ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯ ಸಾಮಾಜಿಕ ಕಾಳಜಿ

Last Updated 2 ಮೇ 2017, 19:30 IST
ಅಕ್ಷರ ಗಾತ್ರ

ಅದು 1990ರ ದಶಕದ ಆರಂಭ. ಬೆಂಗಳೂರು ಆರ್ಥಿಕವಾಗಿ ತಾರುಣ್ಯಕ್ಕೆ ಕಾಲಿಟಿದ್ದ ದಿನಗಳು. ನಗರದ 15–20 ಕಿ.ಮೀಟರ್‌ಗಳ ಅಂತರದಲ್ಲಿ ಹೊರವಲಯದ ದಶದಿಕ್ಕುಗಳು ಇನ್ನೂ ಹಳ್ಳಿಯ ಸೊಗಡು ಉಳಿಸಿಕೊಂಡಿದ್ದ ದಿನಮಾನ. ಇಂತಹ ಸಂದರ್ಭದಲ್ಲಿ  ಪರಿಸರ ಸ್ನೇಹಿ ಹಾಗೂ ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ವಿಶ್ವದರ್ಜೆಯ ಟೌನ್‌ಶಿಪ್‌ ನಿರ್ಮಾಣದ ಕನಸನ್ನು ಸಾಕಾರಗೊಳಿಸಿದವರು ರೊನಾಲ್ಡ್ ಕೊಲಾಸೊ.

ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೊಲಾಸೊ ಮೂಡಬಿದಿರೆಯವರು. ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದರು. ಚಿಕ್ಕವರಿದ್ದಾಗಲೇ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತ ಗ್ರಾಮೀಣ ಪ್ರದೇಶದ ಕಷ್ಟ ಸುಖಗಳನ್ನು ಕಂಡಿದ್ದರು.

ಐಸಿಎಂಎ (ಇಂಟರ್‌ನ್ಯಾಷನಲ್‌ ಕಾಸ್ಟ್‌ ಅಕೌಂಟಂಟ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಅಕೌಂಟಂಟ್‌) ಪದವಿ ಪಡೆದಿರುವ ರೊನಾಲ್ಡ್‌ ಅವರು, 1975ರಲ್ಲಿ ಒಮನ್‌ನ ನ್ಯಾಷನಲ್‌ ಪೆಟ್ರೋಲಿಯಂ ಕನ್‌ಸ್ಟ್ರಕ್ಷನ್‌ ಕಂಪೆನಿಯಲ್ಲಿ (ಎನ್‌ಪಿಸಿಸಿ) ವೃತ್ತಿಜೀವನ ಆರಂಭಿಸಿ ಅಥೆನ್ಸ್, ಅಬುಧಾಬಿ ಸೇರಿದಂತೆ ಕೊಲ್ಲಿ ಮತ್ತು ಯುರೋಪ್‌ನ 8 ರಾಷ್ಟ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಪೆಟ್ರೊ ರಿಫೈನರೀಸ್‌, ಅನಿಲ ಸಂಸ್ಕರಣೆ, ಬೃಹತ್‌ ಟೌನ್‌ಶಿಪ್‌ಗಳು ಮತ್ತು ವಿಮಾನ ನಿಲ್ದಾಣಗಳ ಯೋಜನೆಗಳಿಗೆ ಸಂಬಂಧಿಸಿದ ಮೂರು ಬೃಹತ್‌ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ವಾಣಿಜ್ಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಗ್ರೀಕ್‌ನ ಅಥೆನ್ಸ್‌ ಮೂಲದ ಸಿಸಿಐಸಿಎಲ್‌, ಜರ್ಮನಿಯ ಮಾನ್ನೆಸ್ಮನ್‌ ಮತ್ತು ಇಟಲಿಯ ಮಿಲಾನೊ ಮೂಲದ ಸೈಪೆಮ್‌ ಕಂಪೆನಿಗಳ ನಾಯಕತ್ವ ವಹಿಸಿಕೊಂಡಿದ್ದ ರೊನಾಲ್ಡ್ಅವರು, ಅನಗತ್ಯ ವೆಚ್ಚ ಕಡಿಮೆ ಮಾಡಿ ಹೆಚ್ಚು ಲಾಭದಾಯಕ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಈ ಉತ್ತಮ ಕಾರ್ಯಕ್ಷಮತೆಯೇ ಉನ್ನತ ಹುದ್ದೆಗಳನ್ನು ಅಲಂಕರಿಸಲು ನೆರವಾಗಿತ್ತು. ಪೆಟ್ರೋಕೆಮಿಕಲ್ಸ್‌, ಟೌನ್‌ಶಿಪ್‌ ಕ್ಷೇತ್ರಗಳಲ್ಲಿ ದೊರೆತ ಅನುಭವ ರೊನಾಲ್ಡ್‌ ಅವರನ್ನು ಉದ್ಯಮಿಯಾಗಿ ರೂಪಿಸಿತ್ತು. ವಿದೇಶದಲ್ಲಿದ್ದರೂ ತಾಯ್ನಾಡಿನ ಸೆಳೆತವಿತ್ತು. ಹೀಗಾಗಿಯೇ ಟೌನ್‌ಶಿಪ್‌ ಬಗ್ಗೆ ಚಿಂತನೆ ಮೊಳಕೆ ಒಡೆಯಿತು.

ಎರಡು ಮೂರು ದಶಕಗಳ ಹಿಂದೆಯೇ ದೇವನಹಳ್ಳಿ ಬಳಿ ಪರಿಸರ ಸ್ನೇಹಿ ಟೌನ್‌ಶಿಪ್‌ ನಿರ್ಮಾಣಕ್ಕೆ ಮುಂದಾದ ಕೊಲಾಸೊ ಇಲ್ಲಿ ತಮ್ಮ ಕನಸುಗಳಿಗೆ ನೀರೆರದಿದ್ದಾರೆ. ಇಲ್ಲಿದ್ದ ನೀಲಗಿರಿ ಕಾಡು ತೆಗೆದು ಮಾವು, ಸೀತಾಫಲ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ನೆಟ್ಟು ಕಂಗೊಳಿಸುವ ಹಸಿರು ವಲಯವನ್ನಾಗಿ ಮಾಡಿದ್ದಾರೆ.

ರೊನಾಲ್ಡ್‌ ಅವರಿಗೆ ಮುಂದೊಂದು ದಿನ ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಲಿದೆ ಎಂಬ ಕಲ್ಪನೆಯೂ ಇರಲಿಲ್ಲ. ವಾಣಿಜ್ಯ ದೃಷ್ಟಿಕೋನ ಬದಿಗಿಟ್ಟು ಸಮಾನ ಮನಸ್ಕರು ಅಥವಾ ಅವರುಸೂಚಿಸುವವರಿಗೆ ಮಾತ್ರ ನಿವೇಶನ ನೀಡಿ ಪರಿಸರ ಸ್ನೇಹಿ ಟೌನ್‌ಶಿಪ್‌ ನಿರ್ಮಾಣಕ್ಕೆ ಮುಂದಾದದ್ದು ಕೇವಲ ಉದ್ಯಮದ ಕೌತುಕಕ್ಕಾಗಿ.

ಟೌನ್‌ಶಿಪ್‌ನಲ್ಲಿನ ಮನೆಗಳಿಗೆ ಕಾಂಪೌಂಡ್  ನಿರ್ಮಿಸದಂತೆ ನಿರ್ಬಂಧ ವಿಧಿಸಲಾಗಿದೆ.  ಮನೆ ಆವರಣದ ಸುತ್ತ ಹಸಿರು ಬೇಲಿಯನ್ನೇ ಬೆಳೆಸಬೇಕು. ಕಾಂಕ್ರೀಟ್‌ ಗೋಡೆಗೆ ಅವಕಾಶವೇ ಇಲ್ಲ. ಮನೆಗಳನ್ನು ಕೇವಲ ಒಂದು ಅಂತಸ್ತಿನವರೆಗೆ ಮಾತ್ರ ನಿರ್ಮಿಸಬೇಕು. ಜತೆಗೆ ಮಳೆ ನೀರು ಸಂಗ್ರಹ ಕಡ್ಡಾಯ ಮಾಡಲಾಗಿದೆ.

ಒಳಚರಂಡಿಗೆ ಹಾಗೂ ಎಲೆಕ್ಟ್ರಿಕ್‌ ಮತ್ತು ಆಪ್ಟಿಕಲ್‌ ಕೇಬಲ್‌ಗಳನ್ನು ಅಳವಡಿಸಲು ವ್ಯವಸ್ಥಿತವಾದ ಮತ್ತು ಆಧುನಿಕವಾದ ಯೋಜನೆ ರೂಪಿಸಿರುವುದರಿಂದ ರಸ್ತೆಯನ್ನು ಪದೇ ಪದೇ ಅಗೆಯುವ ಅಗತ್ಯವೇ ಇಲ್ಲ. ಹೀಗಾಗಿ ಯಾವ ಕಾಲಕ್ಕೂ ಮನೆಗಳನ್ನು ನಿರ್ಮಿಸಿದರೂ ರಸ್ತೆಗಳನ್ನು ತೋಡಿ ಪೈಪ್‌ಗಳನ್ನು ಅಳವಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಶಾಶ್ವತ ಯೋಜನೆಯಾಗಿರುವುದರಿಂದ ಅಪಾರ ಹಣ ಉಳಿತಾಯವಾಗುತ್ತದೆ. ‘ನಮ್ಮ ಷರತ್ತುಗಳನ್ನು ಒಪ್ಪಿದವರಿಗೆ ಮಾತ್ರವೇ ನಿವೇಶನಗಳನ್ನು ವಿತರಿಸಲಾಗಿದೆ. ಕಾಂಕ್ರೀಟ್‌ ಕಾಡಿನಿಂದ ಮುಕ್ತಗೊಳಿಸಿ ಹಸಿರು ವಲಯವನ್ನು ಪುನರ್‌ ಸ್ಥಾಪಿಸಿ ಹಳೆಯ ಬೆಂಗಳೂರಿನ ಗತವೈಭವವನ್ನು  ಮರುಕಳಿಸಬೇಕು ಎನ್ನುವ ಆಶಯ ನನ್ನದು’ ಎನ್ನುತ್ತಾರೆ ರೊನಾಲ್ಡ್‌.

‘ಭಾರತದ ಅಭಿವೃದ್ಧಿ ವೇಗ ಹೆಚ್ಚಾಗಬೇಕಾಗಿದೆ. ಸಾರ್ವಜನಿಕ ವಲಯಗಳ ಸಕಾರಾತ್ಮಕ ಚಿಂತನೆ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸ್ಪಂದನ ಇನ್ನಷ್ಟು ಮುಕ್ತವಾಗಬೇಕು.  ಇದಕ್ಕಾಗಿ ಸರ್ಕಾರಿ ವಲಯದ ಮನಸ್ಥಿತಿ ಬದಲಾಗಬೇಕಾಗಿದೆ. ಉತ್ತಮ ಯೋಜನೆಗಳನ್ನು ರೂಪಿಸುವವರಿಗೆ ಪ್ರೋತ್ಸಾಹಬೇಕು’ ಎನ್ನುತ್ತಾರೆ ರೊನಾಲ್ಡ್‌.

ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ
1991ರಲ್ಲಿ ರೊನಾಲ್ಡ್‌ ಅವರು ಮಂಗಳೂರಿನಲ್ಲಿ ‘ಲಿಂಕ್‌ ಮಾದಕ ದ್ರವ್ಯ ವ್ಯಸನ ವಿರೋಧಿ ಕೇಂದ್ರ’ ಸ್ಥಾಪಿಸಿದರು. ಈ ಕೇಂದ್ರದ ಮೂಲಕ ಇದುವರೆಗೆ 22 ಸಾವಿರಕ್ಕೂ ಹೆಚ್ಚು ಜನರನ್ನು ಮದ್ಯ ಮತ್ತು ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಿಸುವ ಪ್ರಯತ್ನ ನಡೆಸಲಾಗಿದೆ. ಜತೆಗೆ ಇವರ ಕುಟುಂಬಗಳ ಪುನರುಜ್ಜೀವನಕ್ಕೂ ಕಾರಣರಾಗಿದ್ದಾರೆ. ಇದೇ ಸಂಸ್ಥೆ ನಿರ್ವಹಿಸುವ ‘ಲಿಂಕ್‌ ಸಮಗ್ರ ಪುನರ್ವಸತಿ ಕೇಂದ್ರ’ದ ಮೂಲಕ ವ್ಯಸನಕ್ಕೆ ಒಳಗಾಗಿರುವವರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಇದಕ್ಕಾಗಿಯೇ 60 ಹಾಸಿಗೆಯ ಆಸ್ಪತ್ರೆಯನ್ನು ರೊನಾಲ್ಡ್‌ ನಿರ್ಮಿಸಿದ್ದಾರೆ.

2004ರಲ್ಲಿ ರೊನಾಲ್ಡ್‌ ಅವರೇ ಸುಸಜ್ಜಿತವಾದ, ಆಧುನಿಕ ಮಾದರಿಯ ಸಕಲ ಪೀಠೋಪಕರಣ ಒಳಗೊಂಡ ಪೊಲೀಸ್‌ ಠಾಣೆಯನ್ನು ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ನಾಗರಿಕರೊಬ್ಬರು ಈ ರೀತಿ ಪೊಲೀಸ್‌ ಠಾಣೆ ನಿರ್ಮಿಸಿಕೊಟ್ಟಿದ್ದು ದೇಶದಲ್ಲಿ ಮೊದಲು ಎನ್ನಲಾಗಿದೆ. ಚಿಕ್ಕಜಾಲ ಪೊಲೀಸ್‌ ಠಾಣೆ ನವೀಕರಣಕ್ಕೂ ಇವರು ನೆರವು ನೀಡಿದ್ದಾರೆ.  2011ರಲ್ಲಿ ನವರತ್ನ ಅಗ್ರಹಾರ ಗ್ರಾಮದ ಬಳಿಯ 2.5 ಕಿ.ಮೀ ಉದ್ದದ ರಸ್ತೆಯನ್ನು  ಸ್ವಂತ ವೆಚ್ಚದಲ್ಲಿ ನಿರ್ಮಿಸಿ ಕರ್ನಾಟಕ ಸರ್ಕಾರಕ್ಕೆ ದಾನವಾಗಿ ನೀಡಿದ್ದಾರೆ.  ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 32 ದೇವಾಲಯಗಳ ನಿರ್ಮಾಣಕ್ಕೂ ರೊನಾಲ್ಡ್‌ ಆರ್ಥಿಕ ನೆರವು ನೀಡಿದ್ದಾರೆ.

‘ಎಲ್ಲ ಜನಾಂಗ, ವರ್ಗಗಳ ಜನರು ಸಹಬಾಳ್ವೆಯಿಂದ ಸಮಾಜದಲ್ಲಿಬದುಕಬೇಕು ಎನ್ನುವುದು ನನ್ನ ನಂಬಿಕೆ. ಹೀಗಾಗಿಯೇ ನಾನು ಯಾವುದೇ ಒಂದು ಜಾತಿ, ಧರ್ಮ, ಪ್ರದೇಶಕ್ಕೆ ಸೀಮಿತವಾಗಿ ಸಮಾಜ ಸೇವೆ ಮಾಡುತ್ತಿಲ್ಲ’ ಎನ್ನುತ್ತಾರೆ ರೊನಾಲ್ಡ್‌.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಸಾದಳ್ಳಿ ಗ್ರಾಮದಲ್ಲಿ ಪ್ರೌಢಶಾಲೆಗೆ ಕೊಠಡಿಗಳೇ ಇರಲಿಲ್ಲ. ಬಯಲಲ್ಲೇ ಮಕ್ಕಳು ಕುಳಿತುಕೊಳ್ಳುವುದನ್ನು ಗಮನಿಸಿ ಅವರಿಗೆ ಕೊಠಡಿಗಳನ್ನು ಸ್ವಂತ ವೆಚ್ಚದಲ್ಲಿ ನಿರ್ಮಿಸಿಕೊಟ್ಟೆ. ಜತೆಗೆ ಪೀಠೋಪಕರಣಗಳನ್ನೂ ನೀಡಿದೆ.  ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಕೊಳಗೇರಿ ಪ್ರದೇಶದ ಮಕ್ಕಳ ಶಿಕ್ಷಣಕ್ಕೂ  ನೆರವು ನೀಡಿದ್ದೇನೆ’ ಎನ್ನುತ್ತಾರೆ ರೊನಾಲ್ಡ್.

ಸಮಾಜ ಸೇವೆಗೆ ಪತ್ನಿ ಜತೆ ಒಪ್ಪಂದ!
ಸಾಮಾಜಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ಅಡ್ಡಿ ಇರಬಾರದು ಎನ್ನುವ ಉದ್ದೇಶದಿಂದ ರೊನಾಲ್ಡ್‌ ಅವರು ತಮ್ಮ ಮದುವೆ ದಿನವೇ ಚರ್ಚ್‌ನಲ್ಲಿ ಪತ್ನಿ ಜತೆ ಫಾದರ್‌ ಸಮ್ಮುಖದಲ್ಲಿ ವಿವಾಹ ಪ್ರಮಾಣ ವಚನ ಮಾಡುವ ಮೊದಲು ಒಪ್ಪಂದ ಮಾಡಿಕೊಂಡರು!

‘ಗಳಿಸುವ ಆದಾಯದಲ್ಲಿ ಸಾಧ್ಯವಾದಷ್ಟು ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದನ್ನು ಮುಂದುವರಿಸಬೇಕು’ ಎಂಬುದು ಈ ಒಪ್ಪಂದ.

‘ನನ್ನ ಸಾಮಾಜಿಕ ಚಟುವಟಿಕೆಗಳಿಗೆ ಇದುವರೆಗೂ ಯಾವುದೇ ರೀತಿಯ ಅಡೆತಡೆಗಳು ಬಂದಿಲ್ಲ. ನನ್ನ ಅಭಿಪ್ರಾಯಕ್ಕೆ ಪತ್ನಿ ಜೀನ್‌ ಸಂತಸದಿಂದಲೇ ಒಪ್ಪಿ ನಡೆಯುತ್ತಿದ್ದಾರೆ. ನಮಗೆ ಸಮಾಜ ಸೇವೆ ಎನ್ನುವುದು ಒಂದು ರೀತಿಯ ಹರಕೆ’ ಎನ್ನುತ್ತಾರೆ ಅವರು.

**
ಟ್ರಂಪ್‌ ಉಪಾಹಾರ ಕೂಟಕ್ಕೆ ಆಹ್ವಾನ

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾದ ನಂತರ 2017ರ ಫೆಬ್ರುವರಿ 2ರಂದು ವಾಷಿಂಗ್ಟನ್‌ನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿತ್ತು. 140ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಈ ಕೂಟದಲ್ಲಿ ಭಾಗವಹಿಸಿದ್ದರು.

‘ನ್ಯಾಷನಲ್‌ ಪ್ರೇಯರ್‌ ಬ್ರೇಕ್‌ಫಾಸ್ಟ್‌’ ಎಂದು ಕರೆಯಲಾಗುವ ಈ ಉಪಾಹಾರ ಕೂಟಕ್ಕೆ ರೊನಾಲ್ಡ್‌ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಭಾರತದಿಂದ ಆಯ್ಕೆಯಾಗಿದ್ದ 10 ಜನರಲ್ಲಿ ರೊನಾಲ್ಡ್‌ ಕೂಡಾ ಒಬ್ಬರು.

**

ಆಸ್ಟ್ರೇಲಿಯಾ ಪ್ರಶಸ್ತಿ
ರೊನಾಲ್ಡ್‌ ಅವರ ಸಮಾಜ ಸೇವೆ ಪರಿಗಣಿಸಿ ಆಸ್ಟ್ರೇಲಿಯಾ ಸರ್ಕಾರ 2015ರಲ್ಲಿ ‘ಆಸ್ಟ್ರೇಲಿಯನ್ ಸರ್ವಿಸ್ ಎಕ್ಸಲೆನ್ಸ್‌ ಅವಾರ್ಡ್‌’ ನೀಡಿದೆ. 
ಜತೆಗೆ ಕೊಂಕಣ ಸಮಾಜ ರತ್ನ, ಕೊಂಕಣ ಕುವರ ಮುಂತಾದ ಪ್ರಶಸ್ತಿಗಳನ್ನು ಇವರಿಗೆ ನೀಡಲಾಗಿದೆ.

(ರೊನಾಲ್ಡ್ ಕೊಲಾಸೊ)

ಹೋಟೆಲ್‌ ಉದ್ಯಮದಲ್ಲೂ ರೊನಾಲ್ಡ್‌ ಗುರುತಿಸಿಕೊಂಡಿದ್ದಾರೆ. ಇವರ ಒಡೆತನದ  ‘ಕ್ಲಾರ್ಕ್ಸ್‌ ಎಕ್ಸೊಟಿಕಾ’ಗೆ 11 ಅಂತರರಾಷ್ಟ್ರೀಯ ಮತ್ತು 6 ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT