ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಲ್ಲಿ ನೆನೆದೇವ...

Last Updated 3 ಮೇ 2017, 19:30 IST
ಅಕ್ಷರ ಗಾತ್ರ

ಇದುವರೆಗೆ ಉಕ್ಕಲು ಕಾದಿದ್ದ ನೀರಸೆಲೆಯೊಂದು ಬುಗ್ಗೆಯೊಡೆದಂತೆ ಅಸಂಖ್ಯಾತ  ಜನರ ಅಂತಃಕರಣದಲ್ಲಿ ಕೋಶಗೊಂಡಿದ್ದ ಜಲಸ್ಮರಣೆ ಚಿಮ್ಮಿದ ರೀತಿ ನಿಜಕ್ಕೂ ಬೆರಗಾಗುವಂಥದ್ದು. ಆ ಅಂತರ್ಜಲ ಎಂದೂ ಬತ್ತದಷ್ಟು ಸಮೃದ್ಧ. ಅಲ್ಲಿ ಸಿಹಿನೆನಪುಗಳಿವೆ. ಕಹಿ ಅನುಭವಗಳಿವೆ. ಕಣ್ಣೀರ ಉಪ್ಪು, ಬೆವರ ಘಮ ಎಲ್ಲವೂ ಇದೆ. ಇಲ್ಲಿ ನಾವು ಪ್ರಕಟಣೆಗೆ ಆಯ್ದುಕೊಂಡ ಒಂದೊಂದು ಪತ್ರಬಿಂದುಗಳೂ ಬದುಕೆಂಬ ಮಹಾಸಾಗರದ
ಬೊಗಸೆ ಬಿಂಬಗಳು...

ಹೂಳು ತಂದ ಅಪಾಯ
ಉಡುಪಿ ಹತ್ತಿರದ ಕೋಟ ನನ್ನೂರು. ಮನೆಯ ಪಡುವಣದಲ್ಲಿ ಅರಬ್ಬೀ ಸಮುದ್ರವಿದ್ದರೆ, ಮೂಡಣದಲ್ಲಿ ಭತ್ತದ ಗದ್ದೆಗಳನ್ನು ಹಾದು ಹೋದಂತೆ ಒಂದು ಸಣ್ಣ ತೊರೆ ಸಿಗುತ್ತದೆ. ಬಿರುಬೇಸಿಗೆಯಲ್ಲೂ ತುಂಬಿದ ಒರತೆ ಅದು. ಮೇ ಪರಮೋಚ್ಛ ಸೆಕೆಯಿಂದ ತಪ್ಪಿಸಿಕೊಳ್ಳಲು ಅಣ್ಣಂದಿರ ಜತೆಗಿನ ನಮ್ಮ ಗುಂಪು ಅಲ್ಲೇ ಕ್ಯಾಂಪ್ ಹೂಡುತ್ತಿತ್ತು. ಆವತ್ತೊಂದು ದಿನ ಹಿರಿಯರ ಎಚ್ಚರಿಕೆಯನ್ನು ಕಿವಿ ಮೇಲೆ ಹಾಕಿಕೊಂಡೇ ನಮ್ಮ ಗುಂಪು ನೀರಿಗೆ ಇಳಿದಿತ್ತು. ಟಯರಿನೊಳಗೆ ತೂರಿಕೊಂಡೋ, ಕೊಡಪಾನವನ್ನು ಕವುಚಿಕೊಂಡೋ ಒಬ್ಬರಿಗೊಬ್ಬರು ನೀರನ್ನು ಎರಚುತ್ತಾ ಸಮಯದ ಗೊಡವೆಯೇ ಇಲ್ಲದೆ ಆಟವಾಡುತ್ತಿದ್ದೆವು. ಒಮ್ಮೆ ಹಾಗೇ ಆಡುತಾಡುತ್ತ ಗುಂಪಿನಿಂದ ಬೇರಾಗಿ ಹೂಳು ತುಂಬಿದ ಜಾಗಕ್ಕೆ ಬಂದುಬಿಟ್ಟಿದ್ದೆ. ಏನೆಂದು ತಿಳಿಯುವಷ್ಟರಲ್ಲಿ ಕಾಲು ಹೂಳಿನಲ್ಲಿ ಹೂತು ಹೋಗುತ್ತಿತ್ತು. ರೆಪ್ಪೆ ಮಿಟುಕುವಷ್ಟರಲ್ಲಿ ಗಲ್ಲ, ಬಾಯಿ, ಮೂಗು, ಕಣ್ಣು, ಹಣೆ, ತಲೆ ಎಂದು ಒಂದೊಂದೇ ಅಂಗಗಳು ಹಂತಹಂತವಾಗಿ ಕಂತಲಾರಂಭಿಸಿತು. ಕೈ ಎತ್ತಿ ಸಹಾಯಕ್ಕೆ ಕೂಗುತ್ತಿದ್ದರೂ ನನ್ನ ಸ್ವರ ನನಗೇ ಕೇಳದೇ ಕ್ಷೀಣವಾಗಿತ್ತು. ಇಷ್ಟಾಗುವಷ್ಟರಲ್ಲೇ ನನ್ನನ್ನು ಹುಡುಕಲು ಆರಂಭಿಸಿದ್ದ ಅಣ್ಣಂದಿರು ಮುಳುಗಲು ಬಾಕಿಯಿದ್ದ ಕೆಲವೇ ಬೆರಳುಗಳನ್ನು ಕಂಡು, ಅಲ್ಲಿಂದ ಎಳೆದುತಂದರು. ಅವರು ಬರುವುದು ಅರೆಗಳಿಗೆ ತಡವಾಗಿದ್ದರೂ ಆ ತೊರೆ ಆವತ್ತು ನನ್ನನ್ನು ಅಪೋಶನ ತೆಗೆದುಕೊಳ್ಳುತ್ತಿತ್ತು. ದಡಕ್ಕೆ ಬರುವಷ್ಟರಲ್ಲಿ ಮಂಕುಬಡಿದಿತ್ತು. ಮುಂದೆ ಯಾವತ್ತೂ ಆ ತೊರೆಯ ಕಡೆ ಹೆಜ್ಜೆ ಹಾಕುವ ಧೈರ್ಯ ಮಾತ್ರ ಬರಲೇ ಇಲ್ಲ. ಈ ನೆನಪಂತೂ ಪ್ರತಿ ಬೇಸಿಗೆಯಲ್ಲೂ ನನ್ನ ಕಣ್ಮುಂದೆ ಹಾದು ಹೋಗುತ್ತದೆ.
–ಶ್ರೀರಂಜನಿ ಬೆಂಗಳೂರು

**

ಮರಳ ರಾಶಿ ಮೇಲೆ ಮನಸೂ ತಂಪಾಗಿತ್ತು
ಬಿಸಿಲ ಧಗೆಗೆ ಕಾದು ಬಾಣಲಿಯಂತಾಗುತ್ತಿತ್ತು ಭೂಮಿ. ಬಿಸಿಯ ಸೆಕೆಯನ್ನು ನಾವು ಹಲವು ರೀತಿ ನಿವಾರಿಸಿಕೊಳ್ಳುತ್ತಿದ್ದೆವು. ಆಗ ಊರ ತುಂಬೆಲ್ಲಾ ಮಾಳಿಗೆ ಮನೆಗಳೇ ಜಾಸ್ತಿಯಾಗಿದ್ದ ಕಾಲ. ಚಳಿಗಾಲಕ್ಕೆ ಹೇಳಿ ಮಾಡಿಸಿದ್ದಂಥ ಮಾಳಿಗೆ ಮನೆಗಳು ಬೇಸಿಗೆ ಬಂತೆಂದರೆ ಹಗೇವು ಒಳಗೆ ವಾಸ ಮಾಡಿದಂತೆ ಅನುಭವವಾಗುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಗಂಡಸರು ಚಡ್ಡಿ ಬನಿಯನ್ ಹಾಕಿಕೊಂಡು ಹೊರಗಡೆ ಕೂರುತ್ತಿದ್ದರು. ವಯಸ್ಸಾದವರು, ವಯಸ್ಕರು ಮರದ ನೆರಳಿನ ಆಶ್ರಯ ಪಡೆಯುತ್ತಿದ್ದರು. ನಾವು ಹುಡುಗರು ಬೇಸಿಗೆಯಲ್ಲಿ, ಸದಾ ಹರಿಯುತ್ತಿದ್ದ ನಮ್ಮೂರ ಅಂಕನ ಹಳ್ಳದ ಕಡೆಗೆ ಮನೆಯವರ ಕಣ್ಣಿಗೆ ಬೀಳದಂತೆ ಮಧ್ಯಾಹ್ನದ ಹೊತ್ತು ಹೋಗುತ್ತಿದ್ದೆವು. ನೀರಿನಲ್ಲಿ ಆಟ ಆಡುವುದು, ಮೀನುಗಳನ್ನು ಚಬ್ಬೆಯಲ್ಲಿ ಹೊಡೆಯುವುದು ತುಂಬಾ ಉಲ್ಲಾಸದಾಯಕವಾಗುತ್ತಿತ್ತು. ಹಳ್ಳದ ದಂಡೆಯಲ್ಲಿ ರಾಶಿರಾಶಿ ಮರಳು ಇತ್ತು. ಮೊದಲು ನೀರಿಗೆ ಧುಮುಕಿ ನಂತರ ಮರಳ ರಾಶಿ ಮೇಲೆ ಒದ್ದಾಡುತ್ತಿದ್ದೆವು. ಮೈಗೆಲ್ಲಾ ಅಂಟಿಕೊಂಡ ಮರಳು ಒಂದು ರೀತಿ ವಿಶೇಷ ಅನುಭವವನ್ನು ಕೊಡುತ್ತಿತ್ತು. ಸ್ವಲ್ಪ ಹೊತ್ತು ಹಾಗೆ ಇದ್ದು, ನೀರಿನ ಹೊಂಡಕ್ಕೆ ಮತ್ತೆ ಬಿದ್ದು ಈಜಾಡುತ್ತಿದ್ದೆವು.

ನಮ್ಮೂರಿನ ಸುತ್ತ ಬರವಿಲ್ಲದಿದ್ದ ಕಾಲ. ಎಲ್ಲೆಂದರಲ್ಲಿ ನೀರು ಯಥೇಚ್ಚವಾಗಿ ಮುಕ್ಕಳಿಸುತ್ತಿತ್ತು. ದಾಸಪ್ಪರ ಬಾವಿ, ಮಂಚೇಗೌಡರ ಬಾವಿ, ದೇವರು ಬರೋ ಚನ್ನಪ್ಪರ ಬಾವಿ, ಬುಸಿಗೌಡರ ಹೊನ್ನಯ್ಯರ  ಬಾವಿ ಎಂಬ ಹೆಸರಿನ ಹಲವು ಬಾವಿಗಳು ಈಜಾಡಲು ತುಂಬಾ ಯೋಗ್ಯ ಬಾವಿಗಳಾಗಿದ್ದವು. ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದು, ಕಾಲು ಜಾರಿ ಬಿದ್ದು ಸತ್ತು ಹೋಗುತ್ತಿದ್ದುದು... ಇಂತಹ ಸುದ್ದಿಯನ್ನು ಕೇಳಿದ್ದ ತಂದೆ ತಾಯಂದಿರು ಬಾವಿ ಕಡೆ ಹೆಜ್ಜೆ ಹಾಕಿದ್ದನ್ನು ಕಂಡರೆ ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಆದರೂ ಅವರ ಕಣ್ತಪ್ಪಿಸಿ ಬಾವಿ, ಕೆರೆ, ಹಳ್ಳ, ಸಣ್ಣ ಸಣ್ಣ ಹೊಂಡಗಳಲ್ಲಿ ಈಜಾಡಿ ಸೆಕೆಯ ಬಿಸಿಯನ್ನು ತಂಪಾಗಿಸಿಕೊಳ್ಳುತ್ತಿದ್ದೆವು.

ಅಂಕನಹಳ್ಳದಲ್ಲಿ ಈಜಾಡಿ ಸುಸ್ತಾದ ಮೇಲೆ ಮೀನುಗಳನ್ನು ಕಡ್ಡಿಯಲ್ಲಿ ಒಡೆದು ಅದರಿಂದ ಟಪಾರ್ ಎಂಬ ಶಬ್ದದ ಜೊತೆ ನೀರು ಮೈಗೆಲ್ಲಾ ಚಿಮ್ಮುತ್ತಿದ್ದುದು ಅತ್ಯಂತ ಸಂತೋಷದ ಗಳಿಗೆ. ಮತ್ತೆ ಕಲ್ಲು ಪೊಟರೆಗಳಲ್ಲಿ ಅಡಗಿರುತ್ತಿದ್ದ ನಳ್ಳಿಗಳನ್ನು ಹಿಡಿದು ಹಳ್ಳದ ದಂಡೆಯಲ್ಲಿ ಅದನ್ನು ಸುಟ್ಟು ನಳ್ಳಿಯ ಕಾಲುಗಳನ್ನು ಪುಳ್ಳೆಯಂತೆ ಮುರಿದು ಕಾಲುಗಳನ್ನು ಕರುಮ್, ಕರುಮ್ ಎನ್ನುವಂತೆ ತಿಂದ ನೆನಪು ಈಗಲೂ ಕಾಡುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸ್ನಾನ ಮಾಡಿ ಬೇಸತ್ತಿರುವ ನನಗೆ, ಈಗ ಕೆರೆ, ಬಾವಿ, ಹರಿಯೋ ನದಿ ಕಂಡರೆ ಸ್ನಾನ ಮಾಡಬೇಕು ಅಂತ ಅನಿಸುತ್ತದೆ.

ಪಿಯುಸಿ ಓದುವಾಗ ಕುಣಿಗಲ್ ಕೆರೆಯ ಸಮೀಪ ನಮ್ಮ ಹಾಸ್ಟೆಲ್ ಇತ್ತು. ಮಧ್ಯಾಹ್ನದ ಉರಿ ಬಿಸಿಲಿಗೆ ಪ್ರತಿದಿನ ಕೆರೆ ತಡಿಯಲ್ಲಿ ಈಜಾಡಿ ಸಂತೋಷ ಪಡುತ್ತಿದ್ದೆವು. ಕೆರೆಯ ಕಾಲುವೆಯಲ್ಲಿ ಸ್ನೇಹಿತರ ಜೊತೆ ಸ್ನಾನ ಮಾಡುವುದು, ಗಂಟೆಗಟ್ಟಲೆ ಈಜಾಡುವುದು ಏನೋ ಒಂಥರಾ ಮುದ ನೀಡುತ್ತಿತ್ತು. ಬೇಸಿಗೆಯಲ್ಲಿ ಪ್ರತಿ ಭಾನುವಾರ ಬಟ್ಟೆಗಳನ್ನೆಲ್ಲಾ ಗಂಟುಕಟ್ಟಿಕೊಂಡು ಕಾಲುವೆ ಕಡೆ ಹೊರಟರೆ ಯಾರೋ ಭಿಕ್ಷುಕರು ಗುಳೆ ಹೊರಟಂತೆ ಇತ್ತು. ಮನಸ್ಸಿಗೆ ತಣಿಯುವಷ್ಟೊತ್ತು ನೀರಲ್ಲಿ ಆಟವಾಡಿ ಬರುತ್ತಿದ್ದುದು ಈಗ ನೆನಪು ಮಾತ್ರ. ಆದರೆ ಅದು ಈಗಲೂ ಕಾಡುತ್ತಿದೆ.
–ಡಾ. ಶಿವರಾಜ್ ಬ್ಯಾಡರಹಳ್ಳಿ ಬೆಂಗಳೂರು

**

ನೀರ  ನೆನಪು ಮತ್ತೆ ಮತ್ತೆ ಕಾಡುತೈತೆ
ನನ್ನೂರು  ಶಿಕಾರಿಪುರದ ಅಂಜನಾಪುರ. ಇಲ್ಲಿ ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಂಜನಾಪುರ ಜಲಾಶಯದಲ್ಲಿ ನಮ್ಮ ಬಾಲ್ಯ ಪರ್ವ ಶುರುವಾಗಿದ್ದು. ಚಾನಲ್, ಗಟಾರ ಎಲ್ಲೆಂದರಲ್ಲಿ ನೀರಿನಲ್ಲಿ ಆಟವಾಡುತ್ತಿದ್ದೆವು. 12 ರಿಂದ 3 ಗಂಟೆಯವರೆಗೆ ಇಡೀ ಊರಿನ ಜನರೇ ಅಲ್ಲಿದ್ದು ನೀರಿನಲ್ಲಿ ಇಳಿದು ಆಟವಾಡಿ ಸಂಭ್ರಮಿಸುತ್ತಿದ್ದರು.   ನಂತರ ನಾನು ಓದಿದ್ದು ಹೊಸನಗರದಲ್ಲಿ. ಅಲ್ಲಿ ಶರಾವತಿ ನದಿಯ ಮಡುವಿನಲ್ಲಿ ಹರಿಯುತ್ತಿತ್ತು. ಬೇಸಿಗೆಯ ಉರಿಬಿಸಿಲಿನಲ್ಲಿ ತಿರುಗಿ ಗೇರು, ಮುಳ್ಳುಹಣ್ಣು, ಖಾನುತುಂಬ್ರಿ, ನೆಲ್ಲಿಕಾಯಿ ಆರಿಸಿ ತಿಂದು ದಣಿದು ನದಿಗೆ ಬಂದು ನೀರಿನಲ್ಲಿ ಕಾಲು ಇಟ್ಟರೆ ಪರಮಾನಂದ. ನಂತರ ಸಂಜೆ ನಾಲ್ಕರವರೆಗೆ ನೀರಾಟ. ಕಪ್ಪು ಒರಟು ಕಲ್ಲಲ್ಲಿ ಮೈ ಉಜ್ಜಿ, ಮಡುವಿನ ಸ್ವಲ್ಪ ಆಳಕ್ಕೆ ಈಜಿದರೆ ತಂಪು ನೀರು. ಅಲ್ಲಿ ದಣಿವೇ ಕಾಣದ ಆಟ. ಆ ಬೆಟ್ಟ ಗುಡ್ಡ ಸುತ್ತಾಟ, ಕಾಡಿನಲ್ಲಿ ಸಿಗುವ ಹಣ್ಣು ಹಂಪಲು ತಿಂದು ಹಸಿವೆ ನೀಗಿಸಿ ಮನೆ ಕಡೆ ನೆನಪು ಬಾರದೆ ಉರಿಬಿಸಿಲಿನಲ್ಲಿ ಸ್ನಾನಕ್ಕೆ ನೀರಿಗಿಳಿದರೆ ಅದರ ಅನುಭವ ವರ್ಣಿಸಲಸದಳ. ಇದೀಗ ಅಂಜನಾಪುರ ಜಲಾಶಯ ನೀರಿನ ಗಟಾರ, ಎಲ್ಲವೂ ಒಣಗಿದೆ. ಅಲ್ಲಿ  ಸ್ನಾನ ಮಾಡುವುದಿರಲಿ, ಪ್ರಾಣಿ ಪಕ್ಷಿಗಳಿಗೂ ನೀರಿಲ್ಲ. ಹಣ್ಣು ಹಂಪಲು ತಿಂದ ಗುಡ್ಡದಲ್ಲಿ ಎಂ.ಪಿ.ಎಂ ಫಾರೆಸ್ಟ್  ಹಬ್ಬಿದೆ. ತಿನ್ನಲು ಹಣ್ಣಿಲ್ಲ, ಈಜಲು ನೀರಿಲ್ಲ. ಬೇಸಿಗೆಯಂತೂ ಮರಗಿಡಗಳಿಲ್ಲದೆ ಧರೆ ಸುಡುತ್ತಿದೆ. ಆದರೆ ಹಳೆ ನೆನಪು ಮಾತ್ರ ತಂಪನ್ನೀಯುತ್ತದೆ.
–ಪಿ. ರಾಮಯ್ಯ ಶಿಕಾರಿಪುರ

**
ಎಮ್ಮೆ ಜೊತೆ ನಮ್ಮದೂ ಸ್ನಾನ
ಅವು ನಮ್ಮ ಹೈಸ್ಕೂಲ್ ದಿನಗಳು. ಬೇಸಿಗೆ ರಜೆ ಬರುವುದು ನಾವು ಎಮ್ಮೆ ಕಾಯಲಿಕ್ಕೆ ಇರಬೇಕು ಅಂದುಕೊಂಡವರು ನಾವು. ರಜೆ ಇರುವುದೇ ಎಮ್ಮೆ ಕಾಯೋಕೆ ಅನ್ನುವುದು ನಮ್ಮ ಸಿದ್ಧಾಂತ. ಏಪ್ರಿಲ್ ಮತ್ತು ಮೇ ಈ ಎರಡು ತಿಂಗಳ ಬೇಸಿಗೆ ಕಾಲದ ಪೂರ್ತಿ ನಾವು ಹೊಲ, ಕಾಡು, ಹಳ್ಳ, ಕೊಳ್ಳದ ಮಧ್ಯೆಯೇ ಕಳೆದೆವು ಎಮ್ಮೆಗಳೊಂದಿಗೆ. ಆ ಸಮಯದಲ್ಲಿ ನಡೆದ ಒಂದು ಘಟನೆ ಯಾವತ್ತೂ ಹಸಿರಾಗಿರುವಂಥದ್ದೇ ಆಗಿದೆ.

ಮೇ ತಿಂಗಳು ಪೂರ್ವ ಮುಂಗಾರಿನ ಅವಧಿ. ಮಳೆ ಬೀಜ ಕಟ್ಟುತ್ತೇ ಅಂತಾರೆ ನಮ್ಮ ಹಳ್ಳಿ ಕಡೆ. ಆ ಸಮಯದ ಮಳೆಯಿದೆಯಲ್ಲಾ ಅದು ಮಳೆಯ ಅತ್ಯಂತ ಭೀಕರ ರೂಪ. ಮೇ ತಿಂಗಳ ಒಂದು ದಿನ ಅದು. ನಮ್ಮೂರಿನಿಂದ ಒಂದರೆಡು ಕಿಲೋಮೀಟರ್ ದೂರದಲ್ಲಿ ದೊಡ್ಡಳ್ಳ ಅಂತ ಒಂದಿದೆ. ಹೆಸರಿಗೆ ತಕ್ಕಂತೆ ದೊಡ್ಡಳ್ಳವೇ ಸರಿ. ತುಂಗಭದ್ರೆಗೆ ಮಳೆ ನೀರು ಕಳುಹಿಸಿಕೊಡುವ ನಮ್ಮ ಭಾಗದ ಅತೀ ದೊಡ್ಡ ಹಳ್ಳ. ಹಳ್ಳದ ಪಕ್ಕದ ಹೊಲಗಳಲ್ಲಿ ಎಮ್ಮೆಗಳನ್ನು ಮೇಯಲು ಬಿಟ್ಟು ಸದಾ ಹಳ್ಳದ ನೀರಿನಲ್ಲಿ ಬಿದ್ದುಕೊಂಡಿರುತ್ತಿದ್ದೆವು. ಅವತ್ತೂ ಮಧ್ಯಾಹ್ನ ಆಕಾಶ ಕಪ್ಪಾಗತೊಡಗಿತು. ಅಂದರೆ ಭೀಕರ ಮೋಡಗಳ ಜಮಾವಣೆ. ಹೇಗೆಂದರೆ ಮಧ್ಯಾಹ್ನದ ಮೂರರ ಅವಧಿ ಸಂಜೆಯ ಏಳು ಗಂಟೆಯಂತೆ ಕಾಣುತ್ತಿತ್ತು. ಜೊತೆಗೆ ಮಿಂಚಿನ ಮೇಲೆ ಮಿಂಚು. ನಮಗೆ ಮಿಂಚು ನೋಡುವುದೇ  ಖುಷಿ. ಮಳೆ ಬರುತ್ತೆ, ಬೇಗ ಮನೆಗೆ ಹೋಗಬೇಕು ಎಂಬ ಭಯವೇ ಇಲ್ಲ. ಮಳೆಯಲ್ಲಿ ತಪ್ಪಂತ ನೆನೆದು ಬರದಿದ್ದರೆ ಅವನು ಎಮ್ಮೆ ಕಾಯುವವನೇ ಅಲ್ಲ ಎಂಬುದೊಂದು ಅಲಿಖಿತ ನಿಯಮವೊಂದಿತ್ತು ನಮಗೆ.

ಚಟ್ ಚಡಲ್... ಅಂತ ಸಿಡಿಲುಗಳ ಅಬ್ಬರ ಆರಂಭವಾಯಿತು. ಕತ್ತಲೆವಾತಾವರಣ. ಒಂಚೂರೂ ಗ್ಯಾಪ್ ಕೊಡದೇ ಅಬ್ಬರಿಸುತ್ತಿದ್ದ ಸಿಡಿಲು. ಬೋರ್ ಅಂತ ಹರಿಯುತ್ತಿದ್ದ ದೊಡ್ಡಳ್ಳ. ಅವುಗಳ ಮಧ್ಯೆ ನಾವು ಸುಮ್ಮನೆ ನೀರಿನಲ್ಲಿ ಈಜುತ್ತಿದ್ದೆವು. ಒಂದೊಂದೇ ಹನಿ ಆರಂಭವಾಯಿತು. ಜೊತೆಗೆ ಗಾಳಿಯೂ! ಬರೀ ಗಾಳಿಯಲ್ಲ, ಬಿರುಗಾಳಿ. ಹಳ್ಳದಿಂದ ಎದ್ದು ದಡ ಸೇರಿದೆವು. ಗಾಳಿಯ ರಭಸಕ್ಕೆ ನಿಲ್ಲಲಾಗಲಿಲ್ಲ. ನಮ್ಮ ಮುಂದಿನ ಒಂದು ಮರದ ತುದಿಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಹನಿ ಹನಿ ಮಳೆಯಲ್ಲೂ ಉರಿಯುತ್ತಿದೆ. ಸಿಡಲು ಬಡಿದಿದ್ದರಿಂದ ಹತ್ತಿಕೊಂಡ ಬೆಂಕಿ ಅದು. ಮಳೆ ಗಾಳಿ ಜೋರಾಯ್ತು. ಎಮ್ಮೆಗಳು ಕಂಗೆಟ್ಟವು. ಗಾಳಿಗೆ ದಿಕ್ಕು ತೋಚಿದವರಂತೆ ಓಡಲು ಆರಂಭಿಸಿದೆವು. ಎಮ್ಮೆಗಳನ್ನು ಒಟ್ಟುಗೂಡಿಸುವುದು ನಮ್ಮ ಆಗಿನ ತುರ್ತು. ಎಮ್ಮೆಗಳನ್ನು ಹೇಗೋ ಕಷ್ಟಪಟ್ಟು ಮನೆಯ ಹಾದಿ ಹತ್ತಿಸಿದೆವು. ಕಣ್ ಬಿಡಲು ಆಗುತ್ತಿಲ್ಲ, ಅಂತಹ ಮಳೆ. ತಲೆ ಮೇಲೆ ಯಾರೋ ಕಲ್ಲಿನಿಂದ ಹೊಡೆದಂತೆ ಆಲಿಕಲ್ಲುಗಳು. ನಿಲ್ಲಲು ಆಗದಂತಹ ಗಾಳಿ. ಉಸಿರಾಡಲು ಕೂಡ ಅವಕಾಶ ಮಾಡಿಕೊಡುತ್ತಿಲ್ಲ. ಕಣ್ಣು ಬಿಡಲು ಮಳೆ ಅವಕಾಶ ಮಾಡಿಕೊಡುತ್ತಿಲ್ಲ. ನಡೆಯುವುದಾದರೂ ಹೇಗೆ!? ಅದರ ಜೊತೆಗೆ ಸಿಡಿಲೆಂದರೆ ಸಿಡಿಲು. ಆಗಾಗ ದಪ್ ದಪ್ ಅಂತ ಒಂದೆರಡು ಮರಗಳು ಬಿದ್ದ ಸದ್ದು. ಒಂದ್ಹತ್ತಾರು ಮಾರು ನಡೆಯುತ್ತಲೇ ಎಂದೂ ಕಾಡಿರದ ಭಯ ಕಾಡತೊಡಗಿತು. ನಾವು ಬದುಕಲು ಸಾಧ್ಯವೇ ಇಲ್ಲವೆನ್ನುವಂತಾಯ್ತು. ಯಾಕೆಂದರೆ ದೊಡ್ಡಳ್ಳದ ಉಪಹಳ್ಳ ಚಿಕ್ಕಹಳ್ಳ ದಾರಿಗೆ ಅಡ್ಡಲಾಗಿ ತುಂಬಿ ಹರಿಯುತ್ತಿತ್ತು. ಆಚೆ ದಾಟುವುದಾದರೂ ಹೇಗೇ? ಈ ಕಡೆ ನಿಲ್ಲಲೂ ಆಗುತ್ತಿಲ್ಲ. ಎಮ್ಮೆಗಳು ಆಚೆ ಹೋಗಿಬಿಟ್ಟಿದ್ದಾವೆ. ನಾನು, ಯುವರಾಜ್ ಮರು ಮಾತಾಡದೇ ಈ ಮಳೆಯಲ್ಲಿ ಈಜಿಗೆ ಬಿದ್ದೆವು. ನೀರಿನ ಸೆಳೆತವು, ಮಳೆ ಗಾಳಿಯ ತಡೆಯ ನಡುವೆಯೂ ದಡ ಸೇರಿದೆವು. ಮಳೆಯಂತೂ ಕಡಿಮೆಯಾಗಿರಲಿಲ್ಲ. ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಹೇಗೋ ನಡೆಯುತ್ತಿದ್ದವು. ದೂರದಲ್ಲಿ ಅಪ್ಪ ಬರುವುದು ಮಸುಕು ಮಸುಕಾಗಿ ಕಾಣಿಸಿತು. ಎಮ್ಮೆಗಳು ಮನೆ ಸೇರಿದ್ದವು. ಅಪ್ಪ ಒಂದು ಗೋಣಿ ಚೀಲದ ಗೊಪ್ಪೆಯನ್ನು ತಲೆಗೆ ತೂಗಿಸಿಕೊಂಡು ನನಗೊಂದು ತಂದಿದ್ದರು. ಗೊಪ್ಪೆ ಕೊಟ್ಟು ಕೈಹಿಡಿದುಕೊಂಡು ಕರೆದುಕೊಂಡು ಹೋದರು. ನಮ್ಮ ಜೊತೆ ಯುವರಾಜನು ಮನೆ ಸೇರಿದ. ನಿಜಕ್ಕೂ ನಮಗೆ ಅಂದು ಗೊತ್ತಾಗಿತ್ತು ಪ್ರಕೃತಿಯ ದರ್ಶನ.

ಅಂದಿನಿಂದ ಇಂದಿನವರೆಗೂ ಅಂತಹ ಒಂದು ಮಳೆಯನ್ನು ನೋಡಿಲ್ಲ. ಬಂದರೇ ತಾನೇ!? ದೊಡ್ಡಳ್ಳದಲ್ಲಿ ಈಗ ನೀರಿಲ್ಲ. ಊರು ಬಿಟ್ಟು ಬಂದು ನಗರ ಸೇರಿದ ಮೇಲೆ ಮಳೆ ಬರುವುದೇ ಗೊತ್ತಾಗುವುದಿಲ್ಲ. ಮುಂಗಾರಂತೂ ಮೈ ತುಂಬಿ ಸುರಿದಿದ್ದು ಈಚೆಗೆ ನೆನಪಿಲ್ಲ. ಪ್ರತಿವರ್ಷವೂ ಪತ್ರಿಕೆಯಲ್ಲಿ ಕೈ ಕೊಟ್ಟ ಮುಂಗಾರು ಎಂಬು ಮಾಮೂಲಿ ಹೆಡ್ಡಿಂಗ್ ನೋಡಿ ಸಾಕಾಗಿದೆ. ಈಗ ಬೇಸಿಗೆ ರಜೆಯಲ್ಲಿ ಎಷ್ಟು ದುಡ್ಡು ಕೊಟ್ಟರೂ ಪ್ರಕೃತಿಯ ಆ ಅನುಭವವನ್ನು ಯಾರೂ ಕೊಡಲಾರರು. ನಿಜಕ್ಕೂ ನಾವೇ ಅದೃಷ್ಟವಂತರು.
–ಸದಾಶಿವ್ ಸೊರಟೂರು ಚಿಂತಾಮಣಿ

**

ಹೋಟೆಲ್ ನೀರೇ ಗತಿ...
ಬಿಸಿಲನಾಡು ಎಂದೇ ಹೆಸರಾದ ಇಂದಿನ ವಿಜಯಪುರ... ಅಂದು ಬಿಜಾಪುರ. 1972ರಲ್ಲಿ ಬ್ಯಾಂಕ್ ನೌಕರಿಗೆಂದು ಅಲ್ಲಿಗೆ ಹೋದಾಗಿನ ಅನುಭವ, ‘ಬಿಸಿಲ ಕಾಲದ ನೀರ ನೆನಪು’ ಇನ್ನೂ ಹಸಿರಾಗಿದೆ.

ಆಗಿನ್ನೂ ನನಗೆ 22 ವರ್ಷ. ವಿವಾಹ ಆಗಿರಲಿಲ್ಲ. ಬಾಡಿಗೆ ಮನೆಯಲ್ಲಿ ಇದ್ದ ವಠಾರದಲ್ಲಿ 4/5 ಮನೆಗಳಿದ್ದರೂ, ನೀರಿನ ನಲ್ಲಿ ಇದ್ದದ್ದು ಒಂದೇ ಒಂದು. ಹೀಗಾಗಿ ನೀರಿನ ಸಮಸ್ಯೆ ಸದಾ ಇದ್ದುದ್ದೆ. ಅದರಲ್ಲಿ ಬೇಸಿಗೆಯಲ್ಲಂತೂ ನೀರಿನ ಸಮಸ್ಯೆ ತೀವ್ರವಾಗುತ್ತಿತ್ತು. ನಲ್ಲಿ ಬಳಿ ರಾತ್ರಿ ಪಾಳೆಗೆಂದು ಬಕೆಟ್ ಇಟ್ಟರೂ, ಸಿಗುವ ಒಂದು ಬಕೆಟ್ ನೀರಿಗೆ ಬೆಳಿಗ್ಗೆ 4.00ಕ್ಕೆ ಏಳಲೇಬೇಕು. ಬ್ಯಾಂಕ್‌ಗೆ ಹೋಗುವ ಮುನ್ನ ಆ ಒಂದು ಬಕೆಟ್ ನೀರು ಸ್ನಾನಕ್ಕಾದರೇ (ಅದೆಷ್ಟೋ ಬಾರಿ ಆ ನೀರಲ್ಲಿ ಹುಳುಗಳು ಇರುತ್ತಿದ್ದವು) ಕುಡಿಯಲು ಊಟದ ಸಂಗಡ ಹೋಟೆಲಲ್ಲಿ ನೀಡುವ ನೀರೇ ಗತಿ. ಇಷ್ಟಕ್ಕೇ ನೀರಿನ ಬವಣೆ ಮುಗಿಯಲಿಲ್ಲ.. ಬಟ್ಟೆಗಳನ್ನು ಒಗೆಯಲು, ವಾರಕ್ಕೊಮ್ಮೆಯಾದರೂ ತಲೆಯ ಸ್ನಾನ ಮಾಡಲು ನೀರೆಲ್ಲಿ...? ಅದಕ್ಕಾಗಿ ಪರಿಹಾರವೊಂದು ಕಂಡುಕೊಂಡ ಜಲಾನುಭವ, ನಮಗಿಂದು ತಮಾಷೆಯಂತೆ ಕಾಣುತ್ತದೆ.

ಆ ದಿನಗಳಲ್ಲಿ 1ರೂಪಾಯಿಗೆ ಸ್ನಾನ ಮಾಡುವ ವ್ಯವಸ್ಥೆ ಹೋಟೆಲ್‌ಗಳಲ್ಲಿ ಇತ್ತು. ಬ್ಯಾಂಕಿನ ರಜಾ ದಿನಗಳಲ್ಲಿ, ಭಾನುವಾರದಂದು ಹೋಟೆಲ್‌ಗೆ ಹೋಗಿ ಒಂದು ರೂಪಾಯಿ ನೀಡಿ ಸ್ನಾನಕ್ಕೆಂದು ಕೋಣೆ ಒಳಹೋಗಿ ಶವರ್ ಬಾತ್ ಆರಂಭಿಸಿ ಸ್ನಾನದ ಮುಂಚೆ ಕೊಳೆಯಾದ ಬಟ್ಟೆಗಳನ್ನು ಸಾಬೂನು ಹಚ್ಚಿ ತೊಳೆದ ನಂತರ ಸ್ನಾನ ಮಾಡಿ ತೊಳೆದು ಹಿಂಡಿದ ಬಟ್ಟೆಗಳನ್ನು ಟವಲ್‌ನಲ್ಲಿ ಸುತ್ತಿಕೊಂಡು ಬರುತ್ತಿದ್ದೆ. ಶವರ್ ಬಾತ್ ಶಬ್ದದಿಂದಾಗಿ ನಾನು ಬಟ್ಟೆಗಳನ್ನು ಒಗೆಯುವ ಶಬ್ದ ಹೊರಗಡೆ ಕೇಳುತ್ತಿರಲಿಲ್ಲ. ಹೀಗಾಗಿ, ಬಾತ್ ರೂಂ ‘ನಳ’ ನನ್ನ ಪಾಲಿನ ಜಲದೇವತೆಯಾಗಿತ್ತು.
– ರಘುನಾಥರಾವ್ ತಾಪ್ಸೆ ದಾವಣಗೆರೆ

**

ಸುಡುಗಾಲದ ಈಜಿನ ಮೋಜಿನ ನಡುವೆ...
ನಿಸರ್ಗ ಚಕ್ರ ತಿರುಗಿದಂತೆ ನಮ್ಮ ಅವಶ್ಯಕತೆಗಳು ಸಹ ಬದಲಾಗುತ್ತವೆ. ಮಳೆ ಬಂದರೆ ಛತ್ರಿ, ಚಳಿಯಾದರೆ ಬೆಂಕಿಯ ಸಾಮೀಪ್ಯ. ಇನ್ನು ಬಿರುಬೇಸಿಗೆ ಬಂತೆಂದರೆ ನನ್ನಂತಹ ಅಚ್ಚಹಳ್ಳಿಗನಿಗೆ ನೆನಪಾಗುವುದು ಊರ ಮುಂದೆ ಸದಾ ಕಾಲ ಹರಿಯುವ ಹಳ್ಳ. ಮಳೆಗಾಲದಲ್ಲಿ ತುಂಬಿ ಹರಿದರೆ ಉಳಿದ ಕಾಲಗಳಲ್ಲಿ ಊರಿನ ಗಟಾರದ ಕೊಳವೆಗಳು ಇಲ್ಲಿಯೇ ಬಂದು ಬಾಯ್ತೆರೆದುಕೊಂಡದ್ದರಿಂದ ಅಲ್ಲಿ ಸಂಗ್ರಹಗೊಳ್ಳುವ ಕೊಳಚೆ ನೀರೇ ಊರ ಜನರಿಗೆ ಗತಿ. ಹೀಗೆ ಕಾಲಕ್ಕೆ ತಕ್ಕುದಾಗಿ ಸರ್ವ ಸ್ವೀಕರಣ ಸ್ಥಿತಿಯಲ್ಲಿ ಹರಿಯುವ ಹಳ್ಳದ ದಂಡೆಗುಂಟ ನಮ್ಮವರ ಬದುಕೂ ಬಿಚ್ಚಿಕೊಂಡಿದೆ.

ಇಡೀ ಊರಿನ ಗುಟ್ಟಿನ ಸಂಗತಿಗಳು ಬಟ್ಟೆ ಒಗೆಯುವ ಹೆಂಗಳೆಯರ ಬಾಯಿಗೆ ಸಿಕ್ಕು ಬಯಲಾಗುವುದು ಇಲ್ಲಿಯೇ. ಅಂತಹ ಬಿರುಬಿಸಿಲಿನಲ್ಲಿಯೂ ಸಿಗುವ ಹನಿ ಒರತೆ ನೀರಿಗಾಗಿ ಕಾದು ಕೂರುವ, ಯಾವ ಕಾಲಗಳನ್ನು ದೂರದೇ ತಮ್ಮ ಪಾಲಿನ ಕೆಲಸಗಳನ್ನು ನಿಷ್ಠೆಯಿಂದ ಮಾಡುವ, ನೆರೆ, ಬರಗಳಲ್ಲಿಯೂ ಜೀವನಪ್ರೀತಿಯನ್ನು ಉಳಿಸಿಕೊಳ್ಳುವ  ಹಳ್ಳಿಗರು ಮುಖ್ಯವೆನಿಸುವುದು ಈ ಕಾರಣಕ್ಕಾಗಿ. 

ಸೂರ್ಯ ನೆತ್ತಿಗೆ ಬರುವ ಕಾಲಕ್ಕೆ ಸರಿಯಾಗಿ ತಾಪಮಾನ ಡಿಗ್ರಿ ಸೆಲ್ಸಿಯಸ್‌ಗಳ ಲೆಕ್ಕದಲ್ಲಿ ಅರ್ಧಶತಕವನ್ನು ಸಮೀಪಿಸುವ ಸನ್ನಾಹದಲ್ಲಿರುವಾಗ ನಮ್ಮ ದಂಡು ಎಮ್ಮೆಗಳ ಹಿಂಡಿನೊಂದಿಗೆ ಬಿಸಿಲ ಅಬ್ಬರವನ್ನು ತಡೆಯಲಾಗದೇ ಹಳ್ಳದ ಹಾದಿಯನ್ನು ಹಿಡಿಯುತ್ತಿತ್ತು. ಬಿಸಿಲ ಜಳದಲ್ಲಿ ಹೊಟ್ಟೆ ಚುರುಗುಟ್ಟಿದರೆ ದಾರಿಯಲ್ಲಿನ ಸುಡುಗಾಡಿನಲ್ಲಿ ಬೇವಿನ ಗಿಡದ ನೆರಳಿನಲ್ಲಿನ ಜಗುಲಿಯಂತಿದ್ದ ಸಮಾಧಿಯೊಂದರ ಮೇಲೆ ನಮ್ಮ ಊಟ. ಆಗಾಗ ಹೊಸ ಸಮಾಧಿಗಳ ಮೇಲೆ ಕಾಣುತ್ತಿದ್ದ ತೆಂಗಿನಕಾಯಿಯನ್ನು ಒಡೆದು ತಿನ್ನುವುದು ನಮ್ಮ ವೀರತ್ವದ ಪ್ರತೀಕವೆಂದು ಭಾವಿಸಿ ಜಗಳವಾಡಿ ಕೊನೆಗೆ ಹಂಚಿ ತಿಂದು ಮತ್ತೇ ಹಳ್ಳದತ್ತ ನಮ್ಮ ಪಯಣ. ನಮಗಿಂತಲೂ ಎಮ್ಮೆಗಳಿಗೆ ನೀರಿನಲ್ಲಿ ಬೀಳುವ ತುರ್ತು ಹೆಚ್ಚಿರುತ್ತಿತ್ತು. ಕೆಲವೊಮ್ಮೆ ನಮ್ಮ ಹಿಡಿತವನ್ನು ಮೀರಿ ಓಡೋಡಿ ನೀರ ನೆಮ್ಮದಿಯನ್ನು ಪಡೆದುಕೊಳ್ಳುತ್ತಿದ್ದವು. ಪಾಚಿಗಟ್ಟಿದ ಹಸಿರು ನೀರಿನಲ್ಲಿ ಅವುಗಳೊಂದಿಗೆ ನಮ್ಮದು ಪುಣ್ಯಸ್ನಾನ. ಮಳೆ ಬಂದ ಮರುದಿನವಂತೂ ನಮ್ಮ ಹಿಂಡು ಬೆಳ್ಳಂಬೆಳ್ಳಿಗ್ಗೆಯೇ ಹೊಸನೀರಿನಲ್ಲಿ ಈಜಿದರೆ ಬೇಗ ನೆಗಡಿಯಾಗುತ್ತದೆ ಎಂಬ ಹಿರಿಯರ  ತಿಳಿಮಾತನ್ನು ಲೆಕ್ಕಿಸದೇ ನೀರಿಗಿಳಿದಾಗ ಕಾಂಬುತಿದ್ದುದು ಸ್ವರ್ಗವೇ ಸರಿ. ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಲೆಯ ಮಾಸ್ತರರ ಕಣ್ತಪ್ಪಿಸಲು ನೀರಲ್ಲಿ ಕೆಲ ನಿಮಿಷಗಳ ಕಾಲ ಮುಳುಗಿ ಮರೆಮಾಚಿಕೊಳ್ಳುವ ತಂತ್ರವೂ ಕರಗತ. 

ಹೀಗೆ ಪರಿಣತಿಯನ್ನು ಸಾಧಿಸುವ ಮುನ್ನ ಅನುಭವಿಸಿದ ತಾಕಲಾಟಗಳನ್ನು ಇಲ್ಲಿ ಹೇಳಲೇಬೇಕು. ಮೊದಮೊದಲು ಅವ್ಯಕ್ತ ಭಯದ ನಡುವೆಯೇ ನೀರಿಗೆ ಯಾರದ್ದೋ ಧೈರ್ಯದ ಮೇಲೆ ಇಳಿದೆ. ಎಮ್ಮೆಯ ಬಾಲ ಹಿಡಿದರೆ ಮುಳುಗುವುದಿಲ್ಲವೆಂಬ ಗೆಳೆಯರ ಪುಕ್ಕಟ್ಟೆ ಸಲಹೆ ಬೇರೆ. ನೆತ್ತಿ ಸುಡುತ್ತಿದ್ದ ಸೂರಪ್ಪನಿಗೆ ಸವಾಲೆಂಬತಿತ್ತು ನೀರಿನಲ್ಲಿನ ಗರ್ವದ ನಡಿಗೆ. ಕುತ್ತಿಗೆಯವರೆಗೂ ನೀರು ಬರುವವರೆಗೂ ಎಲ್ಲವೂ ಸರಿ ಇತ್ತು. ಯಾವಾಗ ಎಮ್ಮೆಯ ಒದೆತ ತಗುಲಿತೋ ಜೀವದಾಸರೆಯಂತಿದ್ದ ಹಿಡಿದ ಬಾಲವೂ ನಿಯಂತ್ರಣ ತಪ್ಪಿತು. ನೀರಿನ ಆಳದಲ್ಲಿ ಉಸಿರುಗಟ್ಟಿದ ಅನುಭವ. ಉಹುಂ, ಎಷ್ಟೇ ಕೈ ಕಾಲು ಬಡಿದರೂ ಪ್ರಯೋಜನವಿಲ್ಲ, ನೀರ ತಳದ ಕೆಸರು ಕಾಲನ್ನು ಸಿಕ್ಕಿಹಾಕಿಸಿಕೊಂಡಿತ್ತು. ಮುಳುಮುಳುಗಿ ಏಳುತ್ತಾ ಸಾವಿನ ತುದಿಯನ್ನು ತಲುಪಿದ ಅನುಭವ. ದಂಡೆಯಲ್ಲಿದ್ದ ಗೆಳೆಯನೊಬ್ಬ ನೆರವಿಗೆ ಬರದಿದ್ದರೆ ಏನಾಗುತ್ತಿತ್ತು ನೆನೆಸಿಕೊಂಡಾಗೊಮ್ಮೆ ಮೈ ನಡುಕ.

ಹೀಗೆ ಜೀವನ್ಮರಣದ ಹೋರಾಟದಲ್ಲಿ ಹೊಟ್ಟೆ ಸೇರಿದ್ದ ಹೊಸ ನೀರು ದಿನಕ್ಕೆ ನಾಲ್ಕಾರು ಬಾರಿ ಚರಿಗೆ ಹಿಡಿದು ಓಡಾಡಿಸುವುದನ್ನು ಬಿಟ್ಟೀತೇ, ನನ್ನ ನೀರಾಟವನ್ನು ಜಗಜ್ಜಾಹೀರು ಪಡಿಸಲು ಅದೂ ನಡೆಯಿತು. ಕೊನೆಗೂ ಹಲವು ತಂತ್ರಗಳ ಮೂಲಕ ಹಟಬಿಡದೇ ಈಜು ಕಲಿತಿದ್ದು ನನ್ನ ಪಾಲಿಗೆ ಚಾರಿತ್ರಿಕ ದಾಖಲೆಯೇ ಸರಿ.
–ಅಂದಯ್ಯ ಅರವಟಗಿಮಠ ಹಂಪಿ

**

ಗುಬ್ಬಿಯ ದಾಹ ನೀಗಿದ ಕ್ಷಣ
ಅಮ್ಮನ ಜೊತೆ ಮನೆ ಮುಂದಿನ ಜಗುಲಿ ಮೇಲೆ ಕುಳಿತು ಮಾತನಾಡುತ್ತಿದ್ದೆ. ಮಧ್ಯಾಹ್ನದ ಆಗಿದ್ದರಿಂದ ಈ ಬೇಸಿಗೆಯ ಸುಡುಬಿಸಿಲು ನಮ್ಮನ್ನು ಮನೆಯ ಒಳಗಡೆ ಕೂರಲು ಬಿಟ್ಟಿರಲಿಲ್ಲ. ಮನೆಯ ಮುಂದಿನ ಗಿಡಗಳಿಂದ ಸ್ವಲ್ಪ ತಣ್ಣನೆಯ ಗಾಳಿ ಬೀಸುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಾರಿಬಂದ ಎರಡು ಗುಬ್ಬಿ ಮರಿಗಳು ಮನೆಯ ಮುಂದಿನ ನಲ್ಲಿಯಿಂದ ತೊಟ್ಟಿಕ್ಕಿ ತೊಟ್ಟಿಕ್ಕಿ ನಿಂತಿದ್ದ ಅಲ್ಪ ನೀರಿನಲ್ಲಿ ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ಹೊರಳಾಡತೊಡಗಿದವು. ಅಮ್ಮ, ನಾನು ಇಬ್ಬರೂ ಕುತೂಹಲದಿಂದ ನೋಡುತ್ತಿದ್ದೆವು. ಬಹುಶಃ ಬೇಸಿಗೆ ತಾಪ ತಾಳಲಾರದೆ ನೀರನ್ನು ಅರಸಿ ಬಂದಿದ್ದವು ಅನಿಸುತ್ತದೆ. ಆ ನೀರಿನಲ್ಲಿ ಸ್ನಾನ ಮಾಡಿದ ಗುಬ್ಬಿ ಮರಿಗಳು ಅದೇ ನೀರನ್ನು ಪ್ರಯಾಸದಿಂದ ಕೊಕ್ಕನ್ನು ಸೊಟ್ಟ ಮಾಡಿಕೊಂಡು ಕುಡಿದು ದಾಹವನ್ನು ನೀಗಿಸಿಕೊಂಡು ಪುರ್ರನೆ ಹಾರಿ ಹೋದವು.

ಅಮ್ಮನಿಗೆ ಹೇಳಿದೆ, ‘ಅಮ್ಮ ನಾವೇ ಇಷ್ಟು ಬಿಸಿಲಿಗೆ ಬಳಲಿ ಬೆಂಡಾಗುವಾಗ ಇನ್ನೂ ಪಾಪ ಈ ಗುಬ್ಬಿಯಂತಹ ಸಣ್ಣ ಪಕ್ಷಿಗಳು ಹೇಗಿರಬೇಕು ಅಲ್ವಾ’ ಎಂದೆ. ಅಮ್ಮ, ‘ಹೌದು ಕಣೋ, ಪಾಪ’ ಎಂದು ಮರುಕಪಟ್ಟರು. ತಕ್ಷಣವೇ ನನ್ನ ತಲೆಯಲ್ಲಿ ಹೊಳೆದ ಉಪಾಯದಿಂದಾಗಿ ಮನೆಯಲ್ಲಿಯೇ ಇದ್ದಂತಹ ನಾಲ್ಕೈದು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತಂದು ಅವುಗಳನ್ನು ಎರಡು ಭಾಗಗಳಾಗಿ ಕತ್ತರಿಸಿದೆ. ಎರಡು ಚಿಕ್ಕ ನೀರಿನ ಲೋಟಗಳು ತಯಾರಾದವು. ಕೆಳಗಿನ ಭಾಗ ಮತ್ತು ಮೇಲಿನ ಮುಚ್ಚಳ ಮುಚ್ಚಿದ ಇನ್ನೊಂದು ಭಾಗ ಸೇರಿದಂತೆ ಒಟ್ಟು ಎಂಟು ಲೋಟಗಳನ್ನು ತಯಾರಿಸಿದೆ. ನಂತರ ಅವುಗಳಿಗೆ ಒಂದೊಂದಕ್ಕೂ ದಾರದ ಸಹಾಯದಿಂದ ಮನೆಯ ಮುಂದಿದ್ದ ಗಿಡಗಳಲ್ಲಿ ನೆರಳು ಬರುವಂತಹ ಜಾಗದಲ್ಲಿ ನೇತು ಹಾಕಿ ನೀರು ತುಂಬಿದೆ.

ಸುಮಾರು ಒಂದು ಗಂಟೆ ಕಾದು ಕುಳಿತರೂ ಅಲ್ಲಿ ಹಾರಾಡುತ್ತಿದ್ದಂತಹ ಗುಬ್ಬಿ, ಗೊರವಂಕ, ಕಾಗೆಗಳಂತಹ ಪಕ್ಷಿಗಳು ಆ ನೀರಿನ ಲೋಟಗಳತ್ತ ಸುಳಿಯಲಿಲ್ಲ. ಬಹುಶಃ ಏನೋ ಇದೆ ಎಂಬ ಭಯದಿಂದಾಗಿ ಇರಬಹುದು. ನಮಗೆ ಬೇಸರವಾಯಿತು. ಸರಿ ಎಂದು ಅಲ್ಲಿಂದ ಮನೆಯೊಳಗೆ ಹೋದೆವು. ಸಂಜೆ ಸುಮಾರು ಐದು ಗಂಟೆ ಸಮಯದಲ್ಲಿ ಹೊರಗಡೆ ಬಂದೆ. ಪಕ್ಷಿಗಳ ಕಲರವ ಕೇಳುತ್ತಿತ್ತು. ಎಲ್ಲಿಂದ ಎಂದು ಮನೆಯ ಮುಂದಿದ್ದ ಗಿಡಗಳ ಕಡೆ ಕಣ್ಣು ಹಾಯಿಸಿದೆ. ಅಲ್ಲಿನ ದೃಶ್ಯ ನೋಡಿ ತುಂಬಾ ಖುಷಿ ಆಯಿತು. ಮಧ್ಯಾಹ್ನ ಮಾಡಿದ ಪ್ರಯತ್ನ ಫಲ ನೀಡಿತ್ತು. ಏಳೆಂಟು ಗುಬ್ಬಿಗಳು ಕಟ್ಟಿದ್ದ ನೀರಿನ ಲೋಟಗಳಲ್ಲಿ ನೀರು ಕುಡಿಯುತ್ತಿದ್ದವು, ತಮ್ಮ ಕೊಕ್ಕು ಹಾಗೂ ತಲೆಯನ್ನು ನೀರಿನೊಳಗೆ ಮುಳುಗಿಸಿ ಸಂತಸಪಡುತ್ತಿದ್ದವು. ಆ ದೃಶ್ಯವನ್ನು ಅಮ್ಮನಿಗೂ ತೋರಿಸಿ ಖುಷಿಪಟ್ಟಿದ್ದೆ. ದಾಹ ತಣಿಸಿದ ಸಾರ್ಥಕತೆ ಮನದಲ್ಲಿ ಮೂಡಿತು. ಈಗ ಅಂತಹ ಪ್ಲಾಸ್ಟಿಕ್ ಲೋಟಗಳನ್ನು ಇನ್ನೂ ಅನೇಕ ಗಿಡಗಳಲ್ಲಿ ಇಟ್ಟಿದ್ದೇನೆ. ಬೇಸಿಗೆ ಬಂದಾಗೆಲ್ಲಾ ಈ ರೀತಿ ಮಾಡುವುದು ನನಗೆ ಖುಷಿ ತರುತ್ತದೆ.
–ಲಕ್ಷ್ಮೀಕಾಂತ್ ಎಲ್.ವಿ ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT