ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗಾಗಿ ರೈತರ ಒಕ್ಕೂಟ

ಅಕ್ಷರ ಗಾತ್ರ

ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಮತ್ತು ಮನುಷ್ಯನ ಆರೋಗ್ಯ ಹಾಳಾಗುತ್ತಿರುವುದು ನಿಧಾನಕ್ಕೆ ಅರಿವಿಗೆ ಬರುತ್ತಿದೆ. ಅಷ್ಟೇ ನಿಧಾನಕ್ಕೆ ಸಾವಯವ ಆಹಾರ ಸಂಸ್ಕೃತಿ ಕೂಡ ಆರಂಭವಾಗುತ್ತಿದೆ.

ಸಾವಯವ ಗೊಬ್ಬರವನ್ನು ಮಾತ್ರ ಬಳಸಿ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಬೆಳೆಯುವ ರೈತರು ಅಲ್ಲಲ್ಲಿ ಇದ್ದಾರೆ. ಅವುಗಳನ್ನು ಮಾರಾಟ ಮಾಡುವ ಅಂಗಡಿಗಳು ನಗರ ಪ್ರದೇಶಗಳಲ್ಲಿ ತಲೆ ಎತ್ತುತ್ತಿವೆ. ಆದರೆ, ಸಂಘಟಿತರಲ್ಲದ ಸಣ್ಣ ಹಿಡುವಳಿ ಹೊಂದಿರುವ ರೈತರು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಕಷ್ಟದ ಕೆಲಸ.

ಸಾವಯವ ಕೃಷಿ ಬಗ್ಗೆ ಆಸಕ್ತಿ ಇರುವ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ರೈತರು ಒಟ್ಟಾಗಿ ಸಂಘಗಳನ್ನು ಕಟ್ಟಿ ತಾವು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಕೃಷಿ ಇಲಾಖೆ ರಾಜ್ಯದಲ್ಲಿ ರಚಿಸಿರುವ ಸಾವಯವ ರೈತರ 14 ಒಕ್ಕೂಟಗಳಲ್ಲಿ ಇದೂ ಒಂದು. ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಹೆಸರಿನಲ್ಲಿ ರೈತರು ಒಗ್ಗೂಡಿದ್ದಾರೆ.

ಒಕ್ಕೂಟದ ಅಡಿಯಲ್ಲಿ 61 ಸಂಘಗಳಿದ್ದು, 5,500 ರೈತರು ಕೃಷಿಕರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 24, ಮಂಡ್ಯ ಜಿಲ್ಲೆಯಲ್ಲಿ 25 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 12 ಸಂಘಗಳಿವೆ. ಈಗಾಗಲೇ ಒಟ್ಟು 5,300 ಎಕರೆ ಭೂಮಿ ಸಾವಯವ ಕೃಷಿಗೆ ಪರಿವರ್ತನೆಗೊಂಡಿದೆ.
ಈ ಒಕ್ಕೂಟಕ್ಕೆ ಒಬ್ಬರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿದ್ದಾರೆ. ಒಂಬತ್ತು ಮಂದಿ ನಿರ್ದೇಶಕರು ಮತ್ತು ಒಬ್ಬರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೂಡ ಇದ್ದಾರೆ.

ಸಾವಯವ ಕೃಷಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಮಣ್ಣು ಮತ್ತು ಆರೋಗ್ಯವನ್ನು ಸಂವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ರೈತರು ಹೆಜ್ಜೆ ಇಟ್ಟಿದ್ದಾರೆ.

ಒಕ್ಕೂಟದಿಂದ ಬಿತ್ತನೆ ಬೀಜ ಪಡೆಯುವ ರೈತರು,  ತಮ್ಮ ಜಮೀನಿನಲ್ಲೇ ಉತ್ಪತ್ತಿ ಮಾಡಿಕೊಂಡ ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಾರೆ. ನಂತರ ಒಕ್ಕೂಟ ನಿಗದಿ ಮಾಡಿರುವ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ.

ವಸ್ತುವಿನ ಬೆಲೆ ಹೆಚ್ಚಾದರೆ ಅದರ ಲಾಭ ಮಧ್ಯವರ್ತಿಗಳಿಲ್ಲದೆ ರೈತರಿಗೆ ತಲುಪಬೇಕು. ಬೆಲೆ ಕಡಿಮೆಯಾದರೆ ಅದರ ಲಾಭ ನೇರವಾಗಿ ಗ್ರಾಹಕರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ರಮೇಶ್‌ ಪಿ. ರಂಗಸಮುದ್ರ.

ಸದ್ಯಕ್ಕೆ ಒಕ್ಕೂಟದ ಕಚೇರಿಯಲ್ಲೇ ಸಾವಯವ ಧಾನ್ಯಗಳನ್ನು ಪ್ಯಾಕ್‌ ಮಾಡಿ ಲೇಬಲ್‌ ಹಾಕಿ  ಮಾರಾಟ ಮಾಡಲಾಗುತ್ತಿದೆ. ಜನ ಹುಡುಕಿಕೊಂಡು ಬಂದು ಖರೀದಿ ಮಾಡುತ್ತಿದ್ದಾರೆ. ಸಾವಯವ ಮೇಳಗಳಲ್ಲೂ ಭಾಗವಹಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ.

ಬಂಡೂರು ತಳಿ ಸಂರಕ್ಷಣೆ

ಸಾವಯವ ಕೃಷಿಯಲ್ಲಿ ತೊಡಗಿ ಮಣ್ಣು ಮತ್ತು ಜನರ ಆರೋಗ್ಯ ರಕ್ಷಿಸುವ ಜತೆಗೆ ಕಣ್ಮರೆಯಾಗುತ್ತಿರುವ ಬಂಡೂರು ತಳಿಯ ಕುರಿಗಳನ್ನು ಸಂರಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ  ‘ಪ್ರಾಣವೃದ್ಧಿ ಆರ್ಗ್ಯಾನಿಕ್‌ ಮೈಸೂರು’ ಬ್ರ್ಯಾಂಡ್‌ ಅಡಿಯಲ್ಲಿ ಬಂಡೂರು ಕುರಿ ಮತ್ತು ನಾಟಿ ಮೇಕೆ ಮಾಂಸ ಮಾರಾಟ ಮಾಡುವ ಉದ್ದೇಶವನ್ನು ಈ ಒಕ್ಕೂಟ ಹೊಂದಿದೆ ಎಂದು ರಮೇಶ್‌ ವಿವರಿಸುತ್ತಾರೆ.

**

ಮಾರಾಟಕ್ಕೆ ಲಭ್ಯವಿರುವ ಸಾವಯವ ಪದಾರ್ಥಗಳು

ದೇಸಿ ಭತ್ತ ಮತ್ತು ಅಕ್ಕಿ, ಸಾವಯವ ಬೆಲ್ಲ, ರಾಗಿ, ಸಿರಿಧಾನ್ಯ, ಅರಿಶಿಣ, ಶುಂಠಿ, ದೇಸಿ ಬಿತ್ತನೆ ಭತ್ತ, ದೇಸಿ ತರಕಾರಿ ಬಿತ್ತನೆ ಬೀಜ, ದ್ವಿದಳ ಧಾನ್ಯ, ಕಿರು ಅರಣ್ಯ ಉತ್ಪನ್ನ, ವಿವಿಧ ಹಣ್ಣು ಮತ್ತು ತರಕಾರಿ.

ಮೈಸೂರು ಜಿಲ್ಲೆಯಲ್ಲಿ ಭತ್ತ, ರಾಗಿ, ಸಿರಿಧಾನ್ಯ, ಕಬ್ಬು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆದರೆ, ಮಂಡ್ಯ ಜಿಲ್ಲೆಯಲ್ಲಿ ಕಬ್ಬು, ಭತ್ತ, ರಾಗಿ, ತೆಂಗು, ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ರಾಗಿ, ದ್ವಿದಳ ಧಾನ್ಯ, ಸಿರಿಧಾನ್ಯ, ಅರಿಶಿಣ, ಶುಂಠಿ ಅಲ್ಲದೆ ಕಿರು ಅರಣ್ಯ ಉತ್ಪನ್ನಗಳಾದ ಬೆಟ್ಟದ ನೆಲ್ಲಿಕಾಯಿ, ಜೇನು ತುಪ್ಪವನ್ನು ರೈತರು ಒಕ್ಕೂಟಕ್ಕೆ ನೀಡುತ್ತಿದ್ದಾರೆ.

ಆಲೆಮನೆ ಬೆಲ್ಲ: ಸಾವಯವ ಪದ್ಧತಿ ಅನುಸರಿಸಿ ಬೆಳೆದ ಕಬ್ಬನ್ನು ಆಲೆಮನೆಯಲ್ಲೇ ಅರೆದು ಬೆಲ್ಲ ತಯಾರಿಸಲಾಗುತ್ತದೆ. ಪೌಷ್ಟಿಕಾಂಶ ಉಳ್ಳ ಸಾವಯವ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT