ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯಲಿ ಸುಖ ಕಂಡು...

Last Updated 3 ಮೇ 2017, 19:30 IST
ಅಕ್ಷರ ಗಾತ್ರ

ರೇಖಾ ಮಿಶ್ರಾ
ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾರೆ. ಅವರು ಕಾಯಕ ಯೋಗಿಗಳಂತೆ ದುಡಿಯುತ್ತಿದ್ದಾರೆ. ಪ್ರಚಾರವನ್ನು ಬಯಸದ ಇಂತಹ ವ್ಯಕ್ತಿಗಳಿಗೆ ಸಾಮಾಜಿಕ ಕಳಕಳಿಯೇ ಮುಖ್ಯವಾಗಿರುತ್ತದೆ. ಇಂಥವರ ಸಾಲಿಗೆ ರೇಖಾ ಮಿಶ್ರಾ ಕೂಡ ಸೇರುತ್ತಾರೆ.

ಮುಂಬೈನವರಾದ ಯುವತಿ ರೇಖಾ ರೈಲ್ವೆ ಪೊಲೀಸ್‌ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಲ್ಲಿನ ವಿವಿಧ ರೈಲು ನಿಲ್ದಾಣಗಳಲ್ಲಿ ಮನೆ ಬಿಟ್ಟು ಬಂದಿದ್ದ 434 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ವಿವಿಧ ಕಾರಣಗಳಿಗೆ ಮನೆ ಬಿಟ್ಟು ಬರುವ ಮಕ್ಕಳು ಅಂತಿಮವಾಗಿ ರೈಲು ನಿಲ್ದಾಣ ಅಥವಾ ಬಸ್ ನಿಲ್ದಾಣಗಳಲ್ಲಿ ಇರುತ್ತಾರೆ. ಅಲ್ಲಿ, ಇಲ್ಲಿ ಭಿಕ್ಷೆ ಬೇಡಿ ಊಟ ಸಂಪಾದಿಸಿಕೊಳ್ಳುತ್ತಿರುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ, ಅವರಿಗೆ ತಾತ್ಕಾಲಿಕ ಪುನರ್ವಸತಿ ಕೊಟ್ಟು ಅವರನ್ನು ಪೋಷಕರ ಬಳಿ ಸೇರಿಸುವ ಪ್ರಯತ್ನವನ್ನು ರೇಖಾ ಮಾಡುತ್ತಿದ್ದಾರೆ.

‘ನಾನು ರಕ್ಷಣೆ ಮಾಡಿರುವ 434 ಮಕ್ಕಳ ಪೈಕಿ ಪೋಷಕರ ಮಡಿಲು ಸೇರಿರುವ ಮಕ್ಕಳ ಸಂಖ್ಯೆ ಕೇವಲ 30’ ಎನ್ನುತ್ತಾರೆ ರೇಖಾ. ತಮ್ಮ ಊರು, ತಂದೆ ತಾಯಿಗಳನ್ನು ಗುರುತಿಸಲಾರದ ಮಕ್ಕಳ ಸಂಖ್ಯೆಯೇ ಹೆಚ್ಚು. ಇಂತಹ ಮಕ್ಕಳಿಗೆ ಸರ್ಕಾರದಿಂದ ವಸತಿ ಮತ್ತು ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಮಕ್ಕಳಿಗೆ ಪೊಲೀಸರು ಅಂದ್ರೆ ಭಯ. ಹಾಗಾಗಿ ಪೊಲೀಸರು ಕಂಡ ಕೂಡಲೇ ದಿಕ್ಕಪಾಲಾಗಿ ಓಡಿ ಬಿಡುತ್ತಾರೆ. ನಾನು ಇಲ್ಲಿಯವರೆಗೂ ಪೊಲೀಸ್ ಉಡುಪಿನಲ್ಲಿ ಮಕ್ಕಳನ್ನು ರಕ್ಷಣೆ ಮಾಡಿರುವುದು ತುಂಬಾ ಕಡಿಮೆ! ಮಾಮೂಲಿ ಉಡುಪಿನಲ್ಲಿ, ಒಂಟಿಯಾಗಿ ಅಲೆಯುತ್ತಿರುವ, ಏಕಾಂಗಿಯಾಗಿ ಕುಳಿತಿರುವ ಮಕ್ಕಳನ್ನು ಗಮನಿಸಿ ಅವರ ರಕ್ಷಣೆಗೆ ಮುಂದಾಗಿದ್ದೇನೆ ಎಂದು ಅವರು ಹೇಳುತ್ತಾರೆ.  ರೇಖಾ ಅವರ ಈ ಉತ್ತಮ ಸೇವೆಗೆ ರೈಲ್ವೇ ಪೊಲೀಸ್ ಫೋರ್ಸ್ ಮತ್ತು ಹಲವಾರು ಸಂಘ ಸಂಸ್ಥೆಗಳು ಪುರಸ್ಕಾರ ನೀಡಿ ಸನ್ಮಾನಿಸಿವೆ.

**

ಯಾಕೂಬ್ ಅಲಿ


ಕೆಲವರಿಗೆ, ನಾನು ಇಂಥದ್ದೆ ಕೆಲಸ ಮಾಡಬೇಕು, ಡಾಕ್ಟರ್, ಎಂಜಿನಿಯರ್, ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸುಗಳಿರುತ್ತವೆ. ಆದರೆ ಅವು ಕೈಗೂಡದಿದ್ದಾಗ ನಿರಾಸೆ ಅನುಭವಿಸುತ್ತಾರೆ. ಇದೇ ರೀತಿ ಶಿಕ್ಷಕನಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ಯುವಕನೊಬ್ಬ ಅಂತಿಮವಾಗಿ ನೆಲೆ ಕಂಡುಕೊಂಡಿದ್ದು ಹಳೆ ಬಟ್ಟೆಗಳನ್ನು ಮರುಬಳಕೆ ಮಾಡುವ ಕಾಯಕದಲ್ಲಿ!

ಇದು ಉತ್ತರ ಪ್ರದೇಶದ ಯಾಕೂಬ್ ಅಲಿಯ ಸ್ಫೂರ್ತಿದಾಯಕ ಕಥೆ. ಚಿಕ್ಕ ವಯಸ್ಸಿನಲ್ಲಿ ಯಾಕೂಬ್ ಅಲಿಗೆ ಶಿಕ್ಷಕನಾಗಬೇಕು ಎಂಬ ಕನಸು. ಬಡತನ ಆ ಕನಸಿಗೆ ಅಡ್ಡಿಯಾಯಿತು. ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಯಾಕೂಬ್ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಅವರು  ಹೆಚ್ಚು ಹೆಚ್ಚು ಸಂಪಾದನೆ ಮಾಡಬೇಕು ಎಂಬ ಆಸೆಯಿಂದ ಲಖನೌಗೆ ಬರುತ್ತಾರೆ. ಅದ್ಯಾಕೋ ಯಾಕೂಬ್‌ಗೆ ಆ ಮಹಾನಗರದ ಬದುಕು ಇಷ್ಟವಾಗುವುದಿಲ್ಲ. ಕೊನೆಗೆ ಗುಜರಾತ್‌ನ ವಡೋದರಾ ಸಮೀಪ ಇರುವ ಸಗರ್ಪುರಕ್ಕೆ ಬರುತ್ತಾರೆ. ಈ ಊರು ಕೈಮಗ್ಗಕ್ಕೆ ತುಂಬಾ ಹೆಸರುವಾಸಿ. ಇಲ್ಲಿ ಯಾಕೂಬ್‌ಗೆ ಕೆಲಸವು ದೊರೆಯುತ್ತದೆ.

ನಾಲ್ಕು ವರ್ಷ ಕೈಮಗ್ಗವೊಂದರಲ್ಲಿ ಕೆಲಸ ಮಾಡಿ ಅನುಭವ ಪಡೆಯುತ್ತಾರೆ. ಮುಂದೆ ಹಳೆಯ ಮಗ್ಗವೊಂದನ್ನು ಖರೀದಿಸಿ ಭಿನ್ನವಾಗಿ ಹಳೆಯ ಬಟ್ಟೆಗಳನ್ನು ಹೊಸ ಬಟ್ಟೆಗಳನ್ನಾಗಿ ನವೀಕರಿಸುವ ಕೆಲಸವನ್ನು ಆರಂಭಿಸುತ್ತಾರೆ.

ಹೀಗೆ ಆರಂಭವಾದ ಯಾಕೂಬ್ ಅವರ ಬಟ್ಟೆಗಳ ನವೀಕರಣ ಯಾತ್ರೆ ಇಂದು ಸಣ್ಣ ಉದ್ಯಮವಾಗಿ ರೂಪಗೊಂಡಿದೆ.

ಈ ಬಗ್ಗೆ ಗುಜರಾತಿ ಪತ್ರಿಕೆಗಳು, ಆನ್‌ಲೈನ್ ಸುದ್ದಿ ಸಂಸ್ಥೆಗಳು ಅವರ ಬಗ್ಗೆ ಸ್ಫೂರ್ತಿದಾಯಕ ವರದಿಗಳನ್ನು ಪ್ರಕಟಿಸಿವೆ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಯಾಕೂಬ್ ಇಂದು ಉದ್ಯಮಿಯಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಯಾಕೂಬ್ ಉದಾಹರಣೆಯಾಗಿ ನಿಲ್ಲುತ್ತಾರೆ.

**

ರಾಜಿಬ್ ಥಾಮಸ್


ಅಲ್ಲಿ ಮಕ್ಕಳು ಪಾಠ ಪ್ರವಚನಗಳನ್ನು ಕಲಿಯುತ್ತಿರುತ್ತಾರೆ. ಆದರೆ ಅದು ಪಾಠ ಶಾಲೆಯಲ್ಲ! ಹಾಗಂತ ಅದು ವಸತಿ ನಿಲಯ, ಅನಾಥಾಶ್ರಮವೂ ಅಲ್ಲ! ಅದು ಮಾನವೀಯತೆ ಮತ್ತು ಅಂತಃಕರಣ ಇರುವ ಕುಟೀರ! ಈ ಕುಟೀರವನ್ನು ಸ್ಥಾಪನೆ ಮಾಡಿದವರು ಮುಂಬೈನ ರಾಜಿಬ್ ಥಾಮಸ್! ಇಲ್ಲಿ ಎಚ್್ಐವಿ ಪೀಡಿತ 22ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ.

ರಾಜಿಬ್ ಎಚ್ಐವಿ ಪೀಡಿತ ಮಕ್ಕಳಿಗೆ ಚಿಕಿತ್ಸೆ ಮತ್ತು ಶಿಕ್ಷಣವನ್ನು ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಥವಾ ಸಂಘಸಂಸ್ಥೆಗಳ ನೆರವನ್ನು ಪಡೆಯದೇ ತಮ್ಮ ಸ್ವಂತ ದುಡಿಮೆಯಿಂದ ಬಂದ ಹಣವನ್ನು ಈ ಮಕ್ಕಳಿಗೆ ಖರ್ಚು ಮಾಡುತ್ತಿದ್ದಾರೆ. ಬ್ಲೆಸ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರಾಜಿಬ್ ಮಾನವೀಯ ಕೆಲಸ ಮಾಡುತ್ತಿದ್ದಾರೆ.

2000ನೇ ವರ್ಷದಲ್ಲಿ ಒಂದು ಅನಾಥ ಎಚ್ಐವಿ ಪೀಡಿತ ಮಗುವನ್ನು ತಂದು ಸಾಕುವ ಮೂಲಕ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ರಾಜಿಬ್ ಬಿಡುವು ಸಿಕ್ಕಾಗ ಮುಂಬೈನ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಚ್ಐವಿ ಪೀಡಿತ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ವೈದ್ಯಾಧಿಕಾರಿಗಳು ಮತ್ತು ಮಕ್ಕಳ ಸಂಬಂಧಿಗಳ ಒಪ್ಪಿಗೆ ಪಡೆದು ತಮ್ಮ ಕುಟೀರಕ್ಕೆ ಕರೆದುಕೊಂಡು ಬರುತ್ತಾರೆ.

ಈ ಕುಟೀರದಲ್ಲಿ ರಾಜಿಬ್ ಕುಟುಂಬ ಸಹ ವಾಸವಾಗಿದೆ. ಮಕ್ಕಳ ಲಾಲನೆ ಪಾಲನೆಯನ್ನು ಖುದ್ದಾಗಿ ರಾಜಿಬ್ ಮತ್ತು ಅವರ ಪತ್ನಿಯೇ ಮಾಡುತ್ತಾರೆ. ಯಾರನ್ನೂ ಕೆಲಸಕ್ಕೆ ಸೇರಿಸಿಕೊಳ್ಳದ ಅವರು, ಅಡುಗೆ ಮಾಡುವುದು, ಮಕ್ಕಳಿಗೆ ಸ್ನಾನ ಮಾಡಿಸಿ, ಊಟ ಬಡಿಸುವ ಕೆಲಸವನ್ನು ಅವರೇ ಮಾಡುತ್ತಾರೆ! ಸಂಜೆ ಮಕ್ಕಳ ಜತೆ ಕಾಲ ಕಳೆಯುತ್ತ ಅವರ ನೋವನ್ನು ಮರೆಸುವ ಪ್ರಯತ್ನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT