ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವು ಕೆಲವರಿಗಷ್ಟೇ ಸಿಗುತ್ತದೆ ಏಕೆ?

Last Updated 2 ಮೇ 2017, 19:30 IST
ಅಕ್ಷರ ಗಾತ್ರ

ಬದುಕಿನಲ್ಲಿ ಸೋಲು, ಗೆಲುವು - ಎರಡೂ ಅನಿವಾರ್ಯ; ಚಕ್ರದಂತೆ ಸುತ್ತುತ್ತಿರುತ್ತದೆ. ಸೋತವನು ಬೇಸರ ವ್ಯಕ್ತಪಡಿಸುವುದು, ಗೆದ್ದವನು ಹಿಗ್ಗುವುದು ಸರ್ವೇಸಾಮಾನ್ಯ. ಎಲ್ಲರ ಬದುಕಿನಲ್ಲಿಯೂ ಸೋಲೆಂಬುದು ಇದ್ದೇ ಇರುತ್ತವೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿಯೂ ಸೋಲು-ಗೆಲುವುಗಳು ಇರುತ್ತದೆ. ಮಕ್ಕಳಲ್ಲಿ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿರುತ್ತದೆ. ಆದರೆ, ಅದೇ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಆ ಉತ್ಸಾಹ ಎಲ್ಲಿ ಹೋಗುತ್ತದೆ? ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟುಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಮತ್ತೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಮಾತ್ರ ಬೇಗನೇ ನಿರಾಶರಾಗಿಬಿಡುತ್ತಾರೆ.

ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರೇನಲ್ಲ. ಆದರೆ, ಅವರು ಸೋಲನ್ನು ಸ್ವೀಕರಿಸಿದ ರೀತಿ ಮಾತ್ರ ಉಳಿದವರಿಗಿಂತ ಭಿನ್ನ. ಬಹಳಷ್ಟು ಮಂದಿಗೆ ಸೋಲು ಎಂಬುದು ಅಂತ್ಯ. ನಿಜಕ್ಕೂ ಸೋಲು ಗೆಲುವಿನೆಡೆಗಿನ ಮೊದಲ ಮೆಟ್ಟಿಲು – Failure is the stepping stone to success. ಸೋಲೇ ಗೆಲುವಿನ ಸೋಪಾನ. ಆದರೆ, ಸೋಲನ್ನು ಗೆಲುವಿನ ಆರಂಭ ಎಂದುಕೊಳ್ಳುವ ಮಂದಿ ವಿರಳ. ಇದರಿಂದಾಗಿಯೇ ಯಶಸ್ಸು ಎಲ್ಲರಿಗೂ ದಕ್ಕದೆ ಸ್ವಲ್ಪವೇ ಜನರ ಪಾಲಾಗುತ್ತಿರುತ್ತದೆ.

ಕೆಲವರು ಸೋಲು ಎದುರಾದಾಗ ಧೃತಿಗೆಡದೆ ಜೀವನದಲ್ಲಿ ಮತ್ತೊಂದು ಅವಕಾಶವಿದೆ; ಬೇರೆಯ  ಇನ್ನೊಂದು ದಾರಿಯಿದೆ ಎಂದು ಚಿಂತಿಸಬಲ್ಲವಾಗಿರುತ್ತಾರೆ.  ಗಮ್ಯವನ್ನು ತಲುಪವವರೆಗೂ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸುವ ಪ್ರವೃತ್ತಿಯನ್ನು ಮೊದಲು ಬೆಳೆಸಿಕೊಳ್ಳಬೇಕು – Until reach your goal don’t give-up. ಖ್ಯಾತ ವಿಜ್ಞಾನಿ ಥಾಮಸ್‍ ಅಲ್ವಾ ಎಡಿಸನ್‌ ಎಷ್ಟೋ ಗೆಲುವುಗಳನ್ನು ಕಂಡವರು. ಆದರೆ ಅವರು ಕೂಡ ಸೋತು ಗೆದ್ದವರೇ. ನಾವು ದಿನನಿತ್ಯ ಬೆಳಕಿಗೆ ಬಳಸುವ ಬಲ್ಬನ್ನು ಕಂಡು ಹಿಡಿಯುವ ಸಂದರ್ಭದಲ್ಲಿ ಅವರು 99 ಬಾರಿ ಸೋತು ನೂರನೇ ಬಾರಿಗೆ ಗೆದ್ದರು. ಅವರ ಈ ಗೆಲುವು  ನಮಗೆ ಬೆಳಕು ನೀಡಿತು. ಸೋತೆನೆಂದು ಅವರು ಕೈ ಚೆಲ್ಲಿ ಕೂರಲಿಲ್ಲ; ಗೆಲುವು ಪಡೆಯುವವರೆಗೂ ಪಟ್ಟುಬಿಡದೆ ಕ್ರಿಯಾಶೀಲರಾಗಿ ಯಶಸ್ಸನ್ನು ಪಡೆದರು.

ಸಾಧಿಸುವ ಗುರಿಯಿದ್ದರಷ್ಟೆ ಸಾಲದು. ಅದರ ಸಿದ್ಧಿಗೆ ಅಗತ್ಯ ತಯಾರಿ ಇರಬೇಕು; ತಕ್ಕಷ್ಟು ಶ್ರಮವನ್ನು ಹಾಕಿ ಆ ಬಳಿಕವಷ್ಟೆ ಅದಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುವುದು ಆರೋಗ್ಯಕರ. ಹಾಗೆಯೇ ನಾವು ಬಯಸಿದ ಸಣ್ಣಪುಟ್ಟ ವಿಚಾರಗಳು ನಿಜವಾದಾಗ, ನಾವು ಗೆಲ್ಲುವಾಗ ಅವು ಅತ್ಯಂತ ಹಿತವಾದ ಆನಂದವನ್ನು ನೀಡುತ್ತವೆ. ಮೊದಲೇ ತನ್ನಿಂದಾಗದು ಎಂದು ಕೈ ಬಿಟ್ಟರೆ ಗೆಲುವು ನಮ್ಮ ಕೈ ಹಿಡಿಯದು.

ನಮ್ಮ ಗೆಲುವಿನ ಪ್ರಯಾಣದಲ್ಲಿ ಹೊರಟು ಸೋತಾಗ ನಮ್ಮನ್ನು ನೋಡಿ ಆಡಿಕೊಳ್ಳುವವರು, ನಗುವವರು ಇದ್ದೇ ಇರುತ್ತಾರೆ. ಅಂಥವರ ಎದುರು ನಾವು ಹೆಚ್ಚು ಮಾತನಾಡಲು ಹೋಗಬಾರದು. ಅಂಥವರಿಗೆ ನಮ್ಮ ಗೆಲುವೇ ಉತ್ತರವಾಗಬೇಕು. ಗೆಲುವಿಗಾಗಿ ಕಾಯುವ ತಾಳ್ಮೆ ನಮ್ಮದಾಗಬೇಕು. ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲ್ ಹೇಳುವಂತೆ ‘ತಾಳ್ಮೆ ಕಹಿಯಾದರೂ ಅದು ನೀಡುವ ಪ್ರತಿಫಲ ಮಾತ್ರ ಸಿಹಿಯಾಗಿರುತ್ತದೆ’.

ಗೆಲ್ಲುತ್ತೇನೆ ಎನ್ನುವ ಭರವಸೆ ಬೆಳಕಾದರೆ, ಸೋಲುತ್ತೇನೆ ಎನ್ನುವ ಭಯ ಗಾಢ ಅಂಧಕಾರ. ಕತ್ತಲು ಕಂಗೆಡಿಸುತ್ತದೆ; ದಿಕ್ಕು ತಪ್ಪಿಸುತ್ತದೆ. ಆದರೆ ಗೆಲ್ಲುತ್ತೇನೆ ಎನ್ನುವ ಭರವಸೆ ಬೆಳಕಿನಂತೆ ದಾರಿ ತೋರುತ್ತಾ ನಮ್ಮನ್ನು ಕೈ ಹಿಡಿದು ಜೀವನಪ್ರಯಾಣದಲ್ಲಿ ಮುನ್ನಡಸುತ್ತದೆ. ನಮ್ಮ ಈ ದಾರಿಯಲ್ಲಿ ಎದುರಾಗುವ ಎಲ್ಲ ವಿಧದ ಅಡೆತಡೆಗಳಿಗೆ ಸೋಲದೆ, ಹತಾಶರಾಗದೆ ಮುಂದೆ ನಡೆಯುತ್ತಿರಬೇಕು. ಚಲನೆಯೇ ಜೀವನ. ಸಾವು ಮಾತ್ರ ನಾವು ನಿಲ್ಲಬಹುದಾದ ಕೊನೆಯ ನಿಲ್ದಾಣ. ಇವುಗಳ ನಡುವೆ ಜೀವನದಲ್ಲಿನ ನಡಿಗೆ ನಿಂತರೆ ನಿಜಕ್ಕೂ ಅದು ಸಾವಿಗೆ ಸಮಾನ. ನಿಂತಲ್ಲೇ ನಿಂತರೆ ಜೀವನವೆನ್ನುವುದು ಅರ್ಥವನ್ನೇ ಕಳೆದುಕೊಳ್ಳುತ್ತದೆ. ಆದುದರಿಂದ ಸದಾ ಧನಾತ್ಮಕ ವಿಷಯಗಳತ್ತ ನಮ್ಮ ಮನಸ್ಸು ತುಡಿಯುತ್ತಿರಬೇಕು. ಧನಾತ್ಮಕ – ಪಾಸಿಟೀವ್‌ – ವಿಚಾರಗಳು ನಮ್ಮಲ್ಲಿ ತುಂಬಿದಷ್ಟೂ ನೆಮ್ಮದಿ ತುಂಬಿದ ಭಾವ ನಮ್ಮದಾಗುತ್ತದೆ. ಅದೇ ಋಣಾತ್ಮಕ – ನೆಗೆಟಿವ್ ವಿಚಾರಗಳು ತುಂಬಿಕೊಂಡರೆ ಮನಸ್ಸು ಕಲುಷಿತವಾಗುತ್ತದೆ; ತುಳುಕುವ ಕೊಡದಂತಾಗಿ ಸ್ಥಿರತೆ ಮಾಯವಾಗುತ್ತದೆ. ನೆಗೆಟಿವ್ ವಿಚಾರಗಳು ಮನಸಿನ ಕನ್ನಡಿಯನ್ನು ಒಡೆಯುತ್ತವೆ. ದ್ವಂದ್ವಗಳು ನಮ್ಮನ್ನು ಕಾಡತೊಡಗುತ್ತವೆ. ಪರಸ್ಪರ ವಿರುದ್ಧ ಮನಃಸ್ಥಿತಿಗಳಿಂದ ಒಡೆದ ಮನಸ್ಸಿನ ಕನ್ನಡಿಯಿಂದ ಬದುಕಿನ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಾಗುವುದಿಲ್ಲ.

ಸೋಲುಂಡವರು ಎದೆಗುಂದದೆ ಮುಂದೆ ಸಾಗಬೇಕು. ಗೆಲುವು ಸ್ವೀಕರಿಸಿದ ಹಾಗೆ ಸೋಲನ್ನೂ ಸ್ವೀಕರಿಸಿ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು. ಮುಂದೆ ಗೆಲುವು ನಿಮ್ಮದಾಗುತ್ತದೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸೋತು ಗೆದ್ದವನ ಕೀರ್ತಿ ಇನ್ನೂ ಹೆಚ್ಚುತ್ತದೆ. ಏಳು–ಬೀಳುಗಳನ್ನು ದಾಟಿ ಮುನ್ನಡೆಯುವವನೇ ನಿಜವಾದ ಸಾಧಕ. ಅಂಥವರ ಜೀವನ ಕೊನೆಯವರೆಗೂ ನಲಿವಿನಿಂದ ಕೂಡಿರುತ್ತದೆ. ನೆನಪಿರಲಿ: ‘ಸೋತಾಗ ಎಷ್ಟು ಅವಮಾನಗಳಾಗಿರುತ್ತವೋ ಗೆದ್ದಾಗ ಅದಕ್ಕೂ ಮೀರಿದಂತೆ ಸನ್ಮಾನಗಳಾಗುತ್ತವೆ’; ‘ಎಷ್ಟು ಕಣ್ಣಿರೋ ಅಷ್ಟೇ ಆನಂದಬಾಷ್ಪ’. ಎಲ್ಲರಿಗೂ ಅಂದುಕೊಂಡಿದ್ದನ್ನು ಸಾಧಿಸುವ ಶಕ್ತಿಯನ್ನು ದೇವರು ಯಾವುದೋ ಒಂದು ರೂಪದಲ್ಲಿ ಕೊಟ್ಟಿರುತ್ತಾನೆ. ಅದನ್ನು ಕಂಡುಕೊಂಡು ಅದರಂತೆ  ಮುನ್ನುಗ್ಗಿದರೆ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತವೆ.

ಅನೇಕರು ಸೋತಾಗ ಹಲವು ರೀತಿಯ ದ್ವಂದ್ವಕ್ಕೆ ಸಿಲುಕಿಕೊಳ್ಳುತ್ತಾರೆ. ಇವೆಲ್ಲವನ್ನೂ ಮೀರಿ ಗೆಲುವಿಗಾಗಿ ಮಾತ್ರ ಹೊರಟು ತಾಳ್ಮೆಯಿಂದ ಕಾದಾಗ ಗುರಿ ಸೇರಲು ಸಾಧ್ಯ. ನಮ್ಮ ಮನಸ್ಸಿಗೆ ಇಷ್ಟವಾಗುವಂತೆ ಶ್ರದ್ಧೆಯಿಂದ ಮಾಡುವ ಕೆಲಸಗಳಿಗೆ, ಪ್ರಯತ್ನಗಳಿಗೆ ಅನಿರೀಕ್ಷಿತ ಪ್ರತಿಫಲಗಳು ಖಂಡಿತ ದೊರೆಯುತ್ತವೆ. ಅದಕ್ಕಾಗಿ ಕಾಯುವ ತಾಳ್ಮೆ ನಮ್ಮಲ್ಲಿ ಇರಬೇಕು. ಈ ಮನಃಸ್ಥಿತಿ ಇಲ್ಲದವರು ಬೇಗನೆ ಸೋಲನ್ನು ಒಪ್ಪಿಕೊಳ್ಳುತ್ತಾರೆ; ಅಂಥವರು ನಿಜವಾಗಿಯೂ ಸೋಲುತ್ತಾರೆ. ನಾವು ಸೋಲಿಗೆ ಸುಲಭವಾಗಿ ಸೋತುಹೋಗಬಾರದು. ಕನಸನ್ನು ನನಸಾಗಿಸುವುದರಲ್ಲಿಯೇ ಬದುಕಿನ ಸಂತೋಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT