ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ವಹಿವಾಟಿಗೆ ಬೇಸಿಗೆಯೇ ಸಕಾಲ

ಅಕ್ಷರ ಗಾತ್ರ

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ, ಮನೆ ಮಾರಲು, ಕೊಳ್ಳಲು, ಕಟ್ಟಲು ನಿರ್ದಿಷ್ಟ ಕಾಲ ಎಂದೇನಾದರೂ ಇದೆಯಾ?

ಬಿಲ್ಡರ್‌, ಕಂಟ್ರಾಕ್ಟರ್ ಅಥವಾ ಬ್ರೋಕರ್‌ಗಳಿಗೆ ಈ ಪ್ರಶ್ನೆ ಕೇಳಿದರೆ ‘ಖಂಡಿತ ಇಲ್ಲ’ ಎಂಬ ಉತ್ತರ ಬರುತ್ತದೆ. ರಿಯಲ್ ಎಸ್ಟೇಟ್‌ ಚಟುವಟಿಕೆಗಳು ವರ್ಷವಿಡೀ ನಡೆಯುತ್ತವೆ. ಅದಕ್ಕೆ ಇಂಥದ್ದೇ ಕಾಲ ಎಂದೇನೂ ಇಲ್ಲ. ಆದರೆ ಇದರಾಚೆಗೂ ಅನುಕೂಲ, ಅವಶ್ಯಕತೆಗಳು, ಆದ್ಯತೆಗಳನ್ನು ನೋಡಿಕೊಂಡರೆ ಈ ವ್ಯವಹಾರಕ್ಕೆ ಬೇಸಿಗೆಯೇ ಉತ್ತಮ ಕಾಲ ಎಂಬ ಮಾತೂ ಇದೆ. ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಈ ಅವಧಿಯಲ್ಲಿಯೇ ಏರುಗತಿಯಲ್ಲಿ ಸಾಗುವುದು ಇದಕ್ಕೆ ಕಾರಣ.

(ಗಿರೀಶ್‌)

ರಿಯಲ್ ಎಸ್ಟೇಟ್‌ ವ್ಯವಹಾರಕ್ಕೂ ಕಾಲಮಾನಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ, ಬೇಸಿಗೆಯಲ್ಲಿ ಮನೆ ಕಟ್ಟುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚು. ಮಳೆಗಾಲ ಬರುವ ಮುನ್ನ ಮನೆ ಕಟ್ಟಲು ಪಾಯ ಹಾಕಿಬಿಟ್ಟರೆ ಕೆಲಸ ಸಲೀಸು ಎಂದು ಯೋಚಿಸುವವರ ಸಂಖ್ಯೆಯೂ ಕಡಿಮೆ ಇಲ್ಲ.
ಒಣಹವೆಯಲ್ಲಿ ಗಾರೆ ಕೆಲಸ ಸಲೀಸು. ಸಾಮಾನು ಸಾಗಿಸುವುದು ಸುಲಭ. ಮಳೆ ಇದ್ದರೆ ಸಾರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದೇ ಕಾರಣಕ್ಕೆ ಮನೆಯ ಸಣ್ಣಪುಟ್ಟ ರಿಪೇರಿ, ನವೀಕರಣದಂಥ ಕೆಲಸಗಳಿಗೂ ಬೇಸಿಗೆಯನ್ನು ಕಾಯುವವರಿದ್ದಾರೆ.

ಮಳೆಗಾಲವಾದರೆ ಮನೆ ಕಟ್ಟಲು ಹೊರಗೆ ಶೇಖರಿಸಿದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ನಷ್ಟದ ಪಾಲಿಗೆ ಸೇರ್ಪಡೆಯಾದಂತೆ. ಮನೆ ಕಟ್ಟುವಾಗ ಪುಟ್ಟಪುಟ್ಟ ನಷ್ಟವೂ ಕೊನೆಗೆ ದೊಡ್ಡ ಮೊತ್ತವನ್ನೇ ತಂದೊಡ್ಡಬಹುದಲ್ಲವೇ?

ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಮನೆ ಬದಲಾವಣೆ ಪ್ರಕ್ರಿಯೆ ರೇಜಿಗೆ ಎನ್ನಿಸದು. ಸಮಯ ಸಿಗುವುದರಿಂದ ನಿರಾಯಾಸವಾಗಿ ಮನೆ ಬದಲಾಯಿಸಬಹುದು. ಮಕ್ಕಳು ಶಾಲೆಗೆ ಹೋಗುವ ಮುನ್ನ ತಮ್ಮ ಹೊಸ ಮನೆಗೆ ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಇದೇ ಸೂಕ್ತ ಸಮಯ ಎಂಬ ಪೋಷಕರ ಅಂದಾಜೂ ಇದರ ಹಿಂದಿದೆ.

ಬೇಸಿಗೆಯಲ್ಲಿ ರಿಯಲ್‌ ಎಸ್ಟೇಟ್‌ ಚುರುಕುಗೊಳ್ಳಲು ವಾತಾವರಣವಷ್ಟೇ ಕಾರಣವಲ್ಲ. ಹಲವು ಸಾಮಾಜಿಕ ಬೆಳವಣಿಗೆಗಳೂ ಈ ಪ್ರಕ್ರಿಯೆಯೊಂದಿಗೆ ತಳಕು ಹಾಕಿಕೊಂಡಿವೆ.

ಸಾಮಾನ್ಯವಾಗಿ ವರ್ಗಾವಣೆ ಪ್ರಕ್ರಿಯೆ ಮಾರ್ಚ್‌ನಲ್ಲಿ ಆರಂಭವಾಗುತ್ತದೆ. ಶಾಲಾ ಬದಲಾವಣೆ, ದಾಖಲಾತಿ, ಬಡ್ತಿ ಇನ್ನಿತರ ಅಂಶಗಳು ಮನೆ ಬದಲಾವಣೆ, ಮನೆ ಖರೀದಿ, ಮನೆ ಮಾರಾಟದಂಥ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ.

ಬಿಲ್ಡರ್ ಲಕ್ಷ್ಮೀಕಾಂತ್ ಅವರೂ ಈ ಮಾತನ್ನು ಪುಷ್ಟೀಕರಿಸುತ್ತಾರೆ.

‘ಮಾರ್ಚ್‌ನಿಂದ ಮೇ ತಿಂಗಳವರೆಗೆ ಮನೆ ಬದಲಾವಣೆ, ಹೊಸಮನೆ ನಿರ್ಮಾಣದಂಥ ಚಟುವಟಿಕೆಗೆ ವೇಗ ಸಿಗುತ್ತದೆ. ಮಕ್ಕಳು ಸಣ್ಣವರಿದ್ದರೆ ಶಾಲೆಯ ಸಮೀಪ ಮನೆ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಅಪಾರ್ಟ್‌ಮೆಂಟ್‌, ಪಿಜಿಗಳಿಗೂ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ. ಬೇರೆ ಊರಿನಿಂದ ವರ್ಗಾವಣೆ­ಗೊಂಡು ಬರುವವರ ಸ್ವತಂತ್ರ ಅಪಾರ್ಟ್‌ಮೆಂಟ್ ಖರೀದಿ ಪಾಲೂ ಇದರಲ್ಲಿದೆ. ಪಿಜಿಗಳೂ ರಿಯಲ್‌ ಎಸ್ಟೇಟ್‌ನ ಒಂದು ಭಾಗವೇ ಆಗುತ್ತಿರುವುದರಿಂದ ಆ ವರ್ಗದಲ್ಲೂ ಏರಿಕೆ ಇದ್ದಿದ್ದೇ. ಬಾಡಿಗೆ, ಖರೀದಿ, ಮಾರಾಟ– ಈ ಎಲ್ಲಾ ವಿಭಾಗದಲ್ಲೂ ಸ್ವಲ್ಪ ಮಟ್ಟದಲ್ಲಾದರೂ ಏರಿಕೆ ಕಾಣುತ್ತದೆ. ಆದರೆ ನಿವೇಶನ ಖರೀದಿಯಲ್ಲಿ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ. ಬಡ್ತಿ ಆದವರು ಮೇ ನಂತರ ಹೊಸ ಮನೆಗೆ ಯೋಜನೆ ಹಾಕಿಕೊಳ್ಳುವುದರಿಂದ ಆಮೇಲೆ ನಿವೇಶನ ಖರೀದಿ ಜೋರಾಗುತ್ತದೆ’ ಎಂಬುದು ಅವರು ಕಂಡುಕೊಂಡ ಸತ್ಯ. ಬೆಂಗಳೂರಿನಲ್ಲಿರುವ ಎಲ್ಲ ಬಾಡಿಗೆ ಮನೆಗಳನ್ನು ರಿಯಲ್‌ ಎಸ್ಟೇಟ್ ಉದ್ಯಮ ಮೂರು ವಿಭಾಗದಲ್ಲಿ ವಿಂಗಡಿಸುತ್ತದೆ.

₹50 ಸಾವಿರದಿಂದ ₹ 1 ಲಕ್ಷವರೆಗೆ ಬಾಡಿಗೆ ಇರುವ ವಲಯ ‘ಎ’ ವಿಭಾಗ ಎನಿಸಿಕೊಳ್ಳುತ್ತದೆ. ಈ ವಲಯದಲ್ಲಿ ವಹಿವಾಟು ಅಷ್ಟು ಚುರುಕಾಗಿರುವುದಿಲ್ಲ.

(ಲಕ್ಷ್ಮೀಕಾಂತ್‌)

₹10ರಿಂದ 20 ಸಾವಿರ  ಬಾಡಿಗೆ ಇರುವ (ಬಿ) ವಲಯದಲ್ಲಿ ಚಟುವಟಿಕೆ ಸುಮಾರಾಗಿ ನಡೆಯುತ್ತದೆ. ಬಾಡಿಗೆ ಪ್ರಮಾಣದಲ್ಲೂ ಅಲ್ಪ ಏರಿಕೆ ಕಾಣುತ್ತದೆ. ₹ 6ರಿಂದ ₹ 10 ಸಾವಿರ ಬಾಡಿಗೆ ಇರುವ (ಸಿ) ವಲಯದಲ್ಲಿ ವಹಿವಾಟು ಚುರುಕಾಗಿ ನಡೆಯುತ್ತದೆ. ವರ್ಷಕ್ಕೊಮ್ಮೆ ಮನೆ ಮಾಲೀಕರು ಬಾಡಿಗೆ ಹೆಚ್ಚಿಸುವುದರಿಂದ ಹಲವರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹೊಸ ಮನೆಗಳಿಗೆ ತೆರಳುತ್ತಾರೆ.

ಮನೆ ಕೊಳ್ಳುವಿಕೆ, ಮಾರಾಟ ಮಾತ್ರವಲ್ಲ, ಮನೆ ನವೀಕರಣಕ್ಕೂ ಇದು ಸಕಾಲ. ಮನೆಯ ವಿನ್ಯಾಸದಲ್ಲಿ ಸಣ್ಣ ಪುಟ್ಟ  ಬದಲಾವಣೆಗಳನ್ನು ಮಾಡಲು, ರಿಪೇರಿ ಮಾಡಲು, ಜೊತೆಗೆ ಬಣ್ಣ ಬಳಿಯಲೂ ಅನೇಕರು ಬೇಸಿಗೆಗಾಗಿ ಕಾಯುತ್ತಿರುತ್ತಾರೆ.

ರಿಯಲ್ ಎಸ್ಟೇಟ್‌ನಲ್ಲಿ ಏರುಗತಿಯಲ್ಲಿ ಸಾಗಲು ಇನ್ನೊಂದು ಬಹುಮುಖ್ಯ ಅಂಶ ಹೂಡಿಕೆ. ಹೂಡಿಕೆ ಹಾದಿಯಿಂದಲೂ ಈ ಕ್ಷೇತ್ರಕ್ಕೆ ಹರಿದುಬರುವ ಹಣದ ಪ್ರಮಾಣ ಹೆಚ್ಚೇ ಇರುತ್ತದೆ.

‘ಬೇಸಿಗೆಯಲ್ಲಿ ಮಾರ್ಕೆಟಿಂಗ್ ಹೆಚ್ಚಿರುತ್ತದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಈ ವ್ಯವಹಾರ ಉತ್ತುಂಗದಲ್ಲಿರುತ್ತದೆ. ಕೆಲವು ಹೂಡಿಕೆದಾರರು ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ನಿವೇಶನಗಳು, ಅಪಾರ್ಟ್‌ಮೆಂಟ್‌ಗಳ ಮೇಲೆ ಬಂಡವಾಳ ಹೂಡುವುದೂ ಇದೇ ಸಮಯದಲ್ಲಾದ್ದರಿಂದ ವಹಿವಾಟು ಕೂಡ ಜೋರಾಗೇ ಇರುತ್ತದೆ.

ಶಾಲಾ ಕಾಲೇಜು, ನೌಕರಿಯಂಥ ಅಂಶಗಳು  ರಿಯಲ್ ಎಸ್ಟೇಟ್‌ ವ್ಯವಹಾರವನ್ನು ಶೇ15ರಷ್ಟು ಹೆಚ್ಚಿಸುತ್ತವೆ. ಆದರೆ ರಜೆಯ ಸಮಯವಾದ್ದರಿಂದ ಗ್ರಾಹಕರು ಅಂದುಕೊಂಡ ಸಮಯಕ್ಕೆ ಸಿಗದೇ ವ್ಯವಹಾರ ಆಚೀಚೆ ಆಗುವ ಸಂಭವವೂ ಉಂಟು ಎನ್ನುತ್ತಾರೆ ವೇದಾ ಡೆವಲಪರ್ಸ್‌ನ ಗಿರೀಶ್.

ಒಟ್ಟಿನಲ್ಲಿ ‘ಬೇಸಿಗೆ’ ರಿಯಲ್ ಎಸ್ಟೇಟ್‌ ಕ್ಷೇತ್ರಕ್ಕೆ ಸಕಾಲ. ಹಲವು ಆಯಾಮದಲ್ಲಿ ಇದರಿಂದ ವಸತಿ ಮಾರುಕಟ್ಟೆ ಏರು ಗತಿಯಲ್ಲಿ ಸಾಗುವುದನ್ನಂತೂ ಒಪ್ಪಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT