ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಕನಸುಗಳಿಗೆ ‘ವಿಸ್ತಾರ’ದ ರೆಕ್ಕೆ!

Last Updated 1 ಮೇ 2017, 19:30 IST
ಅಕ್ಷರ ಗಾತ್ರ

‘ಒಮ್ಮೆ ಪೇಟೆಯಲ್ಲಿ ಹೋಗುತ್ತಿದ್ದಾಗ ಗಾಡಿಯಲ್ಲಿ ಹೊರಟಿದ್ದ ಪೊಲೀಸ್‌ ಅಧಿಕಾರಿಯನ್ನು ತೋರಿಸಿದ್ದ ಅಮ್ಮ, ‘ನೀನು ಅವರಂತೆಯೇ ಆಗಬೇಕು’ ಎಂದಿದ್ದರು. ಅಮ್ಮನ ಆಸೆ ಈಡೇರಿಸುವ ಆತ್ಮಸ್ಥೈರ್ಯ ನನಗೀಗ ಸಿಕ್ಕಿದೆ...’

–‘ವಿಸ್ತಾರ’ದ ಆ ಶಾಲಾ ಆವರಣದಲ್ಲಿ ಮಾತಿಗೆ ಸಿಕ್ಕ ಪುಟ್ಟಿ ನೇತ್ರಾ ಹೀಗೆ ಹೇಳುವಾಗ ಅವಳ ಕಣ್ಣುಗಳಲ್ಲಿ ಸಾವಿರ ವಾಟ್‌ನ ಬಲ್ಬು ಹೊತ್ತಿ ಬೆಳಗಿದಂತಹ ಪ್ರಕಾಶ. ಮತ್ತೊಬ್ಬ ಪುಟ್ಟಿ ದುರ್ಗಾ, ‘ನಾವೂ ಮುಖ್ಯವಾಹಿನಿಗೆ ಬರ್ತೀವಿ ಸರ್‌’ ಎಂದಾಗ ಕಣ್ಣು ತುಂಬಿಸಿಕೊಳ್ಳುವ ಸರದಿ ಎದುರಿಗೆ ಕುಳಿತವರದು.

ಗಂಗಾವತಿ ತಾಲ್ಲೂಕಿನ ಜಂತಕಲ್ಲಿನ ನೇತ್ರಾ, ಹೊಸಳ್ಳಿಯ ದುರ್ಗಾ ಮಾತ್ರವಲ್ಲ, ಇಂತಹ ಕನಸುಗಳನ್ನು ತುಂಬಿಕೊಂಡ ನೂರಾರು ಮಕ್ಕಳು ‘ವಿಸ್ತಾರ’ದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಲ್ಲಿನ ಅಂಗಳದಲ್ಲಿ ನೆಟ್ಟು ಬೆಳೆಸುತ್ತಿರುವ ಸಸಿಗಳಂತೆಯೇ ಆ ಮಕ್ಕಳ ಕನಸುಗಳು ಸಹ ಟಿಸಿಲು ಒಡೆಯುತ್ತಿವೆ.

ದೇವದಾಸಿಯರ ಮಕ್ಕಳೇ ಈ ಸಂಸ್ಥೆಯ ಮುಖ್ಯ ಗುರಿಯಾಗಿದ್ದರೂ ತಂದೆ ಎರಡನೇ ಮದುವೆಯಾಗಿ ಕೌಟುಂಬಿಕ ಕಲಹದಿಂದ ತೊಂದರೆ ಅನುಭವಿಸಿದವರು, ಶೋಷಣೆಗೆ ಒಳಗಾದವರು, ಆರ್ಥಿಕ ಸಂಕಷ್ಟದ ಸುಳಿಗೆ ಸಿಕ್ಕವರು, ಪಾಲಕರು ಗುಳೆ ಹೋಗಿದ್ದರಿಂದ ಪೊರೆಯುವವರಿಲ್ಲದೆ ಪರಿತಪಿಸುವವರು... ಹೀಗೆ ಸಮಾಜದ ಮುಖ್ಯವಾಹಿನಿಯಲ್ಲಿ ನಿಲ್ಲಲಾಗದ ಮಕ್ಕಳಿಗೆ ಆಧಾರವಾಗಿದೆ ‘ವಿಸ್ತಾರ’.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಚಿಕ್ಕಬಿಡನಾಳ ಗ್ರಾಮದಲ್ಲಿ ನೆಲೆ ಕಂಡುಕೊಂಡಿರುವ ಈ ಪುನರ್ವಸತಿ ಸಂಸ್ಥೆಯದ್ದು ಒಂದು ಕುತೂಹಲಕಾರಿ ಕಥನ.

ಬೆಂಗಳೂರಿನ ಕೊತ್ತನೂರಿನಲ್ಲಿ 2005ರಲ್ಲಿ ‘ವಿಸ್ತಾರ’ ಸಂಸ್ಥೆ ಆರಂಭವಾಯಿತು. ಡೇವಿಡ್‌ ಸೆಲ್ವರಾಜ್‌ ಅದರ ಸಂಸ್ಥಾಪಕರು. ಹಂತ–ಹಂತವಾಗಿ ತನ್ನ ಚಟುವಟಿಕೆಗಳನ್ನು ರಾಜ್ಯದಾದ್ಯಂತ ವಿಸ್ತರಿಸುತ್ತಾ ಹೋಯಿತು. 

ಬಾಂಧವಿ ಯೋಜನೆ

‘ಉತ್ತರ ಕರ್ನಾಟಕಕ್ಕೆ ಬಂದಾಗ ಇಲ್ಲಿ ಕಂಡದ್ದು ದೇವದಾಸಿ ಸಮಸ್ಯೆ. ಇದು ಸಾಮಾಜಿಕ ನೆಲೆಯಲ್ಲಿ ಒಂದು ಹಿಂಸೆಯೇ ಆಗಿತ್ತು. ತಮ್ಮ ಮಕ್ಕಳನ್ನು ಈ ಅಪಾಯದಿಂದ ಪಾರು ಮಾಡುವ ಚಿಂತೆ ಅನೇಕ ತಾಯಂದಿರನ್ನು ಕಾಡಿತ್ತು. ಅವರಿಗೆ ನೆರವಿನಹಸ್ತ ಚಾಚುವ ಉದ್ದೇಶದಿಂದ ‘ಬಾಂಧವಿ’ ಯೋಜನೆಯನ್ನು ಆರಂಭಿಸಿದೆವು’ ಎಂದರು ‘ವಿಸ್ತಾರ’ದ ಸಂಯೋಜಕಿ ವಿ.ಆಶಾ.

‘ರಾಯಚೂರಿನ ನವಜೀವನ ಮಹಿಳಾ ಒಕ್ಕೂಟ, ಬಾಗಲಕೋಟೆಯ ಅಂತ್ಯೋದಯ, ಬೀದರ್‌ನ ಅರಳು, ಚಿತ್ರದುರ್ಗದ ವಿಮುಕ್ತಿ, ಹೊಸಪೇಟೆಯ ಸಖಿ, ಆಧೋನಿಯ ಸಬಲ ಸಂಸ್ಥೆಗಳು ನಮ್ಮ ಕಾರ್ಯಕ್ಕೆ ಕೈಜೋಡಿಸಿದವು. ಸಂಕಷ್ಟದಲ್ಲಿರುವ ಪುಟ್ಟ ಮಕ್ಕಳನ್ನು ಆ ಸಂಸ್ಥೆಗಳ ಮೂಲಕ ಗುರುತಿಸಿ ಕರೆತರುವ ಕೆಲಸ ಆಯಿತು’ ಎಂದು ವಿವರಿಸಿದರು.

ಬರಿಗೈಯಲ್ಲಿ ಬೆಳೆದ ವಿಸ್ತಾರ...

ಕೊಪ್ಪಳ ಜಿಲ್ಲೆಯಲ್ಲಿ ‘ಬಾಂಧವಿ’ ಯೋಜನೆಯಿಂದ ವಿದ್ಯಾಸಂಸ್ಥೆಯನ್ನು ಆರಂಭಿಸಬೇಕೇ ಬೇಡವೇ ಎಂಬ ಗೊಂದಲ ಇತ್ತು. ಇಲ್ಲಿನ ಹೆಣ್ಣುಮಕ್ಕಳನ್ನು ದೂರದ ಬೆಂಗಳೂರಿಗೆ ಕಳುಹಿಸಲು ಪೋಷಕರೂ ಹಿಂದೇಟು ಹಾಕುತ್ತಿದ್ದರು. ಎಲ್ಲರಿಗೂ ಅನುಕೂಲವಾಗುವ ದೃಷ್ಟಿಯಿಂದ ಸಮಸ್ಯೆ ಇರುವಲ್ಲಿಯೇ ಪುನರ್ವಸತಿ ಕೇಂದ್ರ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿತು.

ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೊಂದು ವಿದ್ಯಾಸಂಸ್ಥೆ ನಿರ್ಮಿಸುವ ಕೆಲಸಕ್ಕೆ ಕೈಹಾಕಿದಾಗ ‘ವಿಸ್ತಾರ’ದ ಮುಂದಿದ್ದ ಮುಖ್ಯ ಸಮಸ್ಯೆಯೇ ದುಡ್ಡಿನದು. ಜರ್ಮನಿಯ ‘ಕಿಂಡರ್ ನಾಟ್‌ ಹೈಫ್‌’ ಸಂಸ್ಥೆಯಿಂದ ನೆರವು ಸಿಕ್ಕಿದ್ದರಿಂದ ಯಲಬುರ್ಗಾ ತಾಲ್ಲೂಕು ಮಂಗಳೂರು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ 25 ಮಕ್ಕಳನ್ನು ಸೇರಿಸಿ ವಸತಿ ನಿಲಯವನ್ನು ಆರಂಭಿಸಿದ್ದೂ ಆಯಿತು.

ಉದ್ದೇಶ ಸ್ಪಷ್ಟವಾಗಿತ್ತು...

ಹೆಣ್ಣುಮಕ್ಕಳನ್ನು ಅಪಾಯದಿಂದ ಪಾರು ಮಾಡುವುದು, ಸಮಗ್ರ ಅಭಿವೃದ್ಧಿಯ ಶಿಕ್ಷಣ ನೀಡುವುದು, ಅತ್ಯುತ್ತಮ ಪೌಷ್ಟಿಕ ಆಹಾರ ನೀಡುವುದು, ಪರಿಸರದ ಬಗೆಗೆ ಅರಿವು ಮೂಡಿಸುವುದು, ಸಾಮಾಜಿಕ ಜಾಗೃತಿ ಉಂಟುಮಾಡುವುದು, ಸ್ವಯಂ ತಿಳಿವಳಿಕೆ ಮೂಡಿಸುವುದು, ಕೀಳರಿಮೆಯಿಂದ ಹೊರಬರುವಂತೆ ಮಾಡುವುದು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವುದು– ‘ವಿಸ್ತಾರ’ದ ಪ್ರಮುಖ ಉದ್ದೇಶಗಳಿವು.

ಸಂಸ್ಥೆಯಲ್ಲಿ ಸದ್ಯ ನೂರು ಮಕ್ಕಳು ಇದ್ದಾರೆ. ಇಲ್ಲಿ ಮಕ್ಕಳ ಪ್ರತಿಭೆ ಹೊರಹಾಕಲು ಅವಕಾಶವಿದೆ. ಸದ್ಯ ಐದನೇ ತರಗತಿವರೆಗೆ ಶಿಕ್ಷಣ ಕೊಡಲಾಗುತ್ತಿದೆ. ‘ವಿಸ್ತಾರ’ದಲ್ಲೇ ಉಳಿದುಕೊಳ್ಳುವ ಮಕ್ಕಳು ಹೆಚ್ಚಿನ ಶಿಕ್ಷಣಕ್ಕಾಗಿ ಸಮೀಪದ ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ. ಮುಂದಿನ ವರ್ಷದಿಂದ ಎಂಟನೇ ತರಗತಿ ಆರಂಭಿಸಲು ಶಿಕ್ಷಣ ಇಲಾಖೆಯ ಅನುಮತಿ ಸಿಕ್ಕಿದೆ. ಇದುವರೆಗೆ ಯಾವುದೇ ಶುಲ್ಕ ಪಡೆಯದೆ ಕೇವಲ ದಾನಿಗಳ ನೆರವಿನಿಂದ ಸಂಸ್ಥೆ ನಡೆಯುತ್ತಿದೆ.

‘ಪೂರ್ಣ ಶುಲ್ಕರಹಿತ ಶಿಕ್ಷಣ ನೀಡಿದರೆ ಅದರ ಮೌಲ್ಯ ತಿಳಿಯುವುದಿಲ್ಲ. ಮುಂದಿನ ವರ್ಷದಿಂದ ತಿಂಗಳಿಗೆ ನೂರು ರೂಪಾಯಿ ಶುಲ್ಕ ವಿಧಿಸಲು ನಿರ್ಧರಿಸಿದ್ದೇವೆ. ತಾಯಂದಿರು ಭಾಗವಹಿಸಬೇಕು ಎಂಬುದೇ ಇದರ ಉದ್ದೇಶ. ಅಷ್ಟು ಶುಲ್ಕವನ್ನು ಭರಿಸುವುದೂ ಕಷ್ಟವಿದೆ ಎಂಬುದು ನಮಗೆ ಗೊತ್ತು. ಅದಕ್ಕಾಗಿ ಶುಲ್ಕ ನಗದು ರೂಪದಲ್ಲೇ ಇರಬೇಕೆಂದಿಲ್ಲ. ಒಂದು ಹಿಡಿ ಧಾನ್ಯ, ತರಕಾರಿ, ಆಹಾರ, ಸಿಹಿತಿಂಡಿ ಹೀಗೆ ಯಾವುದೇ ರೂಪದಲ್ಲಿರಲಿ. ಅದನ್ನು ಪ್ರೀತಿಯಿಂದ ಎಲ್ಲ ಮಕ್ಕಳಿಗೆ ಹಂಚಿದರೆ ಸಾಕು’ ಎಂದು ಹೇಳಿದರು ಆಶಾ.  ತೀರಾ ಹಿಂದುಳಿದ, ನಿಕೃಷ್ಟ ಕುಟುಂಬ ವ್ಯವಸ್ಥೆಯಿಂದ ಬಂದ ಬಾಲಕಿ ಇಲ್ಲಿ ಸುಶಿಕ್ಷಿತಳಾಗಿ, ಹೊಸ ಯೋಚನಾ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾಳೆ. ಆದರೆ, ಹೊಸ ಯೋಚನಾಶಕ್ತಿಗೆ ತಕ್ಕಂತೆ ಆ ಕುಟುಂಬ ಬದಲಾಗಿರುವುದಿಲ್ಲ. ಹೀಗಾಗಿ ಈ ಮಗುವನ್ನು ಅವರು ಸುಲಭವಾಗಿ ಸ್ವೀಕರಿಸುವುದಿಲ್ಲ. ಅದಕ್ಕಾಗಿ ತಾಯಂದಿರಿಗೂ ಇದೇ ಮಾದರಿಯ ವಿಶೇಷ ತರಬೇತಿ ಕೊಡುತ್ತೇವೆ’ ಎಂದು ಅವರು ವಿವರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಒಳಗಾದವರನ್ನು ‘ಬಾಲಕಾರ್ಮಿಕರ ಮುಕ್ತ ಪಂಚಾಯಿತಿ’ ಯೋಜನೆಯಡಿ ವಿವಿಧ ಸಾಮಾಜಿಕ ಸಂಘಟನೆಗಳ ಮೂಲಕ ಹೊರತರುವುದು, ಅವರ ಪರವಾಗಿ ವಕಾಲತ್ತು ವಹಿಸುವುದು, ಅವರನ್ನು ಮುಖ್ಯವಾಹಿನಿಗೆ ತರುವುದು... ಈ ಕಾರ್ಯಗಳನ್ನೂ ನಡೆಸಲಾಗುತ್ತಿದೆ. 15 ಹಳ್ಳಿಗಳನ್ನು ಪ್ರಸಕ್ತ ವರ್ಷ ಬಾಲಕಾರ್ಮಿಕ ವ್ಯವಸ್ಥೆಯಿಂದ ಹೊರತರುವ ಗುರಿ ಹೊಂದಲಾಗಿದೆ.
ಮಕ್ಕಳ ಹಕ್ಕು ಕುರಿತ ಶಿಕ್ಷಣ ಮತ್ತು ವಕಾಲತ್ತು ವಹಿಸುವ ಯೋಜನೆ ‘ಇಕೋ’ ಸಂಸ್ಥೆಯ ನೆರವಿನಿಂದ ನಡೆದಿದೆ. ಈ ಯೋಜನೆಯನ್ನು ವ್ಯವಸ್ಥಿತ ಕಾರ್ಯಜಾಲದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.

‘ಈಗಿನ ಶಿಕ್ಷಣ ನಮ್ಮ ಬದುಕಿಗೆ ಬೇಕಾದದ್ದನ್ನು ಕೊಡುತ್ತಿಲ್ಲ. ಅದಕ್ಕಾಗಿ ಕಲೆ, ರಂಗಭೂಮಿ, ಸಾಮಾಜಿಕ ಚಳವಳಿ ಎಲ್ಲವನ್ನೂ ಒಳಗೊಂಡ ಸಮಗ್ರ ಶಿಕ್ಷಣ ಶಾಲೆಯನ್ನು ತೆರೆದಿದ್ದೇವೆ’ ಎಂದರು ಆಶಾ. ಅವರೊಡನೆ ನಡೆದ ಚರ್ಚೆಯಲ್ಲಿ 1989ರಿಂದ ಇದುವರೆಗೆ ನಡೆದ ಚಳವಳಿಗಳ ಒಂದು ಬಿಡುಬೀಸು ನೋಟವೂ ಸಿಕ್ಕಿತು. ಅಲ್ಲಿ ನರ್ಮದಾ ಬಚಾವೋ, ದಲಿತ–ಮಹಿಳಾ ಚಳವಳಿ... ಹೀಗೆ ವಿವಿಧ ಕಾಲಘಟ್ಟಗಳಲ್ಲಿ ನಡೆದ ಹೋರಾಟಗಳ ನೆನಪುಗಳ ಮೆರವಣಿಗೆ. ‘ಚಳವಳಿಗಳ ಮಧ್ಯೆ ನಡೆಯುತ್ತಿದ್ದ ಮಂಥನದಿಂದ ಹೊರಬಂದ ನವನೀತವೇ ‘ವಿಸ್ತಾರ’ ಎನ್ನುತ್ತಾ ಚರ್ಚೆಯನ್ನು ಮತ್ತೆ ಚಿಕ್ಕಬಿಡನಾಳದ ಕ್ಯಾಂಪಸ್‌ಗೆ ತಂದುಬಿಟ್ಟರು.

ಕಳೆದ ವರ್ಷದಿಂದ ‘ವಿಸ್ತಾರ’ ರಂಗಶಾಲೆಯೂ ಆರಂಭಗೊಂಡಿದೆ. ನೀನಾಸಂ ಮಾದರಿಯಲ್ಲಿ ಆಧುನಿಕ ಮಾದರಿಯ ಹೊಸ ರಂಗ ಪ್ರಯೋಗಗಳು ನಡೆದಿವೆ. ಹಂಪಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಡಿಪ್ಲೊಮಾ ಕೋರ್ಸ್‌ ಇದು. ರಾಜ್ಯದಾದ್ಯಂತ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿ ರಂಗಶಿಕ್ಷಣ ಪಡೆಯಲು ಬರುತ್ತಿದ್ದಾರೆ.

ಮಕ್ಕಳೇ ನಿರ್ವಹಣೆ ಮಾಡುತ್ತಿರುವ ಸಾವಯವ ತೋಟ ಇಲ್ಲಿದೆ. ಪಕ್ಷಿಗಳ ಕಲರವ ಅಲ್ಲಿ ತುಂಬಿದೆ. ಮಕ್ಕಳೇ ತಮಗೆ ಬೇಕಾದ ಯೋಜನೆ ರೂಪಿಸುತ್ತಾರೆ, ಅವುಗಳ ಅನುಷ್ಠಾನದ ಹೊಣೆಯನ್ನೂ ಹೊರುತ್ತಾರೆ. ಬೆಸೆಯುವ ಸಹೋದರತ್ವದ ಸಂಬಂಧಗಳಂತೂ ‘ವಿಸ್ತಾರ’ದಲ್ಲಿ ಅಪೂರ್ವ ವಾತಾವರಣವನ್ನೇ ಸೃಷ್ಟಿಸಿವೆ. ಇಲ್ಲಿ ಮಿಸ್ಸುಗಳಿಲ್ಲ, ಅಮ್ಮಂದಿರಿದ್ದಾರೆ. ಅಕ್ಕ, ತಂಗಿ, ಅಣ್ಣಂದಿರಿದ್ದಾರೆ. ಹೀಗೆ ಸಂಸ್ಥೆ ಮಾತ್ರವಲ್ಲ, ಮನಸ್ಸುಗಳೂ ವಿಸ್ತಾರಗೊಂಡಿವೆ. ಸಂಪರ್ಕ: 89704 33609 ಚಿತ್ರಗಳು: ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT