ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಡರ್ಲಿ ವ್ಯವಸ್ಥೆ: ಸರ್ಕಾರ ಇನ್ನಾದರೂ ಕಣ್ಣು ತೆರೆಯಲಿ

Last Updated 4 ಮೇ 2017, 19:30 IST
ಅಕ್ಷರ ಗಾತ್ರ
ಪೊಲೀಸ್‌  ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ರದ್ದುಪಡಿಸಿದ ರಾಜ್ಯ ಸರ್ಕಾರದ ಆದೇಶ ಹೊರಬಿದ್ದು ಆರು ತಿಂಗಳಾದರೂ ಅಧಿಕಾರಿಗಳ ಮನೆಗಳಲ್ಲಿ ಕಾನ್‌ಸ್ಟೆಬಲ್‌ಗಳು  ಜೀತದ ಆಳುಗಳಂತೆ ದುಡಿಯುವ ಅನಾಗರಿಕ ವ್ಯವಸ್ಥೆ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ.

ಶಿಸ್ತಿಗೆ ಹೆಸರಾದ ಪೊಲೀಸ್‌ ಇಲಾಖೆಯೇ ಸರ್ಕಾರದ ಆದೇಶ ಪಾಲನೆ ಮಾಡದಿರುವುದು ಅತ್ಯಂತ ಖಂಡನೀಯ. ಬ್ರಿಟಿಷ್‌ ವಸಾಹತುಶಾಹಿಯ ಪಳೆಯುಳಿಕೆಯಂತೆ ಮುಂದುವರಿದಿರುವ ಇದು ಗುಲಾಮಗಿರಿ ಸಂಸ್ಕೃತಿಯ ಪ್ರತೀಕವೂ ಹೌದು.
 
ಕೆಳಹಂತದ ಪೊಲೀಸರ ಆಕ್ರೋಶ, ನಾಗರಿಕ ಸಮಾಜದ ಪ್ರತಿಭಟನೆಯ ಬಳಿಕ ಕಳೆದ ವರ್ಷ ನವೆಂಬರ್‌ನಲ್ಲಿ ಸರ್ಕಾರ ಇದನ್ನು ರದ್ದುಪಡಿಸಿದೆ. ಆದರೂ ಕಾನ್‌ಸ್ಟೆಬಲ್‌ಗಳ ಶೋಷಣೆ ರಾಜಾರೋಷವಾಗಿ ನಡೆಯುತ್ತಿದೆ. ಶಿಸ್ತು ಪಾಲನೆಯ ತೂಗುಗತ್ತಿ ತಲೆಯ ಮೇಲೆ ನೇತಾಡುತ್ತಿರುವುದರಿಂದ ಪೊಲೀಸರು ಇದನ್ನು ಪ್ರಶ್ನಿಸಲಾಗದೆ ಅಸಹಾಯಕರಾಗಿದ್ದಾರೆ.  
 
ಸರ್ಕಾರ ಆದೇಶ ಹೊರಡಿಸಿ ಸುಮ್ಮನೆ ಕೈಕಟ್ಟಿಕೊಂಡು ಕುಳಿತರೆ ಪ್ರಯೋಜನವಿಲ್ಲ. ತಾನು ಹೊರಡಿಸಿದ ಆದೇಶ ಸಮರ್ಪಕವಾಗಿ ಜಾರಿಯಾಗಿದೆಯೇ,  ಜಾರಿ ಆಗದಿದ್ದರೆ ಏಕೆ ಆಗಿಲ್ಲ, ಅದಕ್ಕಿರುವ ತೊಡಕುಗಳೇನು ಎಂಬುದರತ್ತ ನೋಡಬೇಕಾದ ಹೊಣೆಯೂ ಅದರ ಮೇಲಿದೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್‌ ಅವರಿಗೆ ಇದು ಗೊತ್ತಿಲ್ಲದ ಸಂಗತಿ ಏನಲ್ಲ. ಅಕಸ್ಮಾತ್‌ ಗೊತ್ತಿಲ್ಲದಿದ್ದರೆ ಗೃಹ ಸಚಿವರಿಗೆ ಸಲಹೆಗಾರರಾಗಿರುವ ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಅವರಾದರೂ ಗಮನಕ್ಕೆ ತರಬೇಕಿತ್ತು.
 
ಕಾನೂನು– ಸುವ್ಯವಸ್ಥೆ ಪಾಲನೆಯ ಕೆಲಸಕ್ಕೆ ತರಬೇತಿ ಪಡೆದಿರುವ ಸಶಸ್ತ್ರ ಪಡೆ ಪೊಲೀಸರನ್ನು ಅಧಿಕಾರಿಗಳ ಮನೆ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಮಕ್ಕಳಿಗೆ 
ಸ್ನಾನ ಮಾಡಿಸುವುದು, ಅವರನ್ನು ಶಾಲೆಗೆ ಕಳುಹಿಸುವುದು, ಶೂ ಪಾಲಿಷ್‌ ಮಾಡುವುದು ಹಾಗೂ ಗಾರ್ಡನ್‌ ನಿರ್ವಹಿಸುವಂಥ ಕೆಲಸಕ್ಕೆ ಇವರ ಸೇವೆ ಸೀಮಿತವಾಗಿರುವುದು  ದುರ್ದೈವದ ಸಂಗತಿ.
 
ಇದಕ್ಕೆ ಸರ್ಕಾರ ಈಗ ಪರ್ಯಾಯ ವ್ಯವಸ್ಥೆ ಮಾಡಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ಅನುಯಾಯಿಗಳನ್ನು ನೇಮಿಸಿಕೊಳ್ಳಲು ಒಪ್ಪಿಗೆ ನೀಡಿದೆ. ಇನ್‌ಸ್ಪೆಕ್ಟರ್‌ಗಳಿಂದ ಹಿಡಿದು ಡಿಜಿ ಮತ್ತು ಐಜಿ ದರ್ಜೆವರೆಗೆ 2,447 ಅಧಿಕಾರಿಗಳಿಗೆ ಒಟ್ಟು 3,320 ಅನುಯಾಯಿಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ.
 
ಅಧಿಕಾರಿಗಳ ಹುದ್ದೆಗಳಿಗೆ ಅನುಗುಣವಾಗಿ ₹ 2000ದಿಂದ  ₹ 8000ದ ವರೆಗೆ ವಿಶೇಷ ಭತ್ಯೆ ನೀಡಲಾಗುತ್ತಿದೆ. ಅನೇಕ ಅಧಿಕಾರಿಗಳು ಈ ಭತ್ಯೆಯನ್ನು ಜೇಬಿಗಿಳಿಸಿ ಪೊಲೀಸರನ್ನೇ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪವೂ  ಇದೆ. ಆರೋಪ ನಿಜವಾಗಿದ್ದರೆ ಅದು ಅಕ್ಷಮ್ಯ. ಇಲಾಖೆಯಲ್ಲಿ ಮೊದಲೇ ಪೊಲೀಸರ ಕೊರತೆ ಇದೆ.

ಆರ್ಡರ್ಲಿಗಳಾಗಿ ದುಡಿಯುತ್ತಿರುವ ಕಾನ್‌ಸ್ಟೆಬಲ್‌ಗಳನ್ನು ವಾಪಸ್‌ ಇಲಾಖೆಗೆ ಕಳುಹಿಸಿದರೆ ಕಿಂಚಿತ್ತಾದರೂ ಅನುಕೂಲವಾಗಲಿದೆ. ಪೊಲೀಸರ ಕೊರತೆ ತುಂಬುವ ಉದ್ದೇಶದಿಂದ, ಸದ್ಯ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತಿರುವ ಕೆಎಸ್‌ಆರ್‌ಪಿ, ಡಿಎಆರ್‌ ಮತ್ತು ಸಿಎಆರ್‌ ಪಡೆಗಳನ್ನು ಸಿವಿಲ್‌ ಪೊಲೀಸರಾಗಿ ಪರಿವರ್ತಿಸುವ ಪ್ರಸ್ತಾವ ಸರ್ಕಾರದ ಮುಂದಿದೆ.
 
ಅದೇನೇ ಇರಲಿ, ಸರ್ಕಾರದ ಆದೇಶದ ಬಳಿಕವೂ ಮುಂದುವರಿದಿರುವ ಆರ್ಡರ್ಲಿ ವ್ಯವಸ್ಥೆ ತೊಲಗಬೇಕು. ಘನತೆ ಕುಗ್ಗಿಸುವ  ಇಂತಹ ವ್ಯವಸ್ಥೆಗೆ ಶಾಶ್ವತ ವಿದಾಯ ಹೇಳಬೇಕು. ಇಲ್ಲವಾದರೆ ಇದು ಮುಂದೆ ಎಂದಾದರೂ ಇಲಾಖೆಯೊಳಗೆ ಬಂಡಾಯಕ್ಕೂ ಕಾರಣವಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT