ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇಡಿಯಂ: ಜಿಲ್ಲಾಡಳಿತ ವಿರುದ್ಧ ಆಕ್ರೋಶ

ಪಾಲೆಮಾಡು ನಿವಾಸಿಗಳ ಪಾದಯಾತ್ರೆ ಅಂತ್ಯ; 30 ಕಿ.ಮೀ. ಸಾಗಿದ ಹೋರಾಟಗಾರರು
Last Updated 4 ಮೇ 2017, 7:42 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೆಮಾಡು ಪೈಸಾರಿ ನಿವಾಸಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯು ಬುಧವಾರ ನಗರ ತಲುಪುವ ಮೂಲಕ ಮುಕ್ತಾಯಗೊಂಡಿತು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಸುಮಾರು 30 ಕಿ.ಮೀ. ಪಾದಯಾತ್ರೆ ಸಾಗಿಬಂತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ  ಮಾರಸಂದ್ರ ಮುನಿಯಪ್ಪ ಮಾತನಾಡಿ, ‘ಜಿಲ್ಲೆಯ ಬಹುತೇಕ ಪೈಸಾರಿ ನಿವಾಸಿಗಳಿಗೆ ಜಿಲ್ಲಾಡಳಿತ ಕನಿಷ್ಠ  ಸೌಕರ್ಯ ಕಲ್ಪಿಸಲು ವಿಫಲವಾಗಿದೆ. ಇದಕ್ಕೆ ನೇರಹೊಣೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಇಬ್ಬರೂ ತಮ್ಮ ಜವಾಬ್ದಾರಿ ಮರೆತು ಕೆಲಸ ಮಾಡುತ್ತಿರುವುದೇ ಈ ರದ್ಧಾಂತಕ್ಕೆ ಕಾರಣವಾಗಿದೆ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಅಂತಹ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಕಂದಾಯ ಜಾಗವಿದ್ದಲ್ಲಿ ಹಂಚಿಕೆ ಮಾಡಿ ಲೈನ್‌ಮನೆಯಲ್ಲಿರುವ ಕಾರ್ಮಿಕರನ್ನು ಹೊರತರಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಮುಖಂಡ ಸಿರಿಮನೆ ನಾಗರಾಜ್, ‘ಪಾಲೆಮಾಡುವಿನ 2005ರಿಂದಲೂ ಸುಮಾರು 260 ಕುಟುಂಬಗಳು ವಾಸವಾಗಿದ್ದು, ಇಲ್ಲಿಯವರೆಗೆ ಅಲ್ಲಿನ ನಿವಾಸಿಗಳಿಗೆ ಜಿಲ್ಲಾಡಳಿತ ಯಾವ ಸೌಲಭ್ಯ ನೀಡಿಲ್ಲ. ತೋಟದ ಮಾಲೀಕರ ಮಾತಿಗೆ ಜಿಲ್ಲಾಡಳಿತ ಬೆಂಬಲ ನೀಡುತ್ತಿದೆ. ಸ್ಟೇಡಿಯಂ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಬೇಕಾದಷ್ಟು ಜಾಗವಿದ್ದರೂ ಕೆಲವರು ಷಡ್ಯಂತ್ರ ನಡೆಸಿ, ಅದೇ ಸ್ಥಳದಲ್ಲಿ ಜಾಗ ನೀಡಲು ಮುಂದಾಗಿರುವುದು ದುರಂತ’ ಎಂದು ದೂರಿದರು.

ಮುಖಂಡ ಮೊಣ್ಣಪ್ಪ ಮಾತನಾಡಿ, ‘ಹಲವು ವರ್ಷಗಳಿಂದ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿದ್ದರೂ ಬೇಡಿಕೆ ಈಡೇರಿಸಲು ಸ್ಥಳೀಯ ಪಂಚಾಯಿತಿ ವಿಫಲವಾಗಿದೆ. ನಾವೇ ನಿರ್ಮಿಸಿಕೊಂಡ ರಸ್ತೆಗಳಿಗೆ ದಲಿತರ ಪರ ಹೋರಾಟ ಮಾಡಿದ ನಾಯಕರ ಹೆಸರನ್ನು ಇಟ್ಟರೂ ದೌರ್ಜನ್ಯ ನಡೆಸಲಾಗಿದೆ’ ಎಂದು ವಿಷಾದಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಮೀನ್‌ ಮೊಹಿಸಿನ್‌ ಮಾತನಾಡಿ, ಪಾಲೆಮಾಡುವಿನಲ್ಲಿ 10 ದಿನಗಳಿಂದ ನಡೆಯುತ್ತಿರುವ ಹೋರಾಟ ನಡೆಸುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದಿರಲಿಲ್ಲ. ಆದರೆ, ಸಿಎನ್‌ಸಿ ಕೇವಲ ಎರಡು ದಿನ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಸ್ಥಳಿಯ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಬಂದು ಬೇಡಿಕೆಯ ಮನವಿ ಆಲಿಸಿದ್ದರು.

ಜಿಲ್ಲೆಯ ಜನಪ್ರತಿನಿಧಿಗಳು ದಲಿತ ಸಮುದಾಯದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು. ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಪ್ರೇಮ್ ಕುಮಾರ್, ಜಯಪ್ಪ ಹಾನಗಲ್, ಚಿತ್ರಾ ಇದ್ದರು.

ಪಾಲೆಮಾಡು ನಿವಾಸಿಗಳ ಬೇಡಿಕೆಗಳು
*ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು.
*ನಾಲ್ಕು ಎಕರೆ ಸ್ಮಶಾನ ಭೂಮಿಯನ್ನು ಕಾನ್ಯಿರಾಂ ನಗರದ ನಿವಾಸಿಗಳಿಗೆ ಬಿಟ್ಟುಕೊಡಬೇಕು.
*ಮೊಣ್ಣಪ್ಪ ಮತ್ತಿತರ ಮೇಲೆ ಹಾಕಿರುವ ಮೊಕದ್ದಮೆ ಹಿಂಪಡೆಯಬೇಕು.
*ರಾಷ್ಟ್ರ ನಾಯಕರ ಬೋರ್ಡ್‌ಗಳನ್ನು ಕಿತ್ತುಹಾಕಿ ಅವಮಾನ ಮಾಡಿರುವವ  ಮೇಲೆ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.

*
ಗ್ರಾಮದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಜಾಗ ನೀಡಿರುವುದು ಖಂಡನೀಯ. ಸ್ಟೇಡಿಯಂ ನೆಪದಲ್ಲಿ ನಿವಾಸಿಗಳ ಭಾವನೆಗೆ ಧಕ್ಕೆ ತಂದರೆ ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ.
-ಮಾರಸಂದ್ರ ಮುನಿಯಪ್ಪ,
ರಾಜ್ಯ ಉಸ್ತುವಾರಿ, ಬಹುಜನ ಸಮಾಜ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT