ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 2 ಮೇ 2017, 19:30 IST
ಅಕ್ಷರ ಗಾತ್ರ

-ಪ್ರಕಾಶ್‌. ಎಂ., ಬೆಂಗಳೂರು
* ನಾನು ಬೆಂಗಳೂರಿನಲ್ಲಿ ಒಂದು ಬಿಸ್‌ನೆಸ್‌  ಪ್ರಾರಂಭಿಸಬೇಕೆಂದಿದ್ದೇನೆ. ಇದಕ್ಕೆ ಎರಡು ಲಕ್ಷ ರೂಪಾಯಿ ಸಾಲಬೇಕಾಗಿದೆ.  ಸಾಲ ಪಡೆಯಲು ಉತ್ತಮ ಬ್ಯಾಂಕ್‌ ತಿಳಿಸಿರಿ. ನಾನು ಏನು ಬಿಸ್‌ನೆಸ್‌ ಮಾಡಲಿ ತಿಳಿಸಿ.
ಉತ್ತರ:
ಸಾಲ ಪಡೆಯುವ ಮುನ್ನ ನೀವು ಕೈಕೊಳ್ಳಲಿರುವ ವ್ಯಾಪಾರ ವ್ಯವಹಾರದಲ್ಲಿ, ನಿಮಗೆ ಪರಿಣತ ಇದೆಯೇ ಎನ್ನುವುದು ಮುಖ್ಯವಾಗುತ್ತದೆ. ನೀವು ಡಿಸ್ಟ್ರಿಕ್ಟ್‌ ಇಂಡಸ್ಟ್ರೀಸ್‌ ಸೆಂಟರಿನಲ್ಲಿ ಹೋಗಿ ಅಲ್ಲಿ ಅವರಿಂದ ಮಾಹಿತಿ ಹಾಗೂ ತರಬೇತಿ ಪಡೆದು ನಂತರ ಬ್ಯಾಂಕ್‌ ಸಾಲಕ್ಕೆ ಅರ್ಜಿ ಹಾಕಿರಿ. ಬ್ಯಾಂಕಿನಿಂದ ಸಾಲ ಪಡೆಯುವಾಗ ಉತ್ತಮ ಬ್ಯಾಂಕ್‌ ಯಾವುದು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ.

ಠೇವಣಿ ಇರಿಸುವಾಗ ಮಾತ್ರ ಉತ್ತಮ ಬ್ಯಾಂಕ್‌ ಆರಿಸಿಕೊಳ್ಳಬೇಕಾಗುತ್ತದೆ. ಇದೇ ವೇಳೆ ಕಡಿಮೆ ಬಡ್ಡಿ ಸಾಲ ನಿಮ್ಮಂತಹ ಯುವಕರಿಗೆ ಎಸ್‌ಬಿಐ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ವಿತರಿಸುತ್ತಾರೆ. ಈ ಯೋಜನೆಯ ಕಿಶೋರ್‌ ಯೋಜನೆಯ ಅಡಿಯಲ್ಲಿ ₹ 50,000– 5 ಲಕ್ಷಗಳ ತನಕ, ಯಾವುದೇ ಆಧಾರವಿಲ್ಲದೆ (Without Security),  ವ್ಯಕ್ತಿಯ ಅಭಿರುಚಿ, ಯೋಗ್ಯತೆ, ಹಾಗೂ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡಿ ಕೊಡುತ್ತಾರೆ.

**

ಬಿ.ಎಸ್‌. ಶಿವರಾಜಕುಮಾರ್‌, ತುಮಕೂರು
* ನಾನು ನನ್ನ ತಂದೆಯಿಂದ ₹ 5 ಲಕ್ಷ ಇನಾಮಾಗಿ ಈ ವರ್ಷ ಪಡೆದಿದ್ದೇನೆ. ಈ ಹಣ ನನ್ನ ತಂದೆಯವರು ಕೃಷಿ ಜಮೀನು ಮಾರಾಟ ಮಾಡಿ ಪಡೆದದ್ದಾಗಿದೆ. ಈ ಹಣ ನನ್ನ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕೇ? ವಾರ್ಷಿಕ ಸಂಬಳ ₹ 2.50 ಲಕ್ಷ.
ಉತ್ತರ:
ಸೆಕ್ಷನ್‌ 48– Capital Gain Tax ಆಧಾರದ ಮೇಲೆ ಕೃಷಿ ಜಮೀನು ಮಾರಾಟ ಮಾಡಿ ಬಂದಿರುವ ಮೊತ್ತಕ್ಕೆ ನಿಮ್ಮ ತಂದೆಯವರು ತೆರಿಗೆ ಸಲ್ಲಿಸುವ ಅವಶ್ಯವಿಲ್ಲ. ಇದೇ ವೇಳೆ ನಿಮ್ಮ ತಂದೆಯವರು ನಿಮಗೆ ಅಂದರೆ ತಂದೆ ಇದ್ದು ಮಗನಿಗೆ ಇನಾಮರೂಪದಲ್ಲಿ (By Gift) ಎಷ್ಟು ಹಣ ಕೊಟ್ಟರೂ ಅದಕ್ಕೆ ತೆರಿಗೆ ಇರುವುದಿಲ್ಲ.

ಇದು ಸೋಜಿಗಲ್ಲ ಸತ್ಯದ ಸಂಗತಿ. ಈ ಕಾರಣದಿಂದಾಗಿ ನೀವು ತಂದೆಯವರಿಂದ ಪಡೆದ ₹ 5 ಲಕ್ಷ ನಿಮ್ಮ ಈ ವರ್ಷದ ಆದಾಯಕ್ಕೆ ಸೇರಿಸುವ ಅವಶ್ಯವಿಲ್ಲ ಹಾಗೂ ಈ ಮೊತ್ತಕ್ಕೆ ತೆರಿಗೆ ಕೊಡುವ ಅಗತ್ಯವೂ ಇಲ್ಲ. ಮುಂದೆ ಈ ಹಣ ನೀವು ಬ್ಯಾಂಕಿನಲ್ಲಿ ಅಥವಾ ಇನ್ನಿತರ ಕಡೆ ಹೂಡಿ, ಇದರಿಂದ ಬರುವ ವರಮಾನವನ್ನು ಆಯಾ  ವರ್ಷ ನಿಮ್ಮ ಉಳಿದ ಆದಾಯಕ್ಕೆ ಸೇರಿಸಿ, ಆದಾಯ ತೆರಿಗೆ ಮಿತಿ ದಾಟಿದಲ್ಲಿ ತೆರಿಗೆ ಸಲ್ಲಿಸಬೇಕಾಗುತ್ತದೆ.

**

-ಬಾಬುರಾವ್‌ ಶಾನುಭಾಗ, ಕಾರವಾರ
* ಅಂಚೆ ಕಚೇರಿಯ 5 ವರ್ಷಗಳ ಹಿರಿಯ ನಾಗರಿಕರ ಠೇವಣಿಯಿಂದ ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ತೆರಿಗೆ ವಿನಾಯತಿ ಪಡೆಯಬಹುದೇ, ತಿಳಿಸಿ.
ಉತ್ತರ:
ಅಂಚೆ ಕಚೇರಿ 5 ವರ್ಷಗಳ ಹಿರಿಯ ನಾಗರಿಕರ ಠೇವಣಿ ಸೆಕ್ಷನ್‌ 80ಸಿ ಆಧಾರದೊಳಗೆ ಬರುತ್ತದೆ. ಇಲ್ಲಿ ಬರುವ ಬಡ್ಡಿಗೆ ತೆರಿಗೆ ವಿನಾಯತಿ ಇರುವುದಿಲ್ಲ. ಸೆಕ್ಷನ್‌ 80.ಸಿ. ಆಧಾರದ ಮೇಲೆ ಪಡೆಯಬಹುದಾದ ರಿಯಾಯತಿ ವಿವರಗಳು: ಜೀವವಿಮೆ, ಪಿ.ಎಫ್‌., ಪಿ.ಪಿ.ಎಫ್‌., ಎನ್‌.ಎಸ್‌.ಸಿ., ಇ.ಎಲ್‌.ಎಸ್‌.ಎಸ್‌. (ELSS), ಮ್ಯೂಚುವಲ್‌ ಫಂಡ್‌ ಯುನಿಟ್ಟುಗಳು. ಎರಡು ಮಕ್ಕಳ ಟ್ಯೂಷನ್‌ಫೀ, ಗೃಹಸಾಲದ ಕಂತು, 5 ವರ್ಷಗಳ ಬ್ಯಾಂಕ್‌, ಅಂಚೆ ಕಚೇರಿ ಠೇವಣಿ.

ವಿ.ಸೂ.: ಗರಿಷ್ಠ ಮಿತಿ ಎಲ್ಲಾ ಹೂಡಿಕೆಯಿಂದ ₹ 1.50 ಲಕ್ಷ ಮಾತ್ರ.

**

- ಕಲ್ಯಾಣಕುಮಾರ್‌, ಬೆಂಗಳೂರು
* ನಾನು ನಿವೇಶನ ಮಾರಾಟ ಮಾಡಿ ಹಾಗೂ ಇತರ ಉಳಿತಾಯದಿಂದ ₹ 16 ಲಕ್ಷ ಹಣ ಮನೆ ಕಟ್ಟುವ ಉದ್ದೇಶದಿಂದ ನನ್ನ ಹಿರಿ ಅಣ್ಣನಿಗೆ ಕೊಟ್ಟಿದ್ದೆನು. ರಸ್ತೆ ಅಗಲೀಕರಣದಿಂದಾಗಿ ಮನೆ ಕಟ್ಟಲಾಗಲಿಲ್ಲ. ನನ್ನ ಅಣ್ಣ ಈ ಹಣ ಡಿಸಿಸಿ ಬ್ಯಾಂಕ್‌ನಲ್ಲಿ ಒಂದು ವರ್ಷದ ಅವಧಿಗೆ ಎಫ್‌ಡಿ ಮಾಡಿ ನನ್ನ ಹೆಸರಿಗೆ ನಾಮ ನಿರ್ದೇಶನ ಮಾಡಿದ್ದಾನೆ. ಈಗ ಆ ಹಣ ಬಡ್ಡಿ ಸಮೇತ ₹ 17.5 ಲಕ್ಷ ವಾಗಿದೆ. ನಾನು ಈ ಹಣ ಪಡೆದು ನನ್ನ ಹಾಗೂ ಪತ್ನಿಯ ಹೆಸರಿನಲ್ಲಿ ಠೇವಣಿ ಮಾಡಬಹುದೇ,  ತಿಳಿಸಿ.
ಉತ್ತರ:
₹ 17.5 ಲಕ್ಷ ವಾಪಾಸು ಪಡೆಯುವ ಮುನ್ನ ನಿಮ್ಮ ಹಾಗೂ ನಿಮ್ಮ ಪತ್ನಿಯ ಹೆಸರಿನಲ್ಲಿ ಎಷ್ಟು ಬೇರೆ, ಬೇರೆ ಠೇವಣಿ ಮಾಡಬೇಕೆಂದಿದ್ದೀರಿ ಎನ್ನುವುದನ್ನು ನಿರ್ಧರಿಸಿ, ₹ 17.5 ಲಕ್ಷ ವಿಂಗಡಿಸಿ ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಪ್ರತ್ಯೇಕವಾಗಿ ಚೆಕ್‌ ಮುಖಾಂತರ ಹಣವನ್ನು ನಿಮ್ಮ ಅಣ್ಣನಿಂದ ಪಡೆಯಿರಿ.

ಇದರಿಂದ ನಿಮಗೂ, ನಿಮ್ಮ ಹೆಂಡತಿಗೂ ಹಾಗೂ ಅಣ್ಣನಿಗೂ ತೆರಿಗೆ ಬರುವುದಿಲ್ಲ. ಮುಂದೆ ನೀವು ಪಡೆಯುವ ಚೆಕ್‌ನ ಹಣಕ್ಕನುಗುಣವಾಗಿ ನಿಮ್ಮ ಹೆಂಡತಿ ಹೆಸರಿನಲ್ಲಿ ಪ್ರತ್ಯೇಕವಾಗಿ ಠೇವಣಿ ಮಾಡಿ. ನೀವು ಅಣ್ಣನಿಂದ ಪಡೆಯುವ ಚೆಕ್‌ ಬ್ಯಾಂಕಿಗೆ ಕೊಡುವ ಮುನ್ನ ಅವುಗಳ ಜೆರಾಕ್‌್ಸ ಪ್ರತಿ ನಿಮ್ಮೊಡನೆ ಇಟ್ಟುಕೊಳ್ಳಿ. ಮುಂದೆ ಹಣ ಎಲ್ಲಿಂದ ಬಂದಿದೆ ಎನ್ನುವುದಕ್ಕೆ ಪುರಾವೆ ಇಟ್ಟುಕೊಂಡಂತಾಗುತ್ತದೆ. ಇದರಿಂದ ತೆರಿಗೆ ಮುಕ್ತರಾಗುವುದರ ಜೊತೆಗೆ ನೆಮ್ಮದಿ ಇರುತ್ತದೆ.

**

- ಹೆಸರು–ಊರು ಬೇಡ
* ನನ್ನ ಪತಿ ಸರ್ಕಾರಿ ನೌಕರರು. ಎಲ್ಲಾ ಕಡಿತವಾಗಿ ₹ 23,000 ಬರುತ್ತದೆ. ನನ್ನ ಮಾವನಿಗೆ ₹ 15,000 ಪಿಂಚಣಿ ಬರುತ್ತದೆ. ಮಗನಿಗೆ ₹ 10,000 ಸಂಬಳ ಬರುತ್ತದೆ. ಎಲ್‌ಐಸಿ ಅವಧಿ ಮುಗಿದು ಬಂದಿರುವ ಹಣ ಹಾಗೂ ನಾನು ಎಷ್ಟಾದರಷ್ಟು ಕೂಡಿಟ್ಟ ಹಣ ಎಸ್‌ಬಿಎಂ ನಲ್ಲಿ ₹ 10 ಲಕ್ಷವಿದೆ. ನನ್ನ ಹೆಸರಿನಲ್ಲಿಯೇ ಇದೆ. ಪತಿಯ ಹೆಸರಿನಲ್ಲಿ ಯಾವುದೇ ಬಾಂಡು ಇಲ್ಲ. ಇದಕ್ಕೆ 15ಜಿ ಫಾರಂ ಸಲ್ಲಿಸಿದ್ದೇನೆ. ಈ ಹಣ ಆದಾಯ ತೆರಿಗೆಗೆ ಒಳಗಾಗುತ್ತಿದೆಯೇ, ನಾವು ಆದಾಯ ತೆರಿಗೆ ಆಫೀಸಿಗೆ ತಿಳಿಸಬೇಕೇ ತಿಳಿಸಿರಿ.  ಮುಂದೆ ನಾನು ಉಳಿಸುವ ಹಣ ಎಫ್‌ಡಿ ಮಾಡಬಹುದೇ. ಆರ್‌.ಡಿ.ಯಿಂದ ತೆರಿಗೆ ಉಳಿಸಬಹುದೇ? ಪತಿಯ ಆದಾಯದಲ್ಲಿ ಎಫ್‌ಡಿ ನಮೂದಿಸಬೇಕೇ? ತಿಳಿಸಿ.
ಉತ್ತರ:
ನೀವು ಒಂದು ಆದರ್ಶ ಗೃಹಿಣಿಯಾಗಿ, ಅಚ್ಚುಕಟ್ಟಿನ ಸಂಸಾರ ನಡೆಸುತ್ತಿದ್ದು, ನಿಮ್ಮ ಬುದ್ಧಿವಂತಿಕೆಯಿಂದ ಉಳಿಸಿದ ಹಾಗೂ ಉಳಿಸುವ ಹಣ ನಿಮ್ಮದೇ ಆಗಿರುತ್ತದೆ. ಈ ಠೇವಣಿ ಅಥವಾ ಬಡ್ಡಿ ವರಮಾನ ನಿಮ್ಮ ಪತಿಯ ವರಮಾನಕ್ಕೆ ಸೇರಿಸುವುದಾಗಲೀ, ಆದಾಯ ತೆರಿಗೆ ಇಲಾಖೆಗೆ ತಿಳಿಸುವುದಾಗಲೀ ಅವಶ್ಯವಿಲ್ಲ. ಮುಂದೆ ಕೂಡಾ ಇದೇ ರೀತಿ ಹಣ ಉಳಿಸಿ ಠೇವಣಿ ಮಾಡಿರಿ, ಆರ್‌ಡಿ ಠೇವಣಿಯು ಆದಾಯ ತೆರಿಗೆಗೆ ಒಳಗಾಗುತ್ತದೆ. ಇದರಿಂದ ತೆರಿಗೆ ಉಳಿಸಲು ಸಾಧ್ಯವಿಲ್ಲ. ನಿಮ್ಮ ಆದರ್ಶ ಎಲ್ಲಾ ಮಹಿಳೆಯರಿಗೆ ಮಾರ್ಗದರ್ಶನವಾಗಲಿ ಎಂದು ಹಾರೈಸುತ್ತೇನೆ.

**

-ಸುಮನ್‌, ಬೆಂಗಳೂರು
* ಎನ್‌ಎಚ್‌ಎಐ ಮತ್ತು ಆರ್‌ಇಸಿ ಬಾಂಡುಗಳಲ್ಲಿ ಹಣ ತೊಡಗಿಸಿದರೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಉಳಿಯುವುದರಿಂದ ಅಲ್ಲಿ ಬರುವ ಬಡ್ಡಿ, ಠೇವಣಿ ಮುಗಿಯುತ್ತಲೇ, ಠೇವಣಿದಾರರಿಗೆ ಕೊಡುತ್ತಾರಾ ಅಥವಾ ಸರ್ಕಾರಕ್ಕೆ ಆ ಹಣ ಹೋಗುತ್ತದೆಯೇ, ದಯಮಾಡಿ ತಿಳಿಸಿರಿ.
ಉತ್ತರ:
ಆದಾಯ ತೆರಿಗೆ ಅಥವಾ ಇನ್ನಿತರ ತೆರಿಗೆ ವಿನಾಯತಿ ಪಡೆಯಲು ಹೂಡುವ ಹಣ ಅಂದರೆ ಇರಿಸುವ ಠೇವಣಿಯಲ್ಲಿ ಬರುವ ಬಡ್ಡಿ, ಠೇವಣಿದಾರರಿಗೇ ಸಲ್ಲತಕ್ಕದ್ದು. ಇದರಲ್ಲಿ ಸರ್ಕಾರ ಅಥವಾ ಆದಾಯ ತೆರಿಗೆ ಇಲಾಖೆಗೆ ಹಕ್ಕು ಇರುವುದಿಲ್ಲ. ಎನ್‌ಎಚ್‌ಎಐ ಮತ್ತು ಆರ್‌ಇಸಿ ಯಲ್ಲಿ ಅರ್ಧ ವಾರ್ಷಿಕ ಅಥವಾ ಒಮ್ಮೇಲೇ ಬಡ್ಡಿ ಪಡೆಯುವ ಸೌಲತ್ತು ಇದೆ.

ಇದೇ ವೇಳೆ ತೆರಿಗೆ ವಿನಾಯತಿಗೆಂದು ಠೇವಣಿ ಇರಿಸಿ, ಈ ಠೇವಣಿಯಿಂದ ಬರುವ ಬಡ್ಡಿ, ವ್ಯಕ್ತಿಯ ವಾರ್ಷಿಕ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕು. ಒಟ್ಟಿನಲ್ಲಿ ತೆರಿಗೆಗೋಸ್ಕರ ಉಳಿಸುವ ಠೇವಣಿಯ ಮೇಲಿನ ಬಡ್ಡಿ ಹಣ ಠೇವಣಿದಾರರಿಗೇ ಸಿಗುತ್ತದೆ ಹಾಗೂ ಹೀಗೆ ಬಂದ ಬಡ್ಡಿ ಹಣಕ್ಕೆ ತೆರಿಗೆ ಇರುತ್ತದೆ.

**

-ರಾಮಚಂದ್ರಗೌಡ, ಶಿರಸಿ
* ನನ್ನ ವಯಸ್ಸು 25. ಎಂ.ಎ. ಪದವೀಧರ. ಯಾವುದೇ ಉದ್ಯೋಗ ಸಿಗದ ಕಾರಣ ಒಂದು ಬಂಗಾರದ ಅಂಗಡಿಯಲ್ಲಿ ₹ 10000ಕ್ಕೆ ದುಡಿಯುತ್ತಿದ್ದೇನೆ. ತಿಂಗಳ ಉಳಿತಾಯ ₹ 6000. ಮನೆಯಲ್ಲಿ ಆರು ಜನ ಸದಸ್ಯರಿದ್ದಾರೆ. ನಮಗೆ ಒಂದು ಎಕರೆ ಅಡಿಕೆ ತೋಟ ಇದೆ. ಒಂದು ವರ್ಷದ ನಂತರ ಕುರಿ ಹಾಗೂ ಕೋಳಿ ಸಾಕಾಣಿಕೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದಿದ್ದೇನೆ. ಇದಕ್ಕೆ ₹ 4 ಲಕ್ಷ ಹಣ ಬೇಕಿದ್ದು, ಸಾಲ ಮಾಡಲು ಹೆದರುತ್ತಿದ್ದೇನೆ. ₹ 6000 ಸಾವಿರ ಉಳಿತಾಯದಲ್ಲಿ, ಒಂದು ವರ್ಷದಲ್ಲಿ ₹ 4 ಲಕ್ಷ ಗಳಿಸುವುದು ಹೇಗೆ ಅಥವಾ ಯಾವ ಆಧಾರದ ಮೇಲೆ ಸಾಲ ಸಿಗಬಹುದು. ದಯಮಾಡಿ ತಿಳಿಸಿರಿ.
ಉತ್ತರ:
ಕುರಿ, ಕೋಳಿ ಸಾಲವನ್ನು ಆದ್ಯತಾ ರಂಗದ ಸಾಲವೆಂದು (PRIORITY SECTOR) ಪರಿಗಣಿಸಲಾಗಿದೆ. ಇದು ಕೃಷಿ ಸಾಲದ ವಿಭಾಗಕ್ಕೆ ಬರುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಈ ರೀತಿಯ ಚಟುವಟಿಕೆ ಹಾಗೂ ಉದ್ಯೋಗ ನಡೆಸಲು, ನಿರುದ್ಯೋಗಿ ಯುವಕರಿಗೆ ಕಡಿಮೆ ಬಡ್ಡಿ ದರದಲ್ಲಿ  ಸಾಲ ನೀಡುತ್ತದೆ. ನೀವು ಮಾಡಲಿರುವ ಚಟುವಟಿಕೆಯ ಆಧಾರದ  ಮೇಲೆ ಪ್ರಾಜೆಕ್ಟ್ ರಿಪೋರ್ಟ್ ಬ್ಯಾಂಕಿಗೆ ಸಲ್ಲಿಸಬೇಕು.

ಈ ವಿಚಾರದಲ್ಲಿ ಬ್ಯಾಂಕಿನಲ್ಲಿ ಪರಿಣತ ಕೃಷಿ ಅಧಿಕಾರಿಗಳಿದ್ದು, ಅವರಿಂದ ಸಲಹೆ ಪಡೆಯಬಹುದು. ಕುರಿ, ಕೋಳಿ ಇವುಗಳ ಆರೋಗ್ಯ ತಪಾಸಣೆ, ವಿಮೆ ಇವೆಲ್ಲ ಮಾಹಿತಿಯನ್ನು ಬ್ಯಾಂಕಿನ ಕೃಷಿ ಅಧಿಕಾರಿಯಿಂದ ನೀವು ಪಡೆಯಿರಿ. ಯಾವುದೇ ಉದ್ಯೋಗ ಕ್ರಮವತ್ತಾಗಿ, ಆತ್ಮಸಾಕ್ಷಿಯಾಗಿ, ಕಷ್ಟಪಟ್ಟು ಮಾಡಿದಲ್ಲಿ ಯಶಸ್ಸು ಬಂದೇ ಬರುತ್ತದೆ. ಪ್ರಾರಂಭದಲ್ಲಿ ಸಣ್ಣ ರೀತಿಯಲ್ಲಿ ಮಾಡಿ ಲಾಭ ಗಳಿಸಿ, ಮುಂದೆ ದೊಡ್ಡ ಪ್ರಮಾಣದಲ್ಲಿ ಮಾಡಿರಿ. ಪ್ರಾಜೆಕ್ಟ್‌ಗೆ ತಕ್ಕಂತೆ ಬ್ಯಾಂಕ್ ಸಾಲ ದೊರೆಯುತ್ತದೆ. ₹ 6000 ಒಂದು ವರ್ಷದಲ್ಲಿ ₹ 4 ಲಕ್ಷ  ಆಗಲು ಎಂದಿಗೂ ಸಾಧ್ಯವಿಲ್ಲ.

**

-ಜಿ.ಆರ್. ಆನಂದ, ಚಿಂತಾಮಣಿ
* ನನ್ನ ವಯಸ್ಸು 68. ಜೀವನೋಪಾಯಕ್ಕಾಗಿ ನನ್ನ ಹೆಸರಿನಲ್ಲಿರುವ ಅಂಗಡಿ ₹ 14 ಲಕ್ಷಕ್ಕೆ ಮಾರಾಟ ಮಾಡಿ, ₹ 1 ಲಕ್ಷ  ಮುಂಗಡವಾಗಿ ಪಡೆದಿದ್ದೇನೆ. ಖರೀದಿದಾರ ₹ 3 ಲಕ್ಷ ಚೆಕ್ ಮುಖಾಂತರ ಹಾಗೂ ಉಳಿದ ಹಣ ನಗದಾಗಿ ಕೊಡುತ್ತಾನೆ. ನಾನು ಈ ಹಣ ನಗದಾಗಿ ಪಡೆಯಬಹುದೇ ತಿಳಿಸಿರಿ.
ಉತ್ತರ:
ಯಾವುದೇ ವ್ಯವಹಾರ ₹ 50000ಕ್ಕೂ ಹೆಚ್ಚಿಗೆ ಇರುವಲ್ಲಿ ಅಂತಹ ಹಣವನ್ನು ಚೆಕ್–ಡಿಡಿ–ಪೇ ಆರ್ಡರ್ ಮುಖಾಂತರ ಪಡೆಯಬೇಕು. ನೀವು ನಗದು ಪಡೆದರೂ ಆ ಹಣವನ್ನು ಬ್ಯಾಂಕಿನಲ್ಲಿ ಇರಿಸಬೇಕಾಗುತ್ತದೆ. ಇದರಿಂದಲೇ ನಿಮ್ಮ ಜೀವನ ಸಾಗಿಸಬೇಕು ಎಂಬುದಾಗಿ ತಿಳಿಸಿದ್ದೀರಿ.

ಕೃಷಿ ಜಮೀನು ಹೊರತುಪಡಿಸಿ ಉಳಿದ ಸ್ಥಿರ ಆಸ್ತಿ ಮಾರಾಟ ಮಾಡಿದಾಗ ಕ್ಯಾಪಿಟಲ್‌ಗೇನ್ ಟ್ಯಾಕ್ಸ್ ಬರುತ್ತದೆ. ಹಣ ಚೆಕ್ ಮುಖಾಂತರ ಪಡೆದು ಬ್ಯಾಂಕಿಗೆ ಜಮಾ ಮಾಡಿರಿ, ಹಾಗೂ ನಿಮ್ಮ ಊರಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

**

-ಮಾದಪ್ಪ, ಬಸವೇಶ್ವರನಗರ, ಬೆಂಗಳೂರು
* ನಾನು ಸರ್ಕಾರಿ ನಿವೃತ್ತ ಉದ್ಯೋಗಿ. ನನ್ನ ವಯಸ್ಸು 80. ನನ್ನ ನಿವೃತ್ತಿ ವೇತನ ₹ 26,500. ನನ್ನೊಡನೆ ₹ 16 ಲಕ್ಷ ಠೇವಣಿ ಇದೆ. ಆ ಹಣವಲ್ಲದೆ ಇನ್ನೂ ₹  4 ಲಕ್ಷ ನನ್ನೊಡನಿದೆ. ನನ್ನ ಠೇವಣಿಗೆ ನನ್ನ ಮೊಮ್ಮಗಳ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿದ್ದೇನೆ. ಅವಳಿಗೆ 16 ವರ್ಷ. ಅವಳಿಗೆ ಮುಂದೆ ಆದಾಯ ತೆರಿಗೆ ಬರುತ್ತದೆಯೇ, ನಾನು ತೆರಿಗೆ ರಿಟರ್ನ್ ತುಂಬ ಬೇಕೇ ತಿಳಿಸಿರಿ.
ಉತ್ತರ:
ನಿಮಗೆ 80 ವರ್ಷಗಳಾದ್ದರಿಂದ ವಾರ್ಷಿಕ ಒಟ್ಟು ಆದಾಯ ಅಂದರೆ ಪಿಂಚಣಿ ಹಾಗೂ ಬಡ್ಡಿ ಸೇರಿ, ₹ 5 ಲಕ್ಷಗಳ ತನಕ ಆದಾಯ ತೆರಿಗೆ ಬರುವುದಿಲ್ಲ. ನಿಮ್ಮ ಪಿಂಚಣಿ ವಾರ್ಷಿಕ ₹ 3.18 ಲಕ್ಷ ಠೇವಣಿ ಮೇಲೆ ಗರಿಷ್ಠ ₹ 1.60 ಲಕ್ಷ ಬಂದರೂ, ನಿಮ್ಮ ವಾರ್ಷಿಕ ಆದಾಯ ₹ 4.78 ಲಕ್ಷವಾಗುತ್ತದೆ. ನೀವು  ಸದ್ಯದ ಪರಿಸ್ಥಿತಿಯಲ್ಲಿ ಆದಾಯ ತೆರಿಗೆಗೆ ಒಳಗಾಗುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯವಿಲ್ಲ.

ನಿಮ್ಮ ಕಾಲಾನಂತರ ನಿಮ್ಮ ಮೊಮ್ಮಗಳಿಗೆ, ನೀವು ಬಿಟ್ಟು ಹೋಗುವ ಠೇವಣಿ ಬಡ್ಡಿ ಹಾಗೂ ಅವಳ ಇತರೆ ಆದಾಯ ₹ 2.50 ಲಕ್ಷ ವಾರ್ಷಿಕವಾಗಿ ಬರುವವರೆಗೆ ಅವರಿಗೂ ತೆರಿಗೆ ಬರುವುದಿಲ್ಲ. ಬ್ಯಾಂಕಿನಲ್ಲಿ ಠೇವಣಿ ಮೇಲಿನ ಬಡ್ಡಿ ಮುರಿಯದಂತೆ ಪ್ರತೀ ವರ್ಷ 15ಎಚ್ ನಮೂನೆ ಫಾರಂ ಸಲ್ಲಿಸಲು ಮರೆಯದಿರಿ.

**

ಬಿ. ಕೇಶವ ಮೂರ್ತಿ, ದಾವಣಗೆರೆ
* ನಾನು ರಾಜ್ಯ ಸರ್ಕಾರದ ನಿವೃತ್ತ ನೌಕರ. ನನಗೆ ನಿವೃತ್ತಿಯಿಂದ ಬಂದ ಹಣದಲ್ಲಿ ₹ 10 ಲಕ್ಷ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಮಾಡಿದ್ದೇನೆ. ನಿವೃತ್ತಿಯಾದಾಗ COMMUTATION OF PENSION ನಲ್ಲಿ ₹ 3,94,833 ಬಂದಿದ್ದು, ಈ ಮೊತ್ತದಲ್ಲಿ ಮಾಸಿಕ ₹ 3354 ಮುರಿಯುತ್ತಾರೆ. ಈ ಹಣ ತೆರಿಗೆ ಲೆಕ್ಕಕ್ಕೆ  ತೆಗೆದುಕೊಳ್ಳಬೇಕೇ? ಹೀಗೆ ಎಷ್ಟು ವರ್ಷ ಪಿಂಚಣಿಯಿಂದ ಮುರಿಯುತ್ತಾರೆ ತಿಳಿಸಿರಿ.ನನ್ನ ವಾರ್ಷಿಕ ವರಮಾನ ₹ 3 ಲಕ್ಷ ದೊಳಗಿದ್ದು ನಾನು ರಿಟರ್ನ್ ತುಂಬಬೇಕೇ ತಿಳಿಸಿರಿ.
ಉತ್ತರ:
ಕಮ್ಯೂಟೇಶನ್ ಮಾಡಿ, ಪಡೆಯುವ ಪಿಂಚಣಿ ಹಾಗೂ ವಾರ್ಷಿಕ ಠೇವಣಿ ಮೇಲಿನ ಬಡ್ಡಿ ಹಾಗೂ ಇತರೆ ಆದಾಯ ₹ 3 ಲಕ್ಷ ದೊಳಗಿರುವಲ್ಲಿ ತೆರಿಗೆ ಬರುವುದಿಲ್ಲ ಮತ್ತು ರಿಟರ್ನ್ ತುಂಬುವ ಅವಶ್ಯವೂ ಇಲ್ಲ.

ಕಮ್ಯೂಟೇಶನ ಹಣ ತೆರಿಗೆಗೆ ಪ್ರತ್ಯೇಕವಾಗಿ ತೆಗೆದುಕೊಳ್ಳುವ ಅವಶ್ಯವಿಲ್ಲ. ಪಿಂಚಣಿದಾರರಿಗೆ ಸೆಕ್ಷನ್ 10 (10ಎ) (1) ಪ್ರಕಾರ, ಬೇಸಿಕ್ ಪೆನ್ಷನ್‌ನ 1/3 ಕಮ್ಯೂಟ್ ಮಾಡಬಹುದು. ಹೀಗೆ ಮಾಡಿ ಪಡೆದಿರುವ ಮೊತ್ತಕ್ಕೆ ಆದಾಯ ತೆರಿಗೆ ಬರುವುದಿಲ್ಲ.

ಹೀಗೆ ಪಡೆದ ಹಣ ಪಿಂಚಣಿದಾರರ ಪಿಂಚಣಿಯಲ್ಲಿ 15 ವರ್ಷಗಳ ತನಕ ಕಡಿತವಾಗುತ್ತದೆ. ನೀವು 60ನೇ ವರ್ಷದಲ್ಲಿ ನಿವೃತ್ತರಾಗಿದ್ದರೆ, ನಿಮ್ಮ 75ನೇ ವರ್ಷದ ತನಕ ಈ ಕಡಿತವಿರುತ್ತದೆ. 76ನೇ ವರ್ಷದಿಂದ, ನಿಮಗೆ ಬರುವ ಪಿಂಚಣಿಗೆ ಈಗ ಕಡಿತವಾಗುವ ₹3354 ಸೇರಿ ಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT