ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನಾತ್ಮಕತೆಯೆಂಬ ಜೀವನಪಥ

Last Updated 2 ಮೇ 2017, 19:30 IST
ಅಕ್ಷರ ಗಾತ್ರ

ಮನುಷ್ಯ ಬುದ್ಧಿಜೀವಿ. ಆಲೋಚನಾ ಶಕ್ತಿ ಇರುವುದರಿಂದ ಮಾನವನಿಗೆ ತನ್ನ ಸರಿ – ತಪ್ಪುಗಳ ಅರಿವಿದೆ. ಆದರೆ ಆ ಬುದ್ಧಿಜೀವಿಯ ಮನಸ್ಸು ಮರ್ಕಟದಂತೆ. ಅದು ಸದಾ ದ್ವಿಮುಖವಾಗಿ ಯೋಚಿಸುತ್ತದೆ. ಯಾವುದೇ ಕೆಲಸ ಮಾಡುವ ಮುನ್ನ ‘ಬೇಕು – ಬೇಡ’ ಎಂಬ ಎರಡು ಭಾವನೆಗಳು ಮನಸ್ಸಿನಲ್ಲಿ ಸುಳಿದಾಡುತ್ತವೆ.

ಈ ಬೇಕು–ಬೇಡ ಎಂಬ ಭಾವನೆಗಳೇ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು. ‘ಅದು ನನಗೆ ಬೇಕು, ಈ ಕೆಲಸ ಮಾಡಲು ನನ್ನಿಂದ ಸಾಧ್ಯ’ ಎಂದುಕೊಂಡರೆ ಖಂಡಿತ ಆ ಕೆಲಸ ನಮ್ಮಿಂದ ಸಾಧ್ಯವಾಗುತ್ತದೆ.  ಆದರೆ ಬೇಡ ಎನ್ನುವುದು ಋಣಾತ್ಮಕ ಭಾವನೆ. ಇದು ಎಂದೂ ನಮ್ಮನ್ನು ಗೆಲ್ಲಿಸುವುದಿಲ್ಲ. ಬದಲಾಗಿ ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನೀನು ಈ ಕೆಲಸ ಮಾಡಿದರೆ ಇದರಿಂದ ನಷ್ಟವಾಗುತ್ತದೆ ಎಂಬುದನ್ನು ಋಣಾತ್ಮಕ ಚಿಂತನೆ ಕಲಿಸುತ್ತದೆ. ಜೊತೆಗೆ ಅದರಿಂದಾಗುವ ಲಾಭವನ್ನು ಎಂದಿಗೂ ಆಲೋಚಿಸದಂತೆ ಮಾಡುತ್ತದೆ.

ಮನಸ್ಸು ಧನಾತ್ಮಕ–ಋಣಾತ್ಮಕ  ಚಿಂತನೆಗಳಿಂದ ಆವೃತವಾಗಿರುತ್ತದೆ. ಧನಾತ್ಮಕ ಚಿಂತನೆ ಮನಸ್ಸನ್ನು ಗಟ್ಟಿಗೊಳಿಸಿದರೆ, ಋಣಾತ್ಮಕ ಚಿಂತನೆ ಮನಸ್ಸನ್ನು ಘಾಸಿಗೊಳಿಸುತ್ತದೆ; ದಾರಿ ತಪ್ಪಿಸುತ್ತದೆ.

ಮನಸ್ಸು ಧನಾತ್ಮಕವಾಗಿ ಯೋಚಿಸಿದಷ್ಟು ಮಾನಸಿಕ ಆರೋಗ್ಯದೊಂದಿಗೆ, ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಇದರಿಂದ ನಾವು ಮಾಡುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶವನ್ನೇ ನಿರೀಕ್ಷೆ ಮಾಡಬಹುದು.

ಋಣಾತ್ಮಕ ಚಿಂತನೆಗಳು ಮಾನಸಿಕವಾಗಿ ನಮಗೆ ನೋವು ನೀಡುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳುವಂತೆಯೂ ಮಾಡುತ್ತದೆ.

ಋಣಾತ್ಮಕ ಚಿಂತನೆಗಳು ಹೆಚ್ಚಿದಂತೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತದೆ. ಒತ್ತಡ ಹೆಚ್ಚಿದಂತೆ ಮನಸ್ಸು–ದೇಹ  ದಣಿಯುತ್ತದೆ.ದಣಿವಿನಿಂದ ಅಲಸ್ಯವೂ ಎದುರಾಗುತದೆ. ಋಣಾತ್ಮಕ ಚಿಂತನೆ  ನಮ್ಮನ್ನು ನಿಧಾನವಾಗಿ ಚಿಂತೆಗೆ ನೂಕುತ್ತದೆ.

ಋಣಾತ್ಮಕ ಭಾವನೆ ಮನಸ್ಸಿನಲ್ಲಿ ಹೆಚ್ಚಾದಷ್ಟು ಮನಸ್ಸು ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಎಂದೋ, ಎಲ್ಲೋ ನಾವು ತಿಳಿದೋ, ತಿಳಿಯದೆಯೋ ಮಾಡಿದ ಒಂದು ತಪ್ಪು  ಜೀವನವಿಡೀ ನಮ್ಮನ್ನು ಕೊರಗುವಂತೆ ಮಾಡಬಹುದು. ಅಲ್ಲದೇ ಆ ಕೊರಗು ನಮ್ಮನ್ನು ಪ್ರತಿದಿನ, ಪ್ರತಿಕ್ಷಣ ಕಾಡಿ ಮಾನಸಿಕವಾಗಿ ಕುಗ್ಗುವಂತೆ ಮಾಡಬಹುದು. ಋಣಾತ್ಮಕ ಚಿಂತನೆ ನಮ್ಮ ಮನಸ್ಸಿನಲ್ಲಿ ಭಯವನ್ನೂ ಹುಟ್ಟಿಸುವುದು. ಭಯ ನಮ್ಮನ್ನು ಖಿನ್ನತೆಯತ್ತಲೂ ನೂಕಬಹುದು.

ಋಣಾತ್ಮಕ ಚಿಂತನೆ ಮನಸ್ಸಿನಲ್ಲಿ ಹೊಕ್ಕ ತಕ್ಷಣ ಭಯ, ಒತ್ತಡ, ಕೋಪಗಳೂ ನಮ್ಮನ್ನು ಆಕ್ರಮಿಸಬಹುದು.

ಧನಾತ್ಮಕ ಭಾವನೆ ನಮ್ಮ ಮನಸ್ಸಿಗೆ ದೃಢತೆಯನ್ನು ನೀಡುತ್ತದೆ. ಅಲ್ಲದೇ ನಮ್ಮೊಳಗಿರುವ ಕೌಶಲವನ್ನು ಹೊರಹಾಕಲು ಕೂಡ ಇದು ಸಹಾಯ ಮಾಡುತ್ತದೆ. ಧನಾತ್ಮಕತೆ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ. ಮನಸ್ಸು ಸಂತೋಷದಿಂದಿದ್ದರೆ  ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುತ್ತೇವೆ.

**

ಆಶಾವಾದ ನಮ್ಮಲ್ಲಿ ನೆಲೆಗೊಳ್ಳಲು
* ಧ್ಯಾನ:
ಪ್ರತಿದಿನ ಧ್ಯಾನ ಮಾಡುವುದರಿಂದ ನಮ್ಮಲ್ಲಿ ಧನಾತ್ಮಕ ಅಂಶಗಳು ಹೆಚ್ಚುತ್ತವೆ.  ಧ್ಯಾನದಿಂದ ಮನಸ್ಸು ಸಮಾಧಾನವಾಗಿರುತ್ತದೆ. ಮನಸ್ಸು ಸಮಾಧಾನವಾಗಿದ್ದಾಗ ನಮ್ಮ ಮುಂದಿರುವ ಕೆಲಸದ ಗೊತ್ತು–ಗುರಿಗಳು ಅರಿವಾಗುತ್ತವೆ.

* ಸಾಹಿತ್ಯ: ಸಾಹಿತ್ಯದಲ್ಲಿಯ ಆಸಕ್ತಿ ನಮ್ಮಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ. ಕಥೆ, ಕವನ, ಕಾದಂಬರಿ, ಪ್ರಬಂಧಗಳ ಓದು ಮತ್ತು ಬರಹಗಳಿಂದ ಮನಸ್ಸು ಕ್ರಿಯಾಶೀಲವಾಗಿರುತ್ತದೆ.

* ಆಟ ಮತ್ತು ವ್ಯಾಯಾಮ: ದಿನದ ಒಂದಷ್ಟು ಸಮಯವನ್ನು ಆಟಕ್ಕಾಗಿ ಮೀಸಲಿಟ್ಟರೆ ಅದರಿಂದ ಮನಸ್ಸು ಮತ್ತು ಶರೀರಕ್ಕೆ ಹುರುಪು ಸಿಗುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ನಾವು ಕೆಲಸ, ಮೀಟಿಂಗ್, ಊಟಕ್ಕೆ ಸಮಯ ಮೀಸಲಿರಿಸುವಂತೆ ಆಟ ಆಡಲು ಆಟಕ್ಕೂ ಸಮಯವನ್ನು ಮೀಸಲಿಡಬೇಕು. ಕ್ರೀಡೆಯಲ್ಲಿ ತೊಡಗುವುದರಿಂದ ಮನಸ್ಸು ಋಣಾತ್ಮಕ ಚಿಂತನೆಗಳಿಂದ ದೂರವಾಗುತ್ತದೆ.

* ಸಂಗೀತ: ಸಂಗೀತದಿಂದ ಮನಸ್ಸಿಗೆ ಮುದ ಸಿಗುತ್ತದೆ. ಮನಸ್ಸು ನೆಮ್ಮದಿಯಲ್ಲಿ ನೆಲೆಸುವಂತಾಗಲು ಸಂಗೀತ ನೆರವಾಗಬಲ್ಲದು. ಸಂಗೀತದಂತೆ ಇತರ ಕಲೆಗಳಲ್ಲೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಕಲೆ ಮಾನಸಿಕ ತಳಮಳಗಳನ್ನು ದೂರಮಾಡುವ ಮೂಲಕ ಮನಸ್ಸಿಗೆ ಶಕ್ತಿಯನ್ನು ನೀಡುತ್ತವೆ. ಈ ಶಕ್ತಿಯೇ ಧನಾತ್ಮಕ ಮನೋಧರ್ಮಕ್ಕೆ ಮೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT