್ತು. ಆದ್ದರಿಂದಲೇ ಸಸಿಗಳ ಮೇಲೆ ನೆಟ್‌ ಕಟ್ಟುವ ಯೋಚನೆ ಮಾಡಿದೆ’ ಎನ್ನುತ್ತಾರೆ ಯರ್ರಪ್ಪ. ಗುಜರಾತಿನಲ್ಲಿ ಇಂತಹ ಪ್ರಯೋಗಗಳು ನಡೆದಿವೆ. ಯರ್ರಪ್ಪ ಅವರ ಪುತ್ರ ಅಲ್ಲಿಗೆ ಹೋದಾಗ ಇಂತಹ ಮಾದರಿಗಳನ್ನು ಕಂಡಿದ್ದರು. ಈಗಿನ ಸಮಸ್ಯೆಗೆ ಆಗಿನ ತಿಳಿವಳಿಕೆ ನೆರವಿಗೆ ಬಂದಿದೆ.

ನೀರಿನ ಉಳಿತಾಯ

ಐದು ಎಕರೆ ಜಮೀನಿಗೆ 36 ಸಾವಿರ ಟೊಮೆಟೊ ಸಸಿಗಳನ್ನು ನೆಡಲಾಗಿದ್ದು, ಸಿಗುತ್ತಿರುವ ಒಂದೂವರೆ ಇಂಚು ನೀರನ್ನೇ ಸದ್ಬಳಕೆ ಮಾಡಲಾಗುತ್ತಿದೆ. ಡ್ರಿಪ್ ಮೂಲಕ ಮುಂಜಾನೆ ಒಂದು ಬಾರಿ, ಸಂಜೆ ಇನ್ನೊಂದು ಬಾರಿ ನೀರು ಹಾಯಿಸಿದರೆ ಸಾಕು, ಸಸಿಗಳ ಮೇಲಿರುವ ನೆಟ್‌ ತೇವಾಂಶ ಕಾಪಾಡುತ್ತದೆ. ಸುಡು ಬಿಸಿಲಿನಿಂದ ಸಸಿಗಳ ರಕ್ಷಣೆ ಮಾಡುತ್ತದೆ. 39 ಡಿಗ್ರಿಯಷ್ಟು ಉಷ್ಣತೆಯಲ್ಲೂ 28 ರಿಂದ 30 ಡಿಗ್ರಿ ಉಷ್ಣತೆಯನ್ನು ಮಾತ್ರ ಈ ನೆಟ್ ಬಿಡುಗಡೆ ಮಾಡಿ ಸಸಿಗಳ ರಕ್ಷಣೆ ಮಾಡುತ್ತದೆ. ಇದರಿಂದ ಅವುಗಳು ಸುಡುವುದಿಲ್ಲ. ಅಲ್ಲದೆ ನೀರಿನ ಪೋಲು ತಪ್ಪುತ್ತದೆ. ಯಾವುದೇ ಕ್ರಿಮಿಕೀಟಗಳು ಬಾರದಂತೆ ಅಂಟಿನ ಪೇಪರ್‌ಗಳನ್ನು ನೆಟ್ಟಿದ್ದು, ಗಿಡಗಳು ಪೌಷ್ಟಿಕತೆಯಿಂದ ಕೂಡಿವೆ.

ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಯಾವುದೇ ನಗರದ ಕೃಷಿ ಪೇಟೆಯಲ್ಲೂ ಈ ನೆಟ್‌ ಸಿಗುತ್ತದೆ. ಮೀಟರ್‌ಗೆ ₹ 18 ರಂತೆ ₹ 1.98 ಲಕ್ಷ ವೆಚ್ಚದಲ್ಲಿ 12 ಸಾವಿರ ಮೀಟರ್‌ ನೆಟ್ ಈ ತೋಟದಲ್ಲಿ ಬಳಕೆಯಾಗಿದೆ. 2ರಿಂದ 4 ಅಡಿಯಷ್ಟು ಅಗಲದ ನೆಟ್‌ ಎಷ್ಟು ಅಡಿ ಬೇಕಾದರೂ ಉದ್ದ ಸಿಗುತ್ತದೆ. ಸರಳವಾಗಿ ಈ ವಿಧಾನವನ್ನು ಮಾಡಿಕೊಳ್ಳಲು ‘ಮನೆಯಲ್ಲಿ ಸಿಗುವ ಹಳೆ ಸೀರೆಯಿಂದ, ತೋಟದಲ್ಲಿ ಸಿಗುವ ಕಟ್ಟಿಯಿಂದಲೂ ಇದನ್ನು ರಚಿಸಿಕೊಳ್ಳಬಹುದು. ಸಣ್ಣ ರೈತರಿಗೆ ಈ ವಿಧಾನ ಅತ್ಯಂತ ಉಪಯುಕ್ತ’ ಎನ್ನುತ್ತಾರೆ ಯರ್ರಪ್ಪ.

ಸಸಿ ನಾಟಿ ಮಾಡಿದ ಮೇಲೆ ಮೇಲ್ಮೈನಿಂದ ಐದು ಅಡಿ ಎತ್ತರದಲ್ಲಿ ಕಟ್ಟಿಗೆ ಸಹಾಯದಿಂದ ಮೇಲ್ಛಾವಣಿ ಹಾಕಲಾಗಿದೆ. ಅದಕ್ಕೆ ನೆಟ್‌ ಕಟ್ಟಲಾಗಿದೆ. ಟೊಮೆಟೊ ಸಸಿಗಳಿಗೆ ಬೇಕಾದಂತಹ ಹದವಾದ ವಾತಾವರಣ ಕಲ್ಪಿಸಿಕೊಡಲು ಯಶಸ್ವಿ ಆಗಿದ್ದರಿಂದ ಈ ಸಲ ಬಂಪರ್‌ ಬೆಳೆ ಸಿಗಲಿದೆ ಎನ್ನುವ ವಿಶ್ವಾಸ ಅವರದ್ದು. ಮಾಹಿತಿಗೆ 9481690284.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT