ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದ್ಧಾಂತಿಕ ಪರಿಕಲ್ಪನೆಯಲ್ಲಿ ಮೂಡಿದ ಚಿತ್ರ

ಬಸವಣ್ಣನವರ ಒಂದು ಪರಿಪೂರ್ಣವಾದ ಭಾವಚಿತ್ರವು ವರ್ಣಚಿತ್ರವಾಗಿ ಮೂಡಿಬಂದ ಬಗೆ...
ಅಕ್ಷರ ಗಾತ್ರ
ವಿಜ್ಞಾನ ಮತ್ತು ತಂತ್ರಜ್ಞಾನವು ಅಭಿವೃದ್ಧಿ ಆಗದಿರುವ ದಿನಗಳಲ್ಲಿ ಚಿತ್ರ, ಕೃತಿ ಮತ್ತು ಘಟನೆಗಳನ್ನು ದಾಖಲಿಸುವುದು, ಚಿತ್ರೀಕರಿಸುವುದು ಕಷ್ಟದ ಕೆಲಸವಾಗಿತ್ತು. 900 ವರ್ಷಗಳ ಹಿಂದೆ ಈಗಿನಂತೆ ಫೋಟೊ ತೆಗೆಯುವ ತಂತ್ರಜ್ಞಾನ ಬಂದಿರಲಿಲ್ಲ.  ಬಸವಣ್ಣ ಮೊದಲಾದ ಸಮಾಜ ಸುಧಾರಕರ ಬದುಕು ಪರಿಚಿತ. ಆದರೆ ಅವರು ಹೇಗಿದ್ದರು ಎನ್ನುವ ಬಗ್ಗೆ ಭಾವಚಿತ್ರ ಲಭ್ಯವಿಲ್ಲ.  
 
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಅರ್ಥಸಚಿವರಾಗಿ ಕಾರ್ಯನಿರ್ವಹಿಸಿದ ಕಾರಣ, ಶಿರದ ಮೇಲೆ ಕಿರೀಟ, ಕೈಯಲ್ಲಿ ಖಡ್ಗ, ಅಶ್ವಾರೂಢ ರಾಜಪೋಷಾಕು. ಇದು ಅಂದು ಕಲಾವಿದರು ಕಂಡಂತಹ ಬಸವಣ್ಣನವರ ಭಾವಚಿತ್ರ. ಇದೇ ಭಾವಚಿತ್ರವನ್ನು ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕೆಲವರು ತೋರಿಸಿದಾಗ, ಅವರು ‘ಇದಾವ ರಾಜರ ಚಿತ್ರ’ ಎಂದು ಕೇಳಿದ್ದರಂತೆ. ಅಲ್ಲಿಯವರೆಗೂ ಕಿರೀಟಧಾರಿ ಬಸವಣ್ಣನವರ ಭಾವಚಿತ್ರವೇ ರಾರಾಜಿಸುತ್ತಿತ್ತು. ಈಗಲೂ ಕೆಲವೊಂದು ಕಡೆ ಅಶ್ವಾರೂಢ ಬಸವಣ್ಣನವರ ಪುತ್ಥಳಿ ನಿಲ್ಲಿಸಿರುವುದನ್ನು ಕಾಣುತ್ತೇವೆ.
 
ಅವರ ಬದುಕಿನ ಒಂದು ಹಂತ ಅರ್ಥಸಚಿವರಾದುದು. ಅದರೊಟ್ಟಿಗೆ ಅವರೊಬ್ಬ ಸಮಾಜ ಸುಧಾರಕರು. ಜಗತ್ತಿನ ಮೊದಲ ಮುಕ್ತ ಚಿಂತಕರು. ರಾಜಮಹಾರಾಜರು ಈ ದೇಶವನ್ನು ಆಳಿದ ಅನೇಕ ಉದಾಹರಣೆಗಳಿವೆ. ಕೆಲ ರಾಜರನ್ನುಳಿದು ಬಹುತೇಕ ರಾಜರು ದಕ್ಷ ಆಳ್ವಿಕೆಗೆ ಹೆಸರಾಗಿದ್ದಾರೆ.

ಬಸವಣ್ಣನವರು ಒಬ್ಬ ಉತ್ತಮ ಆಡಳಿತಗಾರ ನಿಜ. ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಂತಹ ಮಹಾಮುತ್ಸದ್ದಿ. ತಾನು ಹೊಂದಿದ್ದ ಆಡಳಿತದಿಂದ ಅನೇಕ ಜನಪರವಾದ ಕಾರ್ಯಗಳನ್ನು ನಿರ್ವಹಿಸಿದ ಧೀಮಂತ.
 
ಅನೇಕ ಅರಸರು ಆಡಳಿತಕ್ಕೆ ಮಾತ್ರ ಸೀಮಿತವಾದರೆ, ಬಸವಣ್ಣನವರು ತಮ್ಮ ಅಧಿಕಾರವನ್ನು ಸಮಾಜ ಪರಿವರ್ತನೆಗೆ ಬಳಸಿಕೊಂಡದ್ದು ವಿಭಿನ್ನ. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಅಸ್ಪೃಶ್ಯತೆಯನ್ನು ನಿವಾರಿಸಲು ಅಂತರ್ಜಾತಿ ವಿವಾಹವನ್ನು ಏರ್ಪಡಿಸಿದ್ದು, ಅನುಭವ ಮಂಟಪದಲ್ಲಿ 770 ಅಮರಗಣಂಗಳನ್ನು ಸೇರಿಸಿ ಕಾಯಕಪ್ರಧಾನ ಸಮಾಜವನ್ನು ರಚಿಸಿದ್ದು, ಸ್ತ್ರೀಯರ ವಿಮೋಚನೆಗಾಗಿ ಪ್ರಯತ್ನಿಸಿದ್ದು, ವಚನ ಚಳವಳಿಯನ್ನು ಹುಟ್ಟುಹಾಕಿದ್ದು, ಮೌಢ್ಯದ ವಿರುದ್ಧ ಅರಿವು ಮೂಡಿಸಿದ್ದು... ಆ ಪಟ್ಟಿ ಬೆಳೆಯುತ್ತ ಹೋಗುತ್ತದೆ.
 
ಬಸವಣ್ಣನವರು ಕೇವಲ ರಾಜಸತ್ತೆಗೆ ಸೀಮಿತವಾಗಿದ್ದರೆ ಅಷ್ಟೊಂದು ಸಂಖ್ಯೆಯ ಶರಣರು ಅವರ ನಾಯಕತ್ವವನ್ನು ಬೆಂಬಲಿಸುತ್ತಿರಲಿಲ್ಲ. ಅವರೊಬ್ಬ ಸುಧಾರಣಾವಾದಿಯೆಂಬ ಕಾರಣಕ್ಕಾಗಿ ಶರಣ ಸಂಕುಲವೇ ಅವರ ಬೆಂಬಲಕ್ಕೆ ನಿಲ್ಲುತ್ತದೆ.
 
‘ಕಲ್ಯಾಣರಾಜ್ಯ’ವು ಅವರ ಆತ್ಯಂತಿಕ ಉದ್ದೇಶಗಳಲ್ಲಿ ಒಂದು. ಬೇರೆ ರಾಜ್ಯಗಳ ಕಲ್ಪನೆಗೂ ಕಲ್ಯಾಣರಾಜ್ಯ ಕಲ್ಪನೆಗೂ ಬಹಳಷ್ಟು ವ್ಯತ್ಯಾಸ. ಇಂಥ ಗುಣಗಳನ್ನು ಹೊಂದಿದ್ದ ಬಸವಣ್ಣನವರು ಅರಸು ಗದ್ದುಗೆಗೆ ಸೀಮಿತವಾಗಿದ್ದಲ್ಲಿ, ಸಾಮಾಜಿಕ ಸುಧಾರಣೆ, ಧಾರ್ಮಿಕ ಸುಧಾರಣೆ, ಆರ್ಥಿಕ ಸುಧಾರಣೆ ತರಲು ಸಾಧ್ಯ ಆಗುತ್ತಿರಲಿಲ್ಲವೇನೊ!
 
25 ವರ್ಷಗಳ ಹಿಂದೆ ಎಲ್ಲೆಡೆ ಕಿರೀಟಧಾರಿ ಬಸವ ಭಾವಚಿತ್ರವೇ ವಿಜೃಂಭಿಸುತ್ತಿತ್ತು. ಇದನ್ನು ಗಮನಿಸಿದ ನಾನು, ಬಹುಮುಖ ತಾತ್ವಿಕ ಮತ್ತು ಸಾಹಿತ್ಯ ಚಿಂತನೆಯ ದಾರ್ಶನಿಕನೊಬ್ಬ ರಾಜ ಪೋಷಾಕಿನಲ್ಲಿ ಕಳೆದು ಹೋಗಬಾರದೆಂಬ ಕಾಳಜಿಯನ್ನು ಇಟ್ಟುಕೊಂಡು 2005ರಲ್ಲಿ ಧಾರವಾಡದ ಮೊಕ್ಕಾಂನಲ್ಲಿದ್ದಾಗ ಕಲಾವಿದ ವಿ.ಟಿ. ಕಾಳೆ ಅವರಿಗೆ ನನ್ನ ಕಲ್ಪನೆಯ ಭಾವಚಿತ್ರವನ್ನು ಚಿತ್ರಿಸಿ ತರಲು ಹೇಳಿದಾಗ ಅವರು ಬಸವಣ್ಣನವರ ಭಾವಚಿತ್ರವೊಂದನ್ನು ರಚಿಸಿ ತಂದರು.
 
ತಂದಂತಹ ಭಾವಚಿತ್ರವನ್ನು ಪರಿಶೀಲಿಸಿ, ಕೆಲವೊಂದು ಬದಲಾವಣೆ ಮಾಡಿಕೊಂಡು ಬರಲು ಅವರಿಗೆ ಸೂಚಿಸಲಾಯಿತು. ಕಾಳೆ ಅವರು ಈ ನಾಡು ಕಂಡಂತಹ ಅಪ್ರತಿಮ ಕಲಾವಿದರು. ಅವರು, ಬಹುತೇಕ ಹಿಂದಿನ ಮತ್ತು ಈಗಿನ ಮಠಾಧೀಶರ ಭಾವಚಿತ್ರಗಳನ್ನು ಅವರವರ ಮಠಗಳಿಗೆ ಬಿಡಿಸಿಕೊಟ್ಟಿರುತ್ತಾರೆ. ಅದರಂತೆ 12ನೇ ಶತಮಾನದ ಹಲವು ಶರಣರ ಭಾವಚಿತ್ರಗಳನ್ನು ಅನ್ವರ್ಥಕವಾಗಿ ಚಿತ್ರಿಸಿದ್ದಾರೆ.
 
ಅವರು ಮೊದಲು ತಂದಿದ್ದು, ಧ್ಯಾನಾಸಕ್ತ (ಇಷ್ಟಲಿಂಗ ಪೂಜಾನಿರತ) ಬಸವಣ್ಣನವರ ಚಿತ್ರ. 15 ದಿನಗಳ ಬಳಿಕ, ಹೇಳಿದಂತಹ ಬದಲಾವಣೆಗಳನ್ನು ಸರಿಪಡಿಸಿಕೊಂಡು ಭೇಟಿ ಮಾಡಿದರು. ಅವರು ಚಿತ್ರಿಸಿ ತಂದಂತಹ ಬಸವ ಭಾವಚಿತ್ರವು ಸೂಕ್ತವಾಗಿತ್ತು. ಆ ಮೊದಲ ಭಾವಚಿತ್ರವನ್ನು ಶ್ರೀಮಠದ ಕರ್ತೃಗದ್ದುಗೆಯ ಮುಂಭಾಗದ ಮೇಲೆ ಹಾಕಲಾಯಿತು. ದೊಡ್ಡಗಾತ್ರದ ಭಾವಚಿತ್ರಕ್ಕೆ ಹಳ್ಳುಕಟ್ಟು ಹಾಕಿಸಿಕೊಂಡು ಕೊಟ್ಟವರು ಧಾರವಾಡದ ಸಿದ್ಧರಾಮಣ್ಣ ನಡಕಟ್ಟಿ ಅವರು.
 
ಬಸವಣ್ಣನವರ ಕೈಯಲ್ಲಿದ್ದ ಖಡ್ಗವನ್ನು ತೆಗೆದು ಇಷ್ಟಲಿಂಗವನ್ನು ಕೊಡಲಾಯಿತು. ಕಾರಣ ಖಡ್ಗವು ರಾಜಸತ್ತೆಯ ಸಂಕೇತ. ಸಾವಿರಾರು ಪ್ರತಿಗಳನ್ನು ಮುದ್ರಿಸಿ ಮಾರುಕಟ್ಟೆಗೆ ಆ ಭಾವಚಿತ್ರವನ್ನು ಶ್ರೀಮಠದಿಂದ ಬಿಡಲಾಯಿತು. ಆ ಚಿತ್ರವು ಜನಪ್ರಿಯ ಆಗುವಂತೆ ನೋಡಿಕೊಳ್ಳಲಾಯಿತು. ಸ್ವಲ್ಪದಿನಗಳ ಬಳಿಕ ಒಂದು ಆಲೋಚನೆ ಸ್ಫುರಿಸಿತು- ಬಸವಣ್ಣನವರ ಸಮಕಾಲೀನ ಶರಣರ ಭಾವಚಿತ್ರಗಳು ಅವರವರ ಕಾಯಕದೊಟ್ಟಿಗೆ ಚಿತ್ರಿತವಾಗುತ್ತಿದ್ದು, ಬಸವಣ್ಣನವರ ಕೈಯಲ್ಲಿ ಕಾಯಕದ ಸಂಕೇತ ಇಲ್ಲವಲ್ಲ? ಎಂಬ ಚಿಂತನೆ ಮೂಡಿತು.
 
‘ಕಾಯಕವೇ ಕೈಲಾಸ’ ಎಂಬುದು ಶರಣ ಚಳವಳಿಯ ಮುಖ್ಯ ಧ್ಯೇಯ. ಹೀಗಿರುವಾಗ ಪೂಜೆಯು ಕಾಯಕ ಆಗುವುದಿಲ್ಲ. ಕಾಯಕದಲ್ಲಿ ನಿರತನಾದಡೆ ಯಾವ ಪೂಜೆಯೂ ಅಗತ್ಯವಿಲ್ಲ ಎಂಬುದನ್ನು ಶರಣರು ಪ್ರತಿಪಾದಿಸಿದ್ದಾರೆ. ಹೀಗಿರುವಾಗ ಬಸವಣ್ಣನವರ ಭಾವಚಿತ್ರದಲ್ಲಿ ಮತ್ತಷ್ಟು ಬದಲಾವಣೆ ಆಗಬೇಕೆನಿಸಿತು. ಅದೇ ಕಾಳೆ ಅವರನ್ನು (ತನ್ನ ಮಗನೊಂದಿಗೆ) ಕರೆಸಿಕೊಂಡು, ಬಸವಣ್ಣನವರ ಒಂದು ಕೈಯಲ್ಲಿ ವಚನದ ಕಟ್ಟನ್ನು ಕೊಟ್ಟು, ಮತ್ತೊಂದು ಕೈಯಲ್ಲಿ ಲೇಖನಿಯನ್ನು ಕೊಡುವುದು ಉಚಿತವೆಂದು ಸೂಚಿಸಲಾಯಿತು.
 
ಕಾಳೆಯವರು ಅದನ್ನು ಒಪ್ಪಿಕೊಂಡು ಹೋಗಿ ಮತ್ತೆ ಕೆಲವು ದಿನ ಬಿಟ್ಟು, ನಾನು ವಿವರಿಸಿದಂತಹ ಭಾವಚಿತ್ರವನ್ನು ಬಿಡಿಸಿಕೊಂಡು ತಂದರು. ಅಲ್ಪಸ್ವಲ್ಪ ಬದಲಾವಣೆ ಸೂಚಿಸಿದಾಗ ಅವರು ಬದಲಾವಣೆ ಮಾಡಿಕೊಂಡು ಬಂದರು. ವಚನದ ಕಟ್ಟನ್ನು ಕೈಯಲ್ಲಿ ಕೊಟ್ಟಿರುವುದು ಅವರೊಬ್ಬ ಶ್ರೇಷ್ಠ ವಚನಕಾರರು ಮತ್ತು ಮತ್ತೊಂದು ಕೈಯಲ್ಲಿ ಲೇಖನಿಯನ್ನು ಕೊಟ್ಟಿರುವುದರಿಂದ ಸುಧಾರಣೆಯನ್ನು ಸಂಕೇತಿಸುತ್ತದೆ. ಕೇಸರಿ (ಕಾವಿ) ಬಣ್ಣಕ್ಕೆ ಬದಲಾಗಿ ಶ್ವೇತವಸ್ತ್ರದ ಉಡುಗೆಯನ್ನು, ಕೊರಳಲ್ಲಿ ಇಷ್ಟಲಿಂಗ ಜತೆಗೆ ರಟ್ಟೆ ಮತ್ತು ಮುಂಗೈಯಲ್ಲಿ ರುದ್ರಾಕ್ಷಿ. ಬಸವಣ್ಣನವರು ಕಾಯಕಕ್ಕೆ ಪ್ರಥಮ ಆದ್ಯತೆ ನೀಡಿದ್ದು, ದಾಸೋಹವು ಅವರ ಧ್ಯೇಯ ಆಗಿತ್ತು. ಕಾರಣ ವಚನದ ಕಟ್ಟಿನ ಮೇಲೆ ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ವಚನವನ್ನು ಬರೆಸಲಾಯಿತು.
 
ಹೀಗೆ ಬಸವಣ್ಣನವರ ಒಂದು ಪರಿಪೂರ್ಣವಾದ ಭಾವಚಿತ್ರವು ವರ್ಣಚಿತ್ರವಾಗಿ ಮೂಡಿಬಂತು. ಬಸವ ಸಂಘಟನೆಗಳು ಮೊದಲ್ಗೊಂಡು ಉಳಿದವರು ಕೂಡ ಆ ಭಾವಚಿತ್ರವನ್ನು ಬಳಸುತ್ತಿರುವುದನ್ನು ಕಾಣಬಹುದಾಗಿದೆ. ಮುರುಘಾಮಠದಿಂದ ಪ್ರಕಟವಾಗುವ ಪಾಕೆಟ್ ಕ್ಯಾಲೆಂಡರ್ ಮತ್ತು ದಿನಚರಿಯಲ್ಲಿ ಅಲ್ಲದೆ ಪ್ರತಿಯೊಂದು ಆಹ್ವಾನ ಪತ್ರಿಕೆಯಲ್ಲಿ ಹಾಗೂ ಬಸವ ಕೇಂದ್ರಗಳ ಮೂಲಕ ಹೆಚ್ಚಿನ ಪ್ರಚಾರವಾಯಿತು.
 
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಸಲದ ಬಸವ ಜಯಂತಿಯ (2017) ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕಬೇಕೆಂದು ಆದೇಶ ಹೊರಡಿಸಿತು. ಯಾವ ಬಗೆಯ ಬಸವ ಭಾವಚಿತ್ರವನ್ನು ಹಾಕಬೇಕು ಎಂಬುದನ್ನು ಕೆಲವು ತಜ್ಞರು ಮತ್ತು ಸಂಘಟನೆಗಳ ಸಂಗಡ ಸಮಾಲೋಚಿಸಿ, ಮುರುಘಾಮಠದಿಂದ ಬರೆಸಿ, ಬಿಡುಗಡೆಗೊಳಿಸಲಾದ ಭಾವಚಿತ್ರವನ್ನು ಆಯ್ಕೆ ಮಾಡಲಾಗಿದೆ.
 
ಒಂದು ಚಿತ್ರ ಎಂದರೆ ಅವರ ಅಭಿಮಾನಿಗಳ, ಆರಾಧಕರ ಚಿತ್ತ ಭಿತ್ತಿಯ ಮೇಲೆ ಸ್ಥಾಯಿಗೊಳ್ಳುವ ಭಾವ. ಸರ್ವ ಸೂಕ್ತವಾದ ಈ ವಚನರಚನಾ ಬಸವಣ್ಣನವರ ಭಾವಚಿತ್ರವನ್ನು ಆಯ್ಕೆ ಮಾಡಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ. ಹಾಗೆಯೇ ಅಂಥ ಚಿತ್ರವನ್ನು ಚಿತ್ರಿಸಿದ ವರ್ಣಚಿತ್ರ ಕಲಾವಿದ  ಕಾಳೆಯವರೂ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT