ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗಳಲ್ಲಿ ಭಾವಚಿತ್ರ: ‘ಸ್ಥಾವರ’ ಸಲ್ಲದು

Last Updated 3 ಮೇ 2017, 19:30 IST
ಅಕ್ಷರ ಗಾತ್ರ
ಹನ್ನೆರಡನೇ ಶತಮಾನದ ಬಸವಣ್ಣನವರ ಭಾವಚಿತ್ರ ವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತೂಗು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಂಡ್ಲುಪೇಟೆಯ ‘ಕೃತಜ್ಞಾ ಸಮಾವೇಶ’ದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿರುವುದು ದುಡುಕಿನ ನಿರ್ಧಾರ. ಬಸವಣ್ಣನವರ ತತ್ವ, ಆಶಯಕ್ಕೆ ವಿರುದ್ಧವಾದ ನಡೆ.
 
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಸಚಿವರಾಗಿದ್ದವರು. ಹಾಗಾಗಿ ರಾಜಕಾರಣಿ. ಈ ವೃತ್ತಿಯ ಜೊತೆಗೆ ವಚನ ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಸಮಾಜ ಸುಧಾರಕರು. ಅವರು ಹುಟ್ಟಿದ ದಿನ ಮತ್ತು ಮರಣ ಹೊಂದಿದ ದಿನದ ಬಗ್ಗೆ ಖಚಿತವಾಗಿ ದೃಢಪಟ್ಟಿಲ್ಲ. ಆ ಶತಮಾನದಿಂದ ಈ ಶತಮಾನದವರೆಗೆ ಎಷ್ಟೋ ಮಹಾನುಭಾವರು ಬಂದು ಹೋಗಿದ್ದಾರೆ. ಅವರ ಭಾವಚಿತ್ರ ಬೇಡವೇ?
 
ಸಿದ್ದರಾಮಯ್ಯನವರು ಮತಬ್ಯಾಂಕ್ ದೃಷ್ಟಿಯಿಂದ ಬಸವಣ್ಣನವರ ಫೋಟೊ ಹಾಕಲು ನಿರ್ದೇಶಿಸಿದ್ದಾರೆ ಎಂದು  ಕನಿಷ್ಠ ರಾಜಕೀಯ ಪ್ರಜ್ಞೆ ಇರುವ ಸಾಮಾನ್ಯ ನಿಗೂ ಅರ್ಥವಾಗುತ್ತದೆ.  ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ಅನ್ವಯ ಜಾತಿ, ಮತ, ಧರ್ಮಗಳನ್ನು ಚುನಾವಣಾ ಪ್ರಚಾರದ ಅಥವಾ ವೋಟು ಗಿಟ್ಟಿಸುವ ಸಲುವಾಗಿ ಬಳಸುವಂತಿಲ್ಲ. ಇಂತಹ ಪರೋಕ್ಷ ನಡೆ ಸಾಧುವಲ್ಲ. ಆಕ್ಷೇಪಾರ್ಹವಾದುದು.
 
ಯಾರು ಏನೇ ಹೇಳಿದರೂ ಬಸವಣ್ಣನವರನ್ನು ಒಂದು ಸಮುದಾಯದ ಆರಾಧ್ಯ ಗುರು, ಮಾರ್ಗದರ್ಶಕ­ರಾಗಿ ಗುರುತಿಸಲಾಗುತ್ತದೆ (ಅವರ ತತ್ವ, ಆದರ್ಶಗಳನ್ನು ಪಾಲಿಸದೇ ಇದ್ದರೂ). ಬಸವಣ್ಣನವರ ಸಾಲಿಗೆ ಬುದ್ಧ, ಮಹಾವೀರ, ಮೊಹಮ್ಮದ್ ಪೈಗಂಬರ್, ಏಸುಕ್ರಿಸ್ತ, ನಾರಾಯಣ ಗುರು ಸೇರುವುದಿಲ್ಲವೇ? ಕನಕ ಜಯಂತಿ, ವಾಲ್ಮೀಕಿ ಜಯಂತಿ ಮತ್ತು ಆ ದಿನಗಳನ್ನು  ರಜಾ ದಿನಗಳೆಂದು ಘೋಷಿಸಿದವರಿಗೆ, ಆ ಸಮು ದಾಯ­ದವರೆಲ್ಲಾ  ಚುನಾವಣೆಯಲ್ಲಿ ತಮಗೇ ಮತ ಹಾಕುವರೆಂಬ ಭ್ರಮೆ ಇದೆಯೇ? ಇಂತಹ ಹುಚ್ಚಾಟಗಳು, ವಿವೇಚನಾರಹಿತ ಕ್ರಮಗಳು ಅಪೇಕ್ಷಣಿಯವಲ್ಲ.
ಕೆ.ಟಿ. ತಿಮ್ಮಾರೆಡ್ಡಿ, ಬೆಂಗಳೂರು
 
ಇದು ಸರಿಯಲ್ಲ!
ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರದರ್ಶಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸರಿಯಾದ ನಿರ್ಣಯವಲ್ಲ. ಲಿಂಗಾಯತರ ವೋಟಿಗಾಗಿ ಸಿದ್ದರಾಮಯ್ಯನವರು ಈ ಕ್ರಮ ಕೈಗೊಂಡಂತೆ ಕಾಣುತ್ತದೆ.

ಬಸವಣ್ಣನವರು ಎಲ್ಲಾ ಕಾಲಕ್ಕೂ ಸಲ್ಲುವ ಮಹಾತ್ಮರೆಂಬುದು ಸತ್ಯವೇ. ಆದರೂ ಅವರೊಬ್ಬ ಧರ್ಮಗುರುವೂ ಹೌದು ಎಂಬುದೂ ನಿಜವಷ್ಟೆ. ಸೆಕ್ಯುಲರ್‌ ರಾಜ್ಯ, ರಾಷ್ಟ್ರದಲ್ಲಿ ಯಾವುದೇ ಧರ್ಮದ ಗುರುವಿನ ಚಿತ್ರವನ್ನು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಪ್ರದರ್ಶಿಸುವುದು ತಪ್ಪಾಗುತ್ತದೆ.

ಇದರಿಂದ ಇತರ ಧರ್ಮಾನುಯಾಯಿಗಳೂ ತಮ್ಮ ಧರ್ಮಗುರುಗಳ ಚಿತ್ರವನ್ನು ಪ್ರಕಟಿಸಬೇಕೆಂದು ಒತ್ತಾಯಿಸತೊಡಗಬಹುದು. ಹಾಗೆ  ಮಾಡುತ್ತಾ ಹೋದರೆ ಆಫೀಸುಗಳ ಗೋಡೆ ತುಂಬ ಇಂಥ ಚಿತ್ರಗಳ ಪ್ರದರ್ಶನ ಮಾಡಬೇಕಾದೀತು. ಹಾಗೆ ಮಾಡದಿದ್ದರೆ ಇತರ ಧರ್ಮಾನುಯಾಯಿಗಳಿಗೆ ಅಸಮಾಧಾನ ಉಂಟಾಗುವುದು ನಿಶ್ಚಿತ. 
 
ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್. ಯಡಿಯೂರಪ್ಪನವರೇ ಇಂಥ ಅವಿವೇಕದ ಕ್ರಮ ಕೈಗೊಂಡಿರಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್‌ ಇಬ್ಬರನ್ನು ಬಿಟ್ಟು ಬೇರೆ ಯಾರ ಚಿತ್ರವನ್ನೂ ಪ್ರದರ್ಶಿಸುವುದು ಉಚಿತವಲ್ಲ. ವಿವೇಕವಲ್ಲ. ಮುಖ್ಯಮಂತ್ರಿಗಳು ಈ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಳ್ಳಲಿ. ಬುದ್ಧಿಜೀವಿಗಳೂ ಪ್ರತಿಪಕ್ಷಗಳೂ ಧರ್ಮನಿರಪೇಕ್ಷತೆಯನ್ನು ಎತ್ತಿ ಹಿಡಿಯಲಿ.
ಎಂ.ಕೆ. ರಾವ್‌,ಬೆಂಗಳೂರು
 
ಎಷ್ಟು ಸರಿ? 
ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತಗೊಳಿಸಿದ  ಗುರು ಬಸವೇಶ್ವರರ ಭಾವಚಿತ್ರದ ಮೇಲೆ ತಮ್ಮ ಹೆಸರು ಇರಬೇಕು ಎಂಬ ವಿ.ಟಿ.ಕಾಳೆಯವರ ಅಭಿಪ್ರಾಯ ಒಪ್ಪತಕ್ಕದಲ್ಲ. ಕಾಳೆಯವರ ಚಿತ್ರ ರಚನೆ ಹಿಂದೆ ಮುರುಘಾ ಶರಣರ ಸಲಹೆ, ಪ್ರೋತ್ಸಾಹವೂ  ಇದೆ ಎಂಬುದನ್ನು ಅವರು ಮರೆಯಬಾರದು. ಈ ಭಾವಚಿತ್ರ  ಆಯ್ಕೆಯೇ ಅವರಿಗೆ ದೊರೆತ ದೊಡ್ಡ ಗೌರವ. ಜೊತೆಗೆ ಇತಿಹಾಸದಲ್ಲಿ ಅವರ ಹೆಸರು ಸೇರ್ಪಡೆಯಾಯಿತು.  ‘ಮಾಡಿದನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗೂರ’ ಎಂಬುದನ್ನು ಮರೆಯಬಾರದು. 
 
ರಾಷ್ಟ್ರಧ್ವಜದ ಮೇಲೆ, ರೂಪಾಯಿ ವಿನ್ಯಾಸದ ಮೇಲೆ ಅದರ ವಿನ್ಯಾಸಕಾರರ ಹೆಸರು ಇಲ್ಲ. ಮೊಬೈಲ್, ಟಿ.ವಿ.,ರೇಡಿಯೊಗಳ ಮೇಲೆ ಅವುಗಳ ಸಂಶೋಧಕರ ಹೆಸರೇನೂ ಇಲ್ಲ. ಆದರೆ ಅವರ ಹೆಸರು ಜನಮಾನಸದಲ್ಲಿ ಶಾಶ್ವತ. 
ಮಂಜುನಾಥ ದುಬಲಗುಂಡೆ, ಚಿಮ್ಮನಚೋಡ, ಚಿಂಚೋಳಿ ತಾಲ್ಲೂಕು
 
ಚಿತ್ತ–ಚಿತ್ರ!
ಸರ್ಕಾರಿ ಕಚೇರಿಗಳಲ್ಲಿ
ಬಸವೇಶ್ವರರ ಭಾವಚಿತ್ರ (ಪ್ರ.ವಾ., ಏ. 27).
ವಿಚಿತ್ರವಲ್ಲ–ಸರಿ. ಆದರೆ ಎಲ್ಲರ
ಭಾವದಲ್ಲಿದ್ದಾನೆಯೆ ಬಸವಣ್ಣ?
ಮೊದಲು ಚಿತ್ರದಲ್ಲಾದರೂ ಇರಲಿ;
ಆಮೇಲೆ ಚಿತ್ತಕ್ಕೂ ಬರಬಹುದು
(ಭಿತ್ತಿಯಿಂದ ಚಿತ್ತ ಭಿತ್ತಿಗೆ!)
‘ಚಿತ್ತ ಅತ್ತಿಯ ಹಣ್ಣು’ ಆಗದಂತೆ
ನೋಡಿಕೊಳ್ಳಲಿ! (ಕನ್ನಡದ ಒಳಗಣ್ಣು)
ಸಿ.ಪಿ.ಕೆ.,ಮೈಸೂರು
 
ಅಭಿನಂದನಾರ್ಹ    
ಡಾ. ಶಿವಮೂರ್ತಿ ಮುರುಘಾ ಶರಣರು ‘ಸೈದ್ಧಾಂ ತಿಕ ಪರಿಕಲ್ಪನೆಯಲ್ಲಿ ಮೂಡಿದ ಚಿತ್ರ’ ಶೀರ್ಷಿಕೆಯಡಿ ಬರೆದ  ಲೇಖನದಲ್ಲಿ (ಸಂಗತ, ಮೇ 2) ‘ಕಾಳೆಯವರು ಈ ನಾಡು ಕಂಡಂತಹ ಅಪರೂಪದ ಕಲಾವಿದರು’ ಎಂದಿರುವುದು ನೂರಕ್ಕೆ ನೂರರಷ್ಟು ಸತ್ಯ.

2005ರಲ್ಲಿ ಶರಣರ ಆಶಯದಂತೆ ಕೆಲ ಬದಲಾವಣೆಗಳೊಂದಿಗೆ ಮೂಡಿಬಂದ ಬಸವಣ್ಣನವರ ವರ್ಣಚಿತ್ರ ಒಂದು ಪರಿಪೂರ್ಣ ಕಲಾಕೃತಿ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿ.ಟಿ.ಕಾಳೆ ವಿರಚಿತ ಬಸವಣ್ಣನವರ ಈ ಅಮೋಘ ಚಿತ್ರ ವನ್ನು ಹಾಕಲು ಆದೇಶಿಸಿರುವುದು ಅಭಿನಂದನಾರ್ಹ.
 
ಆದರೆ ಈ ಚಿತ್ರದಲ್ಲಿ ಕಲಾವಿದರ ಹೆಸರನ್ನೇ ಕೈಬಿಟ್ಟಿರುವ ಉದ್ದೇಶವೇನು? ಇದರ ಹಿಂದೆ ಕಾಣದ ಕೈವಾಡ ಏನಾದರೂ ಇದೆಯೇ? ಯಾವುದೇ  ಕಲಾಕೃತಿ ಆ ಕಲಾವಿದನ ನಿರಂತರ ತಪಸ್ಸು, ಕಲಾರಾಧನೆ, ಸಿದ್ಧಿಸಾಧನೆಯ ಸಾಕ್ಷಾತ್ಕಾರ. ಇಂತಹ ಕಲಾವಿದರ ಪರಿಶ್ರಮದ ಬೆವರಿಗೆ ಬೆಲೆಯಿಲ್ಲವೇ? 
ಟಿ.ಕೆ. ಗಂಗಾಧರ ಪತ್ತಾರ, ಬಳ್ಳಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT