ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗದ ಪ್ರೀತಿಯೇ ಭಕ್ತಿ

Last Updated 3 ಮೇ 2017, 19:30 IST
ಅಕ್ಷರ ಗಾತ್ರ

ನಮ್ಮ ಸುತ್ತಲಿನ ಜನರನ್ನು ಗಮನಿಸಿದರೆ ಗೊತ್ತಾಗುವ ಒಂದು ವಿಷಯವುಂಟು: ‘ಜನರಲ್ಲಿ ಭಕ್ತಿ ಹೆಚ್ಚುತ್ತಿದೆ.’

ನಾವು ಈ ನಿಲುವಿಗೆ ಬರುವುದಕ್ಕೆ ಕಾರಣ ಎಂದರೆ ನಮ್ಮ ಕಣ್ಣಿಗೆ ಕಾಣುತ್ತಿರುವ ಸಾಕ್ಷ್ಯಗಳು. ಈ ಸಾಕ್ಷ್ಯಗಳಾದರೂ ಎಂಥವು? ದೇವಸ್ಥಾನಗಳ ಸಂಖ್ಯೆ ಹೆಚ್ಚಿವೆ; ದೇವಸ್ಥಾನಗಳಿಗೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಪೂಜಾವಸ್ತುಗಳಿಗೆ ತುಂಬ ಬೇಡಿಕೆಯಿದೆ. ಹಬ್ಬ–ಹರಿದಿನಗಳಲ್ಲಿ ಹೂವು–ಹಣ್ಣುಗಳ ಬೆಲೆ ಆಕಾಶವನ್ನೇ ಮುಟ್ಟಿದ್ದರೂ ಕೊಳ್ಳುವವರಿಗೆ ಬರವಿಲ್ಲ. ಬಹುಪಾಲು ತೀರ್ಥಕ್ಷೇತ್ರಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಟೀವಿ ಮುಂತಾದ ಮಾಧ್ಯಮಗಳಲ್ಲಿ ದೇವಾಲಯಕೇಂದ್ರಿತ ಕಾರ್ಯಕ್ರಮಗಳು ಯಥೇಚ್ಛವಾಗಿ ಪ್ರಸಾರವಾಗುತ್ತಿವೆ. ಜ್ಯೋತಿಷಿಗಳು ಹೇಳುತ್ತಿರುವ ದಿನಕ್ಕೊಂದು ವ್ರತ–ಪೂಜೆಗಳನ್ನು ಮಾಡುವವರ ಸಂಖ್ಯೆ ಅಗಾಧವಾಗಿದೆ. ನಗರಗಳ ಯಾವುದೇ ರಸ್ತೆಯೂ ಗಣೇಶಹಬ್ಬದ ಸಮಯದಲ್ಲಿ ಗಣೇಶನ ಸ್ಥಾಪನೆಯಿಲ್ಲದೆ ಖಾಲಿ ಇರದು.... ಹೀಗೆ ಈ ಪಟ್ಟಿಯನ್ನು ಬೆಳಸುತ್ತಹೋಗಬಹುದು. ಈ ಎಲ್ಲ ಅಂಕಿ–ಅಂಶಗಳ ಪ್ರಕಾರ ಜನರಲ್ಲಿ ದೈವಭಕ್ತಿ ಹೆಚ್ಚುತ್ತಿದೆ.

ಹಾಗಾದರೆ ಜನರಲ್ಲಿ ಭಕ್ತಿಭಾವ ಹೆಚ್ಚಿರುವುದು ನಿಜವೇ ಅಲ್ಲವೆ? ‘ಭಾಗವತಮಾಹಾತ್ಮ್ಯ’ದ ಶ್ಲೋಕವೊಂದನ್ನು ಇಲ್ಲಿ ಉದ್ಧರಿಸಬಹುದು:
ಅಲಂ ವ್ರತೈರಲಂ ತೀರ್ಥೈರಲಂ ಯೋಗೈರಲಂ ಮುಖೈಃ ।
ಅಲಂ ಜ್ಞಾನಕಥಾಲಾಪೈರ್ಭಕ್ತಿರೇಕೈವ ಮುಕ್ತಿದಾ ।।

ಇದರ ತಾತ್ಪರ್ಯ ಹೀಗೆ: ‘ವ್ರತಗಳಿಂದಾಗಲೀ ತೀರ್ಥಸ್ನಾನಗಳಿಂದಾಗಲೀ ಯೋಗಗಳಿಂದಾಗಲೀ ಯಜ್ಞಗಳಿಂದಾಗಲೀ ಜ್ಞಾನಕಥಾಲಾಪಗಳಿಂದಾಗಲೀ ಏನಾದೀತು? ದೇವರಲ್ಲಿಡುವ ದೃಢಭಕ್ತಿಯೊಂದೇ ಮುಕ್ತಿಯನ್ನು ಕೊಡಬಲ್ಲದು.’

ಭಕ್ತಿಯ ವ್ಯಾಖ್ಯಾನವನ್ನೇ ಈ ಪದ್ಯ ಬೇರೊಂದು ನೆಲೆಗೆ ತೆಗೆದುಕೊಂಡುಹೋಗಿದೆ. ಭಕ್ತಿ ಎಂದು ನಾವು ಆರಂಭದಲ್ಲಿ ನೋಡಿದ ವಿವರಗಳಷ್ಟನ್ನೂ ಇದು ನಿರಾಕರಿಸುತ್ತಿದೆ. ವ್ರತ, ತೀರ್ಥಸ್ನಾನ, ಯೋಗ, ಯಜ್ಞ, ಕಥಾಕಾಲಕ್ಷೇಪ– ಇವೆಲ್ಲವೂ ‘ಭಕ್ತಿ’ಯನ್ನು ಹೊರಗೆ ಪ್ರದರ್ಶಿಸುವ ವೇಷಗಳೇ ಹೊರತು ಅವೇ ನಿಜವಾದ ಭಕ್ತಿಯಲ್ಲ ಎನ್ನುವುದು ಇಲ್ಲಿರುವ ನಿಲುವು.

ದೇವಾಲಯಗಳ ಸಂಖ್ಯೆ, ಭಕ್ತರ ದಂಡು, ಯಾತ್ರಾರ್ಥಿಗಳ ಸಂಖ್ಯೆ, ಪೂಜೆಗಳ ಸಡಗರ, ತೀರ್ಥಕ್ಷೇತ್ರಗಳ ವೈಭವ – ಇವೆಲ್ಲವೂ ಭಕ್ತಿಯ ಬಹಿರಂಗದ ವೇಷವೇ ಹೊರತು ಅಂತರಂಗದ ಸತ್ವವಲ್ಲ. ಆದರೆ ನಮ್ಮ ಕಾಲದ ಲೆಕ್ಕಾಚಾರಗಳೆಲ್ಲವೂ ಹೊರಮುಖವಾಗಿಯೇ ನಡೆಯುತ್ತಿರುತ್ತದೆ; ಭಕ್ತಿಯೂ ಇದಕ್ಕೆ ಹೊರತಾಗಿಲ್ಲವೆನ್ನಿ! ಆದರೆ ಭಕ್ತಿ ಎನ್ನುವುದು ದೈವದ ಜೊತೆಗೆ ನಾವು ಸಾಧಿಸಬೇಕಾದ ಅಂತರಂಗದ ತಾದಾತ್ಮ್ಯ. ದೇವರೊಂದಿಗೆ ನಾವು ಸಾಧಿಸಿರುವ ಅಪರಿಮಿತವಾದ ಪ್ರೀತಿಯೇ ಭಕ್ತಿ. ಪ್ರೀತಿಯಾಗಲೀ ತಾದಾತ್ಮ್ಯವಾಗಲೀ ಭಾವ–ಬುದ್ಧಿಗಳಿಗೆ ಸಂಬಂಧಿಸಿದ ಸಂಗತಿಯೇ ವಿನಾ ಅವು ಹೊರಗಿನ ವೇಷಭೂಷಣಗಳಿಗೆ ಎಟುಕುವ ಅಲಂಕಾರಗಳಲ್ಲ. ಭಕ್ತಿಗೆ ಬೇಕಾಗಿರುವುದು ನಾವು ಭಗವಂತನಲ್ಲಿ ನಮ್ಮ ಮನಸ್ಸನ್ನು ಎಷ್ಟು ಮುಳುಗಿಸಿದ್ದೇವೆ ಎನ್ನುವುದೇ ಹೊರತು ದೇವರನ್ನು ಎಷ್ಟು ಹೂವುಗಳಿಂದ ಸಿಂಗರಿಸಿದ್ದೇವೆ ಎನ್ನುವುದಲ್ಲ. ಮಗುವಿನ ಬಗ್ಗೆ ನಮಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ದಿಟವಾದ ಸಾಕ್ಷ್ಯ ಎಂದರೆ ಅದರ ಏಳಿಗೆಗಾಗಿಯೂ ಒಳಿತಿಗಾಗಿಯೂ ನಮ್ಮ ಅಂತಃಕರಣದಲ್ಲಿರುವ ಪ್ರಾಮಾಣಿಕವಾದ ತುಡಿತ; ನಾವು ಅದಕ್ಕೆ ಕೊಡಿಸುವ ಬಟ್ಟೆ–ಒಡವೆ ಮುಂತಾದುವೆಲ್ಲವೂ ಜಗತ್ತಿಗೆ ನಾವು ‘ಪ್ರೀತಿ’ಯನ್ನು ಪ್ರದರ್ಶಿಸುತ್ತಿರುವುದಷ್ಟೆ. ಹೀಗೆಯೇ ದೇವರಲ್ಲಿರುವ ನಮ್ಮ ಭಕ್ತಿಗೆ ಸಾಕ್ಷ್ಯವಾಗುವುದು ನಮ್ಮ ಅಂತರಂಗದ ಪಾಕ. ದೈವತತ್ತ್ವ ನಮ್ಮ ಮನಸ್ಸನ್ನು ಎಷ್ಟು ನೆಮ್ಮದಿಯಲ್ಲಿಟ್ಟಿದೆ ಎನ್ನುವುದೇ ಭಕ್ತಿಯ ಮಾನದಂಡ. ಬದುಕಿನ ಎಂಥ ಸಂದರ್ಭದಲ್ಲೂ ಮನಸ್ಸಿನಿಂದ ದೇವರನ್ನು ದೂರ ಮಾಡದ ಮನಃಸ್ಥಿತಿಯೇ ಭಕ್ತಿಯ ನಿಜವಾದ ಬೆಲೆ. ಇದಲ್ಲದೆ ಪೂಜಾಸಾಮಾಗ್ರಿಗಳಲ್ಲಿಯೋ ಯಾತ್ರೆಗಳಲ್ಲಿಯೋ ಭಕ್ತಿಯನ್ನು ಅಳೆಯುವುದು ಎಂದರೆ ಅದು ಚೈತನ್ಯವನ್ನು ಮರೆತು ದೇಹವನ್ನು ಪೂಜಿಸಿದಂತಾಗುತ್ತದೆಯಷ್ಟೆ.
–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT