ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ತನಿಖೆಗೆ ಆಗ್ರಹ

ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯ ಆರೋಪ
Last Updated 3 ಮೇ 2017, 5:58 IST
ಅಕ್ಷರ ಗಾತ್ರ

ಮಂಗಳೂರು: ‘ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಕೃಷ್ಣಾಪುರದ ಅಹಮ್ಮದ್ ಖುರೇಷಿ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಸಿಐಡಿ ವಿಚಾರಣೆ ಬೇಡ. ಪ್ರಕರಣದ ಕುರಿತು ರಾಜ್ಯ ಸರ್ಕಾರ ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಕೆ.ಎಸ್‌.ಎಂ.ಮಸೂದ್‌ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ‘ಮಂಗಳೂರು ಚಲೋ’ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸಿಐಡಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿಲ್ಲ. ವಿಚಾರಣೆ ನಡೆಸಿ ಒಂದು ವರದಿ ಸಲ್ಲಿಸುತ್ತಾರೆ. ಈ ಮಸ್ಕಾ ಹೊಡೆಯುವ ವ್ಯಾಪಾರ ಮುಸ್ಲಿಂ ಸಮಾಜಕ್ಕೆ ಬೇಡ. ನ್ಯಾಯಾಂಗ ತನಿಖೆಯಿಂದ ಮಾತ್ರ ಪರಿಹಾರ ದೊರೆಯುತ್ತದೆ ಎಂಬ ವಿಶ್ವಾಸ ನಮ್ಮದು’ ಎಂದರು.

‘ನ್ಯಾಯಾಂಗ ತನಿಖೆಯಿಂದ ಯಾವುದೇ ಫಲಿತಾಂಶ ಬರಲಿ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪೊಲೀಸರ ವಿರುದ್ಧದ ಆರೋಪವನ್ನು ಪೊಲೀಸರೇ ವಿಚಾರಣೆ ನಡೆಸಿದರೆ ಯಾರಿಗೆ ನ್ಯಾಯ ದೊರೆಯುತ್ತದೆ? ಕಮಿಷನರ್‌ ದರ್ಜೆಯ ಅಧಿಕಾರಿಗಳನ್ನು ಪ್ರಶ್ನಿಸಲು ಇನ್‌ಸ್ಪೆಕ್ಟರ್ ದರ್ಜೆ ಅಧಿಕಾರಿಗಳನ್ನು ನೇಮಿಸಿದರೆ ಎಂತಹಾ ವರದಿ ಬರುತ್ತದೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಿಂದಲೇ ಹೋರಾಟ: ‘ಕಾಂಗ್ರೆಸ್‌ ಮುಖಂಡರು ಈ ಹೋರಾ ಟಕ್ಕೆ ಬರಬಾರದು ಎಂದು ಕೆಲವರು ನಮ್ಮಲ್ಲಿ ಒಡಕು ಮೂಡಿಸುವ ಯತ್ನ ಮಾಡಿದರು. ವಾಸ್ತವವಾಗಿ ಈ ಹೋರಾಟದ ವಿಚಾರ ಜನ್ಮ ತಳೆದಿದ್ದು ಕಾಂಗ್ರೆಸ್‌ ಪಕ್ಷದ ಸಭೆಯಲ್ಲೇ. ನಾನು 1952ರಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ನನಗಿಂತ ಹಿರಿಯ ಕಾಂಗ್ರೆಸ್ಸಿಗರು ಇಲ್ಲಿ ಯಾರಿದ್ದಾರೆ? ಇಲ್ಲಿ ಗುಂಪುಗಾರಿಕೆ, ವೈಯಕ್ತಿಕ ರಾಜಕೀಯ ಇಲ್ಲ. ಸಮುದಾಯಕ್ಕೆ ಆಗುತ್ತಿರುವ ದೌರ್ಜನ್ಯ, ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಅಶ್ರಫ್‌ ಕೂಡ ಕಾಂಗ್ರೆಸ್‌ನಲ್ಲೇ ಇದ್ದಾರೆ. ಮುಸ್ಲಿಮರ ಮೇಲಿನ ದೌರ್ಜ ನ್ಯಕ್ಕೆ ತಡೆ ಹಾಕಬೇಕೆಂಬ ಗುರಿಯೊಂದಿಗೆ ಅವರು ಹೋರಾಟ ಆರಂಭಿಸಿದ್ದಾರೆ. ಈ ದಿನ ಇಲ್ಲಿ ಹೋರಾಟದ ಬೀಜ ಬಿತ್ತಿದ್ದೇವೆ. ಈಗ ನಮ್ಮದು ಶಾಂತಿಯುತ ಹೋರಾಟ. ನಮ್ಮ ಬೇಡಿಕೆಗಳ ಬಗ್ಗೆ ಅಧಿಕಾರದಲ್ಲಿ ಇರುವವರು ಸ್ಪಂದಿಸ ಬೇಕು. ತಪ್ಪಿದರೆ ಹೋರಾಟ ಬೇರೆ ಸ್ವರೂಪ ಪಡೆಯುತ್ತದೆ. ನಮ್ಮ ಶಕ್ತಿ ಏನು ಎಂಬುದನ್ನು ತಲಾಖ್‌ನ ವಿಚಾರದಲ್ಲಿ ಒಮ್ಮೆ ತೋರಿಸಿದ್ದೇವೆ’ ಎಂದರು.

‘ಭಯೋತ್ಪಾದಕರು, ರೌಡಿಗಳನ್ನು ನಾವು ಬೆಂಬಲ ನೀಡುವುದಿಲ್ಲ. ಯಾರೇ ಅಮಾಯಕರ ಕೊಲೆ ನಡೆದರೆ, ದೌರ್ಜನ್ಯ ನಡೆದರೆ ಧ್ವನಿ ಎತ್ತುತ್ತೇವೆ. ಯಾವ ರಾಜಕೀಯ ನಾಯಕನೂ ತನ್ನ ಚೇಲಾಗಳ ರಕ್ಷಣೆಗೆ ಸೀಮಿತ ಆಗಬಾರದು’ ಎಂದು ಹೇಳಿದರು.

‘ಮಾರ್ಚ್‌ 4ರಂದು ಖುರೇಷಿ ಪರ ಪ್ರತಿಭಟನೆ ನಡೆಸಿದ್ದವರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಕಮಿಷನರ್‌ ಕಚೇರಿಗೆ ನುಗ್ಗಲು ಬಂದಿದ್ದರು ಎಂದು ಕಮಿಷನರ್ ಎಂ.ಚಂದ್ರಶೇಖರ್ ಹೇಳಿದ್ದಾರೆ. ಅದು ನಿಜವೇ ಆಗಿದ್ದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಕೆ.ಅಶ್ರಫ್‌ ಮಾತನಾಡಿ, ‘ಜಿಲ್ಲೆಯಲ್ಲಿ ನಿರಂತರವಾಗಿ ಮುಸ್ಲಿಂ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆಯುತ್ತಿದೆ. ಅದಕ್ಕೆ ಹತ್ತಾರು ಉದಾಹರಣೆಗಳನ್ನು ನೀಡಲು ಸಾಧ್ಯವಿದೆ. ಖುರೇಷಿ ಪ್ರಕರಣ ಕೊನೆಯಲ್ಲ.

ಮುಂದೆ ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ತನಿಖೆಯ ಹೆಸರಲ್ಲಿ ನಡೆಯುವ ಪೊಲೀಸ್ ದೌರ್ಜನ್ಯವನ್ನು ಕೊನೆಗಾಣಿಸಲು ನಾವು ಹೋರಾಟ ಆರಂಭಿಸಿದ್ದೇವೆ’ ಎಂದರು.

‘ಮುಸ್ಲಿಮರು ಸುಳ್ಳು ಹೇಳುತ್ತಾರೆ’ ಎಂಬ ಮಾತನ್ನು ಪೊಲೀಸರು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯ ರಾಜಕಾರಣಿಗಳ ಬಳಿ ಸುಳ್ಳು ಹೇಳಿ ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆ ಮೂಡಿಸು ತ್ತಿದ್ದಾರೆ. ಮುಸ್ಲಿಂ ನಾಯಕರು, ಸಂಘಟನೆಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವ ಪ್ರಕರಣ ನಡೆದರೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಎಸ್‌ಕೆಎಸ್‌ಎಸ್‌ಎಫ್‌ ಕಾರ್ಯಕರ್ತರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ’ಎಂದು ವಾಗ್ದಾಳಿ ನಡೆಸಿದರು.

ವಕೀಲ ದಿನೇಶ್‌ ಹೆಗ್ಡೆ ಉಳೇಪಾಡಿ ಮಾತನಾಡಿ, ‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪೊಲೀಸ್ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ಖುರೇಷಿ ಪ್ರಕರಣ ಆರಂಭವಲ್ಲ. ಇಂತಹ ಅನೇಕ ಪ್ರಕರಣಗಳು ನಡೆದಿವೆ. ಅಮಾಯಕ ಯುವಕರನ್ನು ಎಳೆದು ತಂದು ತಪ್ಪೊಪ್ಪಿಕೊಳ್ಳುವಂತೆ ಹಿಂಸಿಸುವ ಮಂಗಳೂರು ಪೊಲೀಸರು, ಯಾವುದೇ ಸಾಕ್ಷ್ಯ ದೊರಕದಿದ್ದಾಗ ಸುಳ್ಳು ಪ್ರಕರಣ ದಾಖಲಿಸಿ ತಪ್ಪಿಸಿಕೊಳ್ಳುತ್ತಾರೆ. ದೌರ್ಜನ್ಯ ನಡೆಸುವ ಪೊಲೀಸರನ್ನು ಕೆಲಸದಿಂದ ವಜಾ ಮಾಡುವಂತೆ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದರು.

ಮಾನವ ಹಕ್ಕುಗಳ ಹೋರಾಟಗಾರ ಪಿ.ಬಿ.ಡೆಸಾ, ಅಬ್ದುಲ್‌ ಖಾದರ್‌ ದಾರಿಮಿ ಕುಕ್ಕಿಲ, ಭಟ್ಕಳದ ಇನಾಯತ್‌ ಉಲ್ಲಾ, ಬೆಂಗಳೂರಿನ ಶಾಫಿ ಸಅದಿ ಮಾತನಾಡಿದರು. ಪಾಲಿಕೆ ಸದಸ್ಯ ಅಬ್ದುಲ್ ಅಜೀಜ್, ಯುವ ಕಾಂಗ್ರೆಸ್ ಮುಖಂಡ ಸುಹೈಲ್‌ ಕಂದಕ್‌, ಮುಸ್ಲಿಂ ಸಂಘಟನೆಗಳ ಮುಖಡರಾದ ನೌಷಾದ್ ಸೂರಲ್ಪಾಡಿ, ಹುಸೇನ್ ಕಾಟಿಪಳ್ಳ, ಯಾಕೂಬ್‌ ಸಅದಿ, ಅಶ್ರಫ್ ಕಿನಾರ, ಖುರೇಷಿ ಅಣ್ಣ ನಿಶಾದ್‌ ಇದ್ದರು.

*
ನನಗೆ ಸಮುದಾಯ ಮೊದಲು. ಕಾಂಗ್ರೆಸ್‌ ಪಕ್ಷ ನಂತರದ್ದು. ಸಮುದಾಯದ ಮೇಲಿನ ದೌರ್ಜನ್ಯ ತಡೆಯುವುದಕ್ಕೆ ಪಕ್ಷದ ರಾಜಕಾರಣ ಅಡ್ಡಿಯಾಗದು.
-ಕೆ.ಅಶ್ರಫ್‌, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT