ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ನೀರು ಬಳಕೆ ಹಿಂಗೆ...

Last Updated 1 ಮೇ 2017, 19:30 IST
ಅಕ್ಷರ ಗಾತ್ರ

ಅದು ಗದುಗಿನ ಜಿಲ್ಲಾ ಆಸ್ಪತ್ರೆ. ಎರಡು ದಿನಗಳ ಹಿಂದಷ್ಟೇ ಹುಟ್ಟಿದ ಹಸುಗೂಸು ಮತ್ತು ಬಾಣಂತಿಯನ್ನು ನೋಡಲು ಮುಂಡರಗಿ ತಾಲ್ಲೂಕಿನ ಚಿಕ್ಕವ­ಡ್ಡಟ್ಟಿ ತಾಂಡಾದಿಂದ ಸೇಠಾಣಿಬಾಯಿ ಆಸ್ಪತ್ರೆಗೆ ಬಂದಿದ್ದರು. ಅವರ ಎರಡೂ ಕೈಗಳಲ್ಲಿ ಎರಡು ದೊಡ್ಡ ಚೀಲಗಳು. ವಾರ್ಡ್‌ನೊಳಗೆ ಪ್ರವೇಶಿಸಿದವರೇ ಮಗಳು ಮತ್ತು ಮೊಮ್ಮಗಳನ್ನು ಒಮ್ಮೆ ನೋಡಿ, ನಂತರ ತಾವು ತಂದಿದ್ದ ಚೀಲದಿಂದ ಒಂದೊಂದೇ ಬಾಟಲಿ ಹೊರತೆಗೆದು, ಅಲ್ಲೇ ಬಾಣಂತಿ ಮಲಗಿದ್ದ ಮಂಚದ ಪಕ್ಕದಲ್ಲಿ ಜೋಡಿಸಿ ಇಡತೊಡಗಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಸ್ನಾನಕ್ಕೂ ನೀರಿನ ಕೊರತೆ ಇರುವುದರಿಂದ ಊರಿನಿಂದ ಬರುವಾಗಲೇ ಅವರು ಎರಡು ಚೀಲಗಳಲ್ಲಿ, ತಲಾ ಎರಡು ಲೀಟರ್‌ ಸಾಮರ್ಥ್ಯದ 15 ಬಾಟಲಿಗಳಲ್ಲಿ ನೀರನ್ನು ತುಂಬಿ ತಂದಿದ್ದರು.

‘ಗದುಗಿನ್ಯಾಗ ಏನು ಬೇಕಾದ್ರೂ ಸಿಗತೈತ್ರೀ... ಆದ್ರ ನೀರು ಮಾತ್ರ ಕೇಳಬ್ಯಾಡ್ರೀ, ಆಸ್ಪತ್ರ್ಯಾಗ ಕುಡಿಯಾಕ ನೀರಿಲ್ರೀ, ಬೇಕಿದ್ರ ನೀವೇ ತಂದ್ಕೋರಿ ಅಂತಾರಿ. ಬಿಸಿನೀರಿನಲ್ಲಿ ಬಟ್ಟೆ ಅದ್ದಿ ಬಾಣಂತಿ ಮೈ ಒರೆಸ್ತಾರ್ರೀ’ ಎಂದರು ಸೇಠಾಣಿಬಾಯಿ.

ಎರಡು ವಾರಗಳ ಹಿಂದೆ ಒಂದು ಮಧ್ಯಾಹ್ನ ಭಜಂತ್ರಿ ಓಣಿಯಲ್ಲಿ ಹೆಣ್ಣುಮಕ್ಕಳ ಗಲಾಟೆ ನಡೆದಿತ್ತು. ಓಣಿಯಲ್ಲಿ ಪೈಪ್‌ಲೈನ್‌ನ ವಾಲ್ವ್‌ನಿಂದ ಸೋರುತ್ತಿದ್ದ ಹನಿ ಹನಿ ನೀರನ್ನು ಸಂಗ್ರಹಿಸಲು ಸಮರ ನಡೆದಿತ್ತು. ಅದೇ ದಿನ 40 ದಿನಗಳ ಬಳಿಕ ನಗರಸಭೆಯು ಗದಗ–ಬೆಟಗೇರಿ ಅವಳಿನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಿತ್ತು. ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್‌ ಭಜಂತ್ರಿ ಓಣಿಯ ಮೂಲಕ ಹಾದುಹೋಗಿದ್ದು, ಇಲ್ಲಿ ವಾಲ್ವ್‌ನಿಂದ ಸೋರುತ್ತಿದ್ದ ನೀರು ಪಡೆಯಲು ಸ್ಥಳೀಯ ನಿವಾಸಿಗಳು ಕೊಡಗಳೊಂದಿಗೆ ಮುಗಿಬಿದ್ದಿದ್ದರು.

ವಿವೇಕಾನಂದ ಬಡಾವಣೆಯ 16ನೇ ನಂಬರ್‌ ಶಾಲೆಯ ಸಮೀಪ ಎರಡು ವಾರಗಳ ಹಿಂದೆ ಕಟ್ಟಿಗೆ ಆರಿಸುತ್ತಾ ಬಂದ ಬಾಲಕಿಯರಿಬ್ಬರು ಬಿಸಿಲಿನ ತಾಪ ಮತ್ತು ನೀರಡಿಕೆಯಿಂದ ನಿತ್ರಾಣಗೊಂಡು ಕುಸಿದುಬಿದ್ದರು. ಅದಕ್ಕೂ ಮುನ್ನ ‘ಕುಡಿಯಾಕ ಸ್ವಲ್ಪ ನೀರು ಕೊಡ್ರೀ’ ಎಂದು ಬಾಟಲಿ ಹಿಡಿದುಕೊಂಡು ಅವರಿಬ್ಬರು ಹತ್ತಾರು ಮನೆಗಳ ಕದ ತಟ್ಟಿದ್ದರು. ಆದರೆ, ಎಲ್ಲರೂ ನೀರಿಲ್ಲ ಎಂದು ಮುಂದೆ ಸಾಗಹಾಕಿದ್ದರು. ಕುಸಿದು ಬಿದ್ದ ನಂತರ ಅಕ್ಕಪಕ್ಕದವರು ಸೇರಿ ಸಕಾಲದಲ್ಲಿ ಒಂದಿಷ್ಟು ನೀರು ಕುಡಿಸಿದ್ದರಿಂದ ಬಾಲಕಿಯರು ಜೀವ ಉಳಿಸಿಕೊಂಡರು.

ಇದು ಗದುಗಿನ ಕುಡಿಯುವ ನೀರಿನ ಸಮಸ್ಯೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಏಕೈಕ ಮೂಲವಾಗಿದ್ದ ತುಂಗಭದ್ರಾ ನದಿಪಾತ್ರ ಬತ್ತಿದೆ. ಹೀಗಾಗಿ ನಗರಸಭೆ ನೀರು ಪೂರೈಕೆಯನ್ನು ಮತ್ತೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇನ್ನು ಕುಡಿವ ನೀರು ಪೂರೈಕೆ ಪ್ರಾರಂಭವಾಗಬೇಕಾದರೆ ವರುಣ ಕೃಪೆ ತೋರಬೇಕು. ಮುಂಗಾರಿನಲ್ಲಿ ಉತ್ತಮ ಮಳೆ ಸುರಿದು, ಭದ್ರಾ ಜಲಾಶಯ ಭರ್ತಿಯಾಗಿ, ತುಂಗಭದ್ರಾ ನದಿ ಪಾತ್ರದಲ್ಲಿ ನೀರು ಹರಿದರೆ ಮಾತ್ರ ಗದುಗಿನ ಜನತೆಗೆ ಕುಡಿಯುವ ನೀರಿನ ಭಾಗ್ಯ. ಅಲ್ಲಿಯವರೆಗೆ ನಗರಸಭೆ ಟ್ಯಾಂಕರ್‌ ಮೂಲಕ ಪೂರೈಸುವ ಸವಳು ನೀರೇ ಆಶ್ರಯ.ಅಥವಾ ಖಾಸಗಿ ಟ್ಯಾಂಕರ್‌ ಮೂಲಕ ₹ 600 ಕೊಟ್ಟು ನೀರು ತರಿಸಿಕೊಳ್ಳಬೇಕು.

ಮಿತಬಳಕೆಯಲ್ಲೂ ಮಾದರಿ: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಜಲಕ್ಷಾಮ ನಗರದ ಜನತೆಗೆ ನೀರಿನ ಮಿತ ಬಳಕೆಯ ಹೊಸ ಹೊಸ ಪಾಠಗಳನ್ನು ಕಲಿಸಿದೆ. ತಿಂಗಳು, ಒಂದೂವರೆ ತಿಂಗಳಿಗೊಮ್ಮೆ ಪೂರೈಕೆಯಾಗುವ ನೀರನ್ನು ನಿಧಿಯಂತೆ ಸಂಗ್ರಹಿಸಿಟ್ಟುಕೊಂಡು, ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದನ್ನು ಇಲ್ಲಿನ ಹೆಣ್ಣುಮಕ್ಕಳು ಚೆನ್ನಾಗಿ ಅರಿತುಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಜಲತಜ್ಞೆಯರು. ಅವರ ನೀರಿನ ಸದ್ಬಳಕೆ ಸೂತ್ರಗಳು ಇಡೀ ರಾಜ್ಯಕ್ಕೆ ಪಾಠ. ನಲ್ಲಿ ಬಂದ್‌ ಮಾಡಿ ಪಾತ್ರೆ ತೊಳೆಯುವುದು, ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆ ತೊಳೆಯುವಾಗ ಅದರಿಂದ ಹೋಗುವ ಸೋಪಿನ ನೀರನ್ನು ಶೌಚಾಲಯದ ಫ್ಲಶ್‌ಗೆ ಬಳಸುವುದು, ನೆಲ ಒರೆಸಿದ ನೀರನ್ನು ಗಿಡಕ್ಕೆ ಹಾಕುವುದು, ವಾಷಿಂಗ್‌ ಮೆಷಿನ್‌ ಬದಲು ಬಕೆಟ್‌ನಲ್ಲಿ ಬಟ್ಟೆ ತೊಳೆಯುವುದು –ಇಂತಹ ಉಪಾಯಗಳನ್ನು ಗದುಗಿನ ಹೆಣ್ಣುಮಕ್ಕಳು ಮೂರು ದಶಕಗಳ ಹಿಂದಿನಿಂದಲೇ ಅಂದರೆ, ತುಂಗಭದ್ರಾ ನದಿ ನೀರು ಪೂರೈಕೆ ಎಂದಿನಿಂದ ಬರಲು ಪ್ರಾರಂಭವಾಯಿತೋ ಅಂದಿನಿಂದಲೇ ಅಳವಡಿಸಿಕೊಂಡಿದ್ದಾರೆ.

‘ಮೊದಲು ಸರಾಸರಿ ಎರಡು ವಾರಕ್ಕೊಮ್ಮೆ ನೀರು ಬಿಡುತ್ತಿದ್ದರು. ನಂತರ 25 ದಿನಗಳಿಗೆ ಕೊಡಲು ಆರಂಭಿಸಿದರು. ಆಮೇಲೆ ತಿಂಗಳಿಗೊಮ್ಮೆ ಪೂರೈಕೆ ಮಾಡತೊಡಗಿದರು. ಈಗ ನೀರು ಬಂದು 50 ದಿನಗಳು ಕಳೆದಿವೆ. ಮುಂದೆ ನೂರು ದಿನ ಆಗಬಹುದು. ನೀರು ಬರುವುದು ಎಷ್ಟೇ ತಡವಾದರೂ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟೊಂದು ಸಹನಶೀಲತೆ ಅವರಿಗೆ ಮೈಗೂಡಿದೆ. ‘ನಮ್ಮ ತಾಳ್ಮೆಯ ಸಂಪೂರ್ಣ ಯಶಸ್ಸು ನಗರಸಭೆ ಮತ್ತು ಜನಪ್ರತಿನಿಧಿಗಳೇ ಸಲ್ಲಬೇಕು. ನೀರಿಲ್ಲದೆ ಹೇಗೆ ಎರಡು ಮೂರು ತಿಂಗಳು ಬದುಕಬಹುದು ಎನ್ನುವುದನ್ನು ಅವರು ಹಂತಹಂತವಾಗಿ ನಮಗೆ ಕಲಿಸುತ್ತಿದ್ದಾರೆ. ನೀರಿನ ಮಿತ ಬಳಕೆಗೆ ಅವರೇ ನಮಗೆ ಸ್ಫೂರ್ತಿ‘ ಎನ್ನುತ್ತಾರೆ ಬೆಟಗೇರಿಯ ಹೆಲ್ತ್‌ಕ್ಯಾಂಪ್‌ ನಿವಾಸಿ ಲಕ್ಷ್ಮೀದೇವಿ ರಾಂಪುರ.

‘ಐದು ವರ್ಷಗಳ ಹಿಂದೆ ಬಾಗಲಕೋಟೆಯಿಂದ ಇಲ್ಲಿಗೆ ಮದುವೆಯಾಗಿ ಬಂದೆ. ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ವಾಷಿಂಗ್‌ ಮೆಷಿನ್‌ ಕೊಡಿಸಿದ್ದರು. ಆದರೆ, ನೀರಿನ ಕೊರತೆಯಿಂದ ಅದರ ಬಳಕೆಯನ್ನೇ ನಿಲ್ಲಿಸಿದ್ದೇವೆ. ಮಳೆಗಾಲದಲ್ಲಿ ಮಾತ್ರ ಬಟ್ಟೆ ಹಿಂಡಲು ಅದನ್ನು ಬಳಸುತ್ತೇವೆ’ ಎನ್ನುತ್ತಾರೆ ಬೆಟಗೇರಿಯಲ್ಲಿ ಬಿಡಾರ ಹೂಡಿರುವ ಕವಿತಾ ಹುಲ್ಲೂರ. ‘ಈ ಊರಿಗೆ ಈಗ ಕನ್ಯೆ ಕೊಡಲು ಹಿಂದೇಟು ಹಾಕುತ್ತಿರುವುದು ನಿಮಗೇ ಗೊತ್ತಿದೆಯಲ್ಲ’ ಎಂದು ನೀರಿನ ಸಾಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲುತ್ತಾರೆ.

(ಭೀಷ್ಮಕೆರೆ... ಗದುಗಿನ ನೀರಿನ ಸ್ಥಿತಿಗೆ ಕನ್ನಡಿ)

‘ನಮ್ಮ ಮನೆಯಲ್ಲಿ ದಿನಬಳಕೆಯ ಪಾತ್ರೆಗಳಿಗಿಂತ ಹೆಚ್ಚಾಗಿ ಕೊಡಗಳೇ ತುಂಬಿವೆ. ನೀರನ್ನು ತುಪ್ಪದಂತೆ ಬಳಕೆ ಮಾಡುತ್ತಿದ್ದೇವೆ. ಕಳೆದ ಬೇಸಿಗೆಯಲ್ಲಿ 42 ದಿನಗಳಿಗೊಮ್ಮೆ ನೀರು ಪೂರೈಕೆಯಾಗಿತ್ತು. ಹೀಗಾಗಿ ಈ ಬೇಸಿಗೆಯಲ್ಲಿ ನೀರಿನ ಮಿತ ಬಳಕೆಗೆ ತುಸು ಹೆಚ್ಚೇ ಎಚ್ಚರಿಕೆವಹಿಸಿದ್ದೇವೆ’ ಎನ್ನುತ್ತಾರೆ ಕಬಾಡಿಚಾಳದ ಗೃಹಿಣಿ ಶುಭಾ ಕುಲಕರ್ಣಿ.

‘ಬೇಸಿಗೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳ ಸ್ನೇಹಿತರು ಮನೆಗೆ ಬರುತ್ತಾರೆ. ಬರಬೇಡಿ ಎಂದು ಹೇಳಲು ಮನಸ್ಸಿಗೆ ನೋವಾಗುತ್ತದೆ. ಆದರೆ, ನೀರಿನ ಸಮಸ್ಯೆಯಿಂದ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಗೆಳೆಯ, ಗೆಳತಿಯರನ್ನು ಮನೆಗೆ ಕರೆದುಕೊಂಡು ಬರಬೇಡಿ ಎಂದಿದ್ದೇನೆ. ಎರಡು ಕಿ.ಮೀ ದೂರದಿಂದ ಕುಡಿಯಲು ನೀರು ತರುತ್ತೇವೆ’ ಎನ್ನುತ್ತಾರೆ ಗಾಂಧಿನಗರದ ಗೃಹಿಣಿ ಗೀತಾ ಹಂಸನೂರ.

‘ನಿಮ್ಮ ಬಡಾವಣೆಗೆ ನೀರು ಬಂದು ಎಷ್ಟು ದಿನ ಕಳೆಯಿತು’ ಎಂದು ವಿವೇಕಾನಂದ ಬಡಾವಣೆಯ ನಿವಾಸಿ ಮುಲ್ಲಾಸಾಬ್ ಅಂಚಟಗೇರಿ ಅವರನ್ನು ಕೇಳಿದರೆ, ‘ನೀವು ಗದುಗಿಗೆ ಹೊಸಬರೇನ್ರೀ? ಇಲ್ಲಿ ನೀರಿನ ಪೂರೈಕೆಯನ್ನು ದಿನಗಳ ಲೆಕ್ಕದಲ್ಲಿ ಅಳೆಯುವುದಿಲ್ಲ, ವರ್ಷದಲ್ಲಿ 10 ಸಲ ಬಿಡ್ತಾರ್ರೀ’ ಎಂದು ಬೃಹತ್‌ ಸಮಸ್ಯೆಯೊಂದರ ಸರಳ ವಿವರಣೆ ನೀಡುತ್ತಾರೆ.

ಯಾಕೆ ಹೀಗೆ?: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿ ಪಾತ್ರದಲ್ಲಿ ಹರಿದು ಬರುವ ನೀರನ್ನು ಮುಂಡರಗಿ ತಾಲ್ಲೂಕಿನ ಹಮ್ಮಿಗೆ ಬಳಿ ಕಟ್ಟಿರುವ ಬ್ಯಾರೇಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬ್ಯಾರೇಜ್‌ನಿಂದ ಕೊರ್ಲಹಳ್ಳಿ ಜಾಕ್ವೆಲ್‌ಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಅಲ್ಲಿಂದ ನೀರೆತ್ತಿ, ಗದಗ ನಗರಕ್ಕೆ ಪೂರೈಸಲಾಗುತ್ತದೆ.

‘ಹಮ್ಮಿಗೆ ಬ್ಯಾರೇಜ್‌ನ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯ 3.12 ಟಿಎಂಸಿ ಅಡಿ. ಆದರೆ, ಈ ಬ್ಯಾರೇಜ್‌ನಲ್ಲಿ ಸದ್ಯ 1.68 ಟಿಸಿಎಂಸಿ ಅಡಿಯಷ್ಟು ಮಾತ್ರ ನೀರು ನಿಲ್ಲಿಸಲು ಸಾಧ್ಯ. ಮಳೆ ಕೊರತೆಯಿಂದ ಒಂದು ದಶಕದಿಂದ ತುಂಗಭದ್ರಾ ನದಿ ಪಾತ್ರ ಬತ್ತುತ್ತಿದೆ. ಹೀಗಾಗಿ ಬ್ಯಾರೇಜ್‌ಗೆ ಹರಿದುಬರುವ ನೀರಿನ ಪ್ರಮಾಣ ಕಡಿಮೆ. ಈ ಸಲ ಭದ್ರಾ ಜಲಾಶಯದಿಂದಲೇ ನದಿಗೆ ನೀರು ಬಿಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆ ಜಲಾಶಯದಿಂದ ಹಮ್ಮಿಗೆ ಬ್ಯಾರೇಜ್‌ 230 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಹರಿದು ನೀರು ಹಮ್ಮಿಗೆ ಬ್ಯಾರೇಜ್‌ ತಲುಪಲು ಸರಾಸರಿ 14 ದಿನಗಳು ಹಿಡಿದವು. ಸಂಗ್ರಹವಾಗಿದ್ದು ಒಂದು ಟಿಎಂಸಿ ಅಡಿಯಷ್ಟು ನೀರು. ಅದರಲ್ಲೇ ಎರಡು ವಾರಕ್ಕೆ ಆಗುವಷ್ಟು ನೀರನ್ನು ಗದುಗಿಗೆ ಪೂರೈಸಿದ್ದೆವು’ ಎನ್ನುತ್ತಾರೆ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಸಹಾಯಕ ಎಂಜಿನಿಯರ್‌ ವಿ. ಹನುಮಂತಪ್ಪ.

ನೀರು ಮಾರಾಟ ಜೋರು: ನಗರದಲ್ಲಿ ನೀರಿನ ಹಾಹಾಕಾರ ಹೆಚ್ಚಿದ ಬೆನ್ನಲ್ಲೇ,  ಖಾಸಗಿ ಟ್ಯಾಂಕರ್‌ ನೀರಿನ ಬೇಡಿಕೆ ಮತ್ತು ಬೆಲೆ ದ್ವಿಗುಣಗೊಂಡಿದೆ. ಸರಾಸರಿ ₹300ರಷ್ಟಿದ್ದ ಟ್ಯಾಂಕರ್‌ ನೀರಿನ ಬೆಲೆ ಈಗ ₹600ಕ್ಕೆ ಏರಿದೆ. ಕನಿಷ್ಠ ಎರಡು ದಿನ ಮುಂಚೆ ಬೇಡಿಕೆ ಸಲ್ಲಿಸಬೇಕು. ಬೇರೆ ನಗರಗಳಲ್ಲಿ ನೀರು ಬರುವುದು ಒಂದುದಿನ ತಡವಾದರೆ ಹುಯಿಲು ಏಳುತ್ತದೆ. ಇಂತಹ ಎಲ್ಲ ಒಳಸುಳಿಗಳ ಮಧ್ಯೆ ಗದುಗಿನ ಜನ ನೆಮ್ಮದಿಯಿಂದಲೇ ಬದುಕಿದ್ದಾರೆ!

**

‘ನೀರಿಲ್ಲ, ರಿಪೇರಿ ಇದೆ’

ಬರಗಾಲವನ್ನೇ ಹಾಸಿ ಹೊದ್ದುಕೊಂಡಿರುವ ಜಿಲ್ಲೆಯಲ್ಲಿ ಯಾವುದೇ ಜಲಮೂಲವಿಲ್ಲ. ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಬಳಿ ಹರಿದಿರುವ ತುಂಗಭದ್ರಾ ನದಿಯಿಂದ 1985ರಿಂದಲೂ ನಗರಕ್ಕೆ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಮಳೆ ಕೊರತೆಯಿಂದ ನದಿಪಾತ್ರ ನಿರಂತರವಾಗಿ ಬತ್ತುತ್ತಿದ್ದು, ನೀರಿಗೆ ಹಾಹಾಕಾರ ಉಂಟಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಂಕಿ ಅಂಶದಂತೆ ಒಂದು ದಶಕದಲ್ಲಿ ಜಿಲ್ಲೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಕೊರೆದಿರುವ  29,420 ಕೊಳವೆಬಾವಿಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿಹೋಗಿವೆ. ಕೊಳವೆಬಾವಿಗಳನ್ನೇ ಅವಲಂಬಿಸಿದ್ದ ಶುದ್ಧ ನೀರಿನ ಘಟಕಗಳಲ್ಲಿ ಶೇ 70ರಷ್ಟು ಸ್ಥಗಿತಗೊಂಡಿವೆ. ಹೆಚ್ಚಿನ ಘಟಕಗಳ ಮುಂದೆ ‘ನೀರಿಲ್ಲ, ರಿಪೇರಿ ಇದೆ’ ಎಂಬ ಬೋರ್ಡ್‌ ತೂಗು ಹಾಕಲಾಗಿದೆ. ಕೆಲವೇ ಶುದ್ಧ ನೀರಿನ ಘಟಕಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ನೀರು ಲಭ್ಯವಿದ್ದು, ಬೆಳಿಗ್ಗೆ ಮತ್ತು ಸಂಜೆ, ತಲಾ ಅರ್ಧಗಂಟೆ ಮಾತ್ರ ನೀರು ಪೂರೈಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT