ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಿರ ಅವರ ಆರು ಸೂತ್ರಗಳು

Last Updated 16 ನವೆಂಬರ್ 2017, 16:01 IST
ಅಕ್ಷರ ಗಾತ್ರ

ಜಪಾನ್‌ ಸಿನಿಮಾ ಜಗತ್ತು ಕಂಡ ಶ್ರೇಷ್ಠ ನಿರ್ದೇಶಕ ಅಕಿರ ಕುರೊಸಾವಾ.

‘ಸೆವೆನ್‌ ಸಮೂರಾಯ್‌, ಥ್ರೋನ್‌ ಆಫ್‌ ಬ್ಲಡ್‌, ರಾಶೊಮನ್‌’ನಂತಹ ಹತ್ತಾರು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿ ಅವುಗಳ ಪ್ರತಿ ಹಂತದಲ್ಲಿ ಪರಿಪೂರ್ಣತೆಯನ್ನು ಕಾಯ್ದುಕೊಂಡಿದ್ದ ಮಾದರಿ ನಿರ್ದೇಶಕ.

1985ರಲ್ಲಿ ಇವರ ನಿರ್ದೇಶನದ ‘ರ‍್ಯಾನ್’ ತೆರೆ ಕಂಡು ಭಾರೀ ಜನಪ್ರಿಯತೆ ಗಳಿಸಿತ್ತು. ಯುದ್ಧ ಹಾಗೂ ಸಾಹಸ ಸನ್ನಿವೇಶಗಳಲ್ಲಿ ಸೈನಿಕರ ವೇಷಗಳು ಮನ ಸೆಳೆದಿದ್ದವು. ಆ ಚಿತ್ರದಲ್ಲಿ ಸೈನಿಕರು ಧರಿಸಿದ್ದ 1,400 ಸೇನಾ ಸಮವಸ್ತ್ರಗಳನ್ನು ಸಿದ್ಧಪಡಿಸಲು ಬರೋಬ್ಬರಿ ಎರಡು ವರ್ಷಗಳನ್ನು ಮುಡಿಪಾಗಿಟ್ಟಿದ್ದರು. ಪರಿಪೂರ್ಣತೆ ಸಾಧಿಸಲು ಇಂತಹ ಪರಿಶ್ರಮಪಡುತ್ತಿದ್ದ ಕಾರಣಕ್ಕಾಗಿ ಅವರು ಸಿನಿಮಾ ರಂಗದ ಮಹಾ ತಪಸ್ವಿಯಾಗಿ ಕಾಣಿಸಿಕೊಳ್ಳುತ್ತಾರೆ.

ಯಶಸ್ವಿ ಸಿನಿಮಾ ನಿರ್ದೇಶಿಸಲು ಯುವ ನಿರ್ದೇಶಕರಿಗೆ ಕುರುಸೋವಾ ಕೊಡುವ ಆರು ಟಿಪ್ಸ್‌:

ಮೊದಲು ಕಥೆ ಬರೆಯಿರಿ: ಮನಸಿನಲ್ಲಿರುವ ಕಥೆಯನ್ನು ಮೊದಲು ಬರಹದ ರೂಪಕ್ಕಿಳಿಸಿ. ಇದು ಸಿನಿಮಾ ನಿರ್ದೇಶಕ ತನ್ನ ಚಿತ್ರವನ್ನು ಅತ್ಯುತ್ತಮವಾಗಿ ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಅಲ್ಪ ತೃಪ್ತರಾಗದಿರಿ: ನಮ್ಮ ಸಿನಿಮಾವನ್ನು ಇಷ್ಟಪಡುವ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಿರಿ. ಬದಲಾಗಿ ಅದನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ತಾವೂ ಹೆಚ್ಚೆಚ್ಚು ಕ್ರಿಯಾಶೀಲವಾಗುವುದನ್ನು ರೂಢಿಸಿಕೊಳ್ಳಿ. ಪ್ರತಿ ಬಾರಿಯೂ ನೀವು ಮತ್ತಷ್ಟು ಉತ್ತಮವಾದುದನ್ನೇ ನಿರ್ಮಿಸುವ ಆಲೋಚನೆ ಮಾಡಿಕೊಳ್ಳಿ.

ಅದ್ಭುತವಾದುದ್ದನ್ನೇ ಮಾಡಲು ಉದ್ದೇಶಿಸಿ: ಸಿನಿಮಾ ನಿರ್ಮಿಸಲು ನಮಗೆ ಯಾವುದೇ ಡೆಡ್‌ ಲೈನ್‌ ಇಲ್ಲದಿರುವುದರಿಂದ ಸಾಧ್ಯವಾದಷ್ಟು ಸುಂದರ ಚಿತ್ರ ತಯಾರಿಸಿ. ನಿರ್ಮಾಣದ ಕೆಲಸದಲ್ಲಿ ಹಣ ಮಹತ್ವದ ಪಾತ್ರ ನಿರ್ವಹಿಸುತ್ತದೆಯಾದರೂ ನಾವು ಮಾಡುವ ಕೆಲಸವಷ್ಟೇ ಅದರ ಶ್ರೇಷ್ಠತೆಯನ್ನು ನಿರ್ಧರಿಸುವುದು. ಹಾಗಾಗಿ ಸದಾ ಅದ್ಭುತವಾದುದನ್ನೇ ನಿರ್ಮಿಸುವ ಯೋಜನೆ ಹಾಕಿಕೊಳ್ಳಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ.

ಯಶಸ್ಸಿನ ಅಮಲೇರಿಸಿಕೊಳ್ಳದಿರಿ: ಒಂದು ಸಿನಿಮಾದ ಯಶಸ್ಸಿನ ಅಮಲು ನೆತ್ತಿಗೇರುವವರೆಗೆ ಬಿಡುವುದು ಒಳ್ಳೆಯದಲ್ಲ. ಅದು ವೃತ್ತಿ ಬದಕಿನ ದಿಕ್ಕನ್ನೇ ಬದಲಿಸಿಬಿಡುವಷ್ಟು ತೀಕ್ಷ್ಣವಾದ ಪರಿಣಾಮವನ್ನು ನಮ್ಮ ಮನಸ್ಸು ಹಾಗೂ ಕ್ರಿಯಾಶೀಲತೆಯ ಮೇಲೆ ಉಂಟು ಮಾಡುತ್ತವೆ.

ಕಥೆ ಸರಳವಾಗಿರಲಿ: ನಿಮ್ಮ ಸಿನಿಮಾದ ಕಥೆಗಳು ಅತ್ಯಂತ ಸರಳವಾಗಿರಲಿ. ಪ್ರತಿಯೊಬ್ಬರಿಗೂ ಅರ್ಥವಾಗುವಂತಿರಲಿ. ಸಿನಿಪ್ರಿಯರು ಚಿತ್ರದ ಪ್ರತಿ ಅಂಶವನ್ನು ಅನುಭವಿಸುತ್ತಾ, ಆನಂದಿಸುತ್ತಾ ನೋಡುವಂತಿರಲಿ. ನೀವು ಅತಿಯಾದ ಕ್ರಿಯಾಶೀಲತೆ, ಬದ್ಧಿವಂತಿಕೆ ಬಳಸಿ ಜನರಿಗೆ ಅರ್ಥವಾಗದ ಸಿನಿಮಾ ಮಾಡುವುದು ವ್ಯರ್ಥ.

ನಿಮ್ಮ ಪ್ರತಿ ಸಿನಿಮಾದ ಬಳಿಕ ಅದರಿಂದ ನೀವು ಕಲಿತದ್ದೇನು ಎಂಬುದನ್ನು ಕೇಳಿಕೊಳ್ಳಿ: ಪ್ರತಿಯೊಂದರಿಂದಲೂ ಕಲಿಯುವ ಗುಣವಿರಬೇಕು. ಸಿನಿಮಾ ನಿರ್ದೇಶಿಸಿದ್ದು ನಾವೇ ಆದರೂ ಅದರಿಂದ ನಾವು ಕಲಿತದ್ದು ಏನು ಎಂಬುದು ಮುಖ್ಯ ಎನ್ನುತ್ತಾರೆ ಕುರೊಸಾವಾ.

ಅವರ ಯಶಸ್ಸಿನ ಗುಟ್ಟು ಅರ್ಥವಾಗಿರಬೇಕಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT