ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರ, ಉದ್ಯಮ ಸ್ನೇಹಿ ವ್ಯವಸ್ಥೆ

Last Updated 2 ಮೇ 2017, 19:30 IST
ಅಕ್ಷರ ಗಾತ್ರ

ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ ಬಹು ನಿರೀಕ್ಷಿತ ಜಿಎಸ್‌ಟಿ  ಕಳೆದ ಒಂದು ದಶಕದಿಂದಲೂ ಚರ್ಚೆಯ ವಿಷಯವಾಗಿದೆ. ಅತಿ ದೊಡ್ಡ ತೆರಿಗೆ ವ್ಯವಸ್ಥೆಯ ಸಾಧಕ–ಬಾಧಕಗಳ ಕುರಿತು ಪರ–ವಿರೋಧ ಧ್ವನಿಗಳೂ ಕೇಳಿ ಬಂದಿವೆ.

ಜನಸಾಮಾನ್ಯರಿಗೂ ತೆರಿಗೆ ಹೊರೆ ಕಡಿಮೆಯಾಗಿ ಅನುಕೂಲವಾಗಲಿದೆ ಎಂದು ಹೇಳಲಾದ ಹೊಸ ತೆರಿಗೆ ಪದ್ಧತಿಯು ಸಾರ್ವಜನಿಕರಲ್ಲಿ   ಕುತೂಹಲ ಮತ್ತು ನಿರೀಕ್ಷೆ ಹುಟ್ಟು ಹಾಕಿದೆ. ಉದ್ಯಮ ವಲಯವೂ ಸಾಕಷ್ಟು ಆಶಾಭಾವನೆ ಇಟ್ಟುಕೊಂಡಿದೆ.

ಈ ಹಿಂದೆ ಇದ್ದ ವಿವಿಧ ರೂಪದ ಸಂಕೀರ್ಣ ತೆರಿಗೆಗಳಿಂದ ಸಂಪೂರ್ಣವಾಗಿ ಮುಕ್ತಿ ದೊರೆಯಲಿದೆ ಎಂಬುವುದು ಕೈಗಾರಿಕೋದ್ಯಮಿಗಳು ಮತ್ತು ವರ್ತಕರ ಸಂಭ್ರಮಕ್ಕೆ ಕಾರಣವಾಗಿದೆ.

ಜಿಎಸ್‌ಟಿ ಜಾರಿಯಾದರೆ ತೆರಿಗೆ ವ್ಯಾಪ್ತಿ ವಿಸ್ತಾರಗೊಂಡು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇಕಡಾ ಒಂದರಿಂದ ಎರಡಷ್ಟು ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯ ಉದ್ಯಮ ವಲಯದಿಂದ ವ್ಯಕ್ತವಾಗಿದೆ.

ಅರ್ಥ ವ್ಯವಸ್ಥೆ ಸುಧಾರಿಸುವುದರಿಂದ ವಿದೇಶಿ  ಹೂಡಿಕೆ ಹರಿದು ಬರಲಿದೆ. ಉದ್ಯಮ, ಉತ್ಪಾದನಾ ವಲಯಗಳಿಗೆ ಹೊಸ ಚೈತನ್ಯ ಸಿಗಲಿದೆ.  ಹೊಸ ಉದ್ಯೋಗ ಸೃಷ್ಟಿಯ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ, ಹಣದುಬ್ಬರ ನಿಯಂತ್ರಣ ಆಗಲಿದೆ ಎನ್ನುವ ಪ್ರತಿಕ್ರಿಯೆ ಸಾಮಾನ್ಯವಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊಸ ಅನ್ವೇಷಣೆಯೇನೂ ಅಲ್ಲ. ಇದು ಈಗಾಗಲೇ ವಿಶ್ವದ 150 ದೇಶಗಳಲ್ಲಿ ಜಾರಿಯಲ್ಲಿದೆ.
ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕೆ ಕಡಿವಾಣ.

‘ಏಕರೂಪ ತೆರಿಗೆ ವ್ಯವಸ್ಥೆ  ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಡೀ ದೇಶ ಸಮಾನ ಮಾರುಕಟ್ಟೆಯಡಿ ಬರಲಿದೆ. ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಿ ಒಂದೇ ತೆರಿಗೆ ವ್ಯವಸ್ಥೆ ಜಾರಿಯಾಗಲಿದೆ. ಒಂದೇ ದೇಶ, ಒಂದೇ ತೆರಿಗೆ ಏಕತೆ ಮೂಡಿಸಲಿದೆ’ ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಅಧ್ಯಕ್ಷ ಎಂ.ಸಿ. ದಿನೇಶ್‌.

(ಎಂ.ಸಿ. ದಿನೇಶ್‌)

‘ದೇಶದಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ಅಂತರರಾಜ್ಯ  ಸರಕು ಸಾಗಣೆ ವಹಿವಾಟು ಸುಗಮವಾಗುತ್ತದೆ. ದಾಖಲೆಗಳನ್ನು  ಕಾಯ್ದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಚೆಕ್‌ಪೋಸ್ಟ್‌ಗಳಲ್ಲಿ ಅನಗತ್ಯ ಕಿರುಕುಳ, ಲಂಚಗುಳಿತನಕ್ಕೆ ಕಡಿವಾಣ ಬೀಳಲಿದೆ. ವಹಿವಾಟಿನಲ್ಲಿ ಪಾರದರ್ಶಕತೆ ಬರಲಿದೆ. ಇದರಿಂದ ತಯಾರಿಕಾ ವಲಯಕ್ಕೆ ಭಾರಿ ಅನುಕೂಲವಾಗಲಿದೆ’ ಎಂಬುವುದು ಅವರ ವಿಶ್ವಾಸವಾಗಿದೆ.

‘ಇಲ್ಲಿಯವರೆಗೆ ಶೇ 12ರಷ್ಟು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಮತ್ತು ಶೇ 15ರಷ್ಟು ಕೇಂದ್ರೀಯ ಅಬಕಾರಿ ತೆರಿಗೆ ಸೇರಿ ಶೇ 32ರಷ್ಟು ತೆರಿಗೆ ಪಾವತಿಸುತ್ತಿದ್ದ ಉದ್ಯಮ ಇನ್ನು ಮುಂದೆ ಜಿಎಸ್‌ಟಿ ಅಡಿ ಕೇವಲ ಶೇ18ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದ ಕಚ್ಚಾ ಸಾಮಗ್ರಿ ಮತ್ತು ವಹಿವಾಟು ವೆಚ್ಚ ಕೂಡ ಕಡಿಮೆಯಾಗಲಿದೆ. ಅಂತಿಮವಾಗಿ ಕಾರು, ಬೈಕ್‌ ತಯಾರಿಕೆ ಅಗ್ಗವಾಗಲಿದೆ’ ಎನ್ನುತ್ತಾರೆ ದಿನೇಶ್‌.

‘ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 4ರಷ್ಟು ಹೆಚ್ಚಲಿದೆ.  ತೆರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಬರುವುದರಿಂದ  ಅಸಂಘಟಿತ ಮತ್ತು ನೋಂದಣಿ ರಹಿತ ವರ್ತಕರು, ಉದ್ಯಮಿಗಳ ಸಂಖ್ಯೆ ಕಡಿಮೆಯಾಗಲಿದೆ. ‘ವಹಿವಾಟಿನ ಪ್ರತಿ ಹಂತವೂ ದಾಖಲಾಗುವುದರಿಂದ  ಇನ್ನು ಮುಂದೆ ರಶೀದಿಗಳು (ಬಿಲ್‌) ಇಲ್ಲದೇ  ವಹಿವಾಟು ನಡೆಸುವುದು ಅಸಾಧ್ಯ. ಒಟ್ಟಿನಲ್ಲಿ ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕೆ ಕಡಿವಾಣ ಬೀಳಲಿದೆ’ ಎಂದು ದಿನೇಶ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಎಮ್ಮೆಯನ್ನು ಕೆರೆಯಲ್ಲಿ ಬಿಟ್ಟು...

‘ಜಿಎಸ್‌ಟಿ ಬಗ್ಗೆ ಈಗಲೇ ಏನನ್ನಾದರೂ ಹೇಳುವುದು ಕಷ್ಟ. ‘ದೃಷ್ಟಿ ಇಲ್ಲದ ನಾಲ್ವರು ಆನೆಯನ್ನು ಮುಟ್ಟಿ ಅದರ ಅಂದವನ್ನು ವರ್ಣಿಸಿದಂತೆ’ ಇಲ್ಲವೇ ‘ಎಮ್ಮೆಯನ್ನು ಕೆರೆಯ ನೀರಿನಲ್ಲಿ ಈಜಲು ಬಿಟ್ಟು ವ್ಯಾಪಾರಕ್ಕಿಟ್ಟಂತೆ’ ಆಗುತ್ತದೆ’  ಎನ್ನುವುದು ರಾಯಚೂರಿನ ಲೆಕ್ಕಪರಿಶೋಧಕ ಮತ್ತು ಉದ್ಯಮಿ ರಾಮಚಂದ್ರ ಪ್ರಭು ಅವರ ಸ್ಪಷ್ಟವಾದ ನಿಲುವು.

(ಎಂ.ಸಿ.ದಿನೇಶ್‌)

‘ಜಿಎಸ್‌ಟಿ ಜಾರಿಯಾದರೆ ಬೆಲೆಗಳು ಇಳಿಯುತ್ತವೆ ಇಲ್ಲವೇ ಹೆಚ್ಚಾಗುತ್ತವೆ ಎಂಬ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಸಂದೇಹವಿದೆ. ಈಗಲೇ ಸ್ಪಷ್ಟವಾಗಿ ಯಾವ ನಿರ್ಧಾರಕ್ಕೂ ಬರಲಾಗದು.

‘90ರ ದಶಕದಲ್ಲಿ ಮುಕ್ತ ಆರ್ಥಿಕ ನೀತಿ ಮತ್ತು ಜಾಗತೀಕರಣದ ಸಂದರ್ಭದಲ್ಲಿ ನಡೆದ ರೀತಿಯಲ್ಲಿ ಈಗಲೂ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಜುಲೈನಲ್ಲಿ ಜಿಎಸ್‌ಟಿ ಜಾರಿಯಾದರೆ ಸೆಪ್ಟೆಂಬರ್‌ ನಂತರ ಸ್ಪಷ್ಟ ಹಾಗೂ ವಾಸ್ತವ ಚಿತ್ರಣ ದೊರೆಯುತ್ತದೆ.

‘ತೆರಿಗೆ ಶಿಸ್ತು ಬರುವುದರಿಂದ ವರಮಾನ, ಆದಾಯ ಸೋರಿಕೆ ನಿಲ್ಲುತ್ತದೆ. ಏಕ ರೂಪ ತೆರಿಗೆ ವ್ಯವಸ್ಥೆಯ ಕಾರಣ ವ್ಯಾಪಾರ, ವಹಿವಾಟಿಗೆ ಇಲ್ಲಿಯವರೆಗೆ ತಡೆಗೋಡೆಗಳಾಗಿದ್ದ ರಾಜ್ಯದ ಗಡಿಗಳು  ಇನ್ನು ಮುಂದೆ ಇರಲಾರವು. ಮಾರಾಟ ಮತ್ತು ಖರೀದಿಯ ಪ್ರತಿ ಹಂತ ದಾಖಲಾಗುವುದರಿಂದ ತೆರಿಗೆ ವಂಚನೆ, ಅಕ್ರಮ ವಹಿವಾಟಿಗೆ ಕಡಿವಾಣ ಬೀಳಬಹುದು’ ಎಂದು ಪ್ರಭು ಹೇಳುತ್ತಾರೆ. ‘ಜಿಎಸ್‌ಟಿ ಜಾರಿಯಿಂದ ಸರಕುಗಳ ತಯಾರಿಕೆ ಮೇಲಿನ ತೆರಿಗೆಯನ್ನೇ ನಂಬಿರುವ ತಮಿಳುನಾಡು, ಗುಜರಾತ್‌, ಕರ್ನಾಟಕ ಮಹಾರಾಷ್ಟ್ರದಂತಹ ಕೈಗಾರಿಕೆಗಳು ಹೆಚ್ಚಿರುವ ರಾಜ್ಯಗಳಿಗೆ ಭಾರಿನಷ್ಟ ಆಗುತ್ತದೆ. ಬಿಹಾರ, ಛತ್ತೀಸ್‌ಗಡ, ಉತ್ತರ ಪ್ರದೇಶದಂತಹ ಗ್ರಾಹಕರ ರಾಜ್ಯಗಳಿಗೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ’ ಎಂದು ಅವರು ಸಂದೇಹ ವ್ಯಕ್ತಪಡಿಸುತ್ತಾರೆ. 

ಮನಬಂದಂತೆ ತೆರಿಗೆ ಸಾಧ್ಯವಿಲ್ಲ
‘ಇದುವರೆಗೆ ರಾಜ್ಯಗಳು  ಬಜೆಟ್‌ ಮಂಡನೆ ವೇಳೆ ಇಷ್ಟ ಬಂದಂತೆ ತೆರಿಗೆ ವಿಧಿಸಬಹುದಾಗಿತ್ತು. ಆದರೆ, ಜಿಎಸ್‌ಟಿ ಜಾರಿ ಬಳಿಕ ಇದಕ್ಕೆಲ್ಲಾ ತಡೆ ಬೀಳಲಿದೆ’ ಎನ್ನುತ್ತಾರೆ ಅಸೋಚಾಂ ರಾಜ್ಯ ಅಧ್ಯಕ್ಷ ಆರ್‌. ಶಿವಕುಮಾರ್‌.

‘ಅಂತರರಾಜ್ಯ ಗಡಿಯಲ್ಲಿ ಸರಕು ಸಾಗಾಟ ಮತ್ತು ವಹಿವಾಟು ಸುಗಮವಾಗುವ ಜತೆಗೆ ಚೆಕ್‌ಪೋಸ್ಟ್‌ಗಳಲ್ಲಿಯ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಇದರಿಂದ ಎಂಎಸ್‌ಎಂಇ ವಲಯಕ್ಕೆ ಸಾಕಷ್ಟು ಅನುಕೂಲವಾಗಲಿದೆ. ‘ರಶೀದಿ (ಬಿಲ್‌) ರಹಿತ ವಹಿವಾಟಿಗೆ ಕಡಿವಾಣ ಬೀಳುವ ಜತೆಗೆ ತೆರಿಗೆ ಸಂಗ್ರಹ ಹೆಚ್ಚಾಗಿ ಸರ್ಕಾರದ ಬೊಕ್ಕಸ ತುಂಬುತ್ತದೆ. 2015–16ನೇ ಸಾಲಿನಲ್ಲಿ ₹ 62 ಸಾವಿರ ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಜಿಎಸ್‌ಟಿ ಜಾರಿಯಾದ ನಂತರ ಇದು ಇನ್ನೂ ಹೆಚ್ಚಾಗಲಿದೆ’ ಎನ್ನುವುದು ಶಿವಕುಮಾರ್‌ ಅವರ ವಿಶ್ವಾಸ.

(ಆರ್‌. ಶಿವಕುಮಾರ್‌)

ರಾಜ್ಯಗಳ ಆರ್ಥಿಕ ಸ್ವಾಯತ್ತತೆ ನಾಶ
ಜಿಎಸ್‌ಟಿಯಿಂದ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ನಾಶವಾಗುತ್ತದೆ ಎನ್ನುವುದು ರಾಜ್ಯ ವಾಣಿಜ್ಯ ತೆರಿಗೆ ಸೇವೆಗಳ ಅಧಿಕಾರಿಗಳ ಸಂಘದ  ವಾದವಾಗಿದೆ.

‘ಜಿಎಸ್‌ಟಿ ಜಾರಿಯಾದರೆ ಎಲ್ಲ ಅಧಿಕಾರ ಕೇಂದ್ರ ಸರ್ಕಾರದ ಪಾಲಾಗಲಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಗಳಿಗೆ ಕೆಲಸ ಇಲ್ಲದಂತಾಗುತ್ತದೆ. ಇದರಿಂದ ಶೇ 50ಕ್ಕಿಂತ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ’ ಎನ್ನುವುದು ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳ (ಅಧಿಕಾರಿಗಳು) ಅಸೋಸಿಯೇಷನ್ ಮತ್ತು ಜೆಸಿಎ ಪದಾಧಿಕಾರಿಗಳ ಆತಂಕವಾಗಿದೆ.

**

‘ಎಂಎಸ್ಎಂಇ’ಗೆ ವರದಾನ
‘ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ ಜಿಎಸ್‌ಟಿ ವರದಾನವಾಗಿ ಪರಿಣಮಿಸಲಿದೆ’ ಎಂದು  ಉದ್ಯಮಿ ಜಾಕೋಬ್‌ ಕ್ರಾಸ್ತಾ ಹೇಳುತ್ತಾರೆ.

‘ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಲಿದ್ದು, ಮೂರ್‍್ನಾಲ್ಕು ಹಂತದ ತೆರಿಗೆ ರದ್ದಾಗುವುದರಿಂದ  ಕಚ್ಚಾವಸ್ತುಗಳ ಬೆಲೆ ಅಗ್ಗವಾಗುತ್ತದೆ. ಸಹಜವಾಗಿ ಇದರಿಂದ ಎಂಎಸ್‌ಎಂಇ ವಲಯಕ್ಕೆ  ಲಾಭವಾಗಲಿದೆ. ‘ಇಲ್ಲಿಯವರೆಗೆ ಕಚ್ಚಾವಸ್ತುಗಳ ಬೆಲೆ ಶೇ 50–60ರಷ್ಟು ಹೆಚ್ಚಾಗಿತ್ತು. ಹೊಸ ತೆರಿಗೆ ಪದ್ಧತಿ ಜಾರಿಯಾದ ನಂತರ ಇದು ಗಣನೀಯವಾಗಿ ಕುಗ್ಗಲಿದೆ. ಎಲ್ಲ ವಹಿವಾಟು ಆನ್‌ಲೈನ್ ಮೂಲಕ ನಡೆಯುವ ಕಾರಣ ವಹಿವಾಟು ಮತ್ತು ತೆರಿಗೆ  ವ್ಯವಸ್ಥೆಯಲ್ಲಿ ಶಿಸ್ತು ಮೂಡುತ್ತದೆ.  ತೆರಿಗೆ ವಂಚನೆ ತಪ್ಪಲಿದೆ. ‘ರಾಜ್ಯದಲ್ಲಿ 45–50 ಲಕ್ಷ ವರ್ತಕರು, ಸಣ್ಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಹೋಟೆಲ್‌ ಉದ್ಯಮಿಗಳು ಇದ್ದಾರೆ. ಆ ಪೈಕಿ ಸಣ್ಣ, ಅತಿ ಸಣ್ಣ ಉದ್ಯಮಿಗಳ ಸಂಖ್ಯೆ 8.50 ಲಕ್ಷ. ನೋಂದಣಿ ಯಾದ ಉದ್ಯಮಿಗಳ ಸಂಖ್ಯೆ ಮಾತ್ರ ಶೇ 10ರಷ್ಟು .

(ಜಾಕೋಬ್‌ ಕ್ರಾಸ್ತಾ)

‘2015–16ರಲ್ಲಿ 4.20 ವರ್ತಕರು ಮತ್ತು 2016–17ರಲ್ಲಿ 5.80 ಲಕ್ಷ ಉದ್ಯಮಿಗಳು ಮಾತ್ರ ತೆರಿಗೆ ಪಾವತಿಸಿದ್ದಾರೆ. 2015–16ರಲ್ಲಿ ₹43,800 ವ್ಯಾಟ್‌ ಸಂಗ್ರಹಿಸಲಾಗಿತ್ತು. 2017–18ರಲ್ಲಿ ₹51 ಸಾವಿರ ಕೋಟಿ ವ್ಯಾಟ್‌ ಸಂಗ್ರಹ ಗುರಿ ಇದೆ. ಜುಲೈ 1ರಂದು ಜಿಎಸ್‌ಟಿ ಜಾರಿಯಾದರೆ ಕೇವಲ ಎಂಟು ತಿಂಗಳ ಒಳಗಾಗಿ ಗುರಿ ಮೀರಿದ ಸಾಧನೆ ಸಾಧ್ಯವಾಗಲಿದೆ. ಉದ್ಯಮಿಗಳ ಆದಾಯ ತೆರಿಗೆ ದರ ಶೇ 35ರಿಂದ ಶೇ 15–20ಕ್ಕೆ ಇಳಿಯಬಹುದು’ ಎಂದು ಕ್ರಾಸ್ತಾ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕಂಪ್ಯೂಟರ್‌, ಅಂತರ್ಜಾಲ ಬಳಕೆ ತಿಳಿಯದ ಗ್ರಾಮೀಣ ಪ್ರದೇಶಗಳ ಸಣ್ಣಪುಟ್ಟ ವರ್ತಕರಿಗೆ ಇದರಿಂದ ತೊಂದರೆಯಾಗುವ ಸಾಧ್ಯತೆಯನ್ನು ಅವರು ತಳ್ಳಿ ಹಾಕುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT