ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಬೆರಗ ಕಾಣುವ ಭಾಗ್ಯ

Last Updated 2 ಮೇ 2017, 19:30 IST
ಅಕ್ಷರ ಗಾತ್ರ

ಜೈನಸಂತನಾದ ಬನಾರಸಿದಾಸ್‌ ಅವರಲ್ಲಿ ‘ಬದುಕಿಗೆ ಅಮೂಲ್ಯವಾದ ಒಂದು ಸಲಹೆ ನೀಡಿ’ ಎಂದು ಒಮ್ಮೆ ಅಕ್ಬರ್‌ ಕೇಳಿಕೊಂಡ.
ಸಂತ ಬನಾರಸಿದಾಸರು ಹೇಳಿದ್ದಿಷ್ಟೆ.

‘ನೀನು ಸೇವಿಸುವ ಆಹಾರ ಶುದ್ಧ ಮತ್ತು ಸ್ವಚ್ಛವಾಗಿದೆಯೇ ಎಂಬುದನ್ನು ಪರಿಶೀಲಿಸಿಕೋ’.

ಆ ದಿನ ಅಕ್ಬರ್‌ ಉಪವಾಸ ವ್ರತದಲ್ಲಿದ್ದ. ಆ ವ್ರತವನ್ನು ಮುರಿಯುವ ಸಮಯದಲ್ಲಿ ಊಟದ ಟೇಬಲ್‌ ಮೇಲೆ ಹಬ್ಬದ ಅಡುಗೆಯನ್ನು ತಂದಿಡಲಾಯಿತು.

ಇನ್ನೇನು ಊಟಕ್ಕೆ ಕೈಯಿಡಬೇಕು, ಅಷ್ಟರಲ್ಲಿ ಅಕ್ಬರನಿಗೆ ಸಂತ ದಾಸರು ಹೇಳಿದ ಮಾತು ನೆನಪಾಯಿತು. ಸುಮ್ಮನೇ ತನ್ನೆದುರಿನ ತಿನಿಸಿನತ್ತ ಸೂಕ್ಷ್ಮವಾಗಿ ನೋಡಿದ. ಅಲ್ಲಿ ತಿನಿಸಿನ ಮೇಲೆ ಸಣ್ಣ ಕೆಂಪಿರುವೆಗಳು ಆಡುತ್ತಿದ್ದವು. ಆ ಊಟವನ್ನು ವಾಪಸ್‌ ಕಳುಹಿಸಿ ಸರಳ –ಶುದ್ಧ ತಿನಿಸನ್ನು ತರಿಸಿಕೊಂಡು ತಿಂದ.

***
ಮೇಲುನೋಟಕ್ಕೆ ಇದು ತುಂಬ ಸರಳ ಘಟನೆಯಂತೆ ಕಾಣಬಹುದು. ಆದರೆ ಸಂತ ದಾಸರ ಮಾತು ಮತ್ತು ಅಕ್ಬರನ ನಡವಳಿಕೆಯನ್ನು ಇನ್ನಷ್ಟು ಧ್ವನಿಪೂರ್ಣವಾಗಿಸಿ ಅರ್ಥ ಮಾಡಿಕೊಂಡರೆ ಈ ಘಟನೆಯಲ್ಲಿರುವ ಜೀವನಪಾಠದ ದರ್ಶನವಾಗುತ್ತದೆ.

ಸಂತ ದಾಸರು ಶುದ್ಧ ಮತ್ತು ಸ್ವಚ್ಛವಾಗಿರಿಸಿಕೊಳ್ಳಲು ಹೇಳಿದ್ದು ಆಹಾರವನ್ನಷ್ಟೇ ಅಲ್ಲ, ಅದು ಬದುಕಿಗೆ ಸಂಬಂಧಿಸಿದ ಸಂಗತಿಯೂ ಹೌದು.

ಜೀವನಕ್ರಮ– ಮಾನಸಿಕ, ದೈಹಿಕ ಅಥವಾ ಆಧ್ಯಾತ್ಮಿಕವಾಗಿಯೂ ನೀನು ಸೇವಿಸುವ ಸಂಗತಿಗಳ ಶುದ್ಧಾಶುದ್ಧತೆ ಪರಿಶಿಲಿಸಿಕೋ, ಅವು ಇರುವೆಗಳಿಂದ ಕಲುಷಿತಗೊಂಡಿರಬಹುದು. ಹಾಗೆ ಕಲುಷಿತಗೊಂಡಿದ್ದು ನಿನ್ನ ಆರೋಗ್ಯಕ್ಕೆ–ಮಾನಸಿಕ ನೆಮ್ಮದಿಗೆ ಒಳ್ಳೆಯದಲ್ಲ ಎಂಬುದೇ ಅವರ ಮಾತಿನ ಒಳಾರ್ಥ.

ಆಶ್ಲೀಲ ಮತ್ತು ಕ್ರೌರ್ಯದ ಸಿನಿಮಾಗಳನ್ನು ನೋಡದೇ ಮಾಡಬೇಕಾದ ಡಯಟ್‌, ಅಸೂಯೆ, ಕೋಪ, ಆತಂಕಗಳ ಊಟ ಅಥವಾ ವಸ್ತುಲೋಲುಪತೆಯಿಂದ ತುಂಬಿದ ತಟ್ಟೆ... ಎಷ್ಟೊಂದು ಸಂಗತಿಗಳನ್ನು ನಾವು ಅನುದಿನವೂ ಸೇವಿಸುತ್ತಿರುತ್ತೇವಲ್ಲವೇ? ಈ ಕಲುಷಿತ ಆಹಾರದಲ್ಲಿನ ಎಷ್ಟೊಂದು ಇರುವೆಗಳು ನಮ್ಮ ಮನಸ್ಸನ್ನು–ಬುದ್ಧಿಯನ್ನು ಕಚ್ಚಿ ವಿಕಾರಗೊಳಿಸುತ್ತಿರುತ್ತವೆ!! ಇವುಗಳ ಸೇವನೆಯಿಂದ ನಮ್ಮ ಮನಸ್ಸಿಗೆ ಎಷ್ಟೊಂದು ನವೆಯಾಗಿರಬಹುದು? ಎಷ್ಟು ಜಾಗದಲ್ಲಿ ಕಚ್ಚಿದ ಗಾಯಗಳಾಗಿರಬಹುದು?

ಬನಾರಸಿದಾಸರ ಮಾತು ನೂರಕ್ಕೆ ನೂರು ಸತ್ಯ: ‘ನಿಮ್ಮ ಆಹಾರ ಶುದ್ಧ ಮತ್ತು ಸ್ವಚ್ಛವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ’.

ನಾವು ಸೇವಿಸುವ ಸಂಗತಿಗಳನ್ನು ಶುದ್ಧೀಕರಿಸಿಕೊಳ್ಳಲು ಒಂದು ತಕ್ಷಣದ ಉಪಾಯವಿದೆ.

ಎಲ್ಲ ಸೂರುಗಳನ್ನು ದಾಟಿ ಬಯಲಿಗೆ ಬನ್ನಿ. ಈಗ ನಿಮ್ಮ ತಲೆಯ ಮೇಲೆ ಹರಡಿಕೊಂಡಿರುವ ಅನಂತ ಆಕಾಶವೇ ಛಾವಣಿ. ಎಷ್ಟು ಮೃದು ಕೋಮಲವಾಗಿ ತಂಗಾಳಿ ಬೀಸುತ್ತಿದೆಯಲ್ಲವೇ? ಅದರಲ್ಲಿ ಮನಸ್ಸು ನೆಡಿ. ಹಕ್ಕಿಗಳ ಕಲರವ ಕೇಳಿ. ಜೀವಂತಿಕೆಯಿಂದ ತೊನೆಯುತ್ತಿರುವ ಹುಲ್ಲು ಮತ್ತು ಹೂವಿನ ಸುವಾಸೆಯನ್ನು ಆಸ್ವಾದಿಸಿ. ಸೂರ್ಯನ ಬಿಸಿಲಿಗೆ ನಿಶ್ಚಲವಾಗಿ ನಿಂತಿರುವ ಮುಗಿಲೆತ್ತರದ ಪರ್ವತಗಳನ್ನು ನೋಡಿ. ಮಾಯದ ಚೈತನ್ಯದಿಂದ ತೂಗುತ್ತಿರುವ ಹಸಿರೆಲೆಗಳ ಜತೆ ದೃಷ್ಟಿ ತೂಗಿಸಿ.

ಕೃತಿಯ ಶುದ್ಧತೆ ಮತ್ತು ತಾಜಾತನದೊಂದಿಗೆ ನಿಮ್ಮೆಲ್ಲ ಇಂದ್ರಿಯಗಳನ್ನು ತೊಡಗಿಸಿಕೊಂಡರೆ ಸಾಕು, ಮನಸ್ಸು ಹಿಮಾಲಯದ ಕುಳಿರ್ಗಾಳಿಯಷ್ಟೇ ಶುದ್ಧ ಮತ್ತು ಸಿಹಿಯಾಗುತ್ತದೆ. ಅದರ ಜತೆಗೇ ಪ್ರತಿದಿನವೂ ನಿಮ್ಮ ಯೋಚನೆಗಳು, ಮಾತು, ವರ್ತನೆಗಳನ್ನು ಶುದ್ಧೀಕರಿಸಿಕೊಳ್ಳುತ್ತಿರಿ.

ಯಾವಾಗ ನಿಮ್ಮ ವ್ಯಕ್ತಿತ್ವದಲ್ಲಿನ ಪರಿಶುದ್ಧತೆ ಕಲುಷಿತಗೊಳ್ಳುತ್ತಿದೆ, ಮನಸ್ಸನ್ನು ಕಲ್ಮಶ ಭಾವನೆಗಳು ತುಂಬಿಕೊಳ್ಳುತ್ತಿವೆ ಎನಿಸುತ್ತದೆಯೋ, ಆಗ ನಿಮ್ಮನ್ನು ನೀವೇ ಕೇಳಿಕೊಳ್ಳಿ; ‘ನನ್ನ ಮನಸ್ಸಿನ ಮೂಲಕ ಯಾರು ಆಲೋಚನೆಗಳನ್ನು ಹುಟ್ಟಿಸುತ್ತಿದ್ದಾರೆ? ನನ್ನ ಮಾತಿನ ಮೂಲಕ ಯಾರು ಮಾತಾಡುತ್ತಿದ್ದಾರೆ? ನನ್ನ ಕಣ್ಣಿನ ಮೂಲಕ ಯಾರು ನೋಡುತ್ತಿದ್ದಾರೆ? ನನ್ನ ಕಿವಿಗಳ ಮೂಲಕ ಯಾರು ಕೇಳುತ್ತಿದ್ದಾರೆ?

ನಿಮ್ಮ ಪ್ರಶ್ನೆಗಳಿಗೆ ಅಂತರಂಗದೊಳಗಿಂದ ಅಪರಿಚಿತ ಧ್ವನಿಯೊಂದು ‘ನಾನು’ ಎಂದು ಪಿಸುಗುಡುತ್ತಿದೆಯಾದರೆ ನಿಮ್ಮ ವ್ಯಕ್ತಿತ್ವವನ್ನು ಶುದ್ಧೀಕರಿಸಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅರ್ಥ.

ಈ ರೀತಿಯ ವ್ಯಕ್ತಿತ್ವದ ಶುದ್ಧಿ ಯಾವ ರೀತಿ ಸಹಾಯಕವಾಗಬಲ್ಲದು?

ಶುದ್ಧ ವ್ಯಕ್ತಿತ್ವ ನಿಮ್ಮನ್ನು ಉದಾತ್ತ ಸ್ಥಿತಿಗೆ ಏರಿಸುತ್ತದೆ. ನಿಮ್ಮಲ್ಲಿ ಉನ್ನತ ಚಿಂತನೆಗಳನ್ನು ಹುಟ್ಟಲು ಸ್ಫೂರ್ತಿಯಾಗುತ್ತದೆ. ಶ್ರೇಷ್ಠವಾದ ಗುರಿಯೊಂದರ ಸಾಧನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲು ಪ್ರಚೋದಿಸುತ್ತದೆ. ನಿಮ್ಮೊಳಗೆ ಸಕಾರಾತ್ಮಕ ಚೈತನ್ಯವನ್ನು ತುಂಬುತ್ತದೆ. ಶಾಂತವಾದ ದಿವ್ಯ ಸಂತೋಷದ ಅನುಭೂತಿಯನ್ನು ನೀಡುತ್ತದೆ.

ಪರಿಶುದ್ಧವಾಗಿರುವುದು ತುಂಬ ದೊಡ್ಡ ಸಂಗತಿ. ಅದೊಂದು ಬಗೆಯಲ್ಲಿ ದಿವ್ಯತೆಯ ಉಡುಗೊರೆ. ಇದರಿಂದ ನಮ್ಮ ಅಧ್ಯಾತ್ಮಿಕ ಅರಿವು ಹಿಗ್ಗುತ್ತದೆ. ನಮ್ಮ ಪ್ರಜ್ಞೆಯು ಇನ್ನಷ್ಟು ಹರಿತವಾಗುತ್ತದೆ. ಇದೊಂದು ಬಗೆಯಲ್ಲಿ ಸಹಸ್ರ ನೇತ್ರಗಳು ತೆರೆದುಕೊಂಡು ನಮ್ಮ ಸುತ್ತಲಿನ ಮತ್ತು ನಮ್ಮೊಳಗಿನ ಸಂಗತಿಗಳನ್ನು ಬೆರಗಿನಿಂದ–ಮುಗ್ಧತೆಯಿಂದ ಕಾಣಲು ತೊಡಗಿದಂತೆ.

ಇವನ್ನು ಅರ್ಥ ಮಾಡಿಕೊಳ್ಳಿ

ನಿಮ್ಮ ಬದುಕು ಖಾಲಿ ಅಥವಾ ಛಿದ್ರವಾಗುತ್ತಿದೆ ಅನಿಸಿದಾಗ, ಒಂಟಿಯಾಗಿದ್ದೇನೆ, ಯಾರೂ ನನ್ನನ್ನು ಪ್ರೀತಿಸುತ್ತಿಲ್ಲ, ನಾನು ಯಾರಿಗೂ ಬೇಡದವನಾಗಿದ್ದೇನೆ ಎಂದು ಅನಿಸುತ್ತಿದೆಯೆಂದರೆ ಅದಕ್ಕೆ ಕಾರಣ ನಿಮ್ಮ ಪ್ರಜ್ಞೆಯು ನಿಮ್ಮೊಳಗೆ ಅಡಗಿರುವ ಯಾವುದೋ ನೆನಪು ಅಥವಾ ಪೂರ್ವಗ್ರಹದಿಂದ ಕವಿದಿದೆ– ಕಲುಷಿತಗೊಳ್ಳುತ್ತಿದೆ ಎಂದರ್ಥ.

ಈ ನಿರಾಶೆಯಿಂದ ಬಿಡಿಸಿಕೊಳ್ಳಲು ‘ನಾನು ಪರಿಶುದ್ಧ’, ‘ನನ್ನನ್ನು ಪ್ರೀತಿಸುವವರು ಸಾಕಷ್ಟು ಜನರಿದ್ದಾರೆ’, ‘ನನ್ನೊಳಗೆ ಸಂತೋಷವೇ ತುಂಬಿದೆ’, ‘ನಾನು ಸುಂದರ ವ್ಯಕ್ತಿತ್ವದವನು/ಳು’ ಈ ಮಾತುಗಳನ್ನು ಪದೇ ಪದೇ ನಿಮಗೆ ನೀವೇ ಹೇಳಿಕೊಳ್ಳಿ.

ಈ ಎಲ್ಲವೂ ನಿಮ್ಮೊಳಗೇ ಅಡಗಿರುತ್ತವೆ. ಅವುಗಳನ್ನು ಜಾಗೃತಗೊಳಿಸಿಕೊಳ್ಳಬೇಕಷ್ಟೆ. ಹುದುಗಿರುವ ಸಕಾರಾತ್ಮಕ ಅಂಶಗಳನ್ನು ಮುನ್ನೆಲೆಗೆ ತಂದು ಆ ಜಾಗದಲ್ಲಿನ ನಕಾರಾತ್ಮಕ ಯೋಚನೆಗಳನ್ನು ಖಾಲಿಗೊಳಿಸಬೇಕು.

ಎಷ್ಟು ಸಲ, ಎಷ್ಟು ದಿನ ಹೀಗೆ ಮಾಡುತ್ತಿರುವುದು? ಎಂಬ ಪ್ರಶ್ನೆ ಎದುರಾಗಬಹುದು. ನಿಮ್ಮೊಳಗೆ ಆಶಾಭಾವದ ರೇಖೆ ಮೂಡುವರೆಗೂ, ಖುಷಿಯ ಸೆಲೆ ಚಿಮ್ಮುವವರೆಗೂ ಹೀಗೆ ಮಾಡುತ್ತಲೇ ಇರಬೇಕು. ಅದಾದ ಮೇಲೂ ನಿಮ್ಮೊಳಗಿನ ನಕಾರಾತ್ಮಕ ಅಂಶಗಳನ್ನು ಪೂರ್ತಿ ತೊಳೆದು ಖುಷಿ ಆವರಿಸುವವರೆಗೂ ಮಾಡುತ್ತಲೇ ಇರಬೇಕು.

ಎಲ್ಲರೊಳಗೊಂದು ಪರಿವರ್ತಕ ಯಂತ್ರವಿದೆ
ಪ್ರತಿಯೊಬ್ಬ ಮನುಷ್ಯನೊಳಗೂ ಒಂದು ಪರಿವರ್ತಕ ಯಂತ್ರ ಇರುತ್ತದೆ. ಪ್ರತಿಯೊಬ್ಬನೂ ಆ ಯಂತ್ರದ ಮೂಲಕ  ಕುರೂಪ ಸಂಗತಿಗಳನ್ನು ಸುಂದರ ಸಂಗತಿಗಳನ್ನಾಗಿ, ಖಾಲಿತನವನ್ನು ಸಂತೋಷವನ್ನಾಗಿ, ರೋಗಗ್ರಸ್ತತೆಯನ್ನು ಆರೋಗ್ಯವನ್ನಾಗಿ, ಬದುಕಿನ ಕಾಠಿಣ್ಯವನ್ನು ಮೃದುಕೋಮಲವನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನೂ ಹೊಂದಿರುತ್ತಾನೆ. ಒಮ್ಮೆ ನಮ್ಮ ಮನಸ್ಸನ್ನು ಶ್ರೇಷ್ಠ, ಸಕಾರಾತ್ಮಕ ಸಂಗತಿಗಳಿಂದ ತುಂಬಿಬಿಟ್ಟರೆ ಅಲ್ಲಿಗೆ ನಕಾರಾತ್ಮಕ ಸಂಗತಿಗಳಿಗೆ ಪ್ರವೇಶ ಇರುವುದಿಲ್ಲ.

ಕೆಟ್ಟ ಆಲೋಚನೆಗಳು ನಮಗೆ ಗೊತ್ತಿಲ್ಲದೇ ನಮ್ಮನ್ನು ಅಧೋಗತಿಗೆ ಇಳಿಸುತ್ತಿರುತ್ತವೆ. ಆಗ ಅದರಿಂದ ಪಾರಾಗಲು ಗುರುಗಳೊಬ್ಬರು ಒಂದು ಬಾಗಿಲನ್ನು ಸೂಚಿಸಿದ್ದಾರೆ. ಅವರ ಮಾತು ಹೀಗಿದೆ: ‘ನೀವು ದುರ್ಬಲರಾಗಿದ್ದೀರಿ ಎನಿಸಿದಾಗ ಶಕ್ತಿಯ ಕಡೆಗೆ ಮುಖ ಮಾಡಿ. ನೀವು ಅಧೋಗತಿಗೆ ಇಳಿಯುತ್ತಿದ್ದೀರಿ ಅನಿಸಿದಾಗ ಶ್ರೇಷ್ಠ ಸಂಗತಿಗಳತ್ತ ಕೈಚಾಚಿ.  ಅತೃಪ್ತರಾಗಿದ್ದಾಗ ಸಮಾಧಾನವನ್ನು ಧ್ಯಾನಿಸಿ, ನೋವಿನ ಕಾರ್ಗತ್ತಲು ಕವಿದಾಗ ನಗುವಿನ ಬೆಳಕಿನತ್ತ ನೋಡಿ’

ಗುರುಗಳ ಈ ಮಾತಿನ ಅರ್ಥವೇನು? ಅವರು ಯಾಕೆ ಹೀಗೆ ಹೇಳಿದರು? ಯಾಕೆಂದರೆ ಅವರಿಗೆ ನಮ್ಮೊಳಗಿನ ಪರಿವರ್ತಕ ಯಂತ್ರದ ಶಕ್ತಿಯ ಬಗ್ಗೆ ಚೆನ್ನಾಗಿ ಗೊತ್ತು. ಎಂಥ ಕೀಳು ಸಂಗತಿಯನ್ನೂ ಶ್ರೇಷ್ಠಗೊಳಿಸುವ ನಮ್ಮ ಸಾಮರ್ಥ್ಯದ ಬಗ್ಗೆ ಅವರಿಗೆ ನಂಬಿಕೆ ಇದೆ.

ಹಾಗಾಗಿ, ನಮ್ಮ ಆಲೋಚನೆಗಳನ್ನು ಸಣ್ಣತನದಿಂದ ಅಗಾಧತೆಯತ್ತ ಬೆಳೆಸೋಣ. ಸಂತೋಷ, ಶುಭಾಶಯ, ಕ್ಷಮಾಗುಣ, ಪ್ರೇಮ, ಶಾಂತಿ, ಸಾಮರಸ್ಯದಿಂದ ಮನಸ್ಸನ್ನು ಬೆಳಗಿಸಿಕೊಳ್ಳೋಣ. ನಮ್ಮ ಬದುಕಿನಿಂದ ಪೂರ್ತಿಯಾಗಿ ನಕಾರಾತ್ಮಕ ಅಂಶಗಳನ್ನು ತೊಲಗಿಸಿಬಿಡೋಣ.

*

-ಭರತ್ ಮತ್ತು ಶಾಲನ್ ಸವೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT